ಮಹಿಳೆಯ ನಗ್ನತೆಯನ್ನು ಲೈಂಗಿಕ ದೃಷ್ಠಿಯಿಂದ ಅಥವಾ ಆಶ್ಲೀಲತೆಯ ಮನೋದೃಷ್ಟಿಯಿಂದ ನೋಡೋದು ಸರಿಯಲ್ಲ, ನಗ್ನತೆಯನ್ನು ಲೈಂಗಿಕತೆಯೊಂದಿಗೆ ಸಮೀಕರಿಸುವುದು ತಪ್ಪು ಎಂದು ಕೇರಳ ಹೈಕೋರ್ಟ್ ಹೇಳಿದೆ.
ಮಹಿಳಾ ಪರ ಕಾರ್ಯಕರ್ತೆ ರೆಹಾನಾ ಫಾತಿಮಾ ಅವರು ತನ್ನ ಅರೆನಗ್ನ ದೇಹದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಚಿತ್ರ ಬಿಡಿಸಲು ಅವಕಾಶ ನೀಡಿದ್ದಲ್ಲದೇ, ಅದನ್ನು ವಿಡಿಯೋ ಮಾಡಿ ಪ್ರಸಾರ ಮಾಡಿದ್ದರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಕೇರಳ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.
2020 ರಲ್ಲಿ ರೆಹಾನಾ ಫಾತಿಮಾ ಅವರು ತನ್ನ ಅರೆ-ನಗ್ನ ದೇಹದ ಮೇಲೆ ಅಪ್ರಾಪ್ತ ಮಕ್ಕಳು ಚಿತ್ರಿ ಬಿಡಿಸುತ್ತಿರುವುದನ್ನು ವೀಡಿಯೊ ಮಾಡಿ, ಪ್ರಸಾರ ಮಾಡಿದ್ದರು. ಆ ನಂತರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರ ಏಕಸದಸ್ಯ ಪೀಠವು ”ಮಹಿಳೆಯ ಅರೆ ನಗ್ನ ದೇಹವನ್ನು ಯಾವಾಗಲೂ ಲೈಂಗಿಕ ಅಥವಾ ಅಶ್ಲೀಲ ದೃಷ್ಟಿಯಿಂದ ನೋಡಬಾರದು. ಮಕ್ಕಳು ಚಿತ್ರ ಬಿಡಿಸಲು ಅವರಿಗೆ ತನ್ನ ದೇಹವನ್ನೇ ಕ್ಯಾನ್ವಾಸ್ ಆಗಿ ಬಳಸಲು ಅವಕಾಶ ನೀಡಿದರೆ ಅದು ತಪ್ಪಲ್ಲ” ಎಂದು ಹೇಳಿ ರೆಹನಾ ಫಾತಿಮಾ ಅವರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದೆ.
”ಅರೆ ನಗ್ನ ದೇಹವನ್ನು ಲೈಂಗಿಕ ದೃಷ್ಟಿಯಲ್ಲಿ ನೋಡದೆ ಸಂವೇದನಾಶೀಲತೆ ಬೆಳೆಸುವ ಉದ್ದೇಶದಿಂದ ಮಕ್ಕಳಿಗೆ ಕ್ಯಾನ್ವಾಸ್ ರೀತಿಯಲ್ಲಿ ನಗ್ನ ಎದೆ ತೆರೆದಿಟ್ಟಿರುವುದು ತಪ್ಪಲ್ಲ” ಹೈಕೋರ್ಟ್ ಹೇಳಿದೆ.
”ಸ್ತ್ರೀಯರ ದೇಹದ ವಿಚಾರದಲ್ಲಿ ಪುರುಷಪ್ರಧಾನ ಸಮಾಜ ಹೊಂದಿರುವ ನಂಬಿಕೆ ಮತ್ತು ಕಲ್ಪನೆಯನ್ನು ಪ್ರಶ್ನಿಸಿಲು ಮತ್ತು ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವ ಉದ್ದೇಶದಿಂದ ಈ ವಿಡಿಯೋ ಮಾಡಿದ್ದೇನೆ” ಎಂದು ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಅವರು ಹೇಳಿದ್ದರು. ಅವರ ಈ ಹೇಳಿಕೆಯನ್ನು ಮಾನ್ಯ ಮಾಡಿದ ಹೈಕೋರ್ಟ್, ವಿಡಿಯೋ ಅಶ್ಲೀಲ ಉದ್ದೇಶದಿಂದ ಕೂಡಿಲ್ಲ ಎಂದು ತೀರ್ಪು ನೀಡಿತು.
“ನಗ್ನತೆಯನ್ನು ಲೈಂಗಿಕತೆಗೆ ಜೋಡಿಸಬಾರದು. ಮಹಿಳೆಯರ ಬೆತ್ತಲೆ ದೇಹದ ಮೇಲ್ಭಾಗದ ನೋಟವು ಪೂರ್ವನಿಯೋಜಿತವಾಗಿ ಲೈಂಗಿಕವಾಗಿದೆ ಎಂದು ಪರಿಗಣಿಸಬಾರದೆಂದು” ನ್ಯಾಯಮೂರ್ತಿ ಎಡಪ್ಪಗತ್ ಹೇಳಿದರು.
ಇದನ್ನೂ ಓದಿ: ಮೃತದೇಹದ ಮೇಲಿನ ಲೈಂಗಿಕ ದೌರ್ಜನ್ಯ ಅಪರಾಧವಲ್ಲ: ಆರೋಪಿಯನ್ನು ಖುಲಾಸೆಗೊಳಿಸಿದ ಕರ್ನಾಟಕ ಹೈಕೋರ್ಟ್
”ಸಾಮಾಜಿಕ ಕಾರ್ಯಕರ್ತೆ ಫಾತಿಮಾ ಅವರು ಮಕ್ಕಳನ್ನು ಯಾವುದೇ ಲೈಂಗಿಕ ಕ್ರಿಯೆಗಳಿಗೆ ಮತ್ತು ಲೈಂಗಿಕ ತೃಪ್ತಿಗಾಗಿ ಬಳಸಿಕೊಳ್ಳಲಾಗಿದೆ ಎಂದು ಊಹಿಸಲು ಸಾಧ್ಯವಿಲ್ಲ. ಫಾತಿಮಾ ತನ್ನ ದೇಹವನ್ನು ತನ್ನ ಮಕ್ಕಳಿಗೆ ಚಿತ್ರಿಸಲು ಕ್ಯಾನ್ವಾಸ್ ಆಗಿ ಬಳಸಿದ್ದಳು” ಎಂದು ನ್ಯಾಯಾಧೀಶರು ಹೇಳಿದರು.
”ಒಬ್ಬ ಮಹಿಳೆ ತನ್ನ ದೇಹದ ಬಗ್ಗೆ ಸ್ವಾಯತ್ತ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ಸಮಾನತೆ ಮತ್ತು ಗೌಪ್ಯತೆಯ ಮೂಲಭೂತ ಹಕ್ಕಿನ ತಿರುಳಾಗಿದೆ. ಇದು ಸಂವಿಧಾನದ 21 ನೇ ವಿಧಿಯಿಂದ ಖಾತರಿಪಡಿಸಿದ ವೈಯಕ್ತಿಕ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಬರುತ್ತದೆ” ಎಂದು ನ್ಯಾಯಾಧೀಶರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಸೋಮವಾರದ ತೀರ್ಪಿನಲ್ಲಿ, ನ್ಯಾಯಾಲಯವು ಫಾತಿಮಾ ಅವರ ವಾದವನ್ನು ಒಪ್ಪಿಕೊಂಡಿತು ಮತ್ತು ಪುರುಷರ ಮೇಲಿನ ದೇಹದ ನಗ್ನ ಪ್ರದರ್ಶನವನ್ನು ಎಂದಿಗೂ ಅಶ್ಲೀಲ ಅಥವಾ ಅಸಭ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
ಇದೇ ವೇಳೆ ಪ್ರಾಚೀನ ದೇವಾಲಯಗಳಲ್ಲಿ ಕೆತ್ತಿರುವ ಅರೆನಗ್ನ ಮೂರ್ತಿಗಳ ಬಗ್ಗೆಯೂ ಉಲ್ಲೇಖಿಸಿದ ಹೈಕೋರ್ಟ್, ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಲಭ್ಯವಿರುವ ನಗ್ನ ಶಿಲ್ಪಗಳು ಮತ್ತು ವರ್ಣ ಚಿತ್ರಗಳನ್ನು ಕಲೆ ಎಂದು ಪರಿಗಣಿಸಲಾಗುತ್ತದೆ. ದೇವರ ಭಕ್ತಿಗೆ ದೇವಾಲಯಕ್ಕೆ ಹೋದಾಗಲು ಭಕ್ತರ ಮನಸ್ಸು ಅರೆನಗ್ನ ಮೂರ್ತಿಗಳನ್ನು ನೋಡೋವಾಗ ಅದನ್ನು ಕಲೆಯಾಗಿ ನೋಡಿ, ದೇವರನ್ನು ಪ್ರಾರ್ಥಿಸುತ್ತಾರೆ. ಆದರೆ ಲೈಂಗಿಕತೆಯ ದೃಷ್ಟಿಕೋನದಲ್ಲಿ ನೋಡುವುದಿಲ್ಲ’ ಎಂದು ಕೋರ್ಟ್ ಹೇಳಿದೆ.
“ಕೇರಳದ ತ್ರಿಶೂರ್‌ನಲ್ಲಿ ನಡೆಯುವ ‘ಪುಲಿಕಲಿ’ ಉತ್ಸವಗಳಲ್ಲಿ ಪುರುಷರ ದೇಹದ ಮೇಲೆ ಚಿತ್ರಿಸುವುದು ಅಂಗೀಕೃತ ಸಂಪ್ರದಾಯವಾಗಿದೆ” ಎಂದು ನ್ಯಾಯಮೂರ್ತಿ ಎಡಪ್ಪಗತ್ ಹೇಳಿದರು. ದೇವಾಲಯದಲ್ಲಿ ‘ತೆಯ್ಯಂ’ ಮತ್ತು ಇತರ ಆಚರಣೆಗಳನ್ನು ನಡೆಸಿದಾಗ, ಪುರುಷ ಕಲಾವಿದರ ದೇಹದ ಮೇಲೆ ಚಿತ್ರಕಲೆ ನಡೆಸಲಾಗುತ್ತದೆ. ಪುರುಷ ದೇಹವನ್ನು ಸಿಕ್ಸ್ ಪ್ಯಾಕ್ ಎಬಿಎಸ್, ಬೈಸೆಪ್ಸ್ ಇತ್ಯಾದಿಗಳ ರೂಪದಲ್ಲಿ ಪ್ರದರ್ಶಿಸಲಾಗುತ್ತದೆ. ಪುರುಷರು ಶರ್ಟ್ ಧರಿಸದೆ ತಿರುಗಾಡುವುದನ್ನು ನಾವು ಸಾಮಾನ್ಯವಾಗಿ ಕಾಣುತ್ತೇವೆ, ಆದರೆ ಈ ಕೃತ್ಯಗಳನ್ನು ಎಂದಿಗೂ ಅಶ್ಲೀಲ ಅಥವಾ ಅಸಭ್ಯವೆಂದು ಪರಿಗಣಿಸಲಾಗುವುದಿಲ್ಲ. ಆದರೆ ಕೆಲವು ಜನರು ಮಹಿಳೆಯ ಬೆತ್ತಲೆ ದೇಹವನ್ನು ಅತಿಯಾದ ಲೈಂಗಿಕತೆ ಅಥವಾ ಕೇವಲ ಬಯಕೆಯ ವಸ್ತು ಎಂದು ಪರಿಗಣಿಸುತ್ತಾರೆ ಎಂದು ನ್ಯಾಯಾಲಯವು ಹೇಳಿದೆ.
ನಗ್ನತೆಯನ್ನು ಅಶ್ಲೀಲ ಅಥವಾ ಅಸಭ್ಯ ಅಥವಾ ಅನೈತಿಕ ಎಂದು ವರ್ಗೀಕರಿಸುವುದೇ ಮೂಲಭೂತವಾಗಿ ತಪ್ಪು ಎಂದ ನ್ಯಾಯಮೂರ್ತಿ ಕೌಸರ್ ಎಡಪ್ಪಗತ್, ಕೆಲವು ಅಸ್ಪೃಶ್ಯ ಸಮುದಾಯದ ಮಹಿಳೆಯರು ತಮ್ಮ ಸ್ತನಗಳನ್ನು ಮುಚ್ಚುವ ಹಕ್ಕಿಗಾಗಿ ಹೋರಾಟ ನಡೆಸಿದ ರಾಜ್ಯ ಇದು. ಪುರುಷ ದೇಹದ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಸಂಖ್ಯೆ ಕಡಿಮೆ. ಆದರೆ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ತನ್ನ ದೇಹಕ್ಕೆ ಸಂಬಂಧಿಸಿದಂತೆ ತನ್ನದೇ ಆದ ಸ್ವತಂತ್ರ ಧೋರಣೆ ಹೊಂದುವುದಕ್ಕೆ ಅವಕಾಶ ನೀಡುವುದಿಲ್ಲ. ನಿರಂತರವಾಗಿ ಆಕೆಯನ್ನು ಬೆದರಿಸಲಾಗುತ್ತದೆ. ತಮ್ಮ ದೇಹ ಮತ್ತು ಜೀವನದ ಬಗ್ಗೆ ತಮ್ಮದೇ ಆದ ಆಯ್ಕೆಗಳನ್ನು ಮಾಡಿಕೊಳ್ಳುವುದಕ್ಕೆ ಹೆಣ್ಣಿಗೆ ಅವಕಾಶ ನೀಡುವುದಿಲ್ಲ” ಎಂದು ಹೇಳಿದರು.
ಮಹಿಳೆಯ ದೇಹದ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಅಭಿಪ್ರಾಯ ರೂಪಿಸುವುದು ವೀಡಿಯೋದ ಉದ್ದೇಶವಾಗಿತ್ತು ಎಂದು ಕೋರ್ಟ್ ನಿರೂಪಿಸಿದೆ.


