ಛತ್ತೀಸ್‌ಗಢದ ‘ಹಸ್‌ದೇವ್ ಅರಣ್ಯ’ದಲ್ಲಿ ಗುರುವಾರ ಹಿಂಸಾಚಾರ ಭುಗಿಲೆದ್ದಿದ್ದು, ಕಲ್ಲಿದ್ದಲು ಗಣಿಗಾರಿಕೆಗೆ ಮರಗಳನ್ನು ಕಡಿಯುವ ವಿಚಾರದಲ್ಲಿ ಸ್ಥಳೀಯ ಆದಿವಾಸಿಗಳು ಮತ್ತು ಪೊಲೀಸರ ನಡುವೆ ಸಂಘರ್ಷ ಏರ್ಪಟ್ಟಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಘಟನೆಯಲ್ಲಿ ಹಲವಾರು ಪ್ರತಿಭಟನಾಕಾರರು ಮತ್ತು 13 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಕಂದಾಯ ಸಿಬ್ಬಂದಿಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ರಾಜಸ್ಥಾನ ರಾಜ್ಯ ವಿದ್ಯುತ್ ಉತ್ಪಾದನಾ ನಿಗಮ ಲಿಮಿಟೆಡ್ (RRVUNL)ನ ಪಾರ್ಸಾ ಕಲ್ಲಿದ್ದಲು ಬ್ಲಾಕ್ ಗಣಿಗಾರಿಕೆ ಯೋಜನೆಯ ಭಾಗವಾಗಿ ಸುರ್ಗುಜಾ ಜಿಲ್ಲೆಯ ಫತೇಪುರ್ ಮತ್ತು ಸಾಲಿ ಗ್ರಾಮಗಳ ಬಳಿ ಮರಗಳನ್ನು ಕಡಿಯಲು ಸರ್ಕಾರ ಗುರುವಾರ ಮುಂದಾಗಿತ್ತು. ಇದಕ್ಕೆ ಸ್ಥಳೀಯ ಆದಿವಾಸಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕಲ್ಲಿದ್ದಲು ಗಣಿಗಾರಿಕೆಗಾಗಿ ಹಸ್‌ದೇವ್ ಅರಣ್ಯ ವ್ಯಾಪ್ತಿಯ ಆರು ಗ್ರಾಮಗಳ ಸುತ್ತಮುತ್ತಲಿನ ಸುಮಾರು 5,000 ಮರಗಳನ್ನು ಕಡಿಯಲು ನಿರ್ಧರಿಸಲಾಗಿದೆ ಎಂದು ವರದಿಗಳು ಹೇಳಿವೆ.
This is from BJP ruled Chhattisgarh, where Govt is destroying Hasdeo Forest for Adani company mining despite opposition from Tribals
The great Animal & Forest lover Lawrence Bishnoi & his supporters are completely silent 🤐#LawrenceBishnoi
— Veena Jain (@DrJain21) October 18, 2024
ಗುರುವಾರ ಮರಗಳನ್ನು ಕಡಿಯಲು ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸುತ್ತಾರೆ ಎಂದು ತಿಳಿದ ಸ್ಥಳೀಯರು, ಬುಧವಾರ ರಾತ್ರಿಯಿಂದಲೇ ಉದ್ದೇಶಿತ ಮರ ಕಡಿಯುವ ಸ್ಥಳದಲ್ಲಿ ಜಮಾಯಿಸಿದ್ದರು. ಅವರನ್ನು ತಡೆಯಲು ಸುಮಾರು 400 ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಸ್ಥಳೀಯರು ದೊಣ್ಣೆ, ಕತ್ತಿ, ಬಾಣ ಮತ್ತು ಕೊಡಲಿಗಳೊಂದಿಗೆ ಶಸ್ತ್ರಸಜ್ಜಿತರಾಗಿ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿದ ನಂತರ ಹಿಂಸಾಚಾರ ಪ್ರಾರಂಭವಾಯಿತು ಎಂಬ ಆರೋಪವನ್ನು ಸುರ್ಗುಜಾ ಪೊಲೀಸ್ ವರಿಷ್ಠಾಧಿಕಾರಿ ಯೋಗೇಶ್ ಪಟೇಲ್ ನಿರಾಕರಿಸಿದ್ದಾರೆ. “ಗ್ರಾಮಸ್ಥರು ಹಿಂಸಾತ್ಮಕವಾಗಿ ನಮ್ಮ ಮೇಲೆ ಹಲ್ಲೆ ನಡೆಸಿದರು. ಅವರನ್ನು ಎದುರಿಸಲು ಮತ್ತು ಸ್ಥಳದಿಂದ ಚದುರಿಸಲು ನಾವು ಪ್ರತಿಕ್ರಿಯಿಸಿದ್ದೇವೆ” ಎಂದಿದ್ದಾರೆ.
ಪೊಲೀಸ್ ಕಾನ್‌ಸ್ಟೇಬಲ್ ಭೋಲಾರಾಮ್ ರಾಜ್‌ವಾಡೆ ಅವರ ಕಾಲಿಗೆ ಸ್ಥಳೀಯರು ಬಾಣ ಬಿಟ್ಟಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಚಿಕಿತ್ಸೆಗಾಗಿ ರಾಯಪುರಕ್ಕೆ ಕರೆದೊಯ್ಯಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಛತ್ತೀಸ್‌ಗಢದ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. “ಹಸ್‌ದೇವ್ ಅರಣ್ಯದಲ್ಲಿ ಪೊಲೀಸ್ ಬಲವನ್ನು ಹಿಂಸಾತ್ಮಕವಾಗಿ ಬಳಸಿಕೊಳ್ಳುವ ಮೂಲಕ ಆದಿವಾಸಿಗಳ ಅರಣ್ಯ ಮತ್ತು ಭೂಮಿಯನ್ನು ಬಲವಂತವಾಗಿ ಕಬಳಿಸುವ ಪ್ರಯತ್ನವು ಆದಿವಾಸಿಗಳ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಛತ್ತೀಸ್‌ಗಢದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಹಸ್‌ದೇವ್ ಅರಣ್ಯದಲ್ಲಿ ಮರಗಳನ್ನು ಕಡಿಯದಂತೆ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿತ್ತು. ಸರ್ವಾನುಮತ ಎಂದರೆ ಅದಕ್ಕೆ ಬಿಜೆಪಿ ಕೂಡ ಒಪ್ಪಿಗೆ ಸೂಚಿಸಿತ್ತು. ಆದರೆ, ಈಗ ಅಧಿಕಾರಕ್ಕೆ ಬಂದ ತಕ್ಷಣ ಬಿಜೆಪಿ ನಿರ್ಣಯವನ್ನು ಮರೆತಿದೆ. ಹಸ್‌ದೇವ್‌ನ ಮೂಲ ನಿವಾಸಿಗಳ ಮೇಲೆ ದೌರ್ಜನ್ಯ ನಡೆಸುತ್ತಿದೆ” ಎಂದಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಪ್ರತಿಭಟನಾನಿರತ ಸ್ಥಳೀಯ ನಿವಾಸಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. “ಶತಮಾನಗಳಿಂದ ಅರಣ್ಯಗಳ ಮಾಲೀಕರಾಗಿರುವ ಆದಿವಾಸಿಗಳನ್ನು ಅದಾನಿಯ ಗಣಿಗಾಗಿ ಹೊರಹಾಕಲಾಗುತ್ತಿದೆ” ಎಂದು ಹೇಳಿದ್ದಾರೆ.
ಏನಿದು ಕಲ್ಲಿದ್ದಲು ಗಣಿಗಾರಿಕೆ?
ದಶಕದ ಹಿಂದೆ ಹಸ್‌ದೇವ್ ಅರಣ್ಯದಲ್ಲಿ ಸುಮಾರು 5 ಬಿಲಿಯನ್ ಟನ್ ಕಲ್ಲಿದ್ದಲು ನಿಕ್ಷೇಪವಿದೆ ಎಂಬ ಮಾಹಿತಿ ಬಯಲಾಗಿತ್ತು. ಆಗಲೇ ಅದಾನಿಯಂತಹ ಕಂಪನಿಗಳ ಕಣ್ಣು ದಟ್ಟ ಅರಣ್ಯದ ಮೇಲೆ ಬಿದ್ದಿತ್ತು. ಅಂದುಕೊಂಡಂತೆ ಅರಣ್ಯ ಪ್ರದೇಶದಲ್ಲಿ ಸುಮಾರು 23 ಕಲ್ಲಿದ್ದಲು ಗಣಿಗಳು ಪ್ರಾರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು. ಈ ಪೈಕಿ ಐದು ಗಣಿಗಳು ಈಗಾಗಲೇ ಕಾರ್ಯ ನಿರ್ವಹಣೆಯ ವಿವಿಧ ಹಂತಗಳಲ್ಲಿವೆ.
2023ರಲ್ಲಿ ಹಸ್‌ದೇವ್ ಅರಣ್ಯದ ಮಧ್ಯದಲ್ಲಿ ಒಂದು ಗಣಿಯು ಕಾರ್ಯಾರಂಭ ಮಾಡಿದೆ. ಅದಕ್ಕೆ ಪಾರ್ಸಾ ಈಸ್ಟ್ ಕೇಟೆ ಬಸನ್ (ಪಿಇಕೆಬಿ) ಎಂದು ಹೆಸರಿಸಲಾಗಿದೆ. ರಾಜಸ್ಥಾನ ರಾಜ್ಯ ಸರ್ಕಾರದ ವಿದ್ಯುತ್ ಉತ್ಪಾದನಾ ಕಂಪನಿಯಾದ ರಾಜಸ್ಥಾನ ರಾಜ್ಯ ವಿದ್ಯುತ್ ಉತ್ಪಾದನಾ ನಿಗಮ ಲಿಮಿಟೆಡ್ (RVUNL) ಒಡೆತನ ಈ ಗಣಿಯಿಂದ ಕಲ್ಲಿದ್ದಲು ತೆಗೆಯುವ ಪ್ರಕ್ರಿಯೆಯನ್ನು ಅದಾನಿ ಕಂಪನಿಗೆ ಕೊಡಲಾಗಿದೆ. ಹೆಸರಿಗೆ ರಾಜಸ್ತಾನ ವಿದ್ಯುತ್ ನಿಗಮದ ಒಡೆತನ ಮಾಲೀಕತ್ವ ಇದ್ದರೂ, ಗಣಿಗಾರಿಕೆಯ ಎಲ್ಲಾ ಪ್ರಕ್ರಿಯೆಗಳನ್ನು ಅದಾನಿ ಕಂಪನಿ ಮಾಡುತ್ತಿದೆ. 2026ರ ಹೊತ್ತಿಗೆ ಈ ಗಣಿಯ ಕಲ್ಲಿದ್ದಲು ಮುಗಿಯುವ ಸಾಧ್ಯತೆ ಇದೆ.
2020ರಲ್ಲಿ, ರಾಜಸ್ಥಾನ ವಿದ್ಯುತ್ ನಿಗಮ ಕೇಂದ್ರ ಪರಿಸರ ಸಚಿವಾಲಯಕ್ಕೆ ಪತ್ರ ಬರೆದು ಪಿಇಕೆಬಿಯಲ್ಲಿ ಕಲ್ಲಿದ್ದಲು ವೇಗವಾಗಿ ಕ್ಷೀಣಿಸುತ್ತಿದೆ. ಹಾಗಾಗಿ, ಎರಡನೇ ಹಂತದ ಗಣಿಗಾರಿಕೆ ಆರಂಭಕ್ಕೆ ಅನುಮೋದನೆ ಕೋರಿತ್ತು. ಸ್ಥಳೀಯರ ತೀವ್ರ ವಿರೋಧದ ನಡುವೆಯೂ 2022ರಲ್ಲಿ ಎರಡನೇ ಹಂತದ ಗಣಿಗಾರಿಕೆಗೆ ಅನುಮೋದನೆ ನೀಡಲಾಗಿದೆ. ಈಗ ಗಣಿಗಾರಿಕೆ ಪ್ರಾರಂಭಿಸಲು ಮರಗಳನ್ನು ಕಡಿಯಲು ಅಧಿಕಾರಿಗಳು ಮುಂದಾಗಿದ್ದಾರೆ.
ದಕ್ಷಿಣ ಭಾರತದಲ್ಲಿ ಪಶ್ಚಿಮ ಘಟ್ಟಗಳಿದ್ದಂತೆ ಉತ್ತರ ಭಾರತದಲ್ಲಿ ಹಸ್‌ದೇವ್ ಅರಣ್ಯವಿದೆ. ಅದನ್ನು ಉತ್ತರದ ‘ಶ್ವಾಸಕೋಸ’ ಎಂದು ಕರೆಯಲಾಗುತ್ತದೆ. ಶತಮಾನಗಳಿಂದ ಆದಿವಾಸಿಗಳು ಮತ್ತು ಸಾವಿರಾರು ವನ್ಯ ಜೀವಿಗಳ ನೆಲೆಯಾಗಿರುವ ಈ ಅರಣ್ಯವನ್ನು ಆದಿವಾಸಿಗಳು ‘ಪೂಜ್ಯನೀಯವಾಗಿ’ ಕಾಣುತ್ತಾರೆ. ಅಂತಹ ಅರಣ್ಯದ ನಾಶಕ್ಕೆ ಸರ್ಕಾರವೇ ಮುಂದಾಗಿರುವುದು ಆತಂಕದ ವಿಚಾರ.
ಇದನ್ನೂ ಓದಿ : ಜಾರ್ಖಂಡ್ ಚುನಾವಣೆ | ಎನ್‌ಡಿಎ ಸೀಟು ಹಂಚಿಕೆ ಪೂರ್ಣ – ಬಿಜೆಪಿ ಪ್ರತಿಪಾದನೆ


