ಮುಂಬೈ ಹಾಗೂ ಜಾರ್ಖಂಡ್ ನಡುವಿನ ಪಂದ್ಯದಲ್ಲಿ ಮುಂಬೈ ತಂಡದ ಉದಯೋನ್ಮುಖ ಹಾಗೂ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ದಾಖಲೆ ಬರೆದಿದ್ದಾರೆ. 154 ಎಸೆತದಲ್ಲಿ 203 ರನ್ ಗಳಿಸುವ ಮೂಲಕ ಮೊದಲ ದರ್ಜೆ ಕ್ರಿಕೆಟ್ ನಲ್ಲಿ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 50 ಓವರ್ ಕ್ರಿಕೆಟ್ ನ ಲಿಸ್ಟ್ ಎ ಮತ್ತು ಒಡಿಐನಲ್ಲಿ ದ್ವಿಶತಕ ಗಳಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.
ವಿಜಯ್ ಹಜಾರೆ ಟೂರ್ನಿಯಲ್ಲಿ ಇಂಥದ್ದೊಂದು ದಾಖಲೆ ಸೃಷ್ಟಿಯಾಗಿದೆ. ಜಾರ್ಖಂಡ್ ವಿರುದ್ಧದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಸುಮಾರು 3 ವರ್ಷಗಳ ದಾಖಲೆಯನ್ನು ಯಶಸ್ವಿ ಬ್ರೇಕ್ ಮಾಡಿದರು. ಆ ಮೂಲಕ ಮುಂಬೈ ತಂಡದ ಆರಂಭಿಕ ಆಟಗಾರ, 17 ವರ್ಷದ ಯಶಸ್ವಿ ಜೈಸ್ವಾಲ್, ಕ್ರಿಸ್ ಗೇಲ್ ಮತ್ತು ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರ ರೆಕಾರ್ಡ್ ನ್ನು ಪುಡಿ ಮಾಡಿದ್ದಾರೆ. ಜೊತೆಗೆ ಯಶಸ್ವಿ ಜೈಸ್ವಾಲ್ ಮೊದಲ ದರ್ಜೆ ಕ್ರಿಕೆಟ್ ನಲ್ಲಿ ದ್ವಿಶತಕ ಬಾರಿಸಿದ 7 ನೇ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
1975ರಲ್ಲಿ ದಕ್ಷಿಣ ಆಫ್ರಿಕಾದ ದೇಶೀಯ ಕ್ರಿಕೆಟ್ ನಲ್ಲಿ 20 ವರ್ಷ ವಯಸ್ಸಿನ ಅಲನ್ ಬ್ಯಾರೋ ದ್ವಿಶತಕ ಗಳಿಸಿದ ಕಿರಿಯ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದರು. ಯಶಸ್ವಿ ಜೈಸ್ವಾಲ್, 154 ಎಸೆತಗಳಲ್ಲಿ 12 ಸಿಕ್ಸರ್, 17 ಬೌಂಡರಿ ಬಾರಿಸುವ ಮೂಲಕ 203 ರನ್ ಕಲೆ ಹಾಕಿದರು. ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಯಶಸ್ವಿ ಮೂರನೇ ಶತಕ ದಾಖಲಿಸಿದ್ದು, 5 ಪಂದ್ಯಗಳಲ್ಲಿ 585 ರನ್ ಕಲೆ ಹಾಕಿ ರನ್ ಸ್ಕೋರಿಂಗ್ ನಲ್ಲಿ ಮುನ್ನಡೆ ಪಡೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸಂಜು ಸ್ಯಾಮ್ಸನ್ ದ್ವಿಶತಕ ಸಿಡಿಸಿದ್ದರು. ಲಿಸ್ಟ್ ಎ ನಲ್ಲಿ ದ್ವಿಶತಕ ಬಾರಿಸಿದ ಆಟಗಾರರೆಂದರೆ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ಶಿಖರ್ ಧವನ್, ಕೆ,ವಿ.ಕೌಶಲ್, ಸಂಜು ಸ್ಯಾಮ್ಸನ್. ಅಂದಹಾಗೆ, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಕೇವಲ ಎಂದು ವೈಯಕ್ತಿಕ ದ್ವಿಶತಕಗಳು ದಾಖಲಾಗಿವೆ. ವಿಶೇಷವೆಂದರೆ, ಅವುಗಳಲ್ಲಿ ಐದು ಭಾರತೀಯ ಆಟಗಾರರಿಂದ ದಾಖಲಿಸಲ್ಪಟ್ಟಿವೆ. ಇನ್ನೂ ವಿಶೇಷವೆಂದರೆ, ರೋಹಿತ್ ಶರ್ಮಾ ಒಬ್ಬರೇ ಮೂರು ಬಾರಿ ಏಕದಿನ ದ್ವಿಶತಕ ಸಾಧನೆಗೈದಿದ್ದಾರೆ. ಮಿಕ್ಕುಳಿದಂತೆ ತೆಂಡೂಲ್ಕರ್, ಸೆಹ್ವಾಗ್ ತಲಾ ಒಂದೊಂದು ದ್ವಿಶತಕ ದಾಖಲಿಸಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯ ಇತಿಹಾಸದಲ್ಲೇ ಜೈಸ್ವಾಲ್ ಅವರದ್ದು ಮೂರನೇ ದ್ವಿಶತಕವಾಗಿದೆ. ಅಲ್ಲದೇ ಅವರ ಅಮೋಘ ಆಟದ ಮೂಲಕ ಮುಂಬೈ ತಂಡ 358 ರನ್ ಗಳಿಸಿತು. ತಾವು ಸಿಡಿಸಿರುವ ದ್ವಿಶತಕ ಮತ್ತು ದಾಖಲೆ ಬಗ್ಗೆ ಪ್ರತಿಕ್ರಿಯಿಸಿದ ಯಶಸ್ವಿ ಜೈಸ್ವಾಲ್, ನನಗೆ 70ರಿಂದ 80 ರನ್ ಕಲೆ ಹಾಕಲು ಮಾತ್ರ ಸಾಧ್ಯವಾಗುತ್ತಿತ್ತು. ಸೆಂಚುರಿ ಬಾರಿಸುವ ಬಗ್ಗೆ ವಾಸೀಂ ಅವರ ಬ್ಯಾಟಿಂಗ್ ನೋಡಿ ಕಲಿತಿದ್ದೆ. ಹೇಗೆ ಬೌಲನ್ನು ಬೌಂಡರಿಗೆ ಅಟ್ಟಬೇಕು ಎಂಬ ಬಗ್ಗೆ ಅವರು ಹೇಳಿದ್ದರು. ಇದೆಲ್ಲದರಿಂದ ದ್ವಿಶತಕ ಬಾರಿಸುವುದು ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಜೈಸ್ವಾಲ್ ಅವರ ರೋಚಕ ದಾಖಲೆಗೆ ಕ್ರಿಕೆಟ್ ಪ್ರೇಮಿಗಳಿಂದ ಶುಭ ಹಾರೈಕೆಗಳು ಹರಿದುಬರುತ್ತಿವೆ.


