ನಮ್ಮ ಗ್ಯಾರಂಟಿ ಮತ್ತು ಅಭಿವೃದ್ದಿ ಕಾರ್ಯಕ್ರಮಗಳು ಮೂರು ಕ್ಷೇತ್ರಗಳ ಉಪಚುನಾವಣೆಯ ಗೆಲುವಿಗೆ ಕಾರಣ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಸಂಡೂರು, ಶಿಗ್ಗಾವಿ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ ಬೆನ್ನಲ್ಲೇ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಮೂರು ಕ್ಷೇತ್ರಗಳ ಗೆಲುವು 2028ರ ಚುನಾವಣೆಯ ದಿಕ್ಸೂಚಿಯಾಗಿದೆ. ಕರ್ನಾಟಕದ ಮಹಾಜನತೆ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕೆಂದು ದೊಡ್ಡ ಸಂದೇಶ ಕೊಟ್ಟಿದ್ದಾರೆ. ಸಮೀಕ್ಷೆಗಳು ಸುಳ್ಳಾಗುತ್ತವೆ ಎಂದು ನಾನು ಮೊದಲೇ ಹೇಳಿದ್ದೆ ಎಂದರು.
ಕರ್ನಾಟಕ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಗೆಲುವು,
ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ,
ಹಳೆಯ ಮೈಸೂರು ಭಾಗ ಮತ್ತು
ಸಮಗ್ರ ಕರ್ನಾಟಕದ ಅಭಿವೃದ್ಧಿಯ ಗೆಲುವು…#KarnatakaCongress— DK Shivakumar (@DKShivakumar) November 23, 2024
ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಯವರು ಶಾಸಕರಾಗಿದ್ದರು, ಸಂಸದರಾಗಿದ್ದರು. ಅವರು ಆ ಕ್ಷೇತ್ರದಲ್ಲಿ ಬಿಟ್ಟು ಹೋಗಿರುವ ಕೆಲವು ಗುರುತುಗಳಿಗೆ. ಅದಕ್ಕೆ ಜನರು ಒಂದು ತೀರ್ಪು ಕೊಟ್ಟಿದ್ದಾರೆ. ಶಿಗ್ಗಾವಿಯಲ್ಲಿ ಭರತ್ ಬೊಮ್ಮಾಯಿಯವರಿಗೆ ಸೋಲಾಗಿದೆ. ಅಲ್ಲೂ ಜನರು ಬಸವರಾಜ ಬೊಮ್ಮಾಯಿವರ ಕೆಲಸಗಳನ್ನು ನೋಡಿ ತೀರ್ಪು ನೀಡಿದ್ದಾರೆ. ಸಂಡೂರು ಮೊದಲಿನಿಂದಲೂ ನಮ್ಮ ಕ್ಷೇತ್ರ. ಹಾಗಾಗಿ, ಅಲ್ಲಿ ಗೆಲ್ಲುವ ಖಚಿತತೆ ಇತ್ತು ಎಂದು ಹೇಳಿದರು.
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಅದು ಸಾಬೀತಾಗಿದೆ. ನೀವು ಟೀಕೆ ಮಾಡಿ. ಆದರೆ, ಜನರ ಭಾವನೆಗಳ ಜೊತೆ ಆಟವಾಡಬೇಡಿ. ಜನರ ಬದುಕಿನ ಮೇಲೆ ರಾಜಕಾರಣ ಮಾಡಿ, ಅದಕ್ಕೆ ಹೆಚ್ಚಿನ ಒತ್ತು ಕೊಡಿ ಎಂಬ ಸಂದೇಶವನ್ನು ರಾಜ್ಯದ ಮತದಾರರು ಕೊಟ್ಟಿದ್ದಾರೆ ಎಂದರು.
ನಮ್ಮ ಐದು ಗ್ಯಾರಂಟಿಗಳ ಕುರಿತು ಬಹಳಷ್ಟು ವ್ಯಾಖ್ಯಾನಗಳನ್ನು ಮಾಡಲಾಗಿತ್ತು. ಅವುಗಳ ಅನುಷ್ಠಾನ ಸರಿಯಿಲ್ಲ ಎನ್ನಲಾಗಿತ್ತು. ಅಭಿವೃದ್ದಿಗೆ ಹಣ ಇಲ್ಲ ಎಂದಿದ್ದರು. ಆದರೆ, 56 ಸಾವಿರ ಕೋಟಿಯ ರೂಪಾಯಿಯ ಗ್ಯಾರಂಟಿ ಯೋಜನೆಗಳನ್ನು ನಾವು ಜನರಿಗೆ ಕೊಟ್ಟಿದ್ದೇವೆ. ಉಚಿತ ಬಸ್, ಗೃಹಲಕ್ಷಿ ಧನಸಹಾಯ, ಗೃಹ ಜ್ಯೋತಿಯಂತಹ ಕೆಲಸಗಳು ಜನರ ಬದುಕಿನ ಮೇಲೆ ಪರಿಣಾಮ ಬೀರಿಲ್ಲವೇ? ಎಂದು ಪ್ರಶ್ನಿಸಿದರು. ಲಂಚ, ಕಮಿಷನ್ ಯಾವುದೂ ನಮ್ಮ ವಿರುದ್ದ ಸಾಬೀತು ಮಾಡಲು ಆಗಿಲ್ಲ. ಇವೆಲ್ಲ ಕೂಡ ಜನರು ಅರಿತಿದ್ದಾರೆ ಎಂದರು.
ಇದನ್ನೂ ಓದಿ : ಉಪಚುನಾವಣೆ : ರಾಜ್ಯದ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಗೆಲುವು


