Homeಕರ್ನಾಟಕಎದ್ದೇಳು ಕರ್ನಾಟಕ: ನೀತಿಬದ್ಧ ನಾಗರಿಕ ಅಭಿಯಾನ

ಎದ್ದೇಳು ಕರ್ನಾಟಕ: ನೀತಿಬದ್ಧ ನಾಗರಿಕ ಅಭಿಯಾನ

- Advertisement -
- Advertisement -

ಇತಿಹಾಸದುದ್ದಕ್ಕೂ ಸಾಮಾಜಿಕ ವಿಷಮತೆ ಹೆಚ್ಚಾದಾಗ ಪ್ರಜ್ಞಾವಂತರು ಸಂಘಟಿತವಾಗಿ ಅದಕ್ಕೆ ಪ್ರತಿಕ್ರಿಯಿಸಿದ್ದಿದೆ. ಸ್ವಾತಂತ್ರ್ಯೋತ್ತರ ಭಾರತವು ಬಗೆಬಗೆಯ ಅಸಮಾನತೆಗಳ ವಿರುದ್ಧ ಧ್ವನಿಯೆತ್ತುತ್ತಲೇ ಬಂದಿದ್ದು ಸಾಮಾಜಿಕ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಟಗಳು ನಡೆದಿವೆ. ಅನೇಕ ಅಡ್ಡಿಆತಂಕಗಳ ನಡುವೆ ನಿರೀಕ್ಷಿಸಿದ ಸಾಧನೆ ಆಗಿಲ್ಲವಾದರೂ ಸಾಮಾಜಿಕ ನ್ಯಾಯದ ಪರವಾದ ಒಂದು ಧ್ವನಿಯನ್ನು ಅದು ಎಂದೂ ಬಿಟ್ಟುಕೊಟ್ಟಿಲ್ಲ. ಈ ವಿಷಯದಲ್ಲಿ ಕರ್ನಾಟಕವು ಭಾರತದ ಇತರ ರಾಜ್ಯಗಳಿಂದ ಒಂದು ಹೆಜ್ಜೆ ಸದಾ ಮುಂದಿದೆ.

1970ರ ದಶಕದಲ್ಲಿ ಕರ್ನಾಟಕವು ಅನೇಕ ಚಳವಳಿಗಳನ್ನು ಕಂಡಿತ್ತು. ಸಾಮಾಜಿಕ ಅನಿಷ್ಟಗಳ ವಿರುದ್ಧ ಧ್ವನಿಯೆತ್ತಿದ್ದ ಬುದ್ದ, ಬಸವ, ಅಂಬೇಡ್ಕರ್, ಕುವೆಂಪು, ಗಾಂಧಿ, ಲೋಹಿಯಾ, ಫುಲೆ, ನಾರಾಯಣಗುರು, ಪೆರಿಯಾರ್ ಮೊದಲಾದವರೆಲ್ಲ ಕರ್ನಾಟಕದ ಬಗೆಬಗೆಯ ಚಳವಳಿಗಳ ಒಳಗೆ ಪ್ರಧಾನವಾಗಿ ಕಾಣಿಸಿಕೊಂಡಿದ್ದರು. ಮಾರ್ಕ್ಸ್‌ವಾದ, ಲೋಹಿಯಾವಾದ, ಅಂಬೇಡ್ಕರ್‌ವಾದ ಮೊದಲಾದವುಗಳು ಅಸಮಾನತೆಯನ್ನು ನಿರಂತರವಾಗಿ ಪೋಷಿಸಿಕೊಂಡು ಬರುತ್ತಿದ್ದ ಸಂಗತಿಗಳ ಬಗೆಗೆ ಯುವಜನರಿಗೆ ಪ್ರೇರಣೆ ನೀಡಿದ್ದವು. ಅಸ್ಪೃಶ್ಯರನ್ನು ಮತ್ತು ಶೂದ್ರರನ್ನು ಸಂಪೂರ್ಣವಾಗಿ ನಿರಾಯುಧರನ್ನಾಗಿಸುವ ತಂತ್ರಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಅಧಿಕಾರ ಸ್ಥಾನಗಳಲ್ಲಿ ಶೂದ್ರರು ಮತ್ತು ಅಸ್ಪೃಶ್ಯರು ಯಾಕೆ ದೊಡ್ಡ ಸಂಖ್ಯೆಯಲ್ಲಿ ಇಲ್ಲ ಎಂಬುದು ಆಗ ನಾವು ಕೇಳುತ್ತಿದ್ದ ಪ್ರಶ್ನೆಯಾಗಿತ್ತು. ಶಿಕ್ಷಣದಿಂದ ವಂಚಿತರಾದ ಶೂದ್ರರು ಮತ್ತು ಅಸ್ಪೃಶ್ಯರಿಗೆ ಶಿಕ್ಷಣ ದೊರೆಯುವಂತೆ ಮಾಡುವ ಬಗೆ ಹೇಗೆ? ಶೂದ್ರರು ಮತ್ತು ಅಸ್ಪೃಶ್ಯರಿಗೆ ಆಸ್ತಿಯ ಹಕ್ಕು ದೊರೆಯುವುದೇ? ಮಹಿಳೆಯರು ಸಬಲೀಕರಣಗೊಳ್ಳಲು ಏನು ಮಾಡಬೇಕು? ಇಂಥ ಹಲವು ಪ್ರಶ್ನೆಗಳನ್ನಿಟ್ಟುಕೊಂಡು ಆಗ ಚಳವಳಿಗಳು ನಡೆದವು. ಪರಿಣಾಮವಾಗಿ ಮೀಸಲಾತಿಗೆ ಸಂಬಂಧಿಸಿದ ಹೋರಾಟಗಳು ಗಟ್ಟಿಯಾದವು. ಎಲ್.ಜಿ ಹಾವನೂರರು ವರದಿ ಜಾರಿಗೆ ಬಂತು. 1973ರಲ್ಲಿ ನಡೆದ ಬೂಸಾ ಪ್ರಕರಣವು ಕೂಡಾ ನಾಡಿನ ಜನರನ್ನು ಬಡಿದೆಬ್ಬಿಸಿತು. ಇಂಥ ಚಳವಳಿಗಳ ಜೊತೆಗೆ, ದೇವರು, ಧರ್ಮ, ಜಾತಿಗಳ ವಿರುದ್ಧ ಕರ್ನಾಟಕದ ಯುವಜನತೆ ಬಲವಾದ ಕೂಗೆಬ್ಬಿಸಿತು. 1973ರ ಆಗಸ್ಟ್ 25-26ರಂದು ಮೈಸೂರಿನಲ್ಲಿ ಚಾರಿತ್ರಿಕವಾದ ಜಾತಿವಿನಾಶ ಸಮ್ಮೇಳನ ನಡೆಯಿತು. ಮುಂದೆ 1974ರ ಏಪ್ರಿಲ್ 20 ಮತ್ತು 21ರಂದು ಮೈಸೂರಿನಲ್ಲಿ ’ಬರಹಗಾರರು ಮತ್ತು ಕಲಾವಿದರ ಒಕ್ಕೂಟ’ದ ಸಮ್ಮೇಳನ ನಡೆಯಿತು. ಆ ಸಮ್ಮೇಳನದಲ್ಲಿ ಮಹಾಕವಿ ಕುವೆಂಪುರವರು ಮಾಡಿದ ಉದ್ಘಾಟನಾ ಭಾಷಣ ಅನೇಕರ ರಕ್ತವನ್ನು ಬೆಚ್ಚಗಾಗಿಸಿತು. ಜಡವಾಗಿದ್ದ ಜನ ಸಮುದಾಯ ಮೈಕೊಡವಿ ನಿಲ್ಲುವಂತಾಯಿತು. 1974ರಲ್ಲಿ ಭದ್ರಾವತಿಯಲ್ಲಿ ’ದಲಿತ ಸಂಘರ್ಷ ಸಮಿತಿ’ ರೂಪುಗೊಂಡಿತು. ಬೀದಿಬೀದಿಯಲ್ಲಿ ದಲಿತರ ಸ್ವರ ಕೇಳಿಸಿತು. ಸಾಹಿತ್ಯಕ್ಕೆ ತಮಟೆಯ ಧ್ವನಿ ಸೇರಿಕೊಂಡಿತು. ದೇವರಾಜು ಅರಸು ನೇತೃತ್ವದಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂತು. ’ಸಂಕ್ರಮಣ’, ’ಅನ್ವೇಷಣೆ’, ’ಪಂಚಮ’, ’ಹೊಸದಿಕ್ಕು’, ’ಸಮುದಾಯ ವಾರ್ತಾಪತ್ರ, ’ಕೆಂಬಾವುಟ’, ’ಐಕ್ಯರಂಗ’ ಮೊದಲಾದ ಪತ್ರಿಕೆಗಳು ಆಗ ಪರ್ಯಾಯ ಮಾಧ್ಯಮಗಳಾಗಿ ಕೆಲಸ ಮಾಡುತ್ತಿದ್ದುವು.

ಇಂಥ ಜನಪರ ಚಳವಳಿಗಳು 1990ರ ದಶಕದಿಂದೀಚೆ ಕಾಣೆಯಾದವು. ಜನಪರ ಚಳವಳಿಗಳು ಕಾಣೆಯಾಗುತ್ತಲೇ ಕರ್ನಾಟಕ ರಾಜ್ಯವನ್ನು ಕೋಮುವಾದೀ ನೆಲೆಗಳಿಗೆ ಕೊಂಡೊಯ್ಯುವ ಪ್ರಯತ್ನಗಳು ಹುಟ್ಟಿಕೊಂಡವು. 1992ರಲ್ಲಿ ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಂದರ್ಭದಲ್ಲಿ ಅಡ್ವಾಣಿಯವರು ನಡೆಸಿದ ರಥ-ಇಟ್ಟಿಗೆ ಮೆರವಣಿಗೆಯು ಇಡೀ ದೇಶವನ್ನೇ ಕೋಮುವಾದದ ಕಡೆಗೆ ತಿರುಗಿಸಿತು. ಕುವೆಂಪು ಅವರು ಹೇಳಿದ ’ಸರ್ವಜನಾಂಗದ ಶಾಂತಿಯ ತೋಟ’ವಾದ ಕರ್ನಾಟಕವೂ ಆಳವಾಗಿ ಘಾಸಿಕೊಂಡಿತು. ಮತೀಯ ಶಕ್ತಿಗಳು ವಿಜೃಂಭಿಸಿದವು. ಶಾಂತಿಗೆ ಹೆಸರಾಗಿದ್ದ ಬಾಬಾಬುಡಾನ್ ಗಿರಿಯನ್ನು ’ಕರ್ನಾಟಕದ ಅಯೋಧ್ಯೆ’ ಎಂದು ಕರೆಯಲಾಯಿತು. ಅನೈತಿಕ ರೀತಿಯಲ್ಲಿ ಅಧಿಕಾರ ಹಿಡಿದ ಬಿಜೆಪಿ ಇಂಥ ಕೃತ್ಯಗಳಿಗೆ ಮನ್ನಣೆ ನೀಡಿತು. ಈ ಅವಧಿಯಲ್ಲಿ ಜನಪರ ಚಳವಳಿಗಳು ಮತ್ತಷ್ಟು ಹಿನ್ನೆಲೆಗೆ ಸರಿದವು. ಆದರೂ ಪ್ರಾವಿಡೆಂಟ್ ಫಂಡ್ ಕುರಿತಂತೆ ಬೆಂಗಳೂರಿನ ಗಾರ್ಮೆಂಟ್ ಉದ್ಯಮದ ಮಹಿಳೆಯರು ಬೀದಿಗಿಳಿದಿದ್ದು, ರಾಯಚೂರಿನಲ್ಲಿ ಇಪ್ಪತ್ತು ಸಾವಿರ ಮಹಿಳೆಯರು ಪಾನ ನಿಷೇಧ ಮಾಡಬೇಕೆಂದು ಪ್ರತಿಭಟನೆ ನಡೆಸಿದ್ದು, ಅಂಗನವಾಡಿ ಸಹೋದರಿಯರು ಚಳವಳಿ ಹೂಡಿದ್ದು ಇತ್ಯಾದಿ ವಿದ್ಯಮಾನಗಳು ಘಟಿಸಿ ನಮ್ಮಂಥ ಹಲವರ ಕಣ್ಣು ತೆರೆಯಿತು. ಉಡುಪಿ ಚಲೋ ಕಾರ್ಯಕ್ರಮವು ದಲಿತ ಯುವಶಕ್ತಿಯನ್ನು ಮುನ್ನಲೆಗೆ ತಂದಿತು.

ಎದ್ದೇಳು ಕರ್ನಾಟಕ

ಮೇಲೆ ಹೇಳಿದ ಚಳವಳಿಗಳು ನೀಡಿದ ಅನುಭವಗಳ ಹಿನ್ನೆಲೆಯಲ್ಲಿ ’ಎದ್ದೇಳು ಕರ್ನಾಟಕ’ ಅಭಿಯಾನವನ್ನು ರೂಪಿಸಲಾಯಿತು. ಚಳವಳಿಯನ್ನು ದೇವನೂರ ಮಹಾದೇವ, ಯೋಗೇಂದ್ರ ಯಾದವ್, ಡಾ. ವಾಸು, ಪ್ರೊ. ಎ.ಆರ್ ವಾಸವಿ, ಡಾ. ರಹಮತ್ ತರೀಕೆರೆ, ಡಾ. ವಿಜಯಮ್ಮ, ದು.ಸರಸ್ವತಿ ಮೊದಲಾದವರ ಮಾರ್ಗದರ್ಶನದಲ್ಲಿ ಹುಟ್ಟುಹಾಕಲಾಯಿತು. ಅನೇಕ ಜನಪರ ಹೋರಾಟಗಳಲ್ಲಿ ದುಡಿದವರು ಇದರಲ್ಲಿ ತೊಡಗಿಸಿಕೊಂಡರು. ಈ ಸಂಘಟನೆಯ ಉದ್ದೇಶವನ್ನು- ’ಚುನಾವಣೆಯಲ್ಲಿ ಭ್ರಷ್ಟ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ’ ಎಂಬ ಒಂದು ಸಾಲಿಗೆ ಸೀಮಿತಗೊಳಿಸಲಾಯಿತು.

ಈ ಒಂದೇಒಂದು ಘೋಷಣೆಯು ಸಾವಿರಾರು ಜನರನ್ನು ಒಂದು ವೇದಿಕೆಗೆ ಎಳೆದು ತಂದಿತು. 80ರ ದಶಕದಲ್ಲಿ ಚಳವಳಿಗಳ ಜೊತೆ ಗುರುತಿಸಿಕೊಳ್ಳುತ್ತಿದ್ದ ರೀತಿಯಲ್ಲಿ ನಮ್ಮ ಸಾಂಸ್ಕೃತಿಕ ವಲಯ ಗುರುತಿಸಿಕೊಳ್ಳಬೇಕೆಂಬುದು ನಮ್ಮ ಆಸೆಯಾಗಿತ್ತು. ಬಿಜೆಪಿ ಜೊತೆ ಸೇರಿಕೊಂಡಿದ್ದ ಕೋಮುವಾದ, ಧಾರ್ಮಿಕ ಧ್ರುವೀಕರಣ, ಪುರೋಹಿತಶಾಹಿ ಆಕ್ರಮಣ ಇತ್ಯಾದಿಗಳ ಬಗ್ಗೆ ದಿಟ್ಟ ನಿಲುವು ತೆಗೆದುಕೊಂಡು ಸಕ್ರಿಯರಾಗುವುದಕ್ಕೆ ಈ ಕೆಳಗಿನ ಹೇಳಿಕೆಯನ್ನು ಮತದಾರರನ್ನು ಉದ್ದೇಶಿಸಿ ಬಿಡುಗಡೆ ಮಾಡಲಾಯಿತು-

“ಸರ್ವಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕವು ನಮ್ಮೆಲ್ಲರ ಹೆಮ್ಮೆ. ’ಮಾನವ ಜಾತಿ ತಾನೊಂದೆವಲಂ’ ಎಂದು ಸಾರಿದ ಪಂಪನು ನಮ್ಮ ಆದಿ ಕವಿ. ದೇವರಿಗೆ ಕನ್ನಡ ಕಲಿಸಿದವರು ನಮ್ಮ ವಚನಕಾರರು. ಈ ನಾಡಿನಲ್ಲಿ ಬೌದ್ಧ, ಜೈನ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಮೊದಲಾದ ಧಾರ್ಮಿಕ ಪರಂಪರೆಗಳಿವೆ. ಇವುಗಳ ಜೊತೆಗೆ ಮಲೆ ಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಬೀರಪ್ಪ, ಮೈಲಾರ, ಎಲ್ಲಮ್ಮ, ಹುಲಿಗೆಮ್ಮ, ಮಾರಮ್ಮ, ಎಲ್ಲಮ್ಮ, ಭೂತಾರಾಧನೆ ಮೊದಲಾದ ಜನಪದ ಪರಂಪರೆಗಳೂ ಕ್ರಿಯಾಶೀಲವಾಗಿವೆ. ಸುಮಾರು 72 ಭಾಷೆಗಳಿರುವ ನಮ್ಮ ರಾಜ್ಯದಲ್ಲಿ ಹತ್ತು ಹಲವು ಸಮುದಾಯಗಳು ಸೌಹಾರ್ದಯುತವಾಗಿ ಬದುಕುತ್ತಿವೆ. ನಮ್ಮ ಹೆಣ್ಣುಮಕ್ಕಳು ’ಹಬ್ಬಲಿ ಅವರ ರಸ ಬಳ್ಳಿ’ ಎಂದು ನಿತ್ಯವೂ ಹಾಡಿದವರು. ’ಊರಿನ ಜನರಿಗೆ ಅಮೃತದ ಹಾಲೆರೆಯುತ್ತೇವೆ’ ಅಂದವು ನಮ್ಮ ದೈವಗಳು. ಇಂಥ ನಾಡಿನಲ್ಲಿ ಜನರ ನಡುವೆ ಇವತ್ತು ರಾಜಕೀಯ ಉದ್ದೇಶಕ್ಕಾಗಿ ವಿಷ ಹಂಚಲಾಗುತ್ತಿದೆ. ಅಭಿವೃದ್ಧಿಯ ಮಾತನ್ನೇ ಮರೆತುಬಿಡಲಾಗಿದೆ. ಈ ಬಿಕ್ಕಟ್ಟಿನಲ್ಲಿ ನಮ್ಮ ನಾಡು ದೀರ್ಘ ಉಸಿರೆಳೆದುಕೊಂಡು ಮತ್ತೆ ಚೇತರಿಸಿಕೊಳ್ಳುತ್ತದೆಯೋ ಇಲ್ಲವೊ ಎಂಬುದನ್ನು ಮುಂಬರುವ ಚುನಾವಣೆ ನಿರ್ಧರಿಸುತ್ತದೆ.

ಸ್ವಾತಂತ್ರ್ಯಾನಂತರದ ಇತಿಹಾಸದಲ್ಲೇ ಕಂಡಿಲ್ಲದ ಕೆಡುಕಿನ ದಿನಗಳನ್ನು ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕ ಕಂಡಿದೆ. ಜನಮತವಿಲ್ಲವಾದರೂ ಅಧಿಕಾರ ಕಬಳಿಸಿದ ಸರ್ಕಾರ ಈ ನಾಡಿಗೆ ತಂದದ್ದು ಅವನತಿ ಮಾತ್ರ. ಡಬಲ್ ಇಂಜಿನ್ ಸರಕಾರ ಖಜಾನೆಗೆ ಡಬಲ್ ಕನ್ನ ಹಾಕಿದೆ. ಎಂದೆಂದೂ ಕಾಣದಂತಹ ಭ್ರಷ್ಟಾಚಾರ, ಸಾಮಾನ್ಯರ ಬದುಕು ಹಿಂಡುವ ಬೆಲೆ ಏರಿಕೆ, ಶಿಕ್ಷಣ-ಆರೋಗ್ಯದ ಹೆಸರಿನಲ್ಲಿ ಹಗಲು ದರೋಡೆ, ದುಡಿವವರನ್ನು ಅನಾಥರಾಗಿಸಿದ ಸಾಲುಸಾಲು ಕಾಯ್ದೆಗಳು, ಯುವಜನರ ಕನಸು ಕಮರಿಸುವ ನಿರುದ್ಯೋಗ, ದಿಕ್ಕುಗಾಣದಾಗಿರುವ ಮಾರುಕಟ್ಟೆ, ಕುಸಿದಿರುವ ವಹಿವಾಟು, ಮೂಗುಮಟ್ಟ ತಲುಪಿರುವ ಸಾಲಗಳು, ಮಿತಿಮೀರಿ ಹೆಚ್ಚಾಗಿರುವ ಮಹಿಳೆಯರ ಮೇಲಿನ ಹಿಂಸೆ- ಅತ್ಯಾಚಾರದ ಪ್ರಕರಣಗಳು, ಜಾತಿ ಹೆಸರಿನಲ್ಲಿ ದೌರ್ಜನ್ಯ- ದಂಡ- ಬಹಿಷ್ಕಾರಗಳು, ಸಿಕ್ಕದ ಪಾಲಿಗಾಗಿ ಜಾತಿಜಾತಿಗಳ ನಡುವೆ ಪೈಪೋಟಿ, ಬಾಯಿಬಿಟ್ಟರೆ ಧಾರ್ಮಿಕ ದ್ವೇಷದ ದುರ್ಗಂಧ- ಇವೆಲ್ಲಾ ಈ ಸರ್ಕಾರದ ಆಳ್ವಿಕೆಯ ಫಲಗಳು. ಈ ದುರಂತಮಯ ವಾತಾವರಣದಿಂದ ಕರ್ನಾಟಕವನ್ನು ಹೊರತರುವ ಒಂದು ಸಾಧ್ಯತೆ ನಾಡಿನ ಮುಂದಿದೆ. ಈಗ ಚುನಾವಣೆ ಬರುತ್ತಿದೆ. ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಎಂಬುದಕ್ಕಿಂತ ಈ ಸುಲಿಗೆ ಸರ್ಕಾರ ಮೊದಲು ಸೋಲಬೇಕು, ಆಮೇಲೆ ಗೆದ್ದವರ ಜೊತೆ ಜನಹಿತದ ಮರುಸ್ಥಾಪನೆಗಾಗಿ ಗುದ್ದಾಡಬೇಕು- ಇದೇ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ಪ್ರಕ್ರಿಯೆ. ಈ ಪ್ರಕ್ರಿಯೆಯು ರಾಜ್ಯದ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ; ನಾಗರಿಕ ಸಮಾಜದ ಮುಂದಿರುವ ವಾಸ್ತವಿಕ ಮತ್ತು ಜವಾಬ್ದಾರಿಯುತ ಕರ್ತವ್ಯವಾಗಿದೆ.

ಇಂದು ಆಳುವವರ ವಿರುದ್ಧ ಜನರಲ್ಲಿ ಅಸಮಾಧಾನ ಮಡುಗಟ್ಟಿದೆ. ಇದನ್ನು ಅರಿವಾಗಿಸುವ ಕೆಲಸ ನಡೆಯಬೇಕಿದೆ. ಹಾಗಾಗಿ ನಾವಿಂದು ಕೈಕಟ್ಟಿ ಕೂರಲು ಸಾಧ್ಯವೇ ಇಲ್ಲ. ನಾಡಿನ ಅಸ್ಮಿತೆ, ಪರಂಪರೆ, ಬದುಕು ಮತ್ತು ಭವಿಷ್ಯವನ್ನು ಕಾಪಾಡಿಕೊಳ್ಳುವ ಕಾಯಕವನ್ನು ನಾವು ಈಗಿಂದೀಗಲೇ ಕೈಗೆತ್ತಿಕೊಳ್ಳಬೇಕು. ಈಗ ನಾವು ಎಚ್ಚರಗೊಳ್ಳದೇ ಹೋದರೆ ಮುಂದೆ ಅನುಭವಿಸಬಹುದಾದ ಕಷ್ಟನಷ್ಟಗಳನ್ನು ಊಹಿಸಲಾಗದು.

ಇದನ್ನೂ ಓದಿ: ಎದ್ದೇಳು ಕರ್ನಾಟಕ: ಒಂದು ಅಸಾಧಾರಣ ಚುನಾವಣೆಯಲ್ಲಿ ಒಂದು ವಿಶಿಷ್ಟ ಪ್ರಯೋಗ

ಈಗ ಸಂತಸದ ವಿಚಾರವೆಂದರೆ, ಜನರನ್ನು ತಳಮಟ್ಟದಲ್ಲಿ ತಲುಪಬಲ್ಲ ಒಂದು ನೀತಿಬದ್ಧ ನಾಗರಿಕ ಅಭಿಯಾನವು ’ಎದ್ದೇಳು ಕರ್ನಾಟಕ’ ಹೆಸರಿನಲ್ಲಿ ಶುರುವಾಗಿದೆ. ಪಕ್ಷ, ಜಾತಿ, ಮತ, ಧರ್ಮಗಳ ಅಂಟುಗಳನ್ನು ಬಿಟ್ಟು ರಾಜ್ಯದ ಜನರನ್ನು ಎಚ್ಚರಿಸಲು ನಾವೆಲ್ಲರೂ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಪ್ರಜಾಪ್ರಭುತ್ವವನ್ನು ಉಳಿಸುವ, ಕರ್ನಾಟವನ್ನು ಕಾಪಾಡುವ ಈ ಮಹತ್ಕಾರ್ಯದಲ್ಲಿ ನೀವು ಕೂಡಾ ಸ್ವಯಂಸೇವಕರಾಗಿ ಭಾಗಿಯಾಗಬೇಕೆಂದು ನಾವು ಕೋರಿಕೊಳ್ಳುತ್ತಿದ್ದೇವೆ.”

ಈ ಕೋರಿಕೆಗೆ 2500ಕ್ಕೂ ಹೆಚ್ಚು ಜನ ಸ್ಪಂದಿಸಿದರು. ನಾವು ಕೆಲಸ ಶುರುಮಾಡುತ್ತಲೇ ಅದರ ಸಂಖ್ಯೆ 5000ಕ್ಕೆ ಏರಿತು. ಈ ನಡುವೆ ಬಿಜೆಪಿ ಸರಕಾರದ ವೈಫಲ್ಯಗಳ ಬಗ್ಗೆ ’ಬಹುತ್ವ ಕರ್ನಾಟಕ’ ಸಂಘಟನೆಯು ಅಧ್ಯಯನಾತ್ಮಕವಾದ ಒಂದು ಪುಟ್ಟ ಕೈಪಿಡಿಯನ್ನು ಸಿದ್ಧಪಡಿಸಿತ್ತು. ಅದರ ಸಹಾಯದಿಂದ ’ಎದ್ದೇಳು ಕರ್ನಾಟಕ’ವು ಈ ಕೆಳಗಿನ ಅಂಶಗಳನ್ನು ಎತ್ತಿಕೊಂಡು ಅವುಗಳನ್ನು ಸರಳವಾಗಿ ಜನರ ಮುಂದಿಟ್ಟಿತು:

  • ಅಧಿಕಾರಕ್ಕೆ ಬಂದಾಗ ಭಾಜಪ ನೀಡಿದ ಭರವಸೆಗಳೇನು? ಮತ್ತು ಅವುಗಳಲ್ಲಿ ಎಷ್ಟನ್ನು ಅದು ಜಾರಿಗೆ ತಂದಿತು ಎಂಬುದರ ವಿಶ್ಲೇಷಣೆ.
  • ಭಾಜಪ ಸರಕಾರ ವಾಸ್ತವದಲ್ಲಿ ಕರ್ನಾಟಕಕ್ಕೆ ಏನು ಕೊಟ್ಟಿದೆ ಎಂಬುದರ ವಿವರ.
  • ಬಿಜೆಪಿ ಸರಕಾರವು ಕರ್ನಾಟಕವನ್ನು ಭ್ರಷ್ಟಾಚಾರದ ಕೂಪಕ್ಕೆ ತಳ್ಳಿದ್ದರ ಬಗ್ಗೆ ಮಾಹಿತಿ.
  • ಯಾವ ಅಭಿವೃದ್ಧಿ ಕೆಲಸಗಳನ್ನೂ ಸರಕಾರ ನೆಟ್ಟಗೆ ನಡೆಸದ್ದರ ಕುರಿತು ವಿವರ.
  • ರೈತರನ್ನು ಕೈಬಿಟ್ಟು ಸರಕಾರ ಕಂಪನಿಗಳ ಕೈ ಹಿಡಿದದ್ದರ ಬಗ್ಗೆ ಮಾಹಿತಿ.
  • ಬಡವರ ಹೊಟ್ಟೆಗೆ ಹೊಡೆದು ದುಡಿವವರ ಸೊಂಟ ಮುರಿದ ಸರಕಾರ.
  • ನಾನಾ ವಿಧಗಳಲ್ಲಿ ಸರಕಾರ ನಡೆಸಿದ ಜನಸಾಮಾನ್ಯರ ಸುಲಿಗೆ ಮತ್ತು ಬೆಲೆ ಏರಿಕೆ.
  • ಕರ್ನಾಟಕವನ್ನು ಸಾಲದಲ್ಲಿ ಮುಳುಗಿಸಿದ್ದು
  • ಕೇಂದ್ರ ಸರಕಾರ ಕರ್ನಾಟಕಕ್ಕೆ ಮಾಡಿದ ತೆರಿಗೆ ಹಂಚಿಕೆ ವಂಚನೆ
  • ಡಬಲ್ ಇಂಜಿನ್ ಸರಕಾರದ ಮೋಸಗಳು
  • ಧರ್ಮದ ಹೆಸರಿನಲ್ಲಿ ಜನರನ್ನು ಬಡಿದಾಡಿಸುವ ಕೆಲಸಗಳು. ಅದಕ್ಕಾಗಿ ಲವ್ ಜಿಹಾದ್, ಹಿಜಾಬ್, ಹಲಾಲ್, ಜಟ್ಕಾ, ಟಿಪ್ಪು, ಉರಿ ಗೌಡ- ನಂಜೇಗೌಡ ಎಂಬ ಸಮಸ್ಯೆ ಅಲ್ಲದ ಸಮಸ್ಯೆಗಳಲ್ಲಿ ಜನರು ಮುಳುಗುವಂತೆ ಸರಕಾರ ಮಾಡಿದ್ದು.
  • ಜಾತಿ ಹೆಸರಿನಲ್ಲಿ ಜನರನ್ನು ಕಚ್ಚಾಡಿಸುವ ಪ್ರಕ್ರಿಯೆಗಳು.

ಮೇಲಿನ ವಿಷಯಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಈ ಕೆಳಗಿನ 15 ಮುಖ್ಯ ಕೆಲಸಗಳನ್ನು ತ್ವರಿತವಾಗಿ ಮಾಡಲಾಯಿತು.

  • ಸ್ವಯಂಸೇವಕರಿಗಾಗಿ 250 ಕಮ್ಮಟಗಳ ಆಯೋಜನೆ.
  • ಸ್ಥಳೀಯ ಮಟ್ಟದಲ್ಲಿ 75 ಸಮ್ಮೇಳನಗಳನ್ನು ಸಂಘಟಿಸಿ ಎರಡು ಲಕ್ಷ ಮತದಾರರಿಗೆ ತಿಳಿವಳಿಕೆ ನೀಡಿದ್ದು.
  • ಮತದಾನ ಕಡಿಮೆ ಇರುವ 103 ಕ್ಷೇತ್ರಗಳಲ್ಲಿ ಮತದಾನದ ಅರಿವು ಮೂಡಿಸುವ ಕೆಲಸ ನಡೆಸಿದ್ದು.
  • ಅಭಿಯಾನದ ಯಶಸ್ವಿಗಾಗಿ 192 ತಂಡಗಳ ರಚನೆ.
  • 5000ಕ್ಕೂ ಹೆಚ್ಚು ಸ್ವಯಂಸೇವಕರನ್ನು ಸಂಘಟಿಸಿದ್ದು.
  • ಹೆಚ್ಚುಕಡಿಮೆ 700 ಪೋಸ್ಟರ್‌ಗಳ ಬಿಡುಗಡೆ.
  • 80 ವೀಡಿಯೋಗಳ ಸಿದ್ಧತೆ
  • ಏಳು ಆಲ್ಬಮ್‌ಗಳ ಹಂಚಿಕೆ
  • ಎದ್ದೇಳು ಕರ್ನಾಟಕ ಕೈಪಿಡಿಯ 10 ಲಕ್ಷ ಪ್ರತಿಗಳನ್ನು ಜನರಿಗೆ ತಲುಪಿಸಿದ್ದು.
  • ಸುಮಾರು 1.6 ಲಕ್ಷ ಹೊಸ ಮತದಾರರನ್ನು ಮತ ಪಟ್ಟಿಗೆ ಸೇರಿಸಿದ್ದು.
  • ಅನಗತ್ಯವಾಗಿ ಸ್ಪರ್ಧಿಸಿ ಮತ ವಿಭಜನೆಗೆ ಕಾರಣವಾಗುವ ಸಣ್ಣ ಪಕ್ಷಗಳ ಒಂಬತ್ತು ಅಭ್ಯರ್ಥಿಗಳನ್ನು ನಾಮಪತ್ರ ಹಿಂತೆಗೆದುಕೊಳ್ಳುವಂತೆ ಪ್ರೇರೇಪಿಸಿದ್ದು.
  • ಸ್ಥಳೀಯ ಮಟ್ಟದಲ್ಲಿ 100 ಮಾಧ್ಯಮ ಗೋಷ್ಠಿಗಳನ್ನು ನಡೆಸಿದ್ದು.
  • ಜಾಥಾ, ಕರಪತ್ರ ಇತ್ಯಾದಿಗಳನ್ನು ಸೇರಿಸಿದರೆ ಸುಮಾರು ಒಂದು ಕೋಟಿ ಮತದಾರರನ್ನು ನೇರವಾಗಿ ತಲುಪಿದ್ದು.
  • ರೈತರು, ಕಾರ್ಮಿಕರು, ದಲಿತರು, ಮಹಿಳೆಯರು, ವಿದ್ಯಾರ್ಥಿಗಳು, ಮತ್ತು ಆದಿವಾಸಿಗಳು ಸೇರಿದ 50 ಧರಣಿಗಳನ್ನು ನಡೆಸಿದ್ದು.
  • 31 ಜಿಲ್ಲೆಗಳು ಮತ್ತು 150 ತಾಲೂಕುಗಳಿಗೆ ಸ್ವಯಂಸೇವಕರು ಭೇಟಿ ನೀಡಿದ್ದು.

ಎದ್ದೇಳು ಕರ್ನಾಟಕವು ಭ್ರಷ್ಟ ಹಾಗೂ ಕೋಮುವಾದಿಗಳಿಂದ ನಾಡನ್ನು ರಕ್ಷಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿದೆ. ಅದರ ಪರಿಣಾಮ ಈಗ ನಮ್ಮ ಕಣ್ಣಮುಂದೆಯೇ ಇದೆ. ಕಾಲದ ಅಗತ್ಯವೊಂದನ್ನು ಮನಗಂಡು ಅದಕ್ಕಾಗಿ ಈ ಬಳಗ ದುಡಿದಿದೆ. ಇಷ್ಟಿದ್ದರೂ ಈ ಕೆಲಸಗಳು ಅಂತಿಮವಲ್ಲ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ಸಿನ ಬಗ್ಗೆಯೂ ಒಂದು ಕಣ್ಣಿಡಬೇಕಾಗಿದೆ. ಜೊತೆಗೆ ಮುಂದಿನ ಒಂದು ವರ್ಷದಲ್ಲಿ ಲೋಕಸಭೆಗೆ ಚುನಾವಣೆಗಳು ನಡೆಯಲಿವೆ. ಮತ್ತೆ ಕೋಮುವಾದೀ ದುಷ್ಟಶಕ್ತಿಗಳು ಹಣದಬಲ ಸಹಿತವಾಗಿ ನಮ್ಮ ಮುಂದೆ ಬರಲಿವೆ. ಅವುಗಳನ್ನು ಎದುರಿಸುವ ಬಗೆ ಹೇಗೆಂದು ಮತ್ತೆ ನಾವೆಲ್ಲರೂ ಒಟ್ಟಿಗೇ ಕುಳಿತು ಚರ್ಚಿಸಬೇಕಾಗಿದೆ.

ಡಾ. ಪುರುಷೋತ್ತಮ ಬಿಳಿಮಲೆ

ಪುರುಷೋತ್ತಮ ಬಿಳಿಮಲೆ
ಜನಪದ, ಯಕ್ಷಗಾನ ಮತ್ತು ಸಾಂಸ್ಕೃತಿಕ ಸಂಶೋಧನೆ ಮತ್ತು ಅಧ್ಯಯನಗಳಲ್ಲಿ ಡಾ. ಪುರುಷೋತ್ತಮ ಬಿಳಿಮಲೆ ಅವರದ್ದು ಚಿರಪರಿಚಿತ ಹೆಸರು. ಹಲವು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ ಜೆಎನ್‌ಯುವಿನಲ್ಲಿ ಕನ್ನಡ ಪೀಠದ ಪ್ರಥಮ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 20ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಮತ್ತು ಸಂಪಾದಿಸಿರುವ ಬಿಳಿಮಲೆ ಅವರ ’ಕಾಗೆ ಮುಟ್ಟಿದ ನೀರು’ ಆತ್ಮಕಥೆ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ಭದ್ರಕೋಟೆ ಮಥುರಾದಲ್ಲಿ ಮುಸ್ಲಿಮರಿಗೆ ಮತದಾನ ನಿರಾಕರಣೆ?

0
ಲೋಕಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಕೆಲ ಕ್ಷೇತ್ರಗಳ ಬೂತ್‌ಗಳಲ್ಲಿ ಮತದಾನದ ದಿನ ಮತಗಟ್ಟೆಗೆ ತೆರಳಿದ್ದ ನಾಗರಿಕರಿಗೆ ತಮ್ಮ ಹೆಸರು ಪಟ್ಟಿಯಿಂದ ನಾಪತ್ತೆಯಾಗಿರುವುದು, ತಪ್ಪಾಗಿ ನಮೂದಿಸಿರುವುದು ಕಂಡುಬಂದಿದೆ. ಮಥುರಾ...