ಬೆಂಗಳೂರಿನ ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ತನ್ನ ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಮಂಗಳ ಸೂತ್ರ (ತಾಳಿ) ಮತ್ತು ಧಾರ್ಮಿಕ ಚಿಹ್ನೆಗಳು ಧರಿಸುವುದನ್ನು ನಿಷೇಧಿಸಿರುದಕ್ಕೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆಕ್ಷೇಪಿಸಿದೆ.
ದಕ್ಷಿಣ ಕರ್ನಾಟಕ ವಿಎಚ್‌ಪಿ ಜಂಟಿ ಕಾರ್ಯದರ್ಶಿ ಶರಣ್ ಕುಮಾರ್ ಪಂಪ್‌ವೆಲ್ ಭಾನುವಾರ (ಏಪ್ರಿಲ್ 27, 2025) ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಪ್ರವೇಶ ಪತ್ರದಲ್ಲಿ ಉಲ್ಲೇಖಿಸಿರುವಂತೆ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ನೀಡಿರುವ ಸೂಚನೆಗಳಲ್ಲಿ, ‘ಬಳೆ, ಧಾರ್ಮಿಕ ಚಿಹ್ನೆಗಳು, ಆಭರಣಗಳು, ಮಂಗಳ ಸೂತ್ರ’ ಪರೀಕ್ಷಾ ಕೇಂದ್ರದೊಳಗೆ ಅನುಮತಿಸದ ಸಾಮಗ್ರಿಗಳಲ್ಲಿ ಸೇರಿವೆ ಎಂದು ಹೇಳಿದ್ದಾರೆ.

ಧಾರ್ಮಿಕ ಸಂಕೇತಗಳಲ್ಲಿ ಜನಿವಾರ ಕೂಡ ಒಳಗೊಂಡಿದೆ ಎಂದಿರುವ ಶರಣ್ ಪಂಪ್‌ವೆಲ್, ಇಂತಹ ಧಾರ್ಮಿಕ ವಿರೋಧಿ ನಿಲುವನ್ನು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭ್ಯರ್ಥಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಪರೀಕ್ಷೆಗೆ ಹಾಜರಾಗಲು ಅನುಕೂಲ ಮಾಡಿಕೊಡುವ ಸಲುವಾಗಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಪಿ. ಮುಲ್ಲೈ ಮುಹಿಲನ್ ಅವರಿಗೆ ಶರಣ್ ಪಂಪ್‌ವೆಲ್ ಮನವಿ ಮಾಡಿದ್ದಾರೆ.
ಪರೀಕ್ಷೆಯು ಏಪ್ರಿಲ್ 29ರಂದು ಮಂಗಳೂರಿನ ಬೊಂದೆಲ್‌ನಲ್ಲಿರುವ ಮನೆಲ್ ಶ್ರೀನಿವಾಸ್ ನಾಯಕ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ನಡೆಯಲಿದೆ.
ಈ ಸಂಬಂಧ ಭಾನುವಾರ ಹೇಳಿಕೆ ಬಿಡುಗಡೆ ಮಾಡಿರುವ ವಿಎಚ್‌ಪಿ, ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ವಿದ್ಯಾರ್ಥಿಗಳಿಂದ ಅವರ ‘ಜನಿವಾರ’ತೆಗೆಸಲಾಗಿದೆ ಎಂದಿದೆ.
ಈಗ, ಹಿಂದೂ ಮಹಿಳೆಯರು ತಮ್ಮ ‘ಮಂಗಳ ಸೂತ್ರ’ ತೆಗೆದು ‘ಸಿಂಧೂರ’ ಅಳಿಸಿಹಾಕುವಂತೆ ಮತ್ತು ಪುರುಷರು ಪರೀಕ್ಷೆಗೆ ಹಾಜರಾಗಲು ತಮ್ಮ ‘ಜನಿವಾರ’ ತೆಗೆಯುವಂತೆ ಒತ್ತಾಯಿಸಿರುವುದು ಮತ್ತೊಮ್ಮೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದಂತಾಗಿದೆ. ಅಭ್ಯರ್ಥಿಗಳಿಗೆ ಇಂತಹ ಸೂಚನೆಗಳು ಸರಿಯಲ್ಲ ಎಂದು ಶರಣ್ ಪಂಪ್‌ವೆಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ರಾಜ್ಯದ ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಯಲು ಒತ್ತಾಯಿಸಲಾಗಿದೆ ಎನ್ನಲಾದ ವಿಚಾರ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ, ಸಂಘ ಪರಿವಾರ ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಮುಗಿಬಿದ್ದಿತ್ತು. ಈಗ ಕೇಂದ್ರ ಸರ್ಕಾರದ ಅಧೀನದ ರೈಲ್ವೆ ಮಂಡಳಿಯೇ ಆ ರೀತಿಯ ಆದೇಶ ನೀಡಿದೆ.


