ಮುಸ್ಲಿಮರ ನರಮೇಧಕ್ಕೆ ಕರೆ ನೀಡಿದ್ದ ಆರೋಪದ ಮೇಲೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯೆಯ ವಿರುದ್ಧ ವಿಜಯಪುರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಮುಸ್ಲಿಮರ ವಿರುದ್ಧ ವಿಶೇಷವಾಗಿ ಹಿಜಾಬ್ ಧರಿಸುವ ಹಕ್ಕಿಗಾಗಿ ಹೋರಾಡುತ್ತಿರುವ ಆರು ವಿದ್ಯಾರ್ಥಿನಿಯರ ವಿರುದ್ಧ ಬಹಿರಂಗ ಹಿಂಸಾಚಾರಕ್ಕೆ ಪೂಜಾ ಕರೆ ನೀಡಿದ್ದರು. ಜೊತೆಗೆ 60,000 ಮುಸ್ಲಿಮರನ್ನು ಕೊಲ್ಲುವುದಾಗಿ ಪೂಜಾ ಹೇಳಿದ್ದಾರೆಂಬ ವಿಡಿಯೊವನ್ನು ಹಲವಾರು ವೆರಿಫೈಡ್ ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದರು.
ಸೆಕ್ಷನ್ 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು), 504 (ಶಾಂತಿ ಕದಡುವ ಉದ್ದೇಶ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ ಕುಮಾರ್ ತಿಳಿಸಿದ್ದಾರೆ.
ಪೂಜಾ ಬಂಧನವಾಗಿಲ್ಲ. ‘ಸಕಾಲದಲ್ಲಿ ಅವರನ್ನು ಬಂಧಿಸಲಾಗುವುದು’ ಎಂದು ಎಸ್‌ಪಿ ತಿಳಿಸಿದ್ದಾರೆ. ಆರೋಪಿಯ ವಯಸ್ಸು ಮತ್ತು ಇತರ ವಿವರಗಳು ಲಭ್ಯವಾಗಿಲ್ಲ. ಅವುಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೂಜಾ ವೀರಶೆಟ್ಟಿಯವರ ಭಾಷಣಕ್ಕೆ ಸಂಬಂಧಿಸಿದಂತೆ ವಿರೋಧಗಳು ವ್ಯಕ್ತವಾಗುತ್ತಿದ್ದರೂ ಪ್ರಕರಣ ದಾಖಲಾಗಿರಲಿಲ್ಲ. ಈ ಸಂಬಂಧ ‘ನಾನುಗೌರಿ.ಕಾಂ’ ಎರಡು ದಿನಗಳ ಹಿಂದೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ್‌ಕುಮಾರ್ ಅವರನ್ನು ಸಂಪರ್ಕಿಸಿತ್ತು.
“ಯಾರೂ ಇದುವರೆಗೆ ದೂರು ನೀಡಿಲ್ಲ. ಕಾನೂನು ತಜ್ಞರ ಬಳಿ ಮಾತನಾಡುತ್ತಿದ್ದೇವೆ. ಅವರ ಅಭಿಪ್ರಾಯ ತೆಗೆದುಕೊಂಡು ಸೂಕ್ತ ಕ್ರಮ ಜರುಗಿಸಲಾಗುತ್ತದೆ” ಎಂದು ಎಸ್‌ಪಿ ತಿಳಿಸಿದ್ದರು.
“ಸುಮೊಟೊ ಪ್ರಕರಣವಾದರೂ ದಾಖಲಾಗಬಹುದಿತ್ತು. ಕ್ಷುಲ್ಲಕ ಟ್ವೀಟ್‌ವೊಂದಕ್ಕೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅವರ ಮೇಲೆ ಪ್ರಕರಣ ದಾಖಲಾಗಿದೆ. ಕರ್ನಾಟಕದಂತಹ ರಾಜ್ಯದಲ್ಲಿ ಮುಸ್ಲಿಮರ ನರಹತ್ಯೆಗೆ ಕರೆ ನೀಡಲಾಗಿದೆ. ಹರಿದ್ವಾರದಲ್ಲಿ ನರಹತ್ಯೆಗೆ ಕರೆ ನೀಡಿದ ಬಳಿಕ ಕರ್ನಾಟಕದಲ್ಲಿ ಈ ಘಟನೆ ನಡೆದಿದೆ. ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಘನತೆ ಹಾಳಾಗುತ್ತಿದೆಯಲ್ಲ” ಎಂದು ಪ್ರಶ್ನಿಸಿದಾಗ, “ಈ ಕುರಿತು ತನಿಖೆಯಾಗುತ್ತಿದೆ. ತಜ್ಞರ ಅಭಿಪ್ರಾಯ ತೆಗೆದುಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಆನಂದ್‌ಕುಮಾರ್ ಹೇಳಿದ್ದರು.
ಏನಿದು ಪ್ರಕರಣ?
ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಖಂಡಿಸಿ ವಿಜಯಪುರ ನಗರದಲ್ಲಿ ಬಜರಂಗದಳ, ವಿಎಚ್‌ಪಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ್ದ ವಿಜಯಪುರ ಎಬಿವಿಪಿ ಪ್ರತಿನಿಧಿ ಪೂಜಾ ವೀರಶೆಟ್ಟಿಯವರು ಕೋಮು ಸೌಹಾರ್ದತೆ ಕದಡಲು ಯತ್ನಿಸಿದ್ದರು.
“ನಾವು ಭಾರತದವರು ಎಂಥವರು ಎಂದರೆ ನೀರು ಬೇಡ ಎಂದರೆ ಪಾನಕ ಕೊಡ್ತೀವಿ. ಹಾಲು ಬೇಡ ಅಂದರೆ ಮಜ್ಜಿಗೆ ಕೊಡ್ತೀವಿ. ನೀವು ಏನಾದರೂ ಭಾರತವನ್ನು ಹಿಜಾಬ್‌ಮಯ ಮಾಡಲು ಬಂದರೆ ಶಿವಾಜಿ ಕೈಯಲ್ಲಿನ ಕತ್ತಿ ತಗೊಂಡು ಇಂಚಿಂಚೇ ಕಡಿಯುತ್ತೇವೆ” ಎಂದು ಪ್ರಚೋದನಕಾರಿಯಾಗಿ ಪೂಜಾ ಮಾತನಾಡಿದ್ದರು.
“ಹರ್ಷಾ ಕೊಲೆ ಆರೋಪಿಗಳನ್ನು ಪೊಲೀಸರು 24 ತಾಸುಗಳಲ್ಲಿ ಬಂಧಿಸಿರುವುದು ಖುಷಿ ನೀಡಿದೆ. ಆದರೆ, ಬರಿ ಆರೋಪಿಗಳ ಬಂಧನವಾದರೆ ಸಾಲದು, ಅವರಿಗೆ ತಕ್ಕ ಶಿಕ್ಷೆಯಾಗಬೇಕು. ನಿಮ್ಮ ಕೈಯಲ್ಲಿ ಆಗದಿದ್ದರೆ ನಮ್ಮ ಕೈಗೆ 24 ತಾಸು ಅಲ್ಲ, ಒಂದು ತಾಸು ಅಧಿಕಾರ ಕೊಟ್ಟು ನೋಡಿ, ಆರು ಜನ ಅಲ್ಲ, ಅರವತ್ತು ಸಾವಿರ ಹಿಜಾಬ್‌ಗಳನ್ನು …” ಎಂದು ಪ್ರಚೋದಿಸಿರುವುದು ವಿಡಿಯೊದಲ್ಲಿ ದಾಖಲಾಗಿದೆ. (ಹೀಗೆ ಹೇಳಿದ ತಕ್ಷಣ ಪಕ್ಕದಲ್ಲಿದ್ದ ಮಹಿಳೆಯೊಬ್ಬರು ಪೂಜಾ ವೀರಶೆಟ್ಟಿಯರಿಗೆ ಭಾಷಣ ನಿಲ್ಲಿಸುವಂತೆ ಕೈ ಸನ್ನೆ ಮಾಡುತ್ತಾರೆ. ಪೂಜಾ ಭಾಷಣ ಕೇಳಿ ಪ್ರತಿಭಟನೆಯಲ್ಲಿದ್ದವರು ಉದ್ಘಾರ ಮಾಡುತ್ತಾರೆ.
ಪೂಜಾ ವೀರಶೆಟ್ಟಿ ವಿಡಿಯೊ ವೈರಲ್ ಆಗಿದ್ದು, ಆಲ್ಟ್‌ನ್ಯೂಸ್‌ನ ಸಹ ಸಂಸ್ಥಾಪಕರಾದ ಜುಬೈರ್ ಟ್ವೀಟ್ ಮಾಡಿದ್ದರು. “ಡಿಸೆಂಬರ್ 2021ರಲ್ಲಿ ಹರಿದ್ವಾರದಲ್ಲಿ ನರಮೇಧದ ಕರೆ ನಂತರ, ಬಲಪಂಥೀಯ ಗುಂಪಿನಿಂದ ಕರ್ನಾಟಕದಲ್ಲಿ ಮುಸ್ಲಿಂ ಜನಾಂಗೀಯ ಹತ್ಯೆಗೆ ಮತ್ತೊಂದು ಕರೆಯನ್ನು ಬಹಿರಂಗವಾಗಿ ನೀಡಲಾಗಿದೆ” ಎಂದು ಅವರು ವಿಷಾದಿಸಿದ್ದರು.
After Genocidal call in Haridwar in December 2021, Here's one more open call for Muslim Genocide in Karnataka by Right Wing group after #HijabRow @DgpKarnataka @BSBommai @siddaramaiah @DKShivakumar pic.twitter.com/ZlhFW8eGMc
— Mohammed Zubair (@zoo_bear) February 25, 2022
ಇದೇ ಕಾರ್ಯಕ್ರಮದಲ್ಲಿ ಮಾತನಾಡಿರುವ ದುರ್ಗಾ ವಾಹಿನಿ ಮುಖಂಡರಾದ ಮಂಚಾಲೇಶ್ವರಿ ತೋಣಶ್ಯಾಳ, ‘ಕೇಂದ್ರ, ರಾಜ್ಯದಲ್ಲಿ ನಮ್ಮದೇ ಬಿಜೆಪಿ ಸರ್ಕಾರಗಳಿದ್ದರೂ ಹಿಂದೂಗಳು ಬೀದಿಯಲ್ಲಿ ಹೆಣ ಇಟ್ಟುಕೊಂಡು ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದಿರುವುದು ನಾಚಿಕೆ ಸಂಗತಿಯಾಗಿದೆ‘ ಎಂದಿದ್ದರು.
‘ಹಿಂದೂ ಯುವಕರನ್ನು ಪೋಸ್ಟ್‌ಮಾರ್ಟ್ಂಗೆ ಹಚ್ಚಿದ ಮತಾಂಧರ ಪೋಸ್ಟ್‌ಮಾರ್ಟ್ಂ ಆಗಬೇಕು. ಆಗ ಹಿಂದೂಗಳಿಗೆ ನ್ಯಾಯ ಸಿಗುತ್ತದೆ’ ಎಂದು ಹೇಳಿಕೆ ನೀಡಿದ್ದರು. “ರಾಜ್ಯದಲ್ಲಿ ಹಿಂದೂಗಳ ಒಂದೇ ಒಂದು ಕೂದಲು ಕೊಂಕಾಗದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೋಡಿಕೊಳ್ಳುವ ಭರವಸೆ ನೀಡಬೇಕು. ನಿಮಗೆ ಆ ತಾಕತ್ತು, ದಮ್ ಇಲ್ಲವಾದರೆ ಒಮ್ಮೆ ಉತ್ತರಪ್ರದೇಶಕ್ಕೆ ಹೋಗಿ ಯೋಗಿ ಆದಿತ್ಯಾನಾಥ ಅವರ ಬಳಿ ತರಬೇತಿ ಪಡೆದುಕೊಂಡು ಬನ್ನಿ” ಎಂದು ಸಲಹೆ ನೀಡಿದ್ದರು.
“ಹಿಂದೂಗಳು ರಕ್ತ ಹರಿಸಿ ನಿಮ್ಮನ್ನು ಅಧಿಕಾರದ ಗದ್ದುಗೆ ಮೇಲೆ ಕೂರಿಸಿರುವುದು ಆಪರೇಷನ್ ಕಮಲ ಮಾಡಲಿ ಎಂದಲ್ಲ. ನಮ್ಮ ಆಸೆ ಬಿಜೆಪಿ ಬಾವುಟ ಹಾರಿಸಬೇಕು ಎಂಬುದಲ್ಲ, ಕೇಸರಿ ಬಾವುಟ ಹಾರಿಸಬೇಕು ಎಂಬುದಾಗಿತ್ತು” ಎಂದು ತಿಳಿಸಿದ್ದರು.
ಇದನ್ನೂ ಓದಿರಿ: ಹರ್ಷನ ಜೀವಕ್ಕಿರುವ ಬೆಲೆ ದಲಿತ ವ್ಯಕ್ತಿ ದಿನೇಶನ ಜೀವಕ್ಕಿಲ್ಲವೇ?: ಸುನಿಲ್ ಬಜಿಲಕೇರಿ


