Homeಕರ್ನಾಟಕಪ್ರವಾಹದಿಂದ ಇನ್ನೂ ನರಳುತ್ತಿರುವ ಕರ್ನಾಟಕದ ಉತ್ತರ ; ಚುನಾವಣೆಯಲ್ಲಿ ಮೈಮರೆತ ಸರ್ಕಾರ

ಪ್ರವಾಹದಿಂದ ಇನ್ನೂ ನರಳುತ್ತಿರುವ ಕರ್ನಾಟಕದ ಉತ್ತರ ; ಚುನಾವಣೆಯಲ್ಲಿ ಮೈಮರೆತ ಸರ್ಕಾರ

- Advertisement -
- Advertisement -

ಭಾರೀ ಪ್ರವಾಹಕ್ಕೆ ಸಿಲುಕಿ ತತ್ತರಿಸಿದ ಉತ್ತರ ಕರ್ನಾಟಕವು ತನ್ನ ಭಾರೀ ಸಂಕಷ್ಟದಿಂದ  ಇನ್ನೂ ಹೊರಬಂದಿಲ್ಲ.  ಮನೆಗಳನ್ನು, ಕುಟುಂಬದವರನ್ನು  ಕಳೆದುಕೊಂಡು ಬಿದಿಗೆ ಬಿದ್ದವರು ಆಸರೆಯ ನಿರೀಕ್ಷೆಯಲ್ಲಿದ್ದರೆ, ಸಮರ್ಪಕ ಪರಿಹಾರ ಮತ್ತು ಪುನರ್ವಸತಿಗೆ ಕೆಲಸ ಮಾಡಬೇಕಿದ್ದ ಸರ್ಕಾರ ಮಹಾರಾಷ್ಟ್ರ ಚುನಾವಣೆಯತ್ತ ಚಿತ್ತ ಹಾಯಿಸಿದೆ.

ರಾಜ್ಯದಲ್ಲಿ 16 ಜಿಲ್ಲೆಗಳ 103 ತಾಲ್ಲೂಕುಗಳು ನೆರೆ ಹಾವಳಿ ಅನುಭವಿಸುತ್ತಿದ್ದು, ಅಲ್ಲಿನ ರೈತರ ಜೀವನ ಬೀದಿಪಾಲಾಗಿದೆ. ಅನ್ನ ನೀಡುವ ಕೈಗಳು ಇಂದು ಬೇಡಿ ತಿನ್ನುವ ಸ್ಥಿತಿ ಎದುರಾಗಿದ್ದು, ರೈತರ ಗೋಳು ಕೇಳುವವರಿಲ್ಲ ಎನ್ನುವಂತಾಗಿದೆ.

ಪ್ರವಾಹದಿಂದ ಗುಡಿಕೈಗಾರಿಕೆಗಳ ಮೇಲೆಯೂ ಭಾರಿ ಪರಿಣಾಮ ಬೀರಿದೆ. ಸಣ್ಣ ಪುಟ್ಟ ವಸ್ತುಗಳನ್ನು ಮನೆಯಲ್ಲಿಯೇ ತಯಾರಿಸಿ ಜೀವನ ಸಾಗಿಸುತ್ತಿದ್ದ ಹಲವು ಮನೆಗಳಿಗೆಲ್ಲೆ ನೀರು ನುಗ್ಗಿ ಸಾವಿರಾರು ರೂ  ನಷ್ಟದ ಜೊತೆಗೆ ಅವರ ಕೆಲಸ ಬಂದ್‌ ಆಗಿದೆ. ಬೇರೆ ಉದ್ಯೋಗವೂ ಸಿಗದೇ, ಇತ್ತ ಸರ್ಕಾರದ ಸಮರ್ಪಕ ಪರಿಹಾರವೂ ಸಿಗದೆ ಜನ ಕಂಗಾಲಾಗಿದ್ದಾರೆ.

ಹೈನುಗಾರಿಕೆಯನ್ನೆ ನಂಬಿದ್ದವರ ಸ್ಥಿತಿ ಕೇಳಲೆಬಾರದು. ಹಲವರ  ದನ ಕರುಗಳೆಲ್ಲ ಕೊಚ್ಚಿ ಹೋಗಿ ಅವರ ಜೀವನಾಧಾರ ಕೈಜಾರಿದೆ.  ಉಳಿದವರ ದನ ಕರುಗಳಿಗೆ ಸೂಕ್ತ ಭದ್ರತೆ, ಮೇವು ಸಿಗದೇ ಒದ್ದಾಡುತ್ತಿದ್ದಾರೆ. ಜೀವನೋಪಾಯಕ್ಕೆ ಬರುತ್ತಿದ್ದ ನಿಗದಿತ ಆದಾಯ ಕೈತಪ್ಪಿರುವುದು ಅವರ ಚಿಂತೆಗೆ ಕಾರಣವಾಗಿದೆ.

ನೇಕಾರಿಕೆಯನ್ನೆ ನಂಬಿದವರ ಪಾಡು ಹೇಳತೀರದು. ಮಗ್ಗಗಳೆಲ್ಲ ನೀರು ಪಾಲಾಗಿ ಅವರ ಬದುಕೆ ಅತಂತ್ರ ಸ್ಥಿತಿಯಲ್ಲಿದೆ. ನೇಯ್ದ ಸೀರೆಗಳು ಕೊಚ್ಚಿ ಹೋಗಿದ್ದರೆ,  ಅನ್ನ ನೀಡುವಂತ ಮಗ್ಗಗಳು ನಿರಲ್ಲಿ ನಿಂತಿವೆ. ಇನ್ನೂ ಕೆಲವು  ದಿನಗಳ ಕಾಲ ಅವು ನೀರಲ್ಲೇ ನಿಂತರೆ ಅವರ ಹೊಟ್ಟೆಗೆ ತಣ್ಣೀರು ಬಟ್ಟೆ ಗ್ಯಾರಂಟಿ ಎನ್ನುವ ಸ್ಥಿತಿ ಬಂದೊದಗಿದೆ.

ಜಿಲ್ಲಾಡಳಿತದ ಅಂದಾಜಿನಂತೆ 1763 ಮಗ್ಗಗಳು ಭಾರೀ ಮಳೆಗೆ ಆಹುತಿಯಾಗಿವೆ.  ಒಂದು ಮಗ್ಗ ರೀಪೇರಿಗೆ 50 ಸಾವರಿದಷ್ಟು ಹಣ ಬೇಡುತ್ತದೆ. ಸರ್ಕಾರವೋ ಭಿಕ್ಷೆ ರೂಪದಲ್ಲಿ ತಲಾ 10 ಸಾವಿರ ಹಣಕೊಟ್ಟು ಕೈತೊಳೆದುಕೊಂಡಿದೆ. ಈ ಹಣ ಯಾವುದಕ್ಕೂ ಸಾಲುವುದಿಲ್ಲ ಎಂಬ ಅಳಲು ಜೋರಾದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪನವರು ತಲಾ 25ಸಾವಿರ ಹಣ ನೀಡುವಂತೆ ಆದೇಶಿಸಿದ್ದರು. ಆದರೆ ಅದಿನ್ನು ಕಾಗದಲ್ಲಿದೆಯೇ ಹೊರತು ಜಾರಿಗೆ ಬಂದಿಲ್ಲ. ನೇಕಾರರ ಗೋಳು ನಿಂತಿಲ್ಲ.

ಪ್ರವಾಹದ ಸ್ಥಿತಿ ಒಂದು ಹಂತಕ್ಕೆ ನಿಯಂತ್ರಣಕ್ಕೆ ಬಂದಿದ್ದರೂ, ಸಮರ್ಪಕ ಪರಿಹಾರ ನಿಡುವಲ್ಲಿ ಸರ್ಕಾರಗಳು ವಿಫಲವಾಗಿದೆ. ಇದುವರೆಗೂ ಕೇಂದ್ರ ಸರ್ಕಾರ 1200 ಕೋಟಿ ಹಣ ಬಿಡುಗಡೆ ಮಾಡಿದರೆ ರಾಜ್ಯ ಸರ್ಕಾರ ಹಲವು ಸಾವಿರ ಕೋಟಿ ರೂ ಮಾತ್ರ ಬಿಡುಗಡೆ ಮಾಡಿದೆ. 40-50 ಸಾವಿರ ಕೋಟಿ ರೂಗಳಷ್ಟು ನಷ್ಟವಾಗಿರುವ ಅಂದಾಜಿದ್ದರೂ ಕೇಂದ್ರ ಸರ್ಕಾರಕ್ಕೆ ಜಾಡಿಸಿ ಕೇಳುವ ಧೈರ್ಯ ನಮ್ಮ ರಾಜ್ಯ ಸರ್ಕಾರಕ್ಕಿಲ್ಲದಿರುವುದು ನಮ್ಮೆಲ್ಲರ ದುರಂತವಾಗಿದೆ.

ಪರಿಸ್ಥಿತಿ ಇಷ್ಟು ಭೀಕರವಾಗಿರುವ ಸಂದರ್ಭದಲ್ಲಿ ಕರ್ನಾಟಕದ ಇಬ್ಬರು ಉಪಮುಖ್ಯಮಂತ್ರಿಗಳು ಮಹಾರಾಷ್ಟ್ರ ಚುನಾವಣೆಯ ಕೆಲಸಕ್ಕೆ ನಿಯೋಜಿತರಾಗಿದ್ದಾರೆ.  ಇಲ್ಲಿ ನಮ್ಮದೇ ರಾಜ್ಯದ ಜನರು ಸಾಯುತ್ತಿದ್ದರೂ ಅಲ್ಲಿ ಬಿಜೆಪಿಯನ್ನು ಗೆಲ್ಲಿಸುವುದು ಅವರ ಕರ್ತವ್ಯವಾಗಿರುವುದು ಶೋಚನೀಯ.. ಒಂದೆಡೆ ನಮ್ಮ ಸಂಸದರು ಪ್ರವಾಹ ಪರಿಹಾರ ತರುವಲ್ಲಿ ವಿಫಲವಾಗಿದ್ದರೆ, ಇನ್ನೆಂದೆಡೆ ಜನರ ಕಷ್ಟ ಕೇಳಲೂ ಸಹ ಮುಂದಾಗುತ್ತಿಲ್ಲ.. ಈ ಬಾರಿ ಬೆಳಗಾವಿಯಲ್ಲಿ ನಡೆಯಬೇಕಿದ್ದ ಅಧಿವೇಶನ ಸಹ ಬೆಂಗಳೂರಿಗೆ ಶಿಫ್ಟ್‌ ಆಗಿದೆ.. ಒಟ್ಟಿನಲ್ಲಿ ಉತ್ತರ ಕರ್ನಾಟಕದ ಗೋಳು ನಿಂತಿಲ್ಲ.. ಆದರೆ ಅದು ಆಳುವವರಿಗೆ ಕೇಳುತ್ತಿಲ್ಲ, ಕೇಳಿದರೂ ಅವರು ಇತ್ತ ನೋಡುತ್ತಿಲ್ಲ ಎಂದರೆ ನಿರ್ಲಕ್ಷ್ಯ ಯಾವ ಪ್ರಮಾಣಕ್ಕಿದೆ ನೀವೇ ಊಹಿಸಿ..

ಪ್ರವಾಹದಿಂದ ಮನೆ, ದನ-ಕರುಗಳನ್ನು ಕಳೆದುಕೊಂಡು ಭಾರಿ ನಷ್ಟಕ್ಕಿಡಾಗಿದ್ದೇವೆ. ಸರ್ಕಾರ ವಾಸಿಸಲು ಶೆಡ್ಡುಗಳನ್ನು ನೀಡಿದ್ದರೂ, ಕಾಳು- ಕಡ್ಡಿಗಳೆಲ್ಲ ಪ್ರವಾಹದಲ್ಲಿ ಕೊಚ್ಚಿ ಹೋಗಿ ತಿನ್ನಲು ಅನ್ನ ದೊರೆಯದಂತಾಗಿದೆ. ಇನ್ನೊಂದೆಡೆ ಹಕ್ಕು ಪತ್ರಗಳೆಲ್ಲ ನೀರು ಪಾಲಾಗಿದ್ದು ಸಮಪರ್ಕ ಪರಿಹಾರ ಸಿಗುವ ನಂಬಿಕೆ ಸಹ ಇಲ್ಲ. ಜನರಿಗಿಂತ ಜಾನುವಾರುಗಳ ಸ್ಥಿತಿ ಭೀಕರವಾಗಿದೆ. ನಮಗೀಗ ದಿಕ್ಕು ತೊಚದಂತಾಗಿದೆ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ ಬೆಳಗಾವಿಯ ನಿವಾಸಿ  ಶಿವರಾಜುರವರು…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಹೆಚ್‌.ಡಿ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ...

0
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನ ಭೀತಿಯಿಂದ ನಿರಾಳರಾಗಿದ್ದ ಶಾಸಕ ಹೆ.ಚ್‌ಡಿ ರೇವಣ್ಣ ಅವರಿಗೆ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧನದ ಆತಂಕ ಎದುರಾಗಿದೆ. ಈ ಹಿನ್ನೆಲೆ ನಿರೀಕ್ಷಣಾ ಜಾಮೀನು ಕೋರಿ ರೇವಣ್ಣ...