ರೈತರ ಬೃಹತ್ ಹೋರಾಟದ ನಡುವೆ ಎಲ್ಲಾ ಕೃಷಿ ಉತ್ಪನ್ನಗಳನ್ನು ‘ಕನಿಷ್ಠ ಬೆಂಬಲ ಬೆಲೆ’ (ಎಂಎಸ್‌ಪಿ) ಯಲ್ಲಿ ಖರೀದಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದು, ಹೋರಾಟಕ್ಕೆ ದೊಡ್ಡ ಜಯ ಸಿಕ್ಕಂತಾಗಿದೆ.
ರೈತರ ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಘೋಷಣೆ ಮಾಡಬೇಕು. ಅದಕ್ಕೆ ಕಾನೂನು ಖಾತರಿ ನೀಡಬೇಕು ಎಂಬುವುದು ಕಳೆದ 9 ತಿಂಗಳಿನಿಂದ ಹರಿಯಾಣದ ಅಂಬಾಲಾ ಬಳಿಯ ಶಂಭು ಗಡಿಯಲ್ಲಿ ಹೋರಾಟ ಮಾಡುತ್ತಿದ್ದ ರೈತರ ಪ್ರಮುಖ ಬೇಡಿಕೆಯಾಗಿತ್ತು. ಈಗ ಅದನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ಕೊಟ್ಟಿದೆ.
ಶುಕ್ರವಾರ (ಡಿ.6) ಹೋರಾಟವನ್ನು ತೀವ್ರಗೊಳಿಸಿದ್ದ ರೈತರು, ರಾಜಧಾನಿ ದೆಹಲಿಯತ್ತ ಮೆರವಣಿಗೆ ಹಮ್ಮಿಕೊಂಡಿದ್ದರು. ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ಮುನ್ನುಗಿದ್ದರು. ಈ ವೇಳೆ ಪೊಲೀಸರು ರೈತರ ಮೇಲೆ ಅಶ್ರುವಾಯು ಸಿಡಿಸಿ, ಲಾಠಿ ಚಾರ್ಜ್ ನಡೆಸಿದ್ದರು. ಇದರಿಂದ ಉದ್ವಿಗ್ನ ವಾತಾವರಣ ಉಂಟಾಗಿತ್ತು.
ಅತ್ತ ಹರಿಯಾಣ ಗಡಿಯಲ್ಲಿ ರೈತರು ಮತ್ತು ಪೊಲೀಸರ ನಡುವೆ ಸಂಘರ್ಷ ಏರ್ಪಟ್ಟಿದ್ದ ವೇಳಯೇ, ಇತ್ತ ರಾಜ್ಯಸಭೆಯಲ್ಲಿ ರೈತರಿಗೆ ಎಂಎಸ್‌ಪಿ ನೀಡುವ ಕುರಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ರೈತರ ಎಲ್ಲಾ ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ನೀಡುವುದಾಗಿ ಭರವಸೆ ನೀಡಿದ್ದಾರೆ.
“ರೈತರ ಎಲ್ಲಾ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು ಎಂದು ನಾನು ಸದನಕ್ಕೆ ಭರವಸೆ ನೀಡಲು ಬಯಸುತ್ತೇನೆ. ಇದು ಮೋದಿ ಸರ್ಕಾರ ಮತ್ತು ಮೋದಿಯವರ ಭರವಸೆಯನ್ನು ಈಡೇರಿಸುವ ಗ್ಯಾರಂಟಿಯನ್ನು ನಾನು ನಿಮಗೆ ಕೊಡುತ್ತೇನೆ” ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಇದೇ ವೇಳೆ ಪ್ರತಿಪಕ್ಷದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಚೌಹಾಣ್, “ಇನ್ನೊಂದು ಕಡೆಯ ನಮ್ಮ ಸ್ನೇಹಿತರು ಅಧಿಕಾರದಲ್ಲಿದ್ದಾಗ ಎಂ.ಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ದಾಖಲೆಯಲ್ಲಿ ಹೇಳಿದ್ದರು. ವಿಶೇಷವಾಗಿ ಉತ್ಪನ್ನದ ವೆಚ್ಚಕ್ಕಿಂತ 50 ಪ್ರತಿಶತ ಹೆಚ್ಚು ನೀಡಲು, ಈ ಬಗ್ಗೆ ನನ್ನ ಬಳಿ ದಾಖಲೆ ಇದೆ” ಎಂದಿದ್ದಾರೆ.
ಚೌಹಾಣ್ ಅವರು ತಮ್ಮ ಹೇಳಿಕೆಯಲ್ಲಿ ಕೇಂದ್ರ ಕೃಷಿ ಇಲಾಖೆಯ ಮಾಜಿ ರಾಜ್ಯ ಸಚಿವ ಕಾಂತಿಲಾಲ್ ಭೂರಿಯಾ, ಮಾಜಿ ಕೃಷಿ ಸಚಿವರಾದ ಶರದ್ ಪವಾರ್ ಮತ್ತು ಕೆ ವಿ ಥಾಮಸ್ ಅವರನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದಾರೆ.
ಚೌಹಾಣ್ ಟೀಕೆಯ ವೇಳೆ ಪ್ರತಿಕ್ರಿಯಿಸಿದ ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನ್ಕರ್ ಅವರು, “ನಿಮ್ಮ ಆರೋಪವನ್ನು ದೃಢೀಕರಿಸಲು ದಾಖಲೆ ಸಲ್ಲಿಸಿ” ಎಂದು ಸೂಚಿಸಿದರು. ಅದಕ್ಕೆ ಚೌಹಾಣ್ ಒಪ್ಪಿಕೊಂಡಿದ್ದಾರೆ.
ಮೋದಿ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ದ ಸುದೀರ್ಘ ಹೋರಾಟ ನಡೆಸಿ ಜಯಗಳಿಸಿದ್ದ ರೈತರು, ಕಳೆದ ಫೆಬ್ರವರಿಯಲ್ಲಿ ಎಂಎಸ್‌ಪಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹರಿಯಾಣದಿಂದ ದೆಹಲಿಗೆ ‘ದೆಹಲಿ ಚಲೋ’ ಪಾದಯಾತ್ರೆ ಹಮ್ಮಿಕೊಂಡಿದ್ದರು. ಆದರೆ, ಅವರು ದೆಹಲಿ ಪ್ರವೇಶಿಸಲು ಹರಿಯಾಣದ ಬಿಜೆಪಿ ಸರ್ಕಾರ ಅವಕಾಶ ನೀಡಿರಲಿಲ್ಲ.
ರೈತರ ನಿರಂತರ ಹೋರಾಟದ ವೇಳೆ ಪೊಲೀಸರೊಂದಿಗೆ ಹಲವು ಬಾರಿ ಸಂಘರ್ಷ ನಡೆದಿತ್ತು. ಕೆಲ ರೈತರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಕಳೆದ ಒಂದು ವಾರದಿಂದ ಪ್ರತಿಭಟನೆ ತೀವ್ರಗೊಳಿಸಿದ್ದ ಶುಕ್ರವಾರ ಪೊಲೀಸರ ಬ್ಯಾರಿಕೇಡ್‌ಗಳನ್ನು ಬೇಧಿಸಿ ದೆಹಲಿಯತ್ತ ಹೊರಟಿದ್ದರು. ಈ ವೇಳೆ ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿಚಾರ್ಜ್ ಮಾಡಿ ಅಡ್ಡಿಪಡಿಸಿದ್ದಾರೆ.
ಇದನ್ನೂ ಓದಿ : ಹರಿಯಾಣ | ರೈತರ ಮೇಲೆ ಅಶ್ರುವಾಯು ದಾಳಿ; ಇಂಟರ್‌ನೆಟ್ ಬಂದ್; ಸೆಕ್ಷನ್ ಜಾರಿ


