Homeಕರ್ನಾಟಕಚೀನಾದಿಂದ ಶಂಕಾಸ್ಪದ ಬಿತ್ತನೆ ಬೀಜ ಪಾರ್ಸೆಲ್ ಆರೋಪ: ಆಧಾರವಿಲ್ಲದೇ ಕೃಷಿ ಅಧಿಕಾರಿಯ ಪತ್ರಿಕಾ ಹೇಳಿಕೆ!

ಚೀನಾದಿಂದ ಶಂಕಾಸ್ಪದ ಬಿತ್ತನೆ ಬೀಜ ಪಾರ್ಸೆಲ್ ಆರೋಪ: ಆಧಾರವಿಲ್ಲದೇ ಕೃಷಿ ಅಧಿಕಾರಿಯ ಪತ್ರಿಕಾ ಹೇಳಿಕೆ!

- Advertisement -
- Advertisement -

2020ರ ಆಗಸ್ಟ್ ತಿಂಗಳಿನಲ್ಲಿ ರೈತರ ಮನೆಗಳಿಗೆ ನಿಗೂಢ ಮೂಲಗಳಿಂದ ಶಂಕಾಸ್ಪದ ಬಿತ್ತನೆ ಬೀಜ ಪಾರ್ಸೆಲ್‌ಗಳು ಬರುತ್ತಿದ್ದ ವರದಿಯಾಗಿತ್ತು. ಅಪರಿಚಿತ ಮೂಲಗಳಿಂದ ಭಾರತಕ್ಕೆ ಪ್ರವೇಶಿಸುವ “ಅನುಮಾನಾಸ್ಪದ / ಅಪೇಕ್ಷಿಸದ ಬೀಜ ಪಾರ್ಸೆಲ್‌ಗಳ” ಬಗ್ಗೆ ಜಾಗರೂಕರಾಗಿರಿ. ಇದು ದೇಶದ ಜೀವವೈವಿಧ್ಯತೆಗೆ ಅಪಾಯಕಾರಿಯಾಗಿದೆ ಎಂದು ಕೇಂದ್ರವು ರಾಜ್ಯ ಸರ್ಕಾರಗಳು ಮತ್ತು ಬೀಜ ಉದ್ಯಮ ಮತ್ತು ಸಂಶೋಧನಾ ಸಂಸ್ಥೆಗಳನ್ನು ಎಚ್ಚರಿಸಿತ್ತು.

“ಕಳೆದ ಕೆಲವು ತಿಂಗಳುಗಳಲ್ಲಿ ವಿಶ್ವದಾದ್ಯಂತ ಸಾವಿರಾರು ಅನುಮಾನಾಸ್ಪದ ಬೀಜ ಸಾಗಣೆಗಳು ವರದಿಯಾಗಿವೆ. ಅಮೆರಿಕ, ಕೆನಡಾ, ಯುಕೆ, ನ್ಯೂಜಿಲೆಂಡ್, ಜಪಾನ್ ಮತ್ತು ಕೆಲವು ಯುರೋಪಿಯನ್ ರಾಷ್ಟ್ರಗಳಲ್ಲಿ ಈ ರೀತಿಯ ಘಟನೆಗಳು ವರದಿಯಾಗಿವೆ” ಎಂದು ಕೃಷಿ ಸಚಿವಾಲಯ ಕಳೆದ ವರ್ಷ ತಿಳಿಸಿತ್ತು.

ಆಗಿನಿಂದ ವಾಟ್ಸಾಪ್‌ನಲ್ಲಿ “ಚೀನಾದಿಂದ ಶಂಕಾಸ್ಪದ ಬಿತ್ತನೆ ಬೀಜ ಪಾರ್ಸೆಲ್‌ಗಳು ರೈತರಿಗೆ ಬರುತ್ತಿವೆ. ಅವುಗಳನ್ನು ಹೊಲಕ್ಕೆ ಹಾಕಿದರೆ ಬೆಳೆಯೆಲ್ಲಾ ನಾಶವಾಗುತ್ತದೆ. ಭೂಮಿಯ ಫಲವತ್ತತೆ ಹಾಳಾಗುತ್ತದೆ. ಅವುಗಳಲ್ಲಿ ವೈರಸ್ ಸಹ ಇವೆ” ಎಂಬ ಫೇಕ್‌ ಸುದ್ದಿಯೊಂದು ವೈರಲ್ ಆಗುತ್ತಿದೆ. ಆದರೆ ಈ ಬಗ್ಗೆ ನಿಖರ ತನಿಖೆ ನಡೆದಿಲ್ಲ ಮತ್ತು ಯಾವುದೇ ಆಧಾರಗಳು ಸಿಕ್ಕಿಲ್ಲ.

ಆದರೆ ಕಲಬುರಗಿ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ರತೇಂದ್ರನಾಥ್ ಸೂಗೂರರವರು ಜೂನ್ 1 ರಂದು “ಚೀನಾದಿಂದ ಬಿತ್ತನೆ ಬೀಜಗಳನ್ನು ಬೇರೆ ಬೇರೆ ದೇಶಗಳಿಗೆ ಕಳಿಸಲಾಗುತ್ತಿದೆ. ಈ ಬೀಜಗಳು ಕೀಟ ಮತ್ತು ರೋಗಾಣುಗಳಿಂದ ಕೂಡಿದ್ದು, ಅವುಗಳನ್ನು ಬಿತ್ತನೆ ಮಾಡಿದರೆ ತಿಂಗಳಿನಲ್ಲಿಯೇ ಬೆಳೆ ಸಂಪೂರ್ಣ ನಾಶವಾಗುತ್ತದೆ. ಅನಾಧೇಯರಿಂದ ಬೀಜ ಬಂದರೆ ರೈತರು ಸ್ವೀಕರಿಸಬಾರದು” ಎಂದು ಪತ್ರಿಕಾ ಹೇಳಿಕೆ ನೀಡಿದ್ದು ಅದನ್ನು ಪ್ರಜಾವಾಣಿ ಮತ್ತು ವಿಜಯ ಕರ್ನಾಟಕ ಪತ್ರಿಕೆಗಳು ವರದಿ ಮಾಡಿವೆ.

ಈ ರೀತಿ ಚೀನಾದಿಂದ ಬಿತ್ತನೆ ಬೀಜಗಳು ಪಾರ್ಸೆಲ್ ಬಂದಿದ್ದೆ ಆದರೆ ಅದು ನಮ್ಮ ದೇಶವನ್ನು ದೊಡ್ಡ ಅಪಾಯಕ್ಕೆ ದೂಡಲಿದೆ. ಈ ಕುರಿತು ತೀವ್ರ ತನಿಖೆ ನಡೆಸಿ ಅದರ ಮೂಲವನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕಿದೆ. ಆದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ ಏಕೆ? ಭಾರತ ಸರ್ಕಾರ ಇದರ ಬಗ್ಗೆ ಮಾತನಾಡಿಲ್ಲ. ಪತ್ರಿಕೆಗಳಲ್ಲಿ ಚರ್ಚೆಯಾಗುತ್ತಿಲ್ಲ. ಆದರೆ ಕಲಬುರಗಿ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಯಾವ ಆಧಾರದಲ್ಲಿ ಈ ಹೇಳಿಕೆ ನೀಡಿದರು ಎಂಬುದು ವಿವಾದಕ್ಕೆ ಕಾರಣವಾಗಿದೆ.

“ರಾಜ್ಯದಲ್ಲಿ ಇಂತಹ ಬೀಜಗಳು ಬಂದಿರುವ ಬಗ್ಗೆ ವರದಿಯಾಗಿಲ್ಲ, ಮುನ್ನೆಚ್ಚರಿಕೆಯಾಗಿ ರೈತರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ” ಎಂದು ಸಹ ಅದೇ ಅಧಿಕಾರಿ ಹೇಳಿದ್ದಾರೆ. ಈ ಕುರಿತು ನಾನುಗೌರಿ.ಕಾಂ ಅವರಿಂದ ಸ್ಪಷ್ಟನೆ ಪಡೆಯಲು ಪ್ರಯತ್ನಿಸಿತು.

ಸರ್ ಚೀನಾ ಬಿತ್ತನೆ ಬೀಜಗಳ ಮಾಹಿತಿಯ ಮೂಲ ಯಾವುದು? ಸರ್ಕಾರದಿಂದ ಈ ಕುರಿತು ಆದೇಶ ಬಂದಿದೆಯೇ ಎಂದು ಡಾ. ರತೇಂದ್ರನಾಥ್ ಸೂಗೂರರವರನ್ನು ಪ್ರಶ್ನಿಸಿದೆವು. “ಮೊದಲಿಗೆ ಆದೇಶವಿದೆ ಎಂದರು. ಅದರ ಪ್ರತಿ ಕಳಿಸಿ ಎಂದಾಕ್ಷಣ, ಅದು ವ್ಯಾಟ್ಸಾಪ್‌ನಲ್ಲಿ ಬಂದೈತ್ರಿ, ಆಮ್ಯಾಲ ಅದನ್ನ ಕಳಿಸ್ತೀನಿ” ಎಂದರು.

ಗದಗ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶ್ ಅವರನ್ನು ನಾನುಗೌರಿ. ಕಾಂ ಸಂಪರ್ಕಿಸಿ, ಇಲಾಖೆಯಿಂದ ಇಂತಹ ಆದೇಶವಿದೆಯೇ ಎಂದು ಪ್ರಶ್ನೆ ಮಾಡಿತು. ಅದಕ್ಕೆ ಅವರು, ‘ಸದ್ಯಕ್ಕೆ ಅಂತಹ ಆದೇಶವೇ ಇಲ್ಲ. ಅದೂ ವ್ಯಾಟ್ಸಾಪ್ ಮೂಲಕ ಇಂತಹ ಆದೇಶ ಹೊರಡಿಸಲೂ ಆಗದು. ಕಳೆದ ವರ್ಷ ಕೇಂದ್ರ ಸರ್ಕಾರದ ಕೃಷಿ ಇಲಾಖೆ ಹೊರಡಿಸಿದ ಒಂದು ಸುತ್ತೋಲೆ ಪ್ರಕಾರ, ಅನಾಮಿಕ ವಿಳಾಸದಿಂದ ಬಂದ ಬಿತ್ತನೆ ಬೀಜಗಳನ್ನು ರೈತರು ಬಳಸಬಾರದು ಎಂಬ ಸೂಚನೆಯಿದೆ. ಅದರಲ್ಲಿ ಚೀನಾ ದೇಶದ ಪ್ರಸ್ತಾಪವಿಲ್ಲ. ಆದರೆ ಅಂತಹ ಬೀಜಗಳ ಪಾರ್ಸೆಲ್ ಬಂದಿರುವುದನ್ನು ನಾನು ಮತ್ತು ನನ್ನ ಸಹಮಿತ್ರ ಅಧಿಕಾರಿಗಳು ಇಲ್ಲಿವರೆಗೆ ಕಂಡೇ ಇಲ್ಲ’ ಎಂದರು.

ಈ ಕುರಿತು ಸಂಪೂರ್ಣ ವಿವರ ಪಡೆಯಲು, ರಾಜ್ಯ ಕೃಷಿ ಇಲಾಖೆ ಅಪರ ಕಾರ್ಯದರ್ಶಿ ವೆಂಕಟರಮಣರೆಡ್ಡಿಯವರನ್ನು ಸಂಪರ್ಕಿಸಿದಾಗ  ‘ಸದ್ಯಕ್ಕೆ ಅಂತಹ ಯಾವ ಆದೇಶವೂ ಇಲ್ಲ. ವ್ಯಾಟ್ಸಾಪ್ ಮೂಲಕ ಅಂತಹ ಆದೇಶವನ್ನೂ ಇಲಾಖೆ ನೀಡುವುದಿಲ್ಲ. 2020ರ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರವು, ಅನಾಮಧೇಯ ವಿಳಾಸಗಳಿಂದ ಬರುವ ಬಿತ್ತನೆ ಬೀಜಗಳ ಬಗ್ಗೆ ಎಚ್ಚರವಿರಲಿ ಎಂಬ ಸುತ್ತೋಲೆ ಹೊರಡಿಸಿತ್ತು. ಈಗೇನೂ ಅಂಥಾದ್ದಿಲ್ಲ. ಕಲಬುರಗಿ ಅಧಿಕಾರಿ ಹೀಗೇಕೆ ಮಾಡಿದರು ಎಂಬುದನ್ನು ವಿಚಾರಿಸುತ್ತೇನೆ’ ಎಂದು ತಿಳಿಸಿದ್ದಾರೆ.

ರಾಜ್ಯ ಕೃಷಿ ಇಲಾಖೆ ಅಪರ ಕಾರ್ಯದರ್ಶಿ ಕಳಿಸಿದ ಕಳೆದ ವರ್ಷದ ಆದೇಶದ ಪ್ರತಿ

ಇಂತಹ ವಿಚಾರಗಳಲ್ಲಿ ಕೃಷಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು ಮತ್ತು ಅನಗತ್ಯ ಗೊಂದಲ ಉಂಟು ಮಾಡಬಾರದು. ಈ ರೀತಿ ಬಿತ್ತನೆ ಬೀಜಗಳು ಬರುತ್ತಿದ್ದರೆ ಅದರ ಮೂಲ ಪತ್ತೆ ಹಚ್ಚುವುದು ನಮ್ಮ ಪೊಲೀಸ್ ಇಲಾಖೆಗೆ ದೊಡ್ಡದಲ್ಲ. ಹಾಗಾಗಿ ಅದು ನಿಜವಾಗಿದ್ದರೆ ಈ ಕುರಿತು ಸೂಕ್ತ ಕಾನೂನು ಕ್ರಮಕ್ಕೆ ಕೃಷಿ ಇಲಾಖೆ ಮುಂದಾಗಬೇಕು. ಇಲ್ಲದಿದ್ದರೆ ಕಲಬುರಗಿ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಅನಗತ್ಯ ಭಯ ಮೂಡಿಸದೆ ಸ್ಪಷ್ಟನೆ ನೀಡಬೇಕು.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಕೇಂದ್ರದ ಲಸಿಕಾ ನೀತಿಯ ವಿರುದ್ಧ ಶಶಿ ತರೂರ್‌ ಅಸಮಾಧಾನ. ಭಾರತೀಯರೆಲ್ಲರಿಗೂ ಉಚಿತ ಲಸಿಕೆ ನೀಡಲು ಆಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಬಳ್ಳಾರಿಯ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಬಿ.ಮುದಗಲ್ ಅವರು 2021ರ ಜೂನ್ 2ರಂದು ಪ್ರಕಟಣೆ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...