ಜಗದೀಪ್ ಧನಕರ್ ಅವರ ಹಠಾತ್ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರತಿ ಹುದ್ದೆಗೆ ಚುನಾವಣೆ ನಡೆಸಲು ಭಾರತೀಯ ಚುನಾವಣಾ ಆಯೋಗ ಸಿದ್ದತೆ ನಡೆಸಿದೆ.
ಈ ನಡುವೆ ಹೇಳಿಕೆ ನೀಡಿರುವ ತೆಲಂಗಾಣದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಮುಂದಿನ ಉಪರಾಷ್ಟ್ರತಿಯಾಗಿ ತೆಲಂಗಾಣ ಮೂಲದವರನ್ನು ಆಯ್ಕೆ ಮಾಡುವಂತೆ ಆಗ್ರಹಿಸಿದ್ದಾರೆ. ತೆಲಂಗಾಣದ ಬಿಜೆಪಿ ನಾಯಕ ಬಂಡಾರು ದತ್ತಾತ್ರೇಯ ಅವರನ್ನು ಉಪರಾಷ್ಟ್ರಪತಿ ಮಾಡುವಂತೆ ಹೇಳಿದ್ದಾರೆ.
ಜುಲೈ 23ರಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವ ರೇವಂತ್ ರೆಡ್ಡಿ, “ಜಗದೀಪ್ ಧನಕರ್ ಅವರು ಏಕೆ ರಾಜೀನಾಮೆ ನೀಡಿದರು ಎಂದು ನನಗೆ ಗೊತ್ತಿಲ್ಲ, ಅದು ದುರದೃಷ್ಟಕರ. ಆದರೆ ಆ ಹುದ್ದೆಗೆ ತೆಲಂಗಾಣದವರನ್ನು ಆಯ್ಕೆ ಮಾಡಬೇಕು. ಕಳೆದ ಬಾರಿ ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ ಅವರು (ಬಿಜೆಪಿಯವರು) ಅದನ್ನು ವಾಪಸ್ ಕಳುಹಿಸಿದರು. ತೆಲುಗು ಮಾತನಾಡುವ ವ್ಯಕ್ತಿಯನ್ನು ಬದಿಗಿಟ್ಟರು. ಈ ಅನ್ಯಾಯವನ್ನು ಸರಿಪಡಿಸಲು ದತ್ತಾತ್ರೇಯ ಅವರಿಗೆ ಉಪರಾಷ್ಟ್ರಪತಿ ಹುದ್ದೆ ನೀಡಬೇಕು” ಎಂದಿದ್ದಾರೆ.
“ದತ್ತಾತ್ರೇಯ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಅವರ ಹುದ್ದೆಯನ್ನು ಪ್ರಸ್ತುತ ಕೇಂದ್ರ ಗಣಿ ಸಚಿವ ಕಿಶನ್ ರೆಡ್ಡಿ ಅವರಿಗೆ ವಹಿಸಲಾಗಿದೆ. ಅದೇ ರೀತಿ, ಕಿಶನ್ ರೆಡ್ಡಿ ಅವರನ್ನು ತೆಲಂಗಾಣ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿ, ಬ್ರಾಹ್ಮಣ ನಾಯಕ ಎನ್. ರಾಮಚಂದರ್ ರಾವ್ ಅವರನ್ನು ಆ ಸ್ಥಾನಕ್ಕೆ ನೇಮಿಸಲಾಗಿದೆ. ಒಬಿಸಿಗಳ ವಿರುದ್ಧ ಅವರ (ಬಿಜೆಪಿಗರ) ಅನೇಕ ಪಾಪಗಳಿಂದ ಮುಕ್ತರಾಗಲು, ದತ್ತಾತ್ರೇಯ ಅವರಿಗೆ ಉಪರಾಷ್ಟ್ರಪತಿ ಹುದ್ದೆ ನೀಡಬೇಕು”ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.
ಬಂಡಾರು ದತ್ತಾತ್ರೇಯ ಕುರುಬ ಸಮುದಾಯಕ್ಕೆ ಸೇರಿದವರು. ತೆಲಂಗಾಣದಲ್ಲಿ ಹಿಂದುಳಿದ ವರ್ಗ (ಬಿಸಿ) ಗುಂಪು ಎಂದು ಕುರುಬ ಸಮುದಾಯವನ್ನು ವರ್ಗೀಕರಿಸಲಾಗಿದೆ.
2016ರಲ್ಲಿ ನಡೆದ ಹೈದರಾಬಾದ್ ವಿಶ್ವವಿದ್ಯಾಲಯದ (ಯುಒಎಚ್) ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ತೆಲಂಗಾಣದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಪುನಃ ಆರಂಭಿಸಲಿದೆ ಎಂದು ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಘೋಷಿಸಿದ ಕೇವಲ 12 ದಿನಗಳ ನಂತರ ಮುಖ್ಯಮಂತ್ರಿ ರೇವಂತ್ ರೆಡ್ಡಿ ಬಂಡಾರು ದತ್ತಾತ್ರೇಯ ಪರ ಹೇಳಿಕೆ ನೀಡಿರುವುದು ಹಲವರನ್ನು ಅಚ್ಚರಿಸಿಗೊಳಿಸಿದೆ.
ಏಕೆಂದರೆ, ರೋಹಿತ್ ಸದಸ್ಯರಾಗಿದ್ದ ವಿದ್ಯಾರ್ಥಿ ಸಂಘಟನೆಯಾದ ಅಂಬೇಡ್ಕರ್ ವಿದ್ಯಾರ್ಥಿ ಸಂಘ (ಎಎಸ್‌ಎ) ವಿರುದ್ಧ ಕ್ರಮ ಕೈಗೊಳ್ಳುವಂತೆ ಯುಒಎಚ್ ಆಡಳಿತದ ಮೇಲೆ ಒತ್ತಡ ಹೇರಿದ ಆರೋಪ ಆಗಿನ ಸಿಕಂದರಾಬಾದ್ ಸಂಸದರಾಗಿದ್ದ ಬಂಡಾರು ದತ್ತಾತ್ರೇಯ ಮತ್ತು ಪ್ರಸ್ತುತ ತೆಲಂಗಾಣದ ಬಿಜೆಪಿ ಅಧ್ಯಕ್ಷರಾಗಿರುವ ರಾಮಚಂದರ್ ರಾವ್ ವಿರುದ್ದ ಕೇಳಿ ಬಂದಿತ್ತು.
ಇತ್ತೀಚೆಗೆ ರಾಮಚಂದರ್ ರಾವ್ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದಾಗ ಹೇಳಿಕೆ ನೀಡಿದ್ದ ಉಪ ಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಅವರು “ಆಗ ಎಂಎಲ್‌ಸಿ ಆಗಿದ್ದ ರಾವ್, ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದಲ್ಲಿ ಹೆಸರಿಸಲಾದ ಆರೋಪಿಗಳಲ್ಲಿ ಒಬ್ಬರು” ಎಂದಿದ್ದರು.
“ರಾವ್ ಅವರ ನೇಮಕಾತಿ ಆದಿವಾಸಿಗಳ, ದಲಿತರ ವಿರುದ್ಧ ಯಾರು ಇರುತ್ತಾರೋ ಅವರಿಗೆ ಬಿಜೆಪಿಯಿಂದ ಪ್ರತಿಫಲ ಸಿಗುತ್ತದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದರು. ಬಿಜೆಪಿ ರಾಷ್ಟ್ರದ ಕ್ಷಮೆಯಾಚಿಸಬೇಕು. ರಾವ್ ಅವರನ್ನು ಅಧ್ಯಕ್ಷರಾಗಿ ನೇಮಿಸುವ ಮೂಲಕ ನೀವು ದಲಿತರನ್ನು ಗುರಿಯಾಗಿಸಿಕೊಂಡಿದ್ದೀರಾ?” ಎಂದು ಬಿಜೆಪಿ ಹೈಕಮಾಂಡ್ ಅನ್ನು ಪ್ರಶ್ನಿಸಿದ್ದರು.
“ರೋಹಿತ್ ಪ್ರಕರಣದ ಮರು ತನಿಖೆಗೆ ನಿರ್ದೇಶನ ನೀಡುವಂತೆ ನಾವು ಈಗಾಗಲೇ ಹೈಕೋರ್ಟ್‌ಗೆ ಟಿಪ್ಪಣಿ ಸಲ್ಲಿಸಿದ್ದೇವೆ. ಪ್ರಕರಣದ ಹಿಂದೆ ಎಷ್ಟೇ ಪ್ರಭಾವಿಗಳಿದ್ದರೂ ಬಿಡುವುದಿಲ್ಲ” ಎಂದು ತಿಳಿಸಿದ್ದರು.
ಹರಿಯಾಣ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದ ಬಂಡಾರು ದತ್ತಾತ್ರೇಯ ಅವರ ಪರವಾಗಿ ಸಿಎಂ ರೇವಂತ್ ರೆಡ್ಡಿ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಜೂನ್ 9ರಂದು ಹೈದರಾಬಾದ್‌ನ ಶಿಲ್ಪಕಲಾ ವೇದಿಕೆಯಲ್ಲಿ ರೇವಂತ್ ರೆಡ್ಡಿ ಅವರು ದತ್ತಾತ್ರೇಯ ಅವರ ಆತ್ಮಚರಿತ್ರೆ ‘ಪ್ರಜಲ ಕಥೆ – ನಾ ಆತ್ಮ ಕಥಾ’ (ಸಾರ್ವಜನಿಕರ ಕಥೆ ನನ್ನ ಆತ್ಮಚರಿತ್ರೆ) ಬಿಡುಗಡೆ ಮಾಡಿದ್ದರು.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ರೇವಂತ್ ರೆಡ್ಡಿ, ದತ್ತಾತ್ರೇಯ ಅವರನ್ನು ಅಜಾತ ಶತ್ರು ಎಂದು ಹೊಗಳಿದ್ದರು. ಹೈದರಾಬಾದ್‌ನ ಸಣ್ಣ ಪ್ರದೇಶವಾದ ಗೌಲಿಗೂಡದಿಂದ ಹೊರಹೊಮ್ಮಿದ್ದ ದತ್ತಾತ್ರೇಯ ಮಾದರಿ ನಾಯಕ ಎಂದು ಕೊಂಡಾಡಿದ್ದರು.
ರೋಹಿತ್ ಪ್ರಕರಣಕ್ಕೂ ದತ್ತಾತ್ರೇಯಗೂ ಏನು ಸಂಬಂಧ?
ಹೈದಾರಾಬಾದ್ ವಿಶ್ವವಿದ್ಯಾಲಯದಲ್ಲಿ ಘರ್ಷಣೆ
ವಿವಿಧ ಮೂಲಗಳಿಂದ ನಮಗೆ ಲಭ್ಯವಾದ ಮಾಹಿತಿ ಪ್ರಕಾರ, “ಸಾವಿಗೂ ಮುನ್ನ ರೋಹಿತ್ ವೇಮುಲ ಕ್ಯಾಂಪಸ್‌ನಲ್ಲಿ ದಲಿತ ಹಕ್ಕುಗಳನ್ನು ಪ್ರತಿಪಾದಿಸುವ ಅಂಬೇಡ್ಕರ್ ವಿದ್ಯಾರ್ಥಿ ಸಂಘದ (ಎಎಸ್‌ಎ) ಸದಸ್ಯರಾಗಿದ್ದರು. ಆಗಸ್ಟ್ 2015ರಲ್ಲಿ, ವೇಮುಲ ಸೇರಿದಂತೆ ಎಎಸ್ಎ ಸದಸ್ಯರು ಮತ್ತು ಬಿಜೆಪಿಯ ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಾಯಕ ಎನ್. ಸುಶೀಲ್ ಕುಮಾರ್ ನಡುವೆ ಘರ್ಷಣೆ ಸಂಭವಿಸಿತ್ತು.
ಯಾಕೂಬ್ ಮೆಮನ್‌ನ ಮರಣದಂಡನೆಯನ್ನು ವಿರೋಧಿಸಿದ ಎಎಸ್‌ಎ ಹಮ್ಮಿಕೊಂಡಿದ್ದ ಪ್ರತಿಭಟನೆಯಿಂದ ಈ ವಿವಾದ ಉಂಟಾಗಿತ್ತು. ಏಕೆಂದರೆ ಪ್ರತಿಭಟನೆಯನ್ನು ಎಬಿವಿಪಿ ವಿರೋಧಿಸಿತ್ತು. ಎಎಸ್‌ಎ ಸದಸ್ಯರು ಸುಶೀಲ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು. ಆದರೆ ಎಎಸ್‌ಎ ಅದನ್ನು ನಿರಾಕರಿಸಿತ್ತು. ವಿಶ್ವವಿದ್ಯಾಲಯ ವಿಷಯವನ್ನು ಇಲ್ಲಿಗೆ ಇತ್ಯರ್ಥ ಮಾಡಿತ್ತು.
ದತ್ತಾತ್ರೇಯ ಪತ್ರ
ಆಗಸ್ಟ್ 17, 2015 ರಂದು, ಆಗಿನ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರಿಗೆ ಪತ್ರ ಬರೆದಿದ್ದ ದತ್ತಾತ್ರೇಯ ಅವರು, ಹೈದರಾಬಾದ್ ವಿಶ್ವವಿದ್ಯಾಲಯವು ‘ಜಾತಿವಾದಿ, ಉಗ್ರಗಾಮಿ ಮತ್ತು ರಾಷ್ಟ್ರವಿರೋಧಿ ರಾಜಕೀಯದ’ ಕೇಂದ್ರವಾಗಿದೆ ಎಂದು ಆರೋಪಿಸಿದ್ದರು. ಎಎಸ್‌ಎಯ ಚಟುವಟಿಕೆಗಳು ಮತ್ತು ಸುಶೀಲ್ ಕುಮಾರ್ ಮೇಲಿನ ಹಲ್ಲೆಯನ್ನು ನಿರ್ದಿಷ್ಟವಾಗಿ ಪತ್ರದಲ್ಲಿ ಉಲ್ಲೇಖಿಸಿದ್ದರು. ಪತ್ರದಲ್ಲಿ ಎಎಸ್‌ಎ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ನಂತರ ಕೇಂದ್ರ ಸಚಿವಾಲಯವು ವಿಶ್ವವಿದ್ಯಾಲಯಕ್ಕೆ ನೋಟಿಸ್ ನೀಡಿ ಈ ಬಗ್ಗೆ ಪ್ರತಿಕ್ರಿಯಿಸುವಂತೆ ಸೂಚಿಸಿತ್ತು.
ವಿಶ್ವವಿದ್ಯಾಲಯದಿಂದ ಶಿಸ್ತು ಕ್ರಮ
ದತ್ತಾತ್ರೇಯ ಅವರ ಪತ್ರದ ನಂತರ, ವಿಶ್ವವಿದ್ಯಾಲಯವು ಘಟನೆಯ ಬಗ್ಗೆ ಮತ್ತೆ ತನಿಖೆ ಪ್ರಾರಂಭಿಸಿತ್ತು. ಸೆಪ್ಟೆಂಬರ್ 2015ರಲ್ಲಿ, ವೇಮುಲ ಮತ್ತು ಇತರ ನಾಲ್ವರು ಎಎಸ್‌ಎ ಸದಸ್ಯರನ್ನು ಅಮಾನತುಗೊಳಿಸಿತ್ತು. ಡಿಸೆಂಬರ್ 2015ರಲ್ಲಿ, ಅಮಾನತುಗೊಳಿಸುವಿಕೆಯನ್ನು ಎತ್ತಿಹಿಡಿದ ವಿವಿ, ವೇಮುಲ ಮತ್ತು ಇತರರು ಹಾಸ್ಟೆಲ್‌ಗಳು ಮತ್ತು ವಿವಿಯ ಸಾಮಾನ್ಯ ಪ್ರದೇಶಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಿತ್ತು. ಆದರೂ, ಅವರು ಶೈಕ್ಷಣಿಕ ಚಟುವಟಿಕೆಗಳನ್ನು ಮುಂದುವರಿಸಬಹುದು ಎಂದು ಹೇಳಿತ್ತು. ವೇಮುಲ ಅವರ ಮಾಸಿಕ ಸ್ಟೈಫಂಡ್ ಅನ್ನು ಜುಲೈ 2015ರಲ್ಲಿ ನಿಲ್ಲಿಸಲಾಯಿತು ಎಂದು ವರದಿಯಾಗಿದೆ. ಈ ಬಗ್ಗೆ ವೇಮುಲ ಸ್ನೇಹಿತರು ಪ್ರಶ್ನಿಸಿದಾಗ ವಿಶ್ವವಿದ್ಯಾಲಯದ ಅಧಿಕಾರಿಗಳು ದಾಖಲೆಗಳ ಸಮಸ್ಯೆಗಳನ್ನು ಉಲ್ಲೇಖಿಸಿದ್ದರು. ವಿವಿಯ ಈ ಕ್ರಮಗಳು ವೇಮುಲ ಮತ್ತು ಇತರರ ಮೇಲೆ ಗಮನಾರ್ಹ ಆರ್ಥಿಕ ಮತ್ತು ಭಾವನಾತ್ಮಕ ಒತ್ತಡವನ್ನು ಉಂಟುಮಾಡಿದ್ದವು.
ರೋಹಿತ್ ಸಾವು
ಜೂನ್ 17, 2016ರಂದು ರೋಹಿತ್ ವೇಮುಲ ತನ್ನ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಲಾಗಿದೆ. ಅವರು ಬರೆದ ಡೆತ್ ನೋಟ್‌ನಲ್ಲಿ ಸಾಂಸ್ಥಿಕ ಕಿರುಕುಳ, ಜಾತಿ ಆಧಾರಿತ ತಾರತಮ್ಯಗಳ ಬಗ್ಗೆ ಉಲ್ಲೇಖಿಸಿದ್ದರು ಎನ್ನಲಾಗಿದೆ. ರೋಹಿತ್ ಸಾವಿನ ಬಳಿಕ ದೇಶದಾದ್ಯಂತ ಸಾಂಸ್ಥಿಕ ಕಿರುಕುಳ ಮತ್ತು ಉನ್ನತ ಶಿಕ್ಷಣ ಸಂಸ್ಥಗಳಲ್ಲಿನ ಜಾತಿ ಆಧಾರಿತ ತಾರತಮ್ಯದ ವಿರುದ್ದ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿತ್ತು. ಹಲವು ದಲಿತ ವಿದ್ಯಾರ್ಥಿ ಹೋರಾಟಗಾರರು ರೋಹಿತ್ ಸಾವಿಗೆ ದತ್ತಾತ್ರೇಯ ಬರೆದ ಪತ್ರವೇ ಮೂಲ ಕಾರಣ ಎಂದು ಆರೋಪಿಸಿದ್ದರು.
ದತ್ತಾತ್ರೇಯ ವಿರುದ್ದ ಎಫ್ಐಆರ್
ವೇಮುಲ ಅವರ ಸಾವಿನ ನಂತರ ವಿದ್ಯಾರ್ಥಿ ಸಂಘಟನೆಗಳು ದೂರು ದಾಖಲಿಸಿತ್ತು. ಅದನ್ನು ಆಧರಿಸಿ ಪೊಲೀಸರು ದತ್ತಾತ್ರೇಯ, ವಿಶ್ವವಿದ್ಯಾಲಯದ ಉಪಕುಲಪತಿ ಅಪ್ಪಾ ರಾವ್ ಪೊಡಿಲೆ, ಎಬಿವಿಪಿ ನಾಯಕ ಸುಶೀಲ್ ಕುಮಾರ್ ಮತ್ತು ಇತರರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ದತ್ತಾತ್ರೇಯ ಅವರು ಕೇಂದ್ರಕ್ಕೆ ಬರೆದ ಪತ್ರವು ವೇಮುಲ ಮತ್ತು ಎಎಸ್‌ಎ ವಿರುದ್ಧದ ತಾರತಮ್ಯ ಕ್ರಮಗಳಿಗೆ ಹಾಗೂ ವೇಮುಲ ಆತ್ಮಹತ್ಯೆಗೆ ಕಾರಣವಾಯಿತು ಎಂದು ಎಫ್‌ಐಆರ್ ಆರೋಪಿಸಿತ್ತು.
ರಾಜಕೀಯ ಮತ್ತು ಸಾರ್ವಜನಿಕ ಆಕ್ರೋಶ
ವೇಮುಲ ಸಾವು ಖಂಡಿಸಿ ದೇಶದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿತ್ತು. ದತ್ತಾತ್ರೇಯ ಸೇರಿದಂತೆ ಬಿಜೆಪಿಯವರು ದಲಿತ ವಿರೋಧಿ ಭಾವನೆಯನ್ನು ಬೆಳೆಸುತ್ತಿದ್ದಾರೆ ಎಂದು ಹಲವರು ಆರೋಪಿಸಿದ್ದರು. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ದತ್ತಾತ್ರೇಯ ಅವರ ರಾಜೀನಾಮೆಗೆ ಒತ್ತಾಯಿಸಿದ್ದವು ಮತ್ತು ರಾಜ್ಯ ಪ್ರಾಯೋಜಿತ ತಾರತಮ್ಯದ ಆರೋಪಗಳೊಂದಿಗೆ ಈ ವಿಷಯವು ರಾಜಕೀಯ ಬಣ್ಣ ಪಡೆದಿತ್ತು.
2018-2021ರ ನಡುವೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಡಿದ್ದ ಪೋಸ್ಟ್‌ಗಳು ದತ್ತಾತ್ರೇಯ ಮತ್ತು ಇತರರ ಜಾತಿ ಆಧಾರಿತ ತಾರತಮ್ಯ ನೀತಿಯನ್ನು ಪ್ರತಿಬಿಂಬಿಸುತ್ತವೆ. ಆದ್ದರಿಂದ ರೋಹಿತ್ ಸಾವು
‘ಸಾಂಸ್ಥಿಕ ಕೊಲೆ’ ಎಂದು ಆಕ್ರೋಶ ವ್ಯಕ್ತವಾಗಿತ್ತು.
ಆರೋಪ ನಿರಾಕರಿಸಿದ್ದ ದತ್ತಾತ್ರೇಯ
ದತ್ತಾತ್ರೇಯ ಅವರು ಎಬಿವಿಪಿಯಿಂದ ಬಂದ ಮನವಿಯನ್ನು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ರವಾನಿಸಿದ್ದಲ್ಲದೆ, ನಂತರದ ಕ್ರಮಗಳ ಬಗ್ಗೆ ನನಗೆ ತಿಳಿದಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ತಮ್ಮ ಪತ್ರಕ್ಕೂ ವೇಮುಲ ಅವರ ಆತ್ಮಹತ್ಯೆಗೂ ಯಾವುದೇ ನೇರ ಸಂಬಂಧವಿಲ್ಲ ಎಂದು ಅವರು ನಿರಾಕರಿಸಿದ್ದರು. ವಿಶ್ವವಿದ್ಯಾಲಯದ ನಿರ್ಧಾರಗಳು ಸ್ವತಂತ್ರವಾಗಿವೆ ಎಂದು ವಾದಿಸಿದ್ದರು. ವೇಮುಲ ಅವರ ಆತ್ಮಹತ್ಯೆ ಪತ್ರದಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಘಟನೆಯ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಸ್ಮೃತಿ ಇರಾನಿ ಹೇಳಿದ್ದರು ಮತ್ತು ಈ ವಿಷಯವು ದಲಿತ ಮತ್ತು ದಲಿತೇತರ ಸಂಘರ್ಷ ಎಂಬುದನ್ನು ಅವರು ನಿರಾಕರಿಸಿದ್ದರು.
ಪ್ರಕರಣ ಮುಕ್ತಾಯ ವರದಿ (2024)
ಮೇ 2024ರಲ್ಲಿ ತೆಲಂಗಾಣ ಹೈಕೋರ್ಟ್‌ಗೆ ಮುಕ್ತಾಯ ವರದಿ ಸಲ್ಲಿಸಿದ್ದ ಪೊಲೀಸರು, ದತ್ತಾತ್ರೇಯ, ಅಪ್ಪಾ ರಾವ್, ಸ್ಮೃತಿ ಇರಾನಿ ಅಥವಾ ಇತರರು ವೇಮುಲಾ ಅವರನ್ನು ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ ಎಂಬುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದರು. ವೇಮುಲ ದಲಿತನಲ್ಲ, ಬದಲಾಗಿ ವಡ್ಡೇರ (ಬಿಸಿ-ಎ) ಜಾತಿಗೆ ಸೇರಿದವರು ಎನ್ನುವ ಮೂಲಕ ವರದಿಯು ಹೊಸ ವಿವಾದವನ್ನು ಹುಟ್ಟು ಹಾಕಿತ್ತು. ಅಲ್ಲದೆ, ಸುಳ್ಳು ಜಾತಿ ಪ್ರಮಾಣಪತ್ರದ ವಿಷಯ ಬಯಲಾಗುವ ಭಯ ರೋಹಿತ್‌ಗೆ ಇತ್ತು ಎಂದನಿಸುತ್ತದೆ. ಅದೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದಿತ್ತು.
ವರದಿಯು ದತ್ತಾತ್ರೇಯ ಸೇರಿದಂತೆ ಎಲ್ಲರ ವಿರುದ್ದ ಆರೋಪಗಳನ್ನು ತಳ್ಳಿ ಹಾಕಿತ್ತು. ವೈಯಕ್ತಿಕ ಸಮಸ್ಯೆಗಳು, ಶೈಕ್ಷಣಿಕ ತೊಂದರೆಗಳು ಮತ್ತು ಖಿನ್ನತೆ ಸೇರಿದಂತೆ ಹಲವು ವಿಷಯಗಳನ್ನು ವೇಮುಲ ಅವರ ಆತ್ಮಹತ್ಯೆಗೆ ಕಾರಣಗಳನ್ನಾಗಿ ಉಲ್ಲೇಖಿಸಿತ್ತು.
ಪೊಲೀಸರ ವರದಿಯನ್ನು ವಿರೋಧಿಸಿದ್ದ ವೇಮುಲ ಕುಟುಂಬ, ವಿಶೇಷವಾಗಿ ಅವರ ತಾಯಿ ರಾಧಿಕಾ, ವಡ್ಡೇರ ಕುಟುಂಬ ದತ್ತು ಪಡೆದಿದ್ದರೂ ಕೂಡ ರೋಹಿತ್ ಹುಟ್ಟಿನಿಂದ ಮಾಲಾ (ಎಸ್‌ಸಿ) ಜಾತಿಗೆ ಸೇರಿದವರು ಎಂದು ಹೇಳಿದ್ದರು.
ಪುನಃ ತನಿಖೆ
ವೇಮುಲ ಅವರ ಕುಟುಂಬ ಎತ್ತಿದ ಅನುಮಾನಗಳು ಮತ್ತು ಸಾರ್ವಜನಿಕರ ಆಕ್ರೋಶದಿಂದಾಗಿ, ತೆಲಂಗಾಣದ ಡಿಜಿಪಿ 2024ರ ಮೇ 3ರಂದು ಪ್ರಕರಣದ ಹೆಚ್ಚಿನ ತನಿಖೆಗೆ ಆದೇಶಿಸಿದರು. ಮುಕ್ತಾಯ ವರದಿ ಅಂತಿಮವಲ್ಲ ಎಂದು ಸೂಚಿಸಿದರು. ಜಿಲ್ಲಾಧಿಕಾರಿಗಳ ವ್ಯಾಪ್ತಿಯಲ್ಲಿರುವ ಜಾತಿ ಸ್ಥಿತಿಯನ್ನು ನಿರ್ಧರಿಸಲು ಪೊಲೀಸರಿಗೆ ಅಧಿಕಾರವಿಲ್ಲ ಮತ್ತು ಪ್ರಮುಖ ಸಾಕ್ಷಿಗಳ ಹೇಳಿಕೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ರೋಹಿತ್ ಕುಟುಂಬ ವಾದಿಸಿತ್ತು. ಪ್ರಸ್ತುತ ದತ್ತಾತ್ರೇಯ ವಿರುದ್ದದ ಆರೋಪ ಮರುತನಿಖೆಯಲ್ಲಿದೆ ಎಂದು ತಿಳಿದು ಬಂದಿದೆ. ಆದ್ದರಿಂದ ಅವರು ಸಂಪೂರ್ಣವಾಗಿ ಆರೋಪ ಮುಕ್ತರಲ್ಲ ಎಂದು ಹೇಳಬಹುದು. ಈ ನಡುವೆ ಡಿಸಿಎಂ ವಿಕ್ರಮಾರ್ಕ ಅವರು ಇಡೀ ರೋಹಿತ್ ಪ್ರಕರಣದ ಮರುತನಿಖೆ ಬಗ್ಗೆ ಹೇಳಿಕೆ ನೀಡಿರುವುದು ಗಮನಾರ್ಹ.
‘ಬಾಂಬೆ ಹೈಕೋರ್ಟ್‌ನಿಂದ ಸಂವಿಧಾನ ವಿರೋಧಿ ಟಿಪ್ಪಣಿ’: ಸಿಪಿಐ(ಎಂ) ಪಾಲಿಟ್ ಬ್ಯೂರೋ ಖಂಡನೆ


