ವಿಜಯಪುರದ ನಗರದ ಹೊರವಲಯದ ಇಟ್ಟಿಗೆ ಭಟ್ಟಿಯಲ್ಲಿ ಮೂವರು ದಲಿತ ಕಾರ್ಮಿಕರಿಗೆ ಅಮಾನವೀಯವಾಗಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇಟ್ಟಿಗೆ ಭಟ್ಟಿ ಮಾಲೀಕ ಬಸವನಗರದ ಖೇಮು ರಾಠೋಡ, ಈತನ ಮಗ ರೋಹನ್ ಖೇಮು ರಾಠೋಡ, ಸಚಿನ ಮಾನವರ, ವಿಶಾಲ ಜುಮನಾಳ ಮತ್ತು ಕನಕಮೂರ್ತಿ ಗೊಂಧಳಿ ಬಂಧಿತ ಆರೋಪಿಗಳು.
ಕೂಲಿ ಕಾರ್ಮಿಕರಾದ ಸದಾಶಿವ ಮಾದರ, ಸದಾಶಿವ ಬಬಲಾದಿ ಮತ್ತು ಉಮೇಶ ಮಾದರ ಹಲ್ಲೆಗೊಳಗಾದವರು. ಇವರು ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡಲು ನಿರಾಕರಿಸಿದ್ದಕ್ಕೆ ಥಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಕಾರ್ಮಿಕರ ಸೊಂಟ, ಬೆನ್ನು ಮತ್ತು ಅಂಗಾಲಿಗೆ ಗಾಯಗಳಾಗಿದ್ದು, ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ವಿಜಯಪುರ ನಗರದ ಹೊರವಲಯ ಗಾಂಧಿನಗರದಲ್ಲಿರುವ ಇಟ್ಟಿಗೆ ಭಟ್ಟಿಯಲ್ಲಿ ಪ್ರತಿದಿನ 600 ರೂಪಾಯಿ ಕೂಲಿಗೆ ದುಡಿಯುತ್ತಿದ್ದ ಕಾರ್ಮಿಕರು, ಕಳೆದ ಮಕರ ಸಂಕ್ರಾಂತಿಯಂದು ಮನೆಗೆ ತೆರಳಿದ್ದರು. ಕೆಲಸಕ್ಕೆ ಬರುವಂತೆ ಇಟ್ಟಿಗೆ ಭಟ್ಟಿ ಮಾಲೀಕ ಕರೆ ಮಾಡಿದಾಗ ಹಬ್ಬದ ಖರ್ಚಿಗೆ 10 ಸಾವಿರ ರೂಪಾಯಿ ಮುಂಗಡ ಹಣ ನೀಡಲು ಕಾರ್ಮಿಕರು ಕೋರಿದ್ದರು . ಹಣ ಕೊಡುವುದಾಗಿ ಮಾಲೀಕ ಹೇಳಿದ್ದರು. ಜನವರಿ 16ರಂದು ಭಟ್ಟಿಗೆ ಬಂದ ಕಾರ್ಮಿಕರಿಗೆ ಹಣ ನೀಡದೆ ಬೆದರಿಸಿ ಕೆಲಸ ಮಾಡಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡಲು ಒಪ್ಪದೆ ಕಾರ್ಮಿಕರು ತಮ್ಮ ವಸ್ತುಗಳ ಸಹಿತ ಮನೆಗೆ ತೆರಳಲು ಮುಂದಾದಾಗ, ಮಾಲೀಕ ಮತ್ತು ಆತನ ಮಗ ತಡೆದಿದ್ದಾರೆ. ಬಳಿಕ ತಮ್ಮ ಸಹಚರರನ್ನು ಕರೆಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕಾರ್ಮಿಕರು ಹಬ್ಬದ ನಿಮಿತ್ತ ಮುಂಗಡ ಹಣ ಪಡೆದು ಕೆಲಸ ಮಾಡಲು ನಿರಾಕರಿಸಿದ್ದಕ್ಕೆ ಥಳಿಸಲಾಗಿದೆ ಎಂದು ಕೆಲ ವರದಿಗಳು ಹೇಳಿವೆ. ಇನ್ನೂ ಕೆಲ ವರದಿಗಳು, ಇಟ್ಟಿಗೆ ಭಟ್ಟಿ ಮಾಲೀಕ ಹಣ ನೀಡದೆ ಬೆದರಿಸಿ ಕೆಲಸ ಮಾಡಿಸಿದ್ದಾರೆ. ಇದರಿಂದ ನೊಂದ ಕಾರ್ಮಿಕರು ಕೆಲಸ ಮಾಡಲು ನಿರಾಕರಿಸಿ ಮನೆಗೆ ತೆರಳಲು ಮುಂದಾಗಿದ್ದಾರೆ. ಈ ಕಾರಣಕ್ಕೆ ಥಳಿಸಿದ್ದಾರೆ ಎಂದಿವೆ.
ಆರೋಪಿಗಳು ಕಾರ್ಮಿಕರಿಗೆ ಪ್ಲಾಸ್ಟಿಕ್ ಪೈಪ್‌ನಿಂದ ಅಮಾನವೀಯವಾಗಿ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲ್ಲೆಯ ದೃಶ್ಯಗಳು ಅತ್ಯಂತ ಭೀಕರವಾಗಿದೆ.
ಬಂಧಿತರ ವಿರುದ್ದ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆ-2023ರ ಸೆಕ್ಷನ್ 189(2), 191(2), 191(3), 126(2), 127(2), 118(1), 109(1), 352, 351(2) : 190 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ಕೊಡಿಸಲು ಕ್ರಮ – ಸಿಎಂ : ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿದ್ದು, “ವಿಜಯಪುರದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೆ ನಡೆದ ಹಲ್ಲೆ ಅಮಾನವೀಯ ಮಾತ್ರವಲ್ಲ, ಘೋರ ಅಪರಾಧವೂ ಹೌದು. ಬಡ ಕೂಲಿಕಾರ್ಮಿಕರ ಮೇಲೆ ಹಲ್ಲೆ ಮಾಡಿದ ದುರುಳರನ್ನು ಈಗಾಗಲೇ ಬಂಧಿಸಲಾಗಿದ್ದು, ಸೂಕ್ತ ತನಿಖೆ ನಡೆಸಿ, ಅಪರಾಧಿಗಳನ್ನು ಗರಿಷ್ಠ ಶಿಕ್ಷೆಗೆ ಒಳಪಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು” ಎಂದು ಬರೆದುಕೊಂಡಿದ್ದಾರೆ.
ನಾಗರಿಕ ಸಮಾಜ ತಲೆ ತಗ್ಗಿಸುವ ಕೃತ್ಯ-ಸಚಿವ ಸಂತೋಷ್ ಲಾಡ್ : “ವಿಜಯಪುರದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೆ ನಡೆದ ಹಲ್ಲೆ ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸುವ ಕೃತ್ಯ. ಮಾನವೀಯತೆಯ ಅಂಶ ಇರುವ ಯಾರೂ ಈ ಕೃತ್ಯವನ್ನು ಒಪ್ಪಿಕೊಳ್ಳಲಾರರು. ಕಷ್ಟಪಟ್ಟು ದುಡಿಯುವ ಇಂಥ ಅಮಾಯಕ ಜೀವಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಕಿರಾತಕರನ್ನು ಈಗಾಗಲೇ ಬಂಧಿಸಲಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ವಿಜಯಪುರದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೆ ನಡೆದ ಹಲ್ಲೆ ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸುವ ಕೃತ್ಯ. ಮಾನವೀಯತೆಯ ಅಂಶ ಇರುವ ಯಾರೂ ಈ ಕೃತ್ಯವನ್ನು ಒಪ್ಪಿಕೊಳ್ಳಲಾರರು.
ಕಷ್ಟಪಟ್ಟು ದುಡಿಯುವ ಇಂಥ ಅಮಾಯಕ ಜೀವಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಕಿರಾತಕರನ್ನು ಈಗಾಗಲೇ ಬಂಧಿಸಲಾಗಿದ್ದು, ಸೂಕ್ತ ಕಾನೂನು ಕ್ರಮ… pic.twitter.com/7xQNxGK2Q0
— Santosh Lad Official (@SantoshSLadINC) January 20, 2025


