Homeಕರ್ನಾಟಕಎದ್ದೇಳು ಕರ್ನಾಟಕ: ಒಂದು ಅಸಾಧಾರಣ ಚುನಾವಣೆಯಲ್ಲಿ ಒಂದು ವಿಶಿಷ್ಟ ಪ್ರಯೋಗ

ಎದ್ದೇಳು ಕರ್ನಾಟಕ: ಒಂದು ಅಸಾಧಾರಣ ಚುನಾವಣೆಯಲ್ಲಿ ಒಂದು ವಿಶಿಷ್ಟ ಪ್ರಯೋಗ

- Advertisement -
- Advertisement -

ಕರ್ನಾಟಕದ ಚುನಾವಣೆಯಲ್ಲಿ ಒಂದು ವಿಶಿಷ್ಟ ಪ್ರಯೋಗ ನಡೆಯುತ್ತಿದೆ. ’ಎದ್ದೇಳು ಕರ್ನಾಟಕ’ದ ಹೆಸರಿನಲ್ಲಿ ಪ್ರಾದೇಶಿಕ ಮತ್ತು ದೇಶದ ಅನೇಕ ಸಾಮಾಜಿಕ ಸಂಘಟನೆಗಳು ಮತ್ತು ಆಂದೋಲನಗಳ ಸಮೂಹವು ಕರ್ನಾಟಕದ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ’ಮಧ್ಯಪ್ರವೇಶ’ ಮಾಡುತ್ತಿವೆ. ಅವಶ್ಯಕತೆಯೇ ಅವಿಷ್ಕಾರದ ತಾಯಿ ಎನ್ನುತ್ತಾರೆ. ಹಾಗಾಗಿ ಈ ದೇಶದ ಇತಿಹಾಸದಲ್ಲಿ, ಈ ಅಸಾಧಾರಣ ಕಾಲದಲ್ಲಿ ಆಗುತ್ತಿರುವ, ಈ ಅಸಾಧಾರಣ ಚುನಾವಣೆ ಈ ಒಂದು ಅಸಾಮಾನ್ಯ ಕ್ರಮಕ್ಕೆ ಜನ್ಮ ನೀಡಿದೆ.

2023 ಮೇ, 10ರಂದು ನಡೆಯಲಿರುವ ಕರ್ನಾಟಕದ ವಿಧಾನಸಭಾ ಚುನಾವಣೆ, ಕೇವಲ ಪ್ರಜಾಪ್ರಭುತ್ವವಲ್ಲ ನಮ್ಮ ಗಣತಂತ್ರದ ಅಸ್ತಿತ್ವವೇ ಅಪಾಯದಲ್ಲಿರುವಂತಹ ಕಷ್ಟಕರ ತಿರುವುನಲ್ಲಿ ದೇಶವಿರುವಾಗ ನಡೆಯುತ್ತಿರುವ ಚುನಾವಣೆಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತದ ಸ್ವಧರ್ಮದ ಮೂರು ಸ್ತಂಭಗಳ (ಕರುಣೆ, ಮೈತ್ರಿ ಮತ್ತು ನಮ್ರತೆ) ಮೇಲೆ ಮಾರಣಾಂತಿಕ ದಾಳಿಯಾಗುತ್ತಿದೆ. ಪ್ರಜಾಸತ್ತಾತ್ಮಕ ಸಂಸ್ಥೆಗಳು ಆಳುವ ಶಕ್ತಿಗಳ ಮುಂದೆ ನರಳುತ್ತಿವೆ ಅಥವಾ ಸಂಪೂರ್ಣ ಶರಣಾಗತಿ ತೋರಿವೆ. ಇಂತಹ ಸನ್ನಿವೇಶದಲ್ಲಿ ಭಾರತ್ ಜೋಡೋ ಯಾತ್ರೆಯು ದೇಶಕ್ಕೆ ಒಂದು ಭರವಸೆಯ ಕಿರಣವಾಗಿ ಮೂಡಿಬಂದಿತ್ತು. ಆದರೆ ದೇಶದ ಜನಸಾಮಾನ್ಯರ ಮೇಲೆ ಅದು ಬೀರಿದ ಪರಿಣಾಮದ ಪರೀಕ್ಷೆ ಆಗುವುದಿನ್ನೂ ಬಾಕಿ ಇದೆ. ಬಿಜೆಪಿ ಮತ್ತದರ ಸಹಯೋಗಿಗಳು ಹೇಳುವುದೇನೆಂದರೆ, ಇದು ಕೇವಲ ಒಂದು ಅಲಂಕಾರಿಕ ಹೂವಾಗಿತ್ತು, ಜನರ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ ಎಂದು. ಹೇಗೂ, ಕಳೆದ ಹಲವಾರು ವರ್ಷಗಳಿಂದ ಆಡಳಿತ ಪಕ್ಷವು ಸಾಂವಿಧಾನಿಕ ಮೌಲ್ಯಗಳು ಮತ್ತು ನೈತಿಕತೆಯ ಎಲ್ಲ ಪ್ರಶ್ನೆಗಳಿಗೆ ಚುನಾವಣೆಗಳಲ್ಲಿ ಕಂಡ ತಮ್ಮ ವಿಜಯಗಳನ್ನು ತೋರಿಸಿ ತಿರಸ್ಕಾರದ ಉತ್ತರವನ್ನಿತ್ತಿವೆ. ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ಒಂದೇ ಮರುಸವಾಲು ಹಾಕಲಾಗುತ್ತದೆ; ಒಂದು ವೇಳೆ ನೀವೇ ಸರಿ ಇದ್ದರೆ, ಚುನಾವಣೆ ಗೆದ್ದು ತೋರಿಸಿ. ಹಾಗಾಗಿ ಕರ್ನಾಟಕದ ಚುನಾವಣೆ ಆಡಳಿತದಲ್ಲಿರುವ ಶಕ್ತಿಗಳಿಗೆ ಮತ್ತು ಸವಾಲು ಹಾಕುವವರಿಗೆ ಒಂದು ಅಗ್ನಿಪರೀಕ್ಷೆಯಾಗಿ ಎದುರಾಗಿದೆ.

ಕಳೆದ ಎರಡು ತಿಂಗಳಲ್ಲಿ ವಿರೋಧಪಕ್ಷಗಳು ದೇಶದಲ್ಲಿ ಎರಡು ದೊಡ್ಡ ಪ್ರಶ್ನೆಗಳನ್ನು ಎತ್ತಿವೆ. ಮೊದಲ ಪ್ರಶ್ನೆ, ರಾಜಕೀಯ ಶಕ್ತಿ ಮತ್ತು ಕಾರ್ಪೊರೆಟ್‌ಗಳ ಹಣದ ಚೀಲದ ನಿಕಟ ಸಂಬಂಧದ ಬಗ್ಗೆ; ರಾಹುಲ್ ಗಾಂಧಿಯವರು ಗೌತಮ್ ಅದಾನಿಯ ಹೆಸರನ್ನು ಉಲ್ಲೇಖಿಸಿ ತುಂಬಾ ಶ್ರದ್ಧೆಯಿಂದ ಈ ಪ್ರಶ್ನೆ ಎತ್ತಿದ್ದಾರೆ. ಅದಕ್ಕೆ ಉತ್ತರವಾಗಿ ಆಡಳಿತ ಪಕ್ಷವು ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸಿತು, ನಂತರ ಸಂಸತ್ತಿನ ನಡಾವಳಿಗಳಿಂದ ಅವರ ಮಾತುಗಳನ್ನೇ ಕಿತ್ತುಹಾಕಿದರು, ತದನಂತರ ಸಂಸತ್ತನಲ್ಲಿ ಚರ್ಚೆಯನ್ನೇ ನಿಲ್ಲಿಸಿದರು ಹಾಗೂ ಕೊನೆಯಲ್ಲಿ ಹೇಗೋ ಮಾಡಿ ರಾಹುಲ್ ಗಾಂಧಿಯನ್ನು ಸಂಸತ್ತಿನಿಂದ ಹೊರಹಾಕಿದರು. ಕಳೆದ ಕೆಲವು ವಾರಗಳಿಂದ ರಾಹುಲ್ ಗಾಂಧಿ ಪ್ರತಿಯೊಂದು ವೇದಿಕೆಯಿಂದ ಒಂದು ಪ್ರಶ್ನೆ ಕೇಳುತ್ತಿದ್ದಾರೆ; ಗೌತಮ್ ಅದಾನಿಯ ಕಂಪನಿಗಳಲ್ಲಿ ಮಾರಿಷಸ್‌ನಿಂದ ಬಂದ 20,000 ಕೋಟಿ ರೂಪಾಯಿಗಳನ್ನು ಒಂದು ಬೇನಾಮಿ ಕಂಪನಿ ಹೂಡಿಕೆ ಮಾಡಿದೆ, ಆ ದುಡ್ಡು ಯಾರದ್ದು? ಕರ್ನಾಟಕದ ಚುನಾವಣೆಗಳಲ್ಲಿಯೂ ರಾಹುಲ್ ಗಾಂಧಿ ಈ ಪ್ರಶ್ನೆ ಎತ್ತುತ್ತಿದ್ದಾರೆ.

ಕರ್ನಾಟಕದ ಚುನಾವಣೆಗಳಲ್ಲಿ ಎರಡನೆಯ ದೊಡ್ಡ ರಾಷ್ಟ್ರೀಯ ಪ್ರಶ್ನೆಯೂ ಏಳುತ್ತಿದೆ, ಅದು ಸಾಮಾಜಿಕ ನ್ಯಾಯದ ರಾಜಕಾರಣಕ್ಕೆ ಸಂಬಂಧಿಸಿದೆ. ಒಬಿಸಿ ಸಮುದಾಯಗಳನ್ನು ಅಪಮಾನ ಮಾಡಿದರೆಂದು ಬಿಜೆಪಿ ಯಾವಾಗ ರಾಹುಲ್ ಗಾಂಧಿ ಮೇಲೆ ಆರೋಪಿಸಿತೋ, ಅದಕ್ಕೆ ಉತ್ತರವಾಗಿ ರಾಹುಲ್ ಗಾಂಧಿಯು ನರೇಂದ್ರ ಮೋದಿಯನ್ನು ಉದ್ದೇಶಿಸಿ, ’ಒಂದು ವೇಳೆ ನಿಮಗೆ ಒಬಿಸಿ ಸಮುದಾಯದ ಬಗ್ಗೆ ಇಷ್ಟೇ ಪ್ರೀತಿಯಿದ್ದರೆ ನೀವು ಜಾತಿವಾರು ಜನಗಣತಿಯ ಅಂಕಿ ಅಂಶಗಳನ್ನು ಸಾರ್ವಜನಿಕರಿಗೆ ಏಕೆ ಬಹಿರಂಗಗೊಳಿಸುತ್ತಿಲ್ಲ’ ಎಂದು ಕೇಳಿದರು. ನಿಮ್ಮ ಸರಕಾರದ ಪ್ರಮುಖ ಅಧಿಕಾರಿಗಳಲ್ಲಿ ದಲಿತ, ಆದಿವಾಸಿ ಅಥವಾ ಹಿಂದುಳಿದ ವರ್ಗಗಳ ಅಧಿಕಾರಿಗಳ ಸಂಖ್ಯೆ ಏಕೆ ನಗಣ್ಯ ಎಂದು ಕೇಳಿದರು. ಒಟ್ಟಾರೆ, ರಾಹುಲ್ ಗಾಂಧಿ ಮಂಡಲ್ ಹೋರಾಟದ ಮೂರನೆಯ ಹಂತವನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ: ಈ ಡಬಲ್‌ ಇಂಜಿನ್‌ ಸಂಘಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಬೇಕಾಗಿದೆ: ದೇವನೂರ ಮಹಾದೇವ

ಕರ್ನಾಟಕದ ಚುನಾವಣೆಗಳು ಕೇವಲ ಈ ಎರಡೇ ವಿಷಯಗಳ ಮೇಲೆ ನಡೆಯದೇ ಇದ್ದರೂ, ಈ ಚುನಾವಣೆಗಳ ಪರಿಣಾಮವನ್ನು ಈ ಎರಡು ದೊಡ್ಡ ರಾಷ್ಟ್ರೀಯ ಅಭಿಯಾನದ ಅಗ್ನಿ ಪರೀಕ್ಷೆ ಎಂತಲೇ ನೋಡಲಾಗುವುದು. ಒಂದು ವೇಳೆ ಬಿಜೆಪಿ ಕರ್ನಾಟಕದ ಚುನಾವಣಾ ಇತಿಹಾಸದಲ್ಲಿ ಮೊದಲ ಬಾರಿ ಸಂಪೂರ್ಣ ಬಹುಮತ ಪಡೆಯಲು ಸಫಲವಾದಲ್ಲಿ, ಸ್ವಾಭಾವಿಕವಾಗಿಯೇ ಇದನ್ನು ಕೇವಲ ರಾಹುಲ್ ಗಾಂಧಿ, ಕಾಂಗ್ರೆಸ್ ಪಾರ್ಟಿ ಹಾಗೂ ಭಾರತ್ ಜೋಡೊ ಯಾತ್ರೆಯದ್ದಷ್ಟೇ ಅಲ್ಲದೇ ಆರ್ಥಿಕ ಕ್ಷಮತೆ ಮತ್ತು ಸಾಮಾಜಿಕ ನ್ಯಾಯದ ರಾಜಕಾರಣದ ಸೋಲು ಎಂಬಂತೆ ತಮ್ಮ ಗೆಲುವನ್ನು ಮುಂದಿಡಲಾಗುವುದು. ಇನ್ನೊಂದೆಡೆ, ಬಿಜೆಪಿ ಸೋಲು ಅನುಭವಿಸಿದಲ್ಲಿ, ಆಗ ಆ ಪಕ್ಷ ಆ ಸೋಲಿನಿಂದ 2024ರ ಲೋಕಸಭಾ ಚುನಾವಣೆಗಳನ್ನು ಸಂಪೂರ್ಣವಾಗಿ ಬೇರ್ಪಡಿಸುತ್ತದೆ ಹಾಗೂ ಆರ್ಥಿಕ ಮತ್ತು ಸಾಮಾಜಿಕ ರಂಗದಲ್ಲಿ ಆಗುವ ರಾಜಕೀಯ ಯುದ್ಧವು ಅತ್ಯಂತ ತೀಕ್ಷ್ಣವಾಗಿರಲಿದೆ.

ಈ ಧರ್ಮಯುದ್ಧಕ್ಕಾಗಿ ಕರ್ನಾಟಕ ತುಂಬಾ ಉಪಯುಕ್ತವಾದ ಕುರುಕ್ಷೇತ್ರವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿಯ ಪ್ರವೇಶ ದ್ವಾರ ಎಂದೇ ಬಿಂಬಿಸಲಾದ ಈ ರಾಜ್ಯವು ಸಾಂಸ್ಕೃತಿಕ ಮತ್ತು ರಾಜಕೀಯ ರೂಪದಲ್ಲಿ ಅತ್ಯಂತ ಸಮೃದ್ಧವಾದ ಪ್ರದೇಶವಾಗಿದೆ. ಇಂದು ಕರ್ನಾಟಕದಿಂದ ಹಿಜಾಬ್ ಮತ್ತು ಆಜಾನ್‌ನ ವಿಷಯಗಳಲ್ಲಿ ನಡೆಯುತ್ತಿರುವ ವಿವಾದಗಳ ಸುದ್ದಿಗಳು ಬರುತ್ತಿರಬಹುದು ಆದರೆ ಈ ರಾಜ್ಯ ಬಸವಣ್ಣನಂತಹ ಚಳವಳಿಕಾರನ ರಾಜ್ಯವಾಗಿದೆ, ಇದು ಧಾರ್ಮಿಕ ಸಹಿಷ್ಣುತೆ ಮತ್ತು ಸಾಹಿತ್ಯದ ನೆಲವಾಗಿದೆ. ಕರ್ನಾಟಕವು ದೇಶದ ರೈತ ಆಂದೋಲನ ಮತ್ತು ದಲಿತ ಚಳವಳಿಗಳಿಗೆ ಒಂದು ತೀರ್ಥಯಾತ್ರೆಯಾಗಿದೆ. ದೇಶದ ಇತರ ಭಾಗದವರಿಗೆ ಕೇವಲ ಬೆಂಗಳೂರಿನ ಐಟಿ ಉದ್ಯೋಗಗಳಷ್ಟೇ ಕಾಣಿಸುತ್ತಿರಬಹುದು ಆದರೆ ಕರ್ನಾಟಕದ ಅರ್ಥವ್ಯವಸ್ಥೆಯಲ್ಲಿ ಇಂದಿಗೂ ಕೃಷಿ, ಪಶುಪಾಲನೆ ಹಾಗೂ ಕರಕುಶಲ ಕೈಗಾರಿಕೆಗಳ ಸ್ಥಾನ ತುಂಬಾ ದೊಡ್ಡದಿದೆ.

ಈ ಚುನಾವಣೆಗಳ ಮಹತ್ವ ಮತ್ತು ಕರ್ನಾಟಕದ ಅಸಾಧಾರಣ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದೇಶದ ಮತ್ತು ರಾಜ್ಯದ ಸಾಮಾಜಿಕ ಸಂಘಟನೆಗಳು ಮತ್ತು ಜನರ ಆಂದೋಲನಗಳು ಈ ಚುನಾವಣೆಗಳಲ್ಲಿ ಒಂದು ಹೊಸ ರೀತಿಯಲ್ಲಿ ಮಧ್ಯಪ್ರವೇಶಿಸಲು ತೀರ್ಮಾನಿಸಿವೆ. ಸಾಮಾನ್ಯವಾಗಿ, ಸಾಮಾಜಿಕ ಸಂಘಟನೆಗಳು ಮತ್ತು ಜನಪರ ಆಂದೋಲನಗಳು ಚುನಾವಣಾ ರಾಜಕೀಯದಿಂದ ಅಂತರ ಕಾಯ್ದುಕೊಳ್ಳುತ್ತವೆ ಅಥವಾ ಅದರಲ್ಲಿ ಒಂದಿಷ್ಟು ಸಾಂಕೇತಿಕವಾದ ಪಾತ್ರವನ್ನು ಮಾತ್ರ ನಿರ್ವಹಿಸಿ ಸಂತುಷ್ಟವಾಗುತ್ತವೆ. ಕೆಲವೊಮ್ಮೆ ಜನಪರ ಆಂದೋಲನಗಳಲ್ಲಿ ತೊಡಗಿಕೊಂಡಂತಹ ವ್ಯಕ್ತಿಗಳು ಸಂಪೂರ್ಣವಾಗಿ ಚುನಾವಣಾ ರಾಜಕೀಯದಲ್ಲಿ ಧುಮುಕುತ್ತಾರೆ; ಆದರೆ ಇಂತಹ ಪ್ರಯೋಗಗಳ ಪರಿಣಾಮ ಫಲಪ್ರದವಾಗಿದ್ದು ಕಂಡುಬಂದಿಲ್ಲ. ಕರ್ನಾಟಕದ ಚುನಾವಣೆಗಳಲ್ಲಿ ಜನಪರ ಆಂದೋಲನಗಳು ತೀರ್ಮಾನಿಸಿದ್ದೇನೆಂದರೆ, ತಾವು ಖುದ್ದಾಗಿ ಚುನಾವಣಾ ರಾಜಕೀಯದಲ್ಲಿ ಒಂದು ಪಕ್ಷವಾಗಿ ಅಥವಾ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಿಲ್ಲ, ಆದರೆ ದೇಶದ ಇತಿಹಾಸದ ಈ ಕಷ್ಟಕರ ಮತ್ತು ನಿರ್ಣಾಯಕ ಘಟ್ಟದಲ್ಲಿ ಚುನಾವಣೆಗಳನ್ನು ಕೇವಲ ಪ್ರೇಕ್ಷಕರಾಗಿ ನೋಡುವುದಿಲ್ಲ ಎಂದು. ಹಿಂದಿನಂತೆ, ಚುನಾವಣೆಗಳಲ್ಲಿ ಯಾವುದೋ ಒಂದು ರಾಜಕೀಯ ಶಕ್ತಿಯನ್ನು ಸೋಲಿಸಬೇಕು ಎಂದು ಮನವಿ ಮಾಡಿಯೂ ಸಂತುಷ್ಟರಾಗುವಂತಿಲ್ಲ. ಹಾಗಾಗಿ ಈ ಬಾರಿ ಈ ಸಂಘಟನೆಗಳು ಮತ್ತು ಜನಪರ ಆಂದೋಲನಗಳು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷವೊಂದಕ್ಕೆ ಒಲವು ತೋರಿಸುವುದರ ಬದಲು, ನೇರವಾಗಿ ನೆಲಮಟ್ಟದಲ್ಲಿ ಮಧ್ಯಪ್ರವೇಶ ಮಾಡುವ ತೀರ್ಮಾನ ಕೈಗೊಂಡಿವೆ.

ಇದುವೆ “ಎದ್ದೇಳು ಕರ್ನಾಟಕ”. ಇದು ಸಹಬಾಳ್ವೆ ಎಂಬ ಹೆಸರಿನಲ್ಲಿ ಆರಂಭವಾಗಿ, ರಾಜ್ಯದಲ್ಲಿ ನಡೆಯುತ್ತಿರುವ ದ್ವೇಷದ ರಾಜಕೀಯದ ವಿರುದ್ಧ ಎಲ್ಲಾ ಸಮುದಾಯಗಳಲ್ಲಿ ಸದ್ಭಾವನೆಯ ಕಲ್ಪನೆಯನ್ನು ಬೀದಿಬೀದಿಗಳಲ್ಲಿ ಬಿತ್ತುವ ಕೆಲಸ ಮಾಡಿದರು. ಈ ಅಭಿಯಾನದೊಂದಿಗೆ ಹಲವಾರು ರೀತಿಯ ಸಂಘಟನೆಗಳು ಸೇರತೊಡಗಿದವು. ಕರ್ನಾಟಕದಲ್ಲಿ ರಾಜ್ಯ ರೈತ ಸಂಘ ಎಂಬ ಹೆಸರಿನಲ್ಲಿರುವ ಹಲವು ರೈತರ ಸಂಘಟನೆಗಳು, ದಲಿತ ಸಂಘರ್ಷ ಸಮಿತಿಯ ಅನೇಕ ಬಣಗಳು, ಅಲ್ಪಸಂಖ್ಯಾತರ ರಕ್ಷಣೆಗಾಗಿ ಸಂಘರ್ಷ ನಡೆಸುತ್ತಿರುವ ಸಂಘಟನೆಗಳು ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಜನರ ಹಕ್ಕುಗಳ ರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಅನೇಕ ಸಂಘಟನೆಗಳು ಮತ್ತು ನಾಗರಿಕರೂ ಈ ಸಂಕಲ್ಪದ ಜೊತೆಗೂಡಿದರು. ಭಾರತ ಜೋಡೊ ಯಾತ್ರೆಯ ನಂತರ ಶುರುವಾದ ಭಾರತ್ ಜೋಡೊ ಅಭಿಯಾನವೂ ಈ ಅಭಿಯಾನದ ಭಾಗವಾಯಿತು ಹಾಗೂ ಎಲ್ಲರೂ ಸೇರಿ ಎದ್ದೇಳು ಕರ್ನಾಟಕ ಎಂಬ ಹೆಸರಿನ ಆಂದೋಲನವನ್ನು ಸ್ಥಾಪಿಸಿದರು.

ಈ ಅಭಿಯಾನದ ಅಡಿಯಲ್ಲಿ ಎರಡು ಹಂತಗಳಲ್ಲಿ ಕೆಲಸಗಳು ನಡೆಯುತ್ತಿವೆ. ಮೊದಲನೆಯದು ಸಂವಾದ ಮತ್ತು ಪ್ರಚಾರದ ಕೆಲಸ; ಅದರಲ್ಲಿ ಎದ್ದೇಳು ಕರ್ನಾಟಕದ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳು ಹಾಗೂ ಕರಪತ್ರ ಇತ್ಯಾದಿಗಳ ಮೂಲಕ ಸುಳ್ಳು ಮತ್ತು ದ್ವೇಷ ರಾಜಕಾರಣದ ಅಸಲಿ ಬಣ್ಣವನ್ನು ಬಯಲಿಗೆಳೆಯುತ್ತಿದ್ದಾರೆ. ಆದರೆ ಇದರ ಜೊತೆಜೊತೆಗೇ ರಾಜ್ಯದ ಸುಮಾರು ಆಯ್ದ 100 ಸ್ಥಳಗಳಲ್ಲಿ ತಂಡಗಳನ್ನು ರಚಿಸಲಾಗಿದೆ; ಆ ತಂಡಗಳು ಅಧಿಕಾರ ಬದಲಾವಣೆಗಾಗಿ ಅಲ್ಲಿನ ಅತ್ಯಂತ ಸೂಕ್ತ ಅಭ್ಯರ್ಥಿಯ ಬೆಂಬಲದಲ್ಲಿ ಪ್ರಚಾರ-ಪ್ರಸಾರದ ಕೆಲಸ ಮಾಡುತ್ತಿವೆ. ಇಲ್ಲಿಯ ತನಕ ಬಿಜೆಪಿಯ ಅಭ್ಯರ್ಥಿಗಳ ಬೆಂಬಲದಲ್ಲಿ ಸಂಘ ಪರಿವಾರದ ಎಲ್ಲಾ ಸಂಘಟನೆಗಳು ಈ ಪಾತ್ರ ನಿರ್ವಹಿಸುತ್ತಿದ್ದವು, ಆದರೆ ಅದನ್ನು ವಿರೋಧಿಸುವ ಪಕ್ಷಗಳ ಬಳಿ ಇಂತಹ ಯಾವುದೇ ಸಾಮಾಜಿಕ ಸಂಘಟನೆಯ ಬೆಂಬಲ ಇರಲಿಲ್ಲ. ಎದ್ದೇಳು ಕರ್ನಾಟಕ ಈ ಕೊರತೆಯನ್ನು ನೀಗಿಸುವ ಒಂದು ವಿಶಿಷ್ಟ ಪ್ರಯೋಗವಾಗಿದೆ. ಈ ಪ್ರಯೋಗ ಸಫಲವಾದಲ್ಲಿ, ಈ ವರ್ಷ ರಾಜಸ್ಥಾನ, ಛತ್ತೀಸಗಢ, ಮಧ್ಯ ಪ್ರದೇಶ ಹಾಗೂ ತೆಲಂಗಾಣದಲ್ಲಿ ಆಗಲಿರುವ ವಿಧಾನಸಭಾ ಚುನಾವಣೆಗಳು ಮತ್ತು ಮುಂದಿನ ವರ್ಷದ ಲೋಕಸಭಾ ಚುನಾವಣೆಗಳಿಗೆ ಒಂದು ಹೊಸ ಮಾದರಿಯಾಗಿ ಸಾಬೀತಾಗಬಹುದು.

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...