Homeಮುಖಪುಟಚುನಾವಣೆಗಳನ್ನು ಅಪ್ರಸ್ತುತಗೊಳಿಸುತ್ತಿರುವ ಬಿಜೆಪಿ

ಚುನಾವಣೆಗಳನ್ನು ಅಪ್ರಸ್ತುತಗೊಳಿಸುತ್ತಿರುವ ಬಿಜೆಪಿ

- Advertisement -
- Advertisement -

ಈ ಲೇಖನ ಬರೆಯುತ್ತಿರುವ ಹೊತ್ತಿಗೆ ಭಾರತೀಯ ಪ್ರಜಾಪ್ರಭುತ್ವದ ಕೇಂದ್ರ ಸ್ಥಾನವಾದ ಲೋಕಸಭೆ ಮತ್ತು ರಾಜ್ಯಸಭೆಗಳು ಕಳೆದ ಆರು ದಿನಗಳಿಂದ ಕೆಲಸ ಮಾಡದೆ ಸ್ಥಗಿತವಾಗಿವೆ. ರಾಹುಲ್ ಗಾಂಧಿಯವರು ಭಾರತೀಯ ಪ್ರಜಾಪ್ರಭುತ್ವದ ಶೈಥಿಲ್ಯದ ಬಗ್ಗೆ ಇಂಗ್ಲೆಂಡಿನಲ್ಲಿ ಆಡಿದ ಮಾತುಗಳಿಗೆ ಕ್ಷಮೆ ಕೇಳಬೇಕೆಂದು ಬಿಜೆಪಿ ಪಟ್ಟುಹಿಡಿದಿದೆ. ಇದರಿಂದಾಗಿ ವಿರೋಧ ಪಕ್ಷಗಳು ಎತ್ತಬೇಕೆಂದಿದ್ದ ಅದಾನಿ, ಸಿಬಿಐ, ಇಡಿ ಮೊದಲಾದ ವಿಷಯಗಳು ಮೂಲೆಸೇರಿದವು. ಬಿಜೆಪಿಗೆ ಬೇಕಾದ್ದು ಕೂಡಾ ಅದುವೇ. ಚುನಾವಣೆಯ ಸಂದರ್ಭದಲ್ಲಿ ಇನ್ನಷ್ಟು ಜತನದಿಂದ ಅತ್ಯಗತ್ಯ ವಿಷಯಗಳನ್ನು ಮೂಲೆಗುಂಪು ಮಾಡುತ್ತಾ ಸರಕಾರದ ವೈಫಲ್ಯಗಳು ಮುನ್ನಲೆಗೆ ಬಾರದಂತೆ ಕಾಯುತ್ತಿದೆ ಬಿಜೆಪಿ. ಈಚೆಗೆ ಪ್ರಧಾನಿಗಳಿಂದ ಉದ್ಘಾಟನೆಗೊಂಡ ಬೆಂಗಳೂರು ಮೈಸೂರು ಷಟ್‌ಪಥ ಹೆದ್ದಾರಿಯು ಉದ್ಘಾಟನೆಯ ಮುಂದಿನ ದಿನವೇ ಕೆಲವು ಭಾಗಗಳಲ್ಲಿ ಕಿತ್ತುಹೋಗುವುದರ ಜೊತೆಗೆ ಟೋಲ್ ವಿಷಯದಲ್ಲಿ ಜನಗಳಿಗೆ ತೊಂದರೆ ಉಂಟುಮಾಡಿತು. ಇದರಿಂದ ತಪ್ಪಿಸಿಕೊಳ್ಳಲು ಬಿಜೆಪಿ ನಾಯಕರು ಉರಿಗೌಡ, ನಂಜೇ ಗೌಡರೆಂಬ ಕಲ್ಪಿತ ನಾಯಕರನ್ನು ಮುಂದೆಮಾಡಿದರು. ಹಾಸನವನ್ನು ಕೈಮಾಬಾದ್ ಎಂದು ಕರೆಯುವ ಮಾತನ್ನು ಹೇಳಿ, ಹಾಸನದ ಜನರನ್ನು ಹಾದಿತಪ್ಪಿಸಲು ನೋಡಿದರು.

ಈ ಬಗೆಯ ಹಾದಿ ತಪ್ಪಿಸುವಿಕೆಯ ಕೆಲಸಗಳು 2014ರಿಂದ ಮಾತ್ರ ಶುರು ಆಯಿತೆಂದು ನಾನು ಹೇಳುತ್ತಿಲ್ಲ. ಅದು ಹಿಂದೆಯೂ ಸ್ವಲ್ಪಸ್ವಲ್ಪ ಇತ್ತು, ಈಗಿನಂತೆ ಬರಿ ಅದುವೇ ಆಗಿರಲಿಲ್ಲ ಅಷ್ಟೆ. ನೆಹರೂ ಕಾಲದ ಚುನಾವಣಾ ವಿಷಯಗಳು ಅವರೇ ಜಾರಿಗೆ ತಂದ ಪಂಚವಾರ್ಷಿಕ ಯೋಜನೆಗಳ ಸಾಧನೆ ಮತ್ತು ವೈಫಲ್ಯಗಳ ಮೇಲೆ ಕೇಂದ್ರೀಕೃತವಾಗುತ್ತಿದ್ದವು. ಇಂದಿರಾ ಗಾಂಧಿಯವರ ಕಾಲದಲ್ಲಿ ಭ್ರಷ್ಟಾಚಾರದ ಬಗ್ಗೆ ಬಹಳ ವಾದವಿವಾದಗಳು ನಡೆಯುತ್ತಿದ್ದವು. ಯುದ್ಧಗಳಲ್ಲಿನ ಗೆಲುವು, 20 ಅಂಶಗಳ ಜಾರಿ, ಭೂಮಸೂದೆಯ ಪ್ರಯೋಜನ ಇತ್ಯಾದಿಗಳು ಚುನಾವಣಾ ಭಾಷಣಗಳ ವಿಷಯಗಳಾಗಿರುತ್ತಿತ್ತು. ತುರ್ತು ಪರಿಸ್ಥಿತಿ ಮತ್ತು ಜಯಪ್ರಕಾಶ್ ನಾರಾಯಣ ನೇತೃತ್ವದ ಚಳವಳಿಗಳು ಆಗಿನ ಸರಕಾರವನ್ನೇ ಕಿತ್ತೊಗೆದವು.

ಆದರೆ ಈಗ ಚುನಾವಣಾ ಸಂದರ್ಭದಲ್ಲಿ ಏನಾಗುತ್ತಿದೆ? ಅಯೋಧ್ಯೆ ಪ್ರಕರಣ, ಮುಸ್ಲಿಂ ದ್ವೇಷ, ಇತಿಹಾಸದ ತಿರುಚುವಿಕೆ, ಹಿಂದುತ್ವ, ಮತ್ತಿತರ ವಿಷಯಗಳೇ ಮುನ್ನಲೆಗೆ ಬಂದು ಜನರ ಜ್ವಲಂತ ಸಮಸ್ಯೆಗಳೆಲ್ಲ ಮೂಲೆಗುಂಪಾಗುತ್ತಿವೆ. ಆಳುವ ಸರಕಾರವು ತಾನು ಕಳೆದ ಐದು ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅಂಕಿಅಂಶಗಳ ಸಮೇತ ಜನರ ಮುಂದಿಡಬೇಕು. ಹಿಂದಿನ ಚುನಾವಣೆಯ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ಪ್ರಣಾಳಿಕೆಗಳಲ್ಲಿ ಎಷ್ಟನ್ನು ಮಾಡಲು ಸಾಧ್ಯವಾಗಿದೆ, ಏನನ್ನು ಮಾಡಲು ಸಾಧ್ಯವಾಗಿಲ್ಲ ಮತ್ತು ಅದಕ್ಕೆ ಕಾರಣಗಳೇನು ಎಂಬುದನ್ನು ಜನರಿಗೆ ವಿವರಿಸಬೇಕು. ಸಾಮಾಜಿಕ ಮಾಧ್ಯಮಗಳ ಮೂಲಕ ಎಲ್ಲ ವರ್ಗದ ಜನರಿಗೆ ಅವುಗಳನ್ನು ತಲುಪಿಸಬೇಕು. ಅದರ ಸತ್ಯಾಸತ್ಯತೆಗಳ ಬಗ್ಗೆ ವಿರೋಧ ಪಕ್ಷಗಳು ಬೆಳಕು ಚೆಲ್ಲಬೇಕು. ಟಿ.ವಿ ಚಾನೆಲ್‌ಗಳು ಪ್ರಭುತ್ವಕ್ಕೆ ತಲೆಬಾಗುವ ದೈನ್ಯತೆಯನ್ನು ಬಿಟ್ಟು, ದಿಟ್ಟವಾಗಿ ಚರ್ಚೆಗಳನ್ನು ನಡೆಸಬೇಕು. ಇದು ಇಡೀ ಚುನಾವಣಾ ಪ್ರಕ್ರಿಯೆಯನ್ನು ಅರ್ಥಪೂರ್ಣಗೊಳಿಸುತ್ತದೆ. ಪ್ರಜಾಪ್ರಭುತ್ವವನ್ನು ಬಲಗೊಳಿಸುತ್ತದೆ. ಜನರೂ ಪ್ರಬುದ್ಧರಾಗುತ್ತಾರೆ. ಸತ್ಯವನ್ನು ಕತ್ತಲೆಯಲ್ಲಿ ಇರಿಸಿ, ಸುಳ್ಳುಗಳನ್ನು ಮುಂದೆ ಮಾಡಿ, ಜನರಿಗೆ ಮಂಕುಬೂದಿ ಎರಚಿ, ಸಾಧಿಸುವ ಚುನಾವಣಾ ವಿಜಯವು ಅನೈತಿಕವಾದುದು, ಮಾತ್ರವಲ್ಲ ಅದು ಪ್ರಜಾಪ್ರಭುತ್ವಕ್ಕೆ ಮಾರಕವಾದುದು. ನಮ್ಮ ವಾಟ್ಸಾಪ್ ಗುಂಪುಗಳಲ್ಲಿ ಪ್ರಸಾರವಾಗುವ ಮಾಹಿತಿಗಳು ಶೇ.85ರಷ್ಟು ಸುಳ್ಳು ಎಂದು ಈಚಿನ ಅಧ್ಯಯನಗಳು ತಿಳಿಸಿವೆ. ರಾಜಕೀಯ ಪಕ್ಷಗಳೇ ಇವತ್ತು ಸುಳ್ಳಿನ ಕಾರ್ಖಾನೆಯನ್ನು ನಡೆಸುತ್ತಿವೆ. ಬಿಜೆಪಿಯ ಐಟಿ ಸೆಲ್ಲಿನ ಮುಖ್ಯಸ್ಥ ಅಮಿತ್ ಮಾಳವಿಯ ಹೊರಡಿಸಿದ ಸುಳ್ಳುಗಳ ಬಗ್ಗೆ ಸಾಕಷ್ಟು ಲೇಖನಗಳು ಪ್ರಕಟವಾಗಿದ್ದರೂ, ಅದು ಯಥಾವತ್ತಾಗಿ ಮುಂದುವರಿಯುತ್ತಿವೆ. ಇಂಥ ಸುಳ್ಳು ಮತ್ತು ಆಧಾರರಹಿತ ಮಾಹಿತಿಗಳಿಗೆ ನಮ್ಮ ವಿದ್ಯಾವಂತರೇ ಮರುಳಾಗುತ್ತಾರೆ ಎಂದರೆ ಅಂತವರಿಗೆ ಸರಕಾರಗಳು ಯಾವ ಬಗೆಯ ಶಿಕ್ಷಣವನ್ನು ನೀಡಿದೆ ಎಂಬುದೂ ಸ್ಪಷ್ಟವಾಗುತ್ತದೆ. ನಮ್ಮನ್ನು ಇದಿರು ಕುಳ್ಳಿರಿಸಿಕೊಂಡು ನಮ್ಮ ಬಗ್ಗೆಯೇ ಸುಳ್ಳು ಹೇಳಿದರೂ ತಲೆ ಆಡಿಸುವ ಜನರು ನಾವು. ನಮ್ಮ ಜನಪದ ಕತೆಗಳಲ್ಲಿ ಅರಸರು ವೇಷ ಮರೆಸಿ ಜನಗಳ ನಡುವೆ ಹೋಗಿ ನಿಜ ಹೇಗಿದೆಯೆಂಬುದನ್ನು ಪರೀಕ್ಷಿಸಿ, ತಮ್ಮನ್ನು ತಿದ್ದಿಕೊಳ್ಳುತ್ತಿದ್ದರು. ಈಗ ಅಂತ ಒಂದು ಸಾಧ್ಯತೆಯನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: ಲೋಕಸಭೆಯಲ್ಲಿ ರಾಹುಲ್‌ಗೆ ಮಾನಹಾನಿ ಮಾಡಿದ ರಾಜನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್‌ ವಿಶೇಷ ಹಕ್ಕು ಉಲ್ಲಂಘನೆ…

ಇಂದು ನಾವು ಒಪ್ಪಿಕೊಂಡಿರುವ ಪ್ರಜಾಪ್ರಭುತ್ವದ ಉಳಿಯುವಿಕೆ, ಮುಂದುವರಿಯುವಿಕೆ ಮತ್ತು ಬೆಳವಣಿಗೆಯಲ್ಲಿ ಅಂಕಿಅಂಶಗಳು ಮತ್ತು ಅವುಗಳ ಮೇಲೆ ನಡೆಸುವ ಸಂವಾದಗಳು ಬಹಳ ಮುಖ್ಯವಾದು. ಪ್ರಾಮಾಣಿಕವಾದ ಅಂಕಿಅಂಶಗಳು ಒಂದು ದೇಶ ಏನನ್ನು ಸಾಧಿಸಿದೆ ಎಂಬುದನ್ನು ತನ್ನ ಪ್ರಜೆಗಳಿಗೆ ಮನಗಾಣಿಸಿಕೊಡುತ್ತದೆ ಮತ್ತು ಪರೋಕ್ಷವಾಗಿ ದೇಶವು ಮುಂದೆ ಸಾಧಿಸಬೇಕಾಗಿರುವ ಅಂಶಗಳ ಕಡೆಗೂ ಜನರ ಗಮನ ಸೆಳೆಯುತ್ತದೆ. ಈ ಒಟ್ಟು ಪ್ರಕ್ರಿಯೆಯು ಪ್ರಜೆಗಳನ್ನು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಪ್ರಜೆಗಳನ್ನು ಒಳಗೊಳ್ಳದ ಆಡಳಿತವನ್ನು ನಾವು ಸಾಮಾನ್ಯವಾಗಿ ಪ್ರಜಾಪ್ರಭುತ್ವವೆಂದು ಕರೆಯುವುದಿಲ್ಲ. ದೇಶವೊಂದು ಎಲ್ಲಾದರೂ ತಪ್ಪು ಹಾದಿಯಲ್ಲಿ ನಡೆಯುತ್ತಿದೆಯೇ ಎಂಬುದರ ಬಗ್ಗೆ ಅಂಕಿಅಂಶಗಳು ಬೆಳಕು ಚೆಲ್ಲುತ್ತವೆ. ತಪ್ಪನ್ನು ಒಪ್ಪಿಕೊಳ್ಳುವ ಅಧಿಕಾರಿ ವರ್ಗದ ಪ್ರಾಮಾಣಿಕತೆಯು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನೆರವಾಗುತ್ತದೆ. ಹೀಗೆ ಮಾಡದೇ ಹೋದರೆ ತಪ್ಪುಗಳು ಪುನರಾವರ್ತನೆಗೊಳ್ಳುತ್ತಲೇ ಹೋಗಿ, ಅಂತಿಮವಾಗಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ. ಈ ನಿಟ್ಟಿನಲ್ಲಿ ಸರಕಾರ ತೋರುವ ಪಾರದರ್ಶಕತೆಯು ಅತಿ ಮುಖ್ಯವಾದುದು. ಇದು ಪ್ರಜಾಪ್ರಭುತ್ವವನ್ನು ಉಳಿಸುವ ಬಹಳ ದೊಡ್ಡ ಶಕ್ತಿಯೂ ಹೌದು. ಆದರೆ ಈಚಿನ ವರ್ಷಗಳಲ್ಲಿ ಆಡಳಿತ ಪಾರದರ್ಶಕವಾಗಿಲ್ಲ. ಕೋವಿಡ್ ಆಪತ್ತಿನಲ್ಲಿ ಸರಕಾರ ಜನರಿಗೆ ನೀಡಿದ ಅಂಕಿಅಂಶಗಳ ಬಗ್ಗೆ ತಜ್ಞರು ಗುಮಾನಿಗಳನ್ನು ವ್ಯಕ್ತಪಡಿಸಿದ್ದಾರೆ. 2020ರ ಏಪ್ರಿಲ್ ತಿಂಗಳಲ್ಲಿ ಲಾಕ್‌ಡೌನ್ ಕಾರಣವಾಗಿ ನಡೆದ ಕೂಲಿ ಕಾರ್ಮಿಕರ ಮಹಾವಲಸೆಯ ಸಂದರ್ಭದಲ್ಲಿ ಸಂಭವಿಸಿದ ಸಾವುಗಳ ಲೆಕ್ಕ ನಮ್ಮಲ್ಲಿ ಇಲ್ಲ ಎಂದು ಕೇಂದ್ರ ಸರಕಾರವೇ ಲೋಕಸಭೆಗೆ ತಿಳಿಸಿತು. ಜನರು ಬೀದಿಯಲ್ಲಿ ಬಿದ್ದು ಸಾಯುತ್ತಿದ್ದಾಗ, ಸುಪ್ರೀಂ ಕೋರ್ಟ್ ವಲಸೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಸರಕಾರವು ’ವಲಸೆ ಕಾರ್ಮಿಕರಿಗೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ’ ಎಂದು ಹೇಳಿತು. ಭಾರತೀಯ ಕೃಷಿ ಪದ್ಧತಿಯು ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಮತ್ತು ಜನರೆಲ್ಲ ಕೊರೊನಾ ಭಯದಿಂದ ತತ್ತರಿಸುತ್ತಿರುವಾಗ ಸರಕಾರವು 2020ರ ಜೂನ್ ತಿಂಗಳಲ್ಲಿ ತರಾತುರಿಯಿಂದ ಸುಗ್ರೀವಾಜ್ಞೆಯ ಮೂಲಕ ಮೂರು ಕೃಷಿ ಕಾಯ್ದೆಗಳನ್ನೂ ಜಾರಿ ಮಾಡಿತು. ಈ ಕೃಷಿ ಕಾಯ್ದೆಗಳ ಬಗ್ಗೆ ದೊಡ್ಡಮಟ್ಟದಲ್ಲಿ ಚರ್ಚೆಯೇ ನಡೆಯಲಿಲ್ಲ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅವುಗಳನ್ನು ಅಂಗೀಕರಿಸಿದ ರೀತಿಯಲ್ಲಿಯೂ ಪಾರದರ್ಶಕತೆ ಇರಲಿಲ್ಲ. ಪ್ರಜಾಪ್ರಭುತ್ವದ ಮೂಲ ಆಶಯಗಳನ್ನೇ ಅಲ್ಲಿ ಬದಿಗೊತ್ತಲಾಯಿತು. 2019ರಲ್ಲಿ ಮಾಹಿತಿ ಹಕ್ಕುಗಳ ಕಾನೂನಿಗೆ ತಿದ್ದುಪಡಿ ತಂದು ಅದರ ಬೆನ್ನುಮೂಳೆಯನ್ನೇ ಮುರಿಯಲಾಯಿತು. ಈ ಬೆಳವಣಿಗೆಗಳು ಪ್ರಜಾಪ್ರಭುತ್ವವನ್ನು ಅಪಾಯದ ಅಂಚಿಗೆ ತಳ್ಳಿ ಸರ್ವಾಧಿಕಾರಿ ಶಕ್ತಿಗಳನ್ನು ಬಲಪಡಿಸಿದೆ.

ಅಮಿತ್ ಮಾಳವಿಯ

ಇಂಥ ಬೆಳವಣಿಗೆಗಳ ಬಗ್ಗೆ ಅರಿವಿದ್ದ ಅಂಬೇಡ್ಕರ್ ಅವರು ಈ ಕುರಿತು ಪ್ರಜೆಗಳು ವಹಿಸಬೇಕಾದ ಎಚ್ಚರದ ಬಗ್ಗೆ ಮಾತಾಡಿದ್ದರು. ’ಹೆಚ್ಚಿನ ಭಾರತೀಯರು ಭಾರತವು ಈಗಾಗಲೇ ಒಂದು ಪ್ರಜಾಪ್ರಭುತ್ವ ಎಂಬಂತೆ ಅತ್ಯಂತ ಹೆಮ್ಮೆಯಿಂದ ಮಾತನಾಡುತ್ತಾರೆ. ಪ್ರಜಾಪ್ರಭುತ್ವದ ಬೇರುಗಳು ಸರಕಾರದ, ಸಂಸತ್ತಿನ ಅಥವಾ ಇಂಥವುಗಳ ಸ್ವರೂಪದಲ್ಲಿ ಇರುವುದಿಲ್ಲ. ಪ್ರಜಾಪ್ರಭುತ್ವ ಎಂಬುದು ಸರಕಾರದ ಒಂದು ಸ್ವರೂಪ ಅನ್ನುವುದಕ್ಕಿಂತಲೂ ಹೆಚ್ಚಿನದ್ದಾಗಿದೆ’ ಎಂಬುದು ಅವರ ಮಾತು. ಈ ಮಹತ್ವದ ಮಾತುಗಳನ್ನು ನಾವೀಗ ಮರೆತುಬಿಟ್ಟಿದ್ದೇವೆ. ಕ್ರಿಸ್ತಪೂರ್ವ 430ರಷ್ಟು ಹಿಂದೆಯೇ ಗ್ರೀಸ್ ದೇಶದ ಪೆರಿಕ್ಲಿಸ್‌ನು ’ಆಡಳಿತ ಕೆಲವೇ ಜನರ ಕೈಯ್ಯಲ್ಲಿರದೆ ಜನಸಾಮಾನ್ಯರ ಕೈಯ್ಯಲ್ಲಿದ್ದರೆ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ’ ಎಂಬ ಮಾತನ್ನು ಹೇಳಿದ್ದ. ಅಬ್ರಹಾಮ್ ಲಿಂಕನ್ ಹೇಳಿದ ’ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳೇ ನಡೆಸುವ ಸರ್ಕಾರ’ ಎಂಬ ಮಾತು ಬಹಳ ಪ್ರಸಿದ್ಧವಾದುದು. ಆದರೆ ಇವತ್ತಿನ ಸರಕಾರಗಳಲ್ಲಿ ಪ್ರಜೆಗಳ ಪಾಲ್ಗೊಳ್ಳುವಿಕೆಯೇ ಗೌಣವಾಗಿದೆ. ಐದು ವರ್ಷಕ್ಕೊಮ್ಮೆ ಮತಚಲಾಯಿಸುವುದಷ್ಟೇ ತಮ್ಮ ಕರ್ತವ್ಯ ಎಂದು ಪ್ರಜೆಗಳು ಭಾವಿಸುತ್ತಿದ್ದಾರೆ. ಈ ನಡುವೆ ಮತಗಳನ್ನು ಅಪಹರಿಸುವ ಕಲೆಗಾರಿಕೆಯನ್ನೂ ರಾಜಕಾರಣಿಗಳು ಕಲಿತುಕೊಂಡಿದ್ದಾರೆ. ಪ್ರಜೆಗಳು ಅದರಲ್ಲೂ ಮತದಾರರು ತಮ್ಮ ಪ್ರತಿನಿಧಿಗಳ ಮೇಲೆ ಪರಿಣಾಮಕಾರಿ ನಿಯಂತ್ರಣವನ್ನಿಟ್ಟುಕೊಳ್ಳಲು ಪ್ರಜಾಪ್ರಭುತ್ವ ಅವಕಾಶ ಮಾಡಿಕೊಡುತ್ತದೆ ಎಂಬುದು ಇವತ್ತು ಯಾರಿಗೂ ನೆನಪಿಲ್ಲ. ಈ ಪರಿಸ್ಥಿತಿಯನ್ನು ಸುಧಾರಿಸಲು ಕೆಲಸಗಳೂ ನಡೆಯುತ್ತಿಲ್ಲ. ಇಂಥ ದಯನೀಯ ಸಂದರ್ಭದಲ್ಲಿ ಸರಕಾರಗಳು ಮಾಡುವುದೆಲ್ಲವೂ ಪ್ರಜಾಸತ್ತಾತ್ಮಕವಾಗಿರುತ್ತವೆ ಎಂದು ಪ್ರಜೆಗಳು ನಂಬುತ್ತಿದ್ದಾರೆ. ಈ ಬಿಕ್ಕಟ್ಟಿನಲ್ಲಿ ಪ್ರಜೆಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆಸಲು, ಪ್ರಜಾಪ್ರಭುತ್ವವನ್ನು ಉಳಿಸಲು ಸ್ವತಂತ್ರ ಹಾಗೂ ನಿರ್ಭೀತ ಮಾಧ್ಯಮಗಳು ಕೆಲಸ ಮಾಡಬೇಕು. ಅವು ಜನರ ಹಾಗೂ ಸರ್ಕಾರದ ನಡುವಣ ಸೇತುವೆಗಳು. ಆದರೆ ಅಂಥ ಮಾಧ್ಯಮಗಳು ಕೂಡಾ ಇವತ್ತು ಜನರ ನಂಬುಗೆಯನ್ನು ಕಳಕೊಂಡಿವೆ. ಸರಕಾರ ಮತ್ತು ರಾಜಕಾರಣಿಗಳು ಹೇಳುವುದನ್ನೇ ಅವು ಇನ್ನಷ್ಟು ಬಣ್ಣಬೆರೆಸಿ ಜನರಿಗೆ ತಲುಪಿಸುತ್ತಿವೆ. ಇಂಥ ಬೆಳವಣಿಗೆಗಳ ಕುರಿತು ಎಚ್ಚರ ಹುಟ್ಟಿಸುವ ಮಾನವಿಕಗಳನ್ನೇ ಇವತ್ತು ’ಅನುತ್ಪಾದಕ’ ಎಂದು ಘೋಷಿಸುವ ಮಟ್ಟಿಗೆ ಸರಕಾರಗಳೂ ಜನರೂ ಬದಲಾಗಿದ್ದಾರೆ. ಇಂಥಲ್ಲಿ ಪ್ರಶ್ನಿಸುವುದನ್ನು ಕಲಿಸುವ, ಸತ್ಯವನ್ನು ಶೋಧಿಸುವ, ರಾಜಕೀಯ ವಿನ್ಯಾಸಗಳನ್ನು ವಿಶ್ಲೇಷಿಸುವ, ಕೆಲಸಗಳಿಗೆ ಮಹತ್ವ ಕಡಿಮೆಯಾಗುತ್ತದೆ.

ನಾಡಿನ ಬಗೆಗೆ ತಿಳಿವಳಿಕೆಗಳನ್ನು ಹೆಚ್ಚಿಸಿ, ಮುಕ್ತ ಚಿಂತನೆಗೆ ಮತ್ತು ವಿಮರ್ಶೆಗೆ ಪೂರ್ಣ ಅವಕಾಶ ಮಾಡಿಕೊಡುವುದು ಪ್ರಜಾಪ್ರಭುತ್ವವಾದೀ ಸರಕಾರಗಳ ಅತಿ ದೊಡ್ಡ ಕರ್ತವ್ಯ ಎಂಬುದನ್ನು ಸರಕಾರಗಳೇ ಮರೆತಿವೆ; ಮಾತ್ರವಲ್ಲ ಜನರ ಮನಸ್ಸಿನಿಂದಲೂ ಅದನ್ನು ಮರೆಸಲು ನೇರವಾಗಿ ಮತ್ತು ಪರೋಕ್ಷವಾಗಿ ಕೆಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ತಂತ್ರಗಳಿಗೆ ಬಲಿಬಿದ್ದ ಪ್ರಜೆಗಳೂ ಸರಕಾರದ ಭಾಷೆಯನ್ನೇ ನಿಧಾನವಾಗಿ ಕಲಿಯಲು ಆರಂಭಿಸಿದ್ದಾರೆ. ನಮ್ಮ ಸಂವಿಧಾನ ಮತ್ತು ಕಾನೂನುಗಳನ್ನು ಹೇಗೆ ಬೇಕಾದರೂ ತಿರುಚುವ ಕಲೆಗಾರಿಕೆಯನ್ನು ನಮ್ಮ ರಾಜಕಾರಣಿಗಳು ಕಲಿತಿದ್ದಾರೆ. ಸರಕಾರವು ತನ್ನ ಭಾಷೆಯನ್ನೇ ಪ್ರಜೆಗಳ ಭಾಷೆಯನ್ನಾಗಿ ಪರಿವರ್ತಿಸಬಯಸಿದರೆ ಆಗ ಅಲ್ಲಿ ಸರಕಾರ ಇರುತ್ತದೆ, ಪ್ರಜೆಗಳು ಇರುವುದಿಲ್ಲ. ಪ್ರಜೆಗಳೇ ಇಲ್ಲದ ಪ್ರಜಾಪ್ರಭುತ್ವವನ್ನು ನಾವೀಗ ಕಟ್ಟಲು ಹೊರಟಿದ್ದೇವೆ. ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ, ಸಹಬಾಳ್ವೆಯ ಪರಿಕಲ್ಪನೆಗಳು ನಶಿಸುತ್ತಾ ಸಾಗಿವೆ. ಸರಕಾರದ ಪಾರದರ್ಶಕತೆ ಮತ್ತು ಹೊಣೆಗಾರಿಕೆಗಳು ಶಿಥಿಲವಾಗುತ್ತಿವೆ. ಇವುಗಳ ಪರಿಣಾಮವೋ ಎಂಬಂತೆ ಸರ್ವಾಧಿಕಾರೀ ಪ್ರವೃತ್ತಿ ಹೆಚ್ಚಾಗುತ್ತಿದೆ.

ಡಾ. ಪುರುಷೋತ್ತಮ ಬಿಳಿಮಲೆ

ಪ್ರೊ. ಪುರುಷೋತ್ತಮ ಬಿಳಿಮಲೆ
ಜನಪದ, ಯಕ್ಷಗಾನ ಮತ್ತು ಸಾಂಸ್ಕೃತಿಕ ಸಂಶೋಧನೆ ಮತ್ತು ಅಧ್ಯಯನಗಳಲ್ಲಿ ಡಾ.ಪುರುಷೋತ್ತಮ ಬಿಳಿಮಲೆ ಅವರದ್ದು ಚಿರಪರಿಚಿತ ಹೆಸರು. ಹಲವು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ ಜೆಎನ್‌ಯುವಿನಲ್ಲಿ ಕನ್ನಡ ಪೀಠದ ಪ್ರಥಮ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 20ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಬಿಳಿಮಲೆ, ಅವರ ’ಕಾಗೆ ಮುಟ್ಟಿದ ನೀರು’ ಆತ್ಮಕಥೆ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬದಲಿಗೆ ಮಗನಿಗೆ ಟಿಕೆಟ್ ಕೊಟ್ಟ ಬಿಜೆಪಿ

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಉತ್ತರ ಪ್ರದೇಶದ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೈಬಿಟ್ಟು, ಪುತ್ರ ಕರಣ್ ಭೂಷಣ್ ಸಿಂಗ್‌ಗೆ...