Homeಕರ್ನಾಟಕ‘ಎದ್ದೇಳು ಕರ್ನಾಟಕ’ ಅನುಭವ ಕಥನ (ಭಾಗ-2): ಅಭಿಯಾನ ಕೈಗೊಂಡ ಕಾರ್ಯಗಳು

‘ಎದ್ದೇಳು ಕರ್ನಾಟಕ’ ಅನುಭವ ಕಥನ (ಭಾಗ-2): ಅಭಿಯಾನ ಕೈಗೊಂಡ ಕಾರ್ಯಗಳು

- Advertisement -
- Advertisement -

ಮೊದಲ ಭಾಗದಲ್ಲಿ ಹಂಚಿಕೊಂಡಂತೆ ಕಳೆದ ಎರಡು ದಶಕಗಳಿಂದ ಕರ್ನಾಟಕದ ಚುನಾವಣೆಗಳ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿ ಹಲವು ರೀತಿಯ ಪ್ರಯತ್ನ ಮಾಡಿ, ಇದು ಸಾಲದು ಎಂದು ಚಡಪಡಿಸುತ್ತಿದ್ದ ಮನಸ್ಸುಗಳು ಸೇರಿ ಹೊಸ ಪರಿಕಲ್ಪನೆಗೆ ಜನ್ಮ ನೀಡಿದ್ದವು. ಇದು ಯಾವುದೇ ವ್ಯಕ್ತಿ ಅಥವಾ ಸಂಘಟನೆಯಲ್ಲಿ ಹುಟ್ಟಿದ ಐಡಿಯಾ ಆಗಿರಲಿಲ್ಲ. ಇದೊಂದು ಕರ್ನಾಟಕದ ನೆಲದಲ್ಲಿ ಕಳೆದ ಎರಡು ದಶಕಗಳ ಜನಚಳವಳಿಗಳ ಪ್ರಯೋಗ ಶಾಲೆಯಿಂದ ಹುಟ್ಟಿದ ಸಮಷ್ಟಿ ಚಿಂತನೆಯ ಕೂಸಾಗಿತ್ತು. ಮಾರ್ಚ್ 5 ರಂದು ಜೈ ಭೀಮ್ ಭವನದಲ್ಲಿ ನಡೆದ ಕೇಂದ್ರೀಯ ಕಾರ್ಯಾಗಾರದಲ್ಲಿ ಅದು ಹರಳುಗಟ್ಟಿತ್ತು. “ಎದ್ದೇಳು ಕರ್ನಾಟಕ” ಹೆಸರೂ ಸಹ ಪ್ರಜಾತಾಂತ್ರಿಕ ವಿಧಾನದಲ್ಲಿ ಮತದಾನ ನಡೆದು ಆಯ್ಕೆಯಾಗಿತ್ತು.

ಸಾಕ್ಷಿಪ್ರಜ್ಞೆಯ ಕರೆ: ಜನಚಳವಳಿಗಳು ವಿಕಾಸಗೊಳಿಸಿದ ಈ ಪರಿಕಲ್ಪನೆಯ ಜೊತೆ ಸಹಮತಿಸುತ್ತಾ ಕರ್ನಾಟಕದ ಸಾಕ್ಷಿ ಪ್ರಜ್ಞೆಯಂತಿರುವ ದೇವನೂರ ಮಹಾದೇವ, ಪುರುಷೋತ್ತಮ ಬಿಳಿಮಲೆ, ರಹಮತ್ ತರೀಕೆರೆ, ಅಲ್ಲಮ ಪ್ರಭು ಬೆಟ್ಟದೂರು, ಡಾ. ವಿಜಯ, ದು.ಸರಸ್ವತಿ, ತಾರಾ ರಾವ್, ಎ.ಆರ್. ವಾಸವಿ ಮುಂತಾದ 16 ಜನ ಗಣ್ಯರು “ಕರ್ನಾಟಕವನ್ನು ರಕ್ಷಿಸಿಕೊಳ್ಳಲು ಮುಂದೆ ಬರಲು” ನಾಡಿನ ಜನತೆಗೆ ವಿಶೇಷವಾಗಿ ಯುವಜನರಿಗೆ ಮಾರ್ಚ್ 9ರಂದು ಕರೆ ನೀಡಿದರು. ಹದವಾಗಿ ಕಾದ ಭೂಮಿಗೆ ಫಟ್ಟನೆ ಮಳೆಹನಿ ತಾಕಿದೊಡನೆ ಚಿಮ್ಮಿ ಏಳುವ ಹಸಿರಿನಂತೆ ಕರ್ನಾಟಕದ ಸಾಮಾಜಿಕ ಕಾರ್ಯಕರ್ತರು ಸ್ಪಂದಿಸಿದರು.

ಚಿಮ್ಮಿದ ಕೆಲಸ: ಸಾವಿರಾರು ಜನರು ಆನ್‌ಲೈನಿನಲ್ಲೇ ನೊಂದಾಯಿಸಿಕೊಂಡರು, ಫೋನ್ ಕರೆಗಳು ಹರಿದು ಬಂದವು, 40 ದಿನದೊಳಗೆ 250 ಕಾರ್ಯಾಗಾರಗಳು ರಾಜ್ಯವ್ಯಾಪಿಯಾಗಿ ನಡೆದವು. ಜೋನಲ್, ಜಿಲ್ಲಾ, ಕ್ಷೇತ್ರ, ವಿವಿಧ ಸಮುದಾಯ ಕೇಂದ್ರಿತ, ಅವುಗಳೊಳಗಿನ ಬಣಗಳಿಗಾಗಿ….

ವಾಲಂಟೀರ್ಸ್‌ಗಳ ದಂಡು: ಎದ್ದೇಳು ಕರ್ನಾಟಕದ ಹೆಸರಿನಲ್ಲೇ ಕನಿಷ್ಟ 5 ಸಾವಿರ ವಾಲಂಟೀರ್ಗಳು, ವಿವಿಧ ಜನಸಮುದಾಯಗಳೊಳಗೆ ಅವರವರ ಸಂಘಟನೆ ಅಥವಾ ಸಮುದಾಯದ ಹೆಸರಿನಲ್ಲಿ ಕನಿಷ್ಟ 20 ಸಾವಿರ ವಾಲಂಟೀರ್ಗಳು ಕೆಲಸ ಮಾಡತೊಡಗಿದರು. ಆನ್‌ಲೈನಿನಲ್ಲಿ ನೊಂದಾಯಿಸಿಕೊಂಡ 3 ಸಾವಿರ ಜನರನ್ನು ಸರಿಯಾಗಿ ಸಂಪರ್ಕಿಸಿ ತೊಡಗಿಸಿಕೊಳ್ಳಲೂ ಆಗಲಿಲ್ಲ.

ಆಯ್ಕೆ ಮಾಡಲಾದ ಕ್ರಿಟಿಕಲ್ ಕ್ಷೇತ್ರಗಳು: ಇಡೀ ರಾಜ್ಯದ ವಿಧಾನಸಭಾ ಕ್ಷೇತ್ರಗಳ ಹಿನ್ನೆಲೆ ಮತ್ತು ಪ್ರಸ್ತುತ ಸ್ಥಿತಿಗತಿಯನ್ನು ಅವಲೋಕಿಸಿ, ಅನೇಕ ಸಮಾಲೋಚನೆಗಳನ್ನು ನಡೆಸಿ, 103 ಕ್ರಿಟಿಕಲ್ [ಅಪಾಯದ] ಕ್ಷೇತ್ರಗಳೆಂದು ಗುರುತಿಸಲಾಯಿತು. ನಮ್ಮ ಶಕ್ತಿ ಸಾಮರ್ಥ್ಯವನ್ನಾಧರಿಸಿ ಅದರಲ್ಲಿನ 55 ಕ್ಷೇತ್ರಗಳಲ್ಲಿ ಕೆಲಸ ಮಾಡೋಣ ಎಂದು ತೀರ್ಮಾನಿಸಿದೆವು. ಆದರೆ ನೋಡನೋಡುತ್ತಿದ್ದಂತೆ 103 ಕ್ಷೇತ್ರಗಳಿಗೂ ಕೆಲಸ ಹಬ್ಬಿಬಿಟ್ಟಿತು. ಹಲವು ಕಡೆ ದೊಡ್ಡ ತಂಡಗಳು, ಕೆಲವು ಕಡೆ ಕೆಲ ಸಮುದಾಯಗಳಲ್ಲಿ ಮಾತ್ರ ಕೆಲಸ ಮಾಡುವ ತಂಡಗಳು, ಇನ್ನೂ ಕೆಲವೆಡೆ ಕನಿಷ್ಟ ಪ್ರಚಾರ ಮಾಡುವ ತಂಡಗಳು.

ಮಾರ್ಗದರ್ಶನಕ್ಕಾಗಿ ಫೀಲ್ಡ್ ಮ್ಯಾನ್ಯೂಯಲ್: ತಂಡಗಳು ಯಾವ ರೀತಿಯಲ್ಲಿ ಫೀಲ್ಡಲ್ಲಿ ಕೆಲಸ ಮಾಡಬೇಕು ಎಂಬ ಮಾರ್ಗದರ್ಶನ ಮಾಡುವ ಫೀಲ್ಡ್ ಮ್ಯಾನುಯಲ್ ಅನ್ನು ಹೊರತರಲಾಯಿತು. ಕ್ರಿಟಿಕಲ್ ಕ್ಷೇತ್ರದಲ್ಲಿಯೂ ಕ್ರಿಟಿಕಲ್ ಬೂತ್‌ಗಳನ್ನು ಗುರುತಿಸುವ, ಆ ಕ್ರಿಟಿಕಲ್ ಬೂತ್‌ಗಳ ಪ್ರದೇಶದಲ್ಲಿಯೂ ಫೋಕಸ್ ಕಮ್ಯುನಿಟಿಗಳನ್ನು ಗುರುತಿಸುವ, ಆ ಕಮ್ಯುನಿಟಿಗಳ ಮುಖ್ಯರನ್ನು ಗುರುತಿಸಿ ಅವರನ್ನು ಸಂಪರ್ಕಿಸುವ ಮೂಲಕ ಕೆಲಸ ಪ್ರಾರಂಭಿಸಬೇಕಿರುವ, ನಾವೇ ಮಾತು ಪ್ರಾರಂಭಿಸದೆ ಮೊದಲು ಅವರ ನೋವು ಮತ್ತು ನಿಲುವುಗಳನ್ನು ಆಲಿಸಿ, ನಂತರ ಅದಕ್ಕೆ ಸರಿಯಾದ ದೃಷ್ಟಿಕೋನ ನೀಡುವ ರೀತಿಯಲ್ಲಿ ಮಾತನಾಡುವ ಕಲೆಯಲ್ಲಿ ತಂಡಗಳನ್ನು ತರಬೇತುಗೊಳಿಸಲಾಯಿತು. ಪ್ರತಿ ಬೂತಿನ ಓಟಿಂಗ್ ಪ್ಯಾಟರ್ನ್ಅನ್ನು ಅಧ್ಯಯನ ಮಾಡುವ ವಿಧಾನವನ್ನು ಹೇಳಿಕೊಡಲಾಯಿತು.

ಲಕ್ಷಗಳ ಸಂಖ್ಯೆಯಲ್ಲಿ ವೈವಿಧ್ಯ ಸಾಹಿತ್ಯ: ಪ್ರಚಾರಕ್ಕೆ ಪೂರಕವಾಗಿ 8 ಬಗೆಯ ಒಟ್ಟು 10 ಲಕ್ಷದಷ್ಟು ಪ್ರತಿಗಳ ಸಾಹಿತ್ಯವನ್ನು ಒದಗಿಸಲಾಯಿತು. ಎದ್ದೇಳು ಕರ್ನಾಟಕದ ನಿಲುವು ಹೇಳುವ ಕರಪತ್ರವಲ್ಲದೆ ರೈತರಿಗಾಗಿ, ಅಲ್ಪಸಂಖ್ಯಾತರಿಗಾಗಿ, ವಿದ್ಯಾರ್ಥಿ ಯುವಜನರಿಗಾಗಿ, ಕಾರ್ಮಿಕರಿಗಾಗಿ, ದಲಿತ ಸಮುದಾಯಕ್ಕಾಗಿ, ಮಧ್ಯಮ ವರ್ಗಕ್ಕಾಗಿ ಭಿನ್ನ ಭಿನ್ನ ಸಾಹಿತ್ಯವನ್ನು ಹೊರತರಲಾಯಿತು. ಬಿಜೆಪಿಯ ದುರಾಡಳಿತವನ್ನು ಬಯಲುಗೊಳಿಸುವ “ಭ್ರಮನಿರಸನವಾದ ಭರವಸೆಗಳು” ಎಂಬ ಕಿರು ಹೊತ್ತಿಗೆಯನ್ನು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ತರಲಾಯಿತು. ಈ ಕಿರು ಹೊತ್ತಿಗೆ ಕಾರ್ಯಕರ್ತರ ಕೈಯಲ್ಲಿನ ಮಾರ್ಗದರ್ಶಿ ಕೈಪಿಡಿಯೂ ಆಯಿತು. ಸರಳವಾಗಿ ಸಂಕ್ಷಿಪ್ತವಾಗಿ ಬಿಜೆಪಿಯ ದುರಾಡಳಿತವನ್ನು ಕಟ್ಟಿಕೊಡುವ ಸಾಹಿತ್ಯವೂ ಆಗಿ ಜನಪ್ರಿಯತೆಯನ್ನು ಪಡೆಯಿತು.

ಇದನ್ನೂ ಓದಿರಿ: ಎದ್ದೇಳು ಕರ್ನಾಟಕ: ನೀತಿಬದ್ಧ ನಾಗರಿಕ ಅಭಿಯಾನ

ಮನಮನದ ಬಾಗಿಲು ತಟ್ಟಿದ ಸೋಷಿಯಲ್ ಮೀಡಿಯಾ: ಸೋಷಿಯಲ್ ಮೀಡಿಯಾ ತಂಡವಂತೂ ಧಮಾಕ ಮಾಡಿಬಿಟ್ಟಿತು. ಎದ್ದೇಳು ಕರ್ನಾಟಕ ಹೆಸರಲ್ಲೇ ಮಾತ್ರವಲ್ಲ, ಯಾವ ಹೆಸರೂ ಇಲ್ಲದೆ, ವಿವಿಧ ಸಮುದಾಯಗಳಿಗೆ ಹೊಂದಿಕೆಯಾಗುವ ಹೆಸರುಗಳಲ್ಲಿ, ಕನ್ನಡ, ಇಂಗ್ಲಿಷ್, ಉರ್ದು, ತುಳು ಮತ್ತು ಕೊಂಕಣಿ ಐದು ಭಾಷೆಗಳಲ್ಲಿ, ಒಟ್ಟು ಒಂದು ಸಾವಿರಕ್ಕೂ ಹೆಚ್ಚಿನ ಸೋಷಿಯಲ್ ಮೀಡಿಯಾ ಪೋಸ್ಟರುಗಳು ಫ್ಯಾಕ್ಟರಿ ಪ್ರೊಡಕ್ಷನ್ನಿನ ರೀತಿ ಹೊರಬಂದವು. 80 ವಿಡಿಯೋಗಳನ್ನು ತಯಾರಿಸಲಾಯಿತು. 8 ಹಾಡಿನ ಆಲ್ಬಂಗಳಂತೂ ಜನಪ್ರಿಯಗೊಂಡು ಜನಮಾನಸವನ್ನು ತಟ್ಟಿದವು. ಇದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. ಕಂಟೆಂಟ್ ರೈಟರ್ಸ್, ಡಿಸೈನರ್ಸ್, ವಿಡಿಯೋ ಎಡಿಟರ್ಸ್, ಕ್ಯಾಮರಾ ಪರ್ಸನ್ಸ್, ಎಡಿಟರ್ಸ್ ಎಲ್ಲಾ ಸೇರಿ ನೂರಕ್ಕೂ ಹೆಚ್ಚಿನ ಜನ ಈ ಮಿಷನ್ನಿನಲ್ಲಿ ಅಕ್ಷರಶಹ ಹಗಲು ರಾತ್ರಿ ತೊಡಗಿಸಿಕೊಂಡಿದ್ದರು. ಅನೇಕ ಸೋಷಿಯಲ್ ಮೀಡಿಯಾ ಕಾರ್ಯಕರ್ತರು “ನಾವೇನು ಮಾಡಬಹುದು ಹೇಳಿ” ಎಂದು ತಾವಾಗೇ ಕೇಳಿಕೊಂಡು ಬಂದು ತೊಡಗಿಸಿಕೊಂಡರು. ನಿಜ ಹೇಳಬೇಕೆಂದರೆ ಎಲ್ಲರಿಗೂ ನಮ್ಮಿಂದಲೇ ಕೆಲಸ ನೀಡಲು ಆಗಲಿಲ್ಲ. ಪುರುಷೋತ್ತಮ ಬಿಳಿಮಲೆ, ಕೆ.ಪಿ. ಸುರೇಶ್, ಮಮತಾ, ಭುವನ್, ಪವಿತ್ರ, ದೀಪು ಮುಂತಾದವರ ಕಲ್ಪನೆಗೂ ಮೀರಿದ ಶ್ರಮವನ್ನಿಲ್ಲಿ ಸ್ಮರಿಸಲೇಬೇಕು.

ಬಿಜೆಪಿ ತಂತ್ರಗಾರಿಕೆಗೆ ಸವಾಲೊಡ್ಡಿದ ನೆರೇಟಿವ್ ತಂಡ: ವಿವಿಧ ಮೀಡಿಯಾಗಳಲ್ಲಿ ಕೆಲಸ ಮಾಡುತ್ತಿರುವ ಮಿತ್ರ ಬಳಗದ ಜೊತೆ ಸೇರಿ ನೆರೇಟಿವ್ ತಂಡ ಕೆಲಸ ಮಾಡಿತು. 40% ಸರ್ಕಾರವನ್ನು ಜನಜನಿತಗೊಳಿಸುವುದರಲ್ಲಿ, ಗ್ಯಾಸ್ ಸಿಲಿಂಡರ್ ಅನ್ನು ರೂಪಕ ಮಾಡಿ ಬೆಲೆ ಏರಿಕೆಯನ್ನು ನಿತ್ಯದ ಚರ್ಚೆಯ ವಿಷಯ ಮಾಡುವುದರಲ್ಲಿ, ದ್ವೇಷ ರಾಜಕಾರಣದ ಹಿಂದಿನ ಸ್ವಾರ್ಥ ರಾಜಕಾರಣವನ್ನು ಜನಸಾಮಾನ್ಯರು ಸ್ವೀಕರಿಸುವ ಶೈಲಿಯಲ್ಲಿ ಮುಂದಿಡುವ ವಿಚಾರದಲ್ಲಿ, ಉರಿಗೌಡ – ನಂಜೇಗೌಡರನ್ನು ಕಣ್ಮರೆ ಮಾಡಿಸುವುದರಲ್ಲಿ, ನಂದಿನಿ ವಿಚಾರವನ್ನು ಮುನ್ನೆಲೆಗೆ ತರುವುದರಲ್ಲಿ, ಮೋದಿಯ ಭೇಟಿಯನ್ನು ಪ್ರಶ್ನಿಸುವುದರಲ್ಲಿ, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾಡಿರುವ ದ್ರೋಹವನ್ನು ಬಿಚ್ಚಿಡುವುದರಲ್ಲಿ ಗಮನಾರ್ಹ ಕೆಲಸ ಮಾಡಿತು. ಹೊಸ ತಲೆಮಾರಿನ ಮಾಧ್ಯಮಗಳಾದ ಈದಿನ, ಪೀಪಲ್ ಟಿವಿ, ವಾರ್ತಾ ಭಾರತಿ, ನಾನುಗೌರಿ ಮುಂತಾದವುಗಳ ಶ್ರಮವನ್ನು ಈ ವಿಚಾರದಲ್ಲಿ ಗುರುತಿಸಲೇಬೇಕು.

ನಾಡಿಮಿಡಿತ ಕಟ್ಟಿಕೊಟ್ಟ ‘ಈ ದಿನ’ದ ಸರ್ವೆ: ಮಾರಿಕೊಂಡ ಮಾಧ್ಯಮಗಳು ಜನರನ್ನು ದಿಕ್ಕುತಪ್ಪಿಸುತ್ತಿರುವ ಜನಾಭಿಪ್ರಾಯವನ್ನು ತಪ್ಪಾಗಿ ಬಿಂಬಿಸುತ್ತಿರುವ ಈ ಮೋಡಿ ಕಾಲದಲ್ಲಿ ನಮ್ಮದೇ ಆದ ವಿಧಾನದ ಮೂಲಕ ಜನರ ನಾಡಿ ಅರಿಯುವ ಪ್ರಯತ್ನ ಮಾಡಬೇಕು ಎಂದುಕೊಂಡೆವು. ಈ ಸವಾಲನ್ನು ಸ್ವೀಕರಿಸಿದ್ದು ‘ಈ ದಿನ’. ಸಿಸಿರ ಎಂಬ ಅಧ್ಯಯನ ಸಂಸ್ಥೆಯ ನೆರವನ್ನು ಪಡೆಯಲಾಯಿತು. ಅದು ಮುಂದಿಟ್ಟ ವೈಜ್ಞಾನಿಕ ಮಾದರಿಯನ್ನು ಅನುಸರಿಸುವುದು ಸುಲಭವಿರಲಿಲ್ಲ. 224 ಕ್ಷೇತ್ರಗಳ, ವೈಜ್ಞಾನಿಕ ವಿಧಾನದಲ್ಲಿ ಆಯ್ದ ಬೂತುಗಳ, ಆಯ್ದ 50 ಸಾವಿರ ವ್ಯಕ್ತಿಗಳನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಬೇಕಿತ್ತು. ‘ಈ ದಿನ’ದ ಫೀಲ್ಡ್ ತಂಡ ಸವಾಲನ್ನು ಸ್ವೀಕರಿಸಿತು. ಎದ್ದೇಳು ಕರ್ನಾಟಕದ ನೆರವನ್ನೂ ಕೇಳಿತು. ಸಮರೋಪಾದಿಯ ಕೆಲಸ ಪ್ರಾರಂಭವಾಯಿತು. ವಾಲಂಟೀರ್ಗಳು ದಣಿದರು, ಈ ರೀತಿಯ ಕೆಲಸ ಸುಲಭವಿರಲಿಲ್ಲ. ಆದರೆ ಈ ದಿನದ ಫೀಲ್ಡ್ ತಂಡ ಹಿಡಿದ ಪಟ್ಟು ಬಿಡಲಿಲ್ಲ. ತಮ್ಮ ಕ್ಷೇತ್ರಗಳನ್ನು ಮುಗಿಸಿ ಮುಗಿಯದ ಕ್ಷೇತ್ರಗಳಿಗೂ ಹೋಗಿ ಸರ್ವೆ ಕಾರ್ಯ ಸಂಪೂರ್ಣಗೊಳಿಸಿದರು. 41 ಸಾವಿರ ಕುಟುಂಬಗಳ ಮಾಹಿತಿ ಹೆಕ್ಕಿ ತಂದಿದ್ದರು. ‘ಈದಿನ’ ನೀಡಿದ ಸಮೀಕ್ಷೆ ಪ್ರಾಮಾಣಿಕವಾದದ್ದಾಗಿತ್ತು, ನೈಜತೆಗೆ ಹತ್ತಿರವಾಗಿತ್ತು. ವಿವಿಧ ಸಮುದಾಯಗಳ ಮನೋಭೂಮಿಕೆಗೆ ಕನ್ನಡಿ ಹಿಡಿದಿತ್ತು. ಬಿಜೆಪಿ ಸೋಲಲಿದೆ ಎಂದು ಹೇಳಿದ್ದಲ್ಲದೆ ಗೆಲುವಿನ ಅಂತರವನ್ನೂ ಬಹುತೇಕ ಸರಿಯಾಗಿ ಅಂದಾಜಿಸಿತ್ತು. ‘ಈದಿನ’ದ ಫೀಲ್ಡ್ ಕೋಆರ್ಡಿನೇಟರ್ಸ್, ಮೀಡಿಯಾ ವಾಲಂಟೀರ್ಸ್ ಮತ್ತು ಕೈಹಿಡಿದ ಎದ್ದೇಳು ಕರ್ನಾಟಕದ ವಾಲಂಟೀರ್ ಯುವ ಸಂಗಾತಿಗಳ ಅಲೆದ ಪಾದಗಳಿಗೆ ಶರಣು. ಸಮೀಕ್ಷೆ ತಜ್ಞರು, ಪ್ರಖರ ರಾಜಕೀಯ ಚಿಂತಕರೂ ಆದ ಪ್ರೊ.ಯೋಗೇಂದ್ರ ಯಾದವ್‌ ಅವರ ಸಮಯೋಚಿತ ಮಾರ್ಗದರ್ಶನಕ್ಕೆ ಸೆಲ್ಯೂಟ್.

May be an image of text that says "ೀವನ edina.có ।ನ್ಯಾಯ ಮര ಕರ್ನಾಟಕ 2023 ಮೆಗಾ ವಿಧಾನಸಭಾ ಚುನಾವಣಿ วัดลา SPECIAL ಸರ್ವೆ ಕಾಂಗ್ರೆಸ್ ನಿಚ್ಚಳ ಬಹುಮತದೆಡೆಗೆ ಸಾಗಲಿದ್ದು, ಇದು ಕಳೆದ 3 ದಶಕಗಳಲ್ಲೇ ಅತ್ಯಂತ ಹೆಚ್ಚು ಸಾಧನೆಯಾಗಲಿದೆ. ವಿಧಾನಸಭಾ ಚುನಾವಣೆ 2018 ವಿಧಾನಸಭಾ ಚುನಾವಣೆ 2023 (ಪಕ್ಷಗಳಿಗೆ ದಕ್ಕಿದ ಸೀಟುಗಳು) (ಸಮೀಕ್ಷೆಯ ಪ್ರಕಾರ ಈ ಸಾರಿಯ ಸೀಟುಗಳು) ಕಾಂಗ್ರೆಸ್ ಬಿಜೆಪಿ 80 ಜೆಡಿಎಸ್ 132-140 104 ಇತರರು 57-65 37 19-25 1-5 /.dnanws 3ind.c om www.eedina.com"
‘ಈದಿನ’ ಮಾಧ್ಯಮ ಮಾಡಿದ್ದ ಚುನಾವಣಾಪೂರ್ವ ಸಮೀಕ್ಷೆ

ಜೊತೆಗೂಡಿದ ದಮನಿತ ಸಮುದಾಯಗಳು: ಬಿಜೆಪಿಯನ್ನು ಸೋಲಿಸುವ ಗುರಿಯೊಂದಿಗೆ ಎದ್ದೇಳು ಕರ್ನಾಟಕವಲ್ಲದೆ ವಿವಿಧ ಜನಪರ ಸಂಘಟನೆಗಳ, ಸಾಹಿತಿ ಚಿಂತಕರ, ಸಮುದಾಯಗಳ ಪ್ರಯತ್ನಗಳು ಪ್ರಾರಂಭವಾಗಿದ್ದವು. ಅವೆಲ್ಲವುಗಳ ನಡುವೆ ಸಮನ್ವಯ ಬೆಳೆಸಲು ಕೆಲವು ಪ್ರಯತ್ನಗಳು ನಡೆದವು. ಜನಪರ ಸಂಘಟನೆಗಳು ಪ್ರಾರಂಭಿಸಿದ್ದ ವಿವಿಧ ವೇದಿಕೆಗಳ ನಡುವಿನ ಸಮನ್ವಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಹೆಣೆಯಲು ಸಾಧ್ಯವಾಗಲಿಲ್ಲ. ಆದರೆ ಆತಂಕದಲ್ಲಿದ್ದ ಸಮುದಾಯಗಳು ಬಹಳ ಉತ್ಸುಕತೆಯೊಂದಿಗೆ ಜೊತೆಗೂಡಿದವು. ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಹಿಂದುಳಿದ ವರ್ಗಗಳ ವಿಶಾಲ ಒಕ್ಕೂಟಗಳು ಎದ್ದೇಳು ಕರ್ನಾಟಕದ ಜೊತೆ ಕೈಗೂಡಿಸಿದವು. ನಿಜವಾದ ಫೀಲ್ಡ್ ಶಕ್ತಿ ಸಂಚಯವಾಗಿದ್ದು ಇದರಿಂದ. ದಮನಿತ ಸಮುದಾಯಗಳೊಂದಿಗೆ ನೇರ ಹಾಗೂ ವಿಶಾಲ ಪ್ರಭಾವ ಹೊಂದಿರುವ ತಳಸಮುದಾಯಗಳು ಈ ಅಭಿಯಾನವನ್ನು ತಮ್ಮದಾಗಿಸಿಕೊಂಡವು.

ಜನರ ನೈಜ ಸಮಸ್ಯೆಗಳು ಮುನ್ನೆಲೆಗೆ: ಇದೇ ಸಂದರ್ಭದಲ್ಲಿ ಕೆಲವು ಜನ ವರ್ಗಗಳ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಅವರನ್ನು ಜಾಗೃತಗೊಳಿಸುವ ಪ್ರಯತ್ನಗಳು ನಡೆದವು. ಭೂಮಿ ವಸತಿ ಹೋರಾಟ ಸಮಿತಿ 9 ಜಿಲ್ಲೆಗಳಲ್ಲಿ ವಿಸ್ತೃತ ಪ್ರಚಾರಾಂದೋಲನ ಮತ್ತು ಹಲವು ಸುತ್ತಿನ ಹೋರಾಟಗಳನ್ನು ನಡೆಸಿ “ಭೂಮಿ ವಸತಿ ಕೊಡದೆ, ನಮ್ಮ ಓಟು ಕೊಡೆವು” ಎಂದು ಘೋಷಿಸಿತು. ಗಾಂಧಿ ಭವನದಲ್ಲಿ ನಡೆದ ಸಂಯುಕ್ತ ಕಿಸಾನ್ ಪಂಚಾಯಿತಿಗೆ ಪೂರಕವಾಗಿ ಎದ್ದೇಳು ಕರ್ನಾಟಕ ಸಹ ಸಕ್ರಿಯವಾಗಿ ಕೆಲಸ ಮಾಡಿತು. ಇದರಲ್ಲಿ ಪ್ರಮುಖ ರಾಜಕೀಯ ಪಕ್ಷಗಳನ್ನು ಕರೆಸಿ ರೈತರ ಡಿಮ್ಯಾಂಡುಗಳಿಗೆ ಕಮಿಟ್ ಮಾಡಿಸಲಾಯಿತು ಮಾತ್ರವಲ್ಲ, ರೈತ ವಿರೋಧಿ ಬಿಜೆಪಿಗೆ ತಕ್ಕ ಪಾಠ ಕೊಲಿಸೋಣ ಎಂಬ ಘೋಷಣೆ ಮಾಡಲಾಯಿತು. ನರೇಗ ಯೋಜನೆಯನ್ನು ದುರ್ಬಲಗೊಳಿಸುತ್ತಿರುವ ಬಿಜೆಪಿಯನ್ನು ಸೋಲಿಸುವ ತೀರ್ಮಾನ ತೆಗೆದುಕೊಂಡು ‘ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ’ಯ ಮಿತ್ರರು ಮನೆಮನೆಯನ್ನು ತಲುಪುವ ಪ್ರಚಾರಾಂದೋಲನ ನಡೆಸಿದರು. ಒಳ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಆಡಿದ ನಾಟಕ ಮತ್ತು ಮಾಡಿದ್ರ ಮಹಾದ್ರೋಹವನ್ನು ಬಯಲುಗೊಳಿಸಿ ಪ್ರಚಾರಂದೋಲನ ನಡೆಸಲಾಯಿತು. ಮೇ ದಿನವನ್ನು ಶ್ರಮಿಕ ಹಕ್ಕು ದಿನವಾಗಿ ಆಚರಿಸಿ ಶ್ರಮಿಕ ವಿರೋಧಿ ಬಿಜೆಪಿಯನ್ನು ಸೋಲಿಸಲು ಕರೆ ನೀಡಲಾಯಿತು.

ಜನರ ಪ್ರಣಾಳಿಕೆಗಾಗಿ ಪಟ್ಟು: ಜನಚಳವಳಿಗಳ ಹಕ್ಕೊತ್ತಾಯಗಳನ್ನು ಮುಂದಿಟ್ಟು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಪ್ರಣಾಳಿಕೆ ಸಿದ್ಧತಾ ಸಮಿತಿಗಳ ಜೊತೆ ಚರ್ಚೆ ನಡೆಸಲಾಯಿತು ಮತ್ತು ಅದರಲ್ಲಿನ ಹೆಚ್ಚಿನ ಹಕ್ಕೊತ್ತಾಯಗಳಿಗೆ ಪೂರಕ ಭರವಸೆ ಅವರ ಪ್ರಣಾಳಿಕೆಯಲ್ಲಿ ದಾಖಲಾಗುವುದನ್ನು ಖಚಿತಪಡಿಸಿಕೊಳ್ಳಲಾಯಿತು.

ಚೈತನ್ಯಯುತ ಶಕ್ತಿಯಾದ ಎದ್ದೇಳು ಕರ್ನಾಟಕ: ಇವನ್ನೆಲ್ಲಾ ಒಟ್ಟಿಗಿಟ್ಟು ನೋಡಬೇಕಾದರೆ ಸಾವಿರಾರು ಸ್ವಯಂಸೇವಕರು, ನೆರೇಟಿವ್ ತಂಡ, ಮಾಧ್ಯಮ ಸಂಸ್ಥೆಗಳು, ಪ್ರಬಲ ಸೋಷಿಯಲ್ ಮೀಡಿಯಾ, ಬೃಹತ್ ಸಾಹಿತ್ಯ ಹಾಗೂ ವಿಶಾಲ ತಳ ಸಮುದಾಯಗಳ ಹಾಗೂ ಶೋಷಿತ ಜನ ವರ್ಗಗಳ ಸಂಯುಕ್ತ ನೆಟ್ವರ್ಕ್ ಆಗಿ, ಒಂದು ಜನರಾಜಕಾರಣದ ಶಕ್ತಿಯಾಗಿ, ಸಣ್ಣ ಅವಧಿಯಲ್ಲೇ ಎದ್ದೇಳು ಕರ್ನಾಟಕ ರೂಪ ಪಡೆಯಿತು.

ಜಾತ್ಯತೀತ ಮತಗಳ ಹೆಚ್ಚಳ: ಎದ್ದೇಳು ಕರ್ನಾಟಕ ಪ್ರಾರಂಭವಾಗುವ ಮೊದಲಿನಿಂದಲೇ ಅದರಲ್ಲಿರುವ ಕೆಲವು ಸಂಘಟನೆಗಳು ಕೆಲಸ ಪ್ರಾರಂಭಿಸಿದ್ದವು. ಅದರಲ್ಲಿ ಕೆಲವು ಓಟರ್ ಲೀಸ್ಟಿಂದ ಡಿಲೀಟ್ ಆಗಿರುವ ಮತ್ತು ಓಟರ್ ಲೀಸ್ಟಲ್ಲಿ ಹೆಸರನ್ನೇ ನೊಂದಾಯಿಸದಿರುವ ಜನರನ್ನು ಪತ್ತೆ ಹಚ್ಚಿ ಮತ್ತೆ ಎನ್ರೋಲ್ ಮಾಡುವ ಕೆಲಸ ಪ್ರಾರಂಭಿಸಿದ್ದರು. ವಿವಿಧ ಸಮುದಾಯಗಳ ನಡುವೆ ಮತದಾನ ಜಾಗೃತಿ ಅಭಿಯಾನವನ್ನು ವಿಸ್ತೃತವಾಗಿ ನಡೆಸಲಾಯಿತು. ಇದರ ಮೂಲಕ ಒಟ್ಟು 1 ಲಕ್ಷದ 58 ಸಾವಿರ ಹೊಸ ಮತದಾರರನ್ನು ಸೇರ್ಪಡೆ ಮಾಡಿಸಲಾಯಿತು. ಇದೊಂದು ಮಹತ್ವದ ಕೆಲಸವಾಗಿತ್ತು ಎಂಬುದನ್ನು ಗುರುತಿಸಲೇಬೇಕು.

ಕಣದಿಂದ ಹೊರಗುಳಿಯುವಂತೆ ಅಭ್ಯರ್ಥಿಗಳ ಮನವೊಲಿಕೆ: ಚುನಾವಣೆಗಳಲ್ಲಿ ಸ್ಪರ್ಧಿಸಲು ಹೊರಟಿದ್ದ ಹಲವು ರಾಜಕೀಯ ಪಕ್ಷಗಳ ವಿಶೇಷವಾಗಿ ಅಲ್ಪಸಂಖ್ಯಾತ, ಎಡ, ರೈತ ಹಾಗೂ ದಲಿತ ಸಮುದಾಯ ಹಿನ್ನೆಲೆಯ ಹಲವು ಪಕ್ಷ ಮತ್ತು ಅಭ್ಯರ್ಥಿಗಳ ಜೊತೆಗೆ ಮಾತನಾಡಿ 49 ಅಭ್ಯರ್ಥಿಗಳನ್ನು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮಾಡಲಾಯಿತು. ಇಲ್ಲಿ ಎದ್ದೇಳು ಕರ್ನಾಟಕದ ಕೆಲಸಕ್ಕಿಂತ ನಮ್ಮ ಮನವಿಗೆ ಓಗೊಟ್ಟ ಈ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ದೊಡ್ಡ ಸಲಾಂ ಹೇಳುವ ಅಗತ್ಯವಂತೂ ತುಂಬಾ ಇದೆ. [ಬೇಕೆಂದೇ ಅವರುಗಳ ಹೆಸರುಗಳನ್ನು ಇಲ್ಲಿ ಉಲ್ಲೇಖಿಸುತ್ತಿಲ್ಲ. ಅವರನ್ನು ಪ್ರತ್ಯೇಕವಾಗಿ ಕರೆದು ಗೌರವಿಸುವ ಗುರಿ ಇದೆ.]

ಇದನ್ನೂ ಓದಿರಿ: ‘ಎದ್ದೇಳು ಕರ್ನಾಟಕ’ ಅನುಭವ ಕಥನ (ಭಾಗ -1): ಈ ಪರಿಕಲ್ಪನೆ ಹುಟ್ಟಿದ ಪರಿ

ಮತದಾನದ ಮೂರು ಮೂಲ ಸೂತ್ರಗಳು: ಪ್ರತಿ ಆಯ್ದ ಕ್ರಿಟಿಕಲ್ ಕ್ಷೇತ್ರದಲ್ಲೂ ನಿರ್ದಿಷ್ಟ ಸಮುದಾಯಗಳನ್ನು ಹಾಗೂ ಪ್ರದೇಶಗಳನ್ನು ಆಯ್ದು ಟಾರ್ಗೆಟೆಡ್ ಪ್ರಚಾರ ಮಾಡಲಾಯಿತು. ಆಯಾ ಸಮುದಾಯ ಅಥವಾ ಪ್ರದೇಶದ ಮುಂದಾಳುಗಳಿಗೆ ಮೊದಲು ಈ ಸಂದರ್ಭದ ರಾಜಕೀಯ ಜವಬ್ದಾರಿಯನ್ನು ಮನದಟ್ಟು ಮಾಡಿಸುವ ಕೆಲಸ ವ್ಯಾಪಕವಾಗಿ ನಡೆಯಿತು. ಅವರ ಮೂಲಕ ಮತದಾನದ ಮೂರು ಸೂತ್ರಗಳನ್ನು ಆಯಾ ಭಾಗದ ಜನರಿಗೆ ಕಂಠಪಾಠ ಮಾಡಿಸಲಾಯಿತು. ಓಟಿನ ಪ್ರಮಾಣ ಹೆಚ್ಚಿಸಬೇಕು, ಓಟು ವಿಭಜನೆಯಾಗದಂತೆ ನೋಡಿಕೊಳ್ಳಬೇಕು, ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಬಲ್ಲ ಅಭ್ಯರ್ಥಿಗೆ ಮಾತ್ರವೇ ಮತ ಹಾಕಬೇಕು. ಈ ಮೂರೂ ಸೂತ್ರಗಳು ಏನು ಮಾಡಬೇಕು ಎಂಬ ಸ್ಪಷ್ಟತೆ ನೀಡಿದ್ದಲ್ಲದೆ, ಆಂತರಿಕ ಒಡಕನ್ನು ಕಡಿಮೆ ಮಾಡಿದವು. “ಸೋಲಿಸಬಲ್ಲ ಅಭ್ಯರ್ಥಿಗೇ ಮತ ಹಾಕಬೇಕು” ಎಂಬ ಸೂತ್ರವಂತೂ ಮ್ಯಾಜಿಕ್‌ ರೀತಿ ಕೆಲಸ ಮಾಡಿತು.

ಗೊಂದಲ ಪರಿಹಾರಕ್ಕೆ ವಿಶೇಷ ಡ್ರೈವ್: ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಡುವೆ ಸೋಲಿಸಬಲ್ಲವರು ಯಾರು ಎಂಬ ಗೊಂದಲಗಳು ಉಳಿದವು. ಇಂತಹ ಕಡೆ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಮತ್ತು ಒಮ್ಮತವನ್ನು ಮೂಡಿಸಲು ವಿಶೇಷ ತಂಡಗಳನ್ನು ಕಳುಹಿಸಲಾಯಿತು. ಎದ್ದೇಳು ಕರ್ನಾಟಕ ಮತ್ತು ಸಮುದಾಯಿಕ ಮುಖಂಡರು ಜೊತೆಗೂಡಿ ಇಂತಹ ಕ್ಷೇತ್ರಗಳಲ್ಲಿ ಗೆಲ್ಲುವ ಸಂಭವನೀಯತೆ ಯಾರಿಗೆ ಹೆಚ್ಚಿದೆ ಎಂಬ ತೀರ್ಮಾನಕ್ಕೆ ಬಂದು ಸ್ಪಷ್ಟ ಸಂದೇಶವನ್ನು ನೀಡಲಾಯಿತು. ಚುನಾವಣೋತ್ತರವಾಗಿ ನಮ್ಮ ತೀರ್ಮಾನವನ್ನು ಪರಿಶೀಲಿಸಿದಾಗ ಮೂರು ಕಡೆ ಮಾತ್ರ ನಮ್ಮ ಲೆಕ್ಕಚಾರ ತಪ್ಪಾಗಿದೆ. ಮಿಕ್ಕಂತೆ ಎಲ್ಲಾ ಕಡೆ ಸರಿಯಾದ ತೀರ್ಮಾನವನ್ನು ತೆಗೆದುಕೊಂಡು ಜನರಿಗೆ ತಲುಪಿಸುವ ಕೆಲಸ ನಡೆಯಿತು. ಈ ಮೂಲಕ ಪ್ರತಿರೋಧದ ಮತಗಳನ್ನು ಪರಿಣಾಮಕಾರಿಯಾಗಿ ಸಂಘಟಿಸಲಾಯಿತು ಎಂದು ಹೇಳಬೇಕು. ಇಷ್ಟೆಲ್ಲಾ ಪ್ರಯತ್ನದ ಹೊರತಾಗಿ ಕೆಲವು ಕಡೆಗಳ ಆಂತರಿಕ ಒಡಕನ್ನು ಸಂಪೂರ್ಣವಾಗಿ ಬಗೆಹರಿಸಲು ಆಗಲಿಲ್ಲ. ಬೆಂಗಳೂರಿನ ಚಿಕ್ಕಪೇಟೆ, ದಾಸರಹಳ್ಳಿ, ಹರಿಹರ, ರಾಯಚೂರು, ಬಿಜಾಪುರ ಇವುಗಳನ್ನು ಈ ಕಾರಣಕ್ಕಾಗಿಯೇ ಕಳೆದುಕೊಂಡೆವು.

ಸಾರಾಂಶದಲ್ಲಿ:

ಮೂರು ಸಾಮಾಜಿಕ ಶಕ್ತಿಗಳು ಈ ಅಭಿಯಾನದಲ್ಲಿ ಕೈಗೂಡಿಸಿ ಶಕ್ತಿ ಸಂಚಯವಾಗುವಂತೆ ಮಾಡಿದ್ದವು.

1. ಜನರ ನೈಜ ಸಮಸ್ಯೆಗಳಿಗಾಗಿ ಹೋರಾಡುತ್ತಿರುವ ಕರ್ನಾಟಕದ ಹಲವು ಕಟಿಬದ್ಧ ಜನಪರ ಸಂಘಟನೆಗಳು.

2. ಕೋಮುವಾದ ಮತ್ತು ಮನುವಾದದಿಂದ ರೋಸಿ ಹೋಗಿರುವ ತಳ ಸಮುದಾಯದ ಸಂಸ್ಥೆಗಳು.

3. ಕರ್ನಾಟಕದ ಅಸ್ಮಿತೆಗಾಗಿ, ಪ್ರಜಾತಂತ್ರದ ಸುಗಂಧಕ್ಕಾಗಿ ದನಿ ಎತ್ತುತ್ತಿರುವ ಸಾಹಿತಿ-ಚಿಂತಕರು.

ಎಲ್ಲರೂ ಸೇರಿ ಮೂರು ರೀತಿಯ ಕೆಲಸದ ಮೇಲೆ ಫೋಕಸ್ ಮಾಡಿದ್ದರು:

  • 103 ಅಪಾಯದ ಕ್ಷೇತ್ರಗಳನ್ನು ಆಯ್ದು, ಸಾವಿರಾರು ಸ್ವಯಂಸೇವಕರನ್ನು ಒಟ್ಟುಗೂಡಿಸಿ, ತರಬೇತುಗೊಳಿಸಿ, ತಳಮಟ್ಟದ ಕೆಲಸ ಮಾಡಿದ್ದು.
  • ಸೋಷಿಯಲ್ ಮೀಡಿಯಾ ಮತ್ತು ಮೀಡಿಯಾದಲ್ಲಿ ಮನತಟ್ಟುವ ಸಾಹಿತ್ಯ, ಕೌಂಟರ್ ನೆರೇಟಿವ್ ಮತ್ತು ಸರ್ವೆ ಮೂಲಕ ಸೈಬರ್ ಕ್ರಾಂತಿಯನ್ನೇ ಮಾಡಿದ್ದು.
  • ರಾಜಕೀಯ ಪಕ್ಷಗಳ ಜೊತೆ, ಅಬ್ಯಾರ್ಥಿಗಳ ಜೊತೆ, ಸಮುದಾಯದ ಮುಖಂಡರ ಜೊತೆ ರಾಜಕೀಯ ಸಂವಾದಗಳನ್ನು ನಡೆಸಿ ಓಟು ವಿಭಜನೆಯನ್ನು ಗಮನಾರ್ಹವಾಗಿ ತಗ್ಗಿಸಿದ್ದು.

ಬಿಜೆಪಿ ದುರಾಡಳಿತದ ನಾಲ್ಕು ಮುಖಗಳನ್ನು ಮತ್ತೆ ಮತ್ತೆ ಜನರ ಮುಂದೆ ತಂದು ನಿಲ್ಲಿಸಲಾಗಿತ್ತು:

  • ಬಿಜೆಪಿಯ ಆಳ್ವಿಕೆಯಲ್ಲಿ ನಡೆದ ಕಂಡುಕೇಳರಿಯದ ಭ್ರಷ್ಟಾಚಾರ – 40% ಅದರ ರೂಪಕ.
  • ಬಿಜೆಪಿ ಹಾಕಿದ ಬರೆ – ಬೆಲೆ ಏರಿಕೆ: ಗ್ಯಾಸ್ ಸಿಲೆಂಡರ್ ಅದರ ರೂಪಕ.
  • ಬಿಜೆಪಿ ತಂದ ಜನವಿರೋಧಿ ಕಾರ್ಪೋರೇಟ್ ಪರ ನೀತಿಗಳು – ನಂದಿನಿ ಮತ್ತು ಕೃಷಿ ನೀತಿಗಳು ಅದರ ರೂಪಕ.
  • ಬಿಜೆಪಿ ಬೆಳೆಸಿದ ದ್ವೇಷ ರಾಜಕಾರಣ – ಉರಿಗೌಡ – ನಂಜೆಗೌಡ ಅದರ ಹುಸಿ ರೂಪಕ.

ಮನಮನಕ್ಕೂ ತಲುಪಿಸಿದ ಮತದಾನದ ಮೂರು ಮೂಲ ಸೂತ್ರಗಳು:

  • ಜಾತ್ಯಾತೀತ ಮತದಾನದ ಪ್ರಮಾಣ ಹೆಚ್ಚಿಸಬೇಕು.
  • ಜಾತ್ಯಾತೀತ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳಬೇಕು.
  • ಬಿಜೆಪಿಯನ್ನು ಸೋಲಿಸಬಲ್ಲ ಅಭ್ಯರ್ಥಿಗೇ [ಎಂತಹವರೇ ಆಗಿದ್ದರೂ, ಯಾವ ಪಕ್ಷಕ್ಕೇ ಸೇರಿದ್ದರೂ] ಮತ ಹಾಕಬೇಕು.

ಈ ಅನುಭವವನ್ನು ಅರಗಿಸಿಕೊಳ್ಳಲು ನನ್ನಿಂದಲೇ ಸಾಧ್ಯವಾಗಿಲ್ಲ. ನನ್ನ ಸಾಮಾಜಿಕ ಜೀವನದ ಅವಧಿಯಲ್ಲಿ ಇಷ್ಟೊಂದು ಸಣ್ಣ ಅವಧಿಯಲ್ಲಿ ಇಷ್ಟೊಂದು ವ್ಯಾಪಕ ಕೆಲಸವನ್ನು ನಾನು ಅನುಭವಿಸಿಲ್ಲ. ಇದು ಕೊಟ್ಟ ಸಂತಸ, ಅನುಭವವನ್ನು ಅಳೆಯಲು ಸಾಧ್ಯವಿಲ್ಲ. ಒಂದು ಮಾತ್ರ ಮತ್ತೇ ಒತ್ತು ಕೊಟ್ಟು ಹೇಳಲು ಬಯಸುತ್ತೇನೆ. ಇದು ಈ ನೆಲದ ಸಮಷ್ಟಿ ಪರಿಶ್ರಮ. ಈ ಎಲ್ಲಾ ಕೆಲಸದಲ್ಲಿ ಸಹಸ್ರಾರು ಜೀವಪರ ಮನಸ್ಸುಗಳ ಬೆವರು, ಕನಸು, ಸಮಯ, ಹಣ ಮತ್ತು ಅಪಾರ ಬದ್ಧತೆ ಅಡಗಿತ್ತು. ಕರುನಾಡ ಮಣ್ಣಲ್ಲಿ ಅಡಗಿದ್ದ ಜೀವಪರತೆಯ ಒರತೆ ಒಡೆದು ಹೊರಬಂದಿತ್ತು. ಈ ನೆಲದ ಚೈತನ್ಯಕ್ಕಂತೂ ದೊಡ್ಡ ಸೆಲ್ಯೂಟ್ ಹೇಳಲೇಬೇಕು.

(ಮುಂದುವರಿಯುತ್ತದೆ…)

(ಭಾಗ- 3ರಲ್ಲಿ- ಎದ್ದೇಳು ಕರ್ನಾಟಕ ಬೀರಿದ ಪರಿಣಾಮ, ಕಲಿಸಿದ ಪಾಠ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...