ದಲಿತರ ಮೇಲಿನ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇದೀಗ ಇಂತಹ ಅಮಾನುಷ ಘಟನೆಗೆ ರಾಜ್ಯದ ಮುಖ್ಯಮಂತ್ರಿಗಳ ತವರು ಜಿಲ್ಲೆಯೇ ಸಾಕ್ಷಿಯಾಗಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಜಾತಿನಿಂದನೆ, ಹಲ್ಲೆ ವಿರುದ್ದ ದೂರು ನೀಡಿದ ದಲಿತ ಕುಟುಂಬಗಳ ಎರಡು ಮನೆಗಳಿಗೆ ಸವರ್ಣೀಯರು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿರುವ ಅಮಾನವೀಯ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಸದ್ಯ 25 ಜನರ ವಿರುದ್ಧ ಹಾವೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ
ಮಾರ್ಚ್ 3ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ನಂದಿಹಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಮಾದಿಗ ಸಮುದಾಯದ ಹೆಮ್ಮವ್ವ ಮಲ್ಲಾಡದ ಹಾಗೂ ಅವರ ಪುತ್ರ ರಮೇಶ ಮಲ್ಲಾಡದ ಪ್ರವೇಶಿಸಲು ಯತ್ನಿಸಿದಾಗ ಕುಪಿತಗೊಂಡ 30-40 ಸವರ್ಣೀಯ ಸಮುದಾಯದ ಗ್ರಾಮಸ್ಥರ ಗುಂಪು ಹೆಮ್ಮವ್ವನ ಮನೆಗೆ ನುಗ್ಗಿ ದಾಳಿ ನಡೆಸಿದ್ದಾರೆ. ಮೇಲ್ಛಾವಣಿಯ ಹೆಂಚುಗಳನ್ನು ಒಡೆದು ಅವರ ಬೈಕನ್ನು ಹಾನಿಗೊಳಿಸಿದ್ದಾರೆ. ತಾಯಿ-ಮಗನ ಮೇಲೆ ಹಲ್ಲೆ ನಡೆಸಿದ್ದಾರೆ.
ಅಲ್ಲದೆ ಭಾನುವಾರ ಸಂಜೆ ದ್ಯಾಮವ್ವ ದೇವಿಯ ಗ್ರಾಮದ ಜಾತ್ರೆಯ ಅಂಗವಾಗಿ ದಲಿತ ಕಾಲೋನಿಯಲ್ಲಿ ಮೆರವಣಿಗೆ ಸಾಗುತ್ತಿದ್ದಾಗ ಅಲ್ಲಿದ್ದ ಕೆಲ ಮಕ್ಕಳು, ಯುವಕರು ಮೆರವಣಿಗೆಯ ಜತೆಗೆ ಕುಣಿದು ಕುಪ್ಪಳಿಸಲು ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು, ದಲಿತರು ಮೆರವಣಿಗೆಯಲ್ಲಿ ಸೇರಬಾರದು ಎಂದು ತಾಕೀತು ಮಾಡಿದ್ದಾರೆ. ಜಾತಿನಿಂದನೆ ನಡೆಸಿ ರಮೇಶ್ ಮೇಲೆ ಮತ್ತೆ ಹಲ್ಲೆ ನಡೆಸಲಾಗಿದೆ. ಇದು ಎರಡೂ ಕಡೆಯಿಂದ ಜಗಳಕ್ಕೆ ಕಾರಣವಾಗಿದೆ. ಇದರಿಂದ ನೊಂದ ದಲಿತ ಕುಟುಂಬವು ಸ್ವಾಭಿಮಾನಿ ದಲಿತ ಶಕ್ತಿ ಸಂಘಟನೆಯ ನೆರವಿನೊಂದಿಗೆ ಪೊಲೀಸರು ದೂರು ನೀಡಿದೆ.
ಇದರಿಂದ ಸವರ್ಣೀಯರು ರೊಚ್ಚಿಗೆದ್ದು ಭಾನುವಾರ ರಾತ್ರಿ 12 ಗಂಟೆ ಸಮಯದಲ್ಲಿ ದೂರು ನೀಡಿದ ಕುಟುಂಬದ ಮನೆಗೆ ಬೆಂಕಿ ಹಚ್ಚಿದ್ದಾರೆ. ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಪ್ರಕಾರ, ಸುಮಾರು 30 ಗ್ರಾಮಸ್ಥರು ದಲಿತರ ಕಾಲೋನಿಗೆ ನುಗ್ಗಿ ಮನೆಗಳಿಗೆ ಮರದ ದಿಮ್ಮಿಗಳನ್ನು ಎಸೆದು ಪೆಟ್ರೋಲ್ ಸುರಿದಿದ್ದಾರೆ. ಅವರು ಮೊದಲ ಮನೆಗೆ ಬೆಂಕಿ ಹಚ್ಚಿದ್ದು, ಬೆಂಕಿಯು ಪಕ್ಕದ ಮನೆಗೂ ಹರಡಿದೆ. ನಂತರ ಅವರು ಓಡಿ ಹೋಗಿದ್ದಾರೆ. ಆದರೆ ಹೊಗೆಯಿಂದಾಗಿ ಕುಟುಂಬಸ್ಥರು ಮನೆಯಿಂದ ಹೊರಬಂದಿದ್ದಾರೆ. ಎರಡೂ ಮನೆಯಲ್ಲಿದ್ದ ಒಟ್ಟು 12 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಮನೆಗಳು ಸುಟ್ಟು ಹೋಗಿವೆ. ಇದೀಗ ಅವರೆಲ್ಲ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸಂಬಂಧಿಕರ ಮನೆಗಳಲ್ಲಿ ವಾಸವಾಗಿದ್ದಾರೆ.
ಈ ಬಗ್ಗೆ ಸಂತ್ರಸ್ತೆ ಹೆಮ್ಮವ್ವ ಮಲ್ಲಾಡದ ಮಾತನಾಡಿದ್ದು, ”ದಶಕಗಳಿಂದ ದಲಿತ ಸಮುದಾಯಕ್ಕೆ ದೇವಸ್ಥಾನ ಪ್ರವೇಶಿಸಲು ಅವಕಾಶವಿಲ್ಲ, ಆದರೆ ಅದು ನಮ್ಮ ಹಕ್ಕು ಎಂದು ದೇವಸ್ಥಾನ ಪ್ರವೇಶಿಸಿದೆವು. ಆದರೆ ಮೇಲ್ವರ್ಗದ ಗ್ರಾಮಸ್ಥರು ಮನೆಯ ಮೇಲ್ಛಾವಣಿಯ ಹೆಂಚು ಮತ್ತು ಬೈಕ್‌ಗೆ ಹಾನಿ ಮಾಡಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಆನಂತರ ಮನೆಗೆ ಬೆಂಕಿ ಹಚ್ಚಿದ್ದಾರೆ. ಗ್ರಾಮದ ದಲಿತರು ಗೌರವಯುತವಾಗಿ ಬದುಕಲು ರಕ್ಷಣೆ ನೀಡುವಂತೆ ಪೊಲೀಸರಿಗೆ ಒತ್ತಾಯಿಸಿದ್ದೇನೆ” ಎಂದು ಹೇಳಿದರು.
ಘಟನೆ ನಂತರ 30 ಸವರ್ಣೀಯ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 143 (ಕಾನೂನು ಬಾಹಿರ ಸಭೆ), 147 (ಗಲಭೆ), 148 (ಮಾರಕ ಆಯುಧದಿಂದ ಗಲಭೆ), 341(ತಪ್ಪಾದ ಸಂಯಮ), 451(ಅಪರಾಧ ಮಾಡಲು ಮನೆಗೆ ನುಗ್ಗುವುದು), 323(ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 354 (ದಾಳಿ) 504 (ಉದ್ದೇಶಪೂರ್ವಕ ಹಾನಿ) ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆಯಲ್ಲಿ ದಲಿತ ಸಮುದಾಯಗಳ ಪರ ನಿಂತ ಸ್ವಾಭಿಮಾನಿ ದಲಿತ ಶಕ್ತಿಯ ಮುಖಂಡರಾದ ಶಿವಲಿಂಗಂರವರಿಗೂ ಗ್ರಾಮದ ಸವರ್ಣೀಯರು ಕೊಲೆ ಬೆದರಿಕೆ ಹಾಕಿದ್ದಾರೆ. ಫೋನ್ ಕರೆ ಮತ್ತು ಮೆಸೇಜ್‌ಗಳ ಮೂಲಕ ಇಡೀ ಕುಟುಂಬವನ್ನು ಮುಗಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಕುರಿತು ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಸೂಕ್ತ ಕ್ರಮಕ್ಕೆ ಸಂಸದ ಎಲ್ ಹನುಮಂತಯ್ಯ ಆಗ್ರಹ
“ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ನಂದಿಹಳ್ಳಿಯಲ್ಲಿ ಮಾದಿಗ ಸಮುದಾಯದ ಮೇಲೆ ನಡೆದಿರುವ ದೌರ್ಜನ್ಯ ಹಾಗೂ ಹಲ್ಲೆ ಪ್ರಕರಣ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಮಾತನಾಡಿದ್ದೇನೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದ್ದೇನೆ. ಈ ಸಂಬಂಧ ಜಿಲ್ಲೆಯಲ್ಲಿ ನಡೆಯುತ್ತಿರುವ ಜಾತಿ ದೌರ್ಜನ್ಯಗಳ ಕುರಿತು ನಾಳೆ(ಮಾ.8) ಪೊಲೀಸ್ ಮಹಾ ನಿರ್ದೇಶಕ(ಡಿಜಿ)ರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ಹಳ್ಳಿಗಳಲ್ಲಿ ದಲಿತ ಸಮುದಾಯ ಕನಿಷ್ಠ ಮಟ್ಟದ ಜೀವನ ನಡೆಸುವುದಕ್ಕೂ ಬಲಿಷ್ಠ ಸಮುದಾಯ ಅಡ್ಡಿಪಡಿಸುತ್ತಿರುವ ಪ್ರಕರಣಗಳು ರಾಜ್ಯಾದ್ಯಂತ ನಿರಂತರವಾಗಿ ನಡೆಯುತ್ತಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು” ಎಂದು ರಾಜ್ಯಸಭಾ ಸದಸ್ಯರಾದ ಎಲ್ ಹನುಮಂತಯ್ಯ ತಿಳಿಸಿದ್ದಾರೆ.
“ಗ್ರಾಮದಲ್ಲಿ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಸಶಸ್ತ್ರ ಮೀಸಲು (ಡಿಎಆರ್) ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಘಟನೆಯ ನಂತರ ಎಲ್ಲಾ ಆರೋಪಿಗಳು ತಲೆಮರೆಸಿಕೊಂಡಿದ್ದರು. ಈಗ ಇಬ್ಬರು ಶರಣಾಗಿದ್ದಾರೆ. ಅವರನ್ನು ವಿಚಾರಣೆ ನಡೆಸುತ್ತಿದ್ದು, ಉಳಿದವರಿಗಾಗಿ ಶೋಧ ನಡೆಸುತ್ತಿದ್ದೇವೆ” ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಈ ರೀತಿಯಾಗಿ ಸರಣಿ ದಲಿತ ದೌರ್ಜನ್ಯಗಳು ವರದಿಯಾಗಿದ್ದರೂ ಪೊಲೀಸರಾಗಲಿ, ಜಿಲ್ಲಾಡಳಿತವಾಗಿ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಹಾಗಾಗಿಯೇ ಆರೋಪಿಗಳು ಶನಿವಾರದಿಂದ ಮಂಗಳವಾರ ರಾತ್ರಿವರೆಗೂ ದೌರ್ಜನ್ಯದ ಮೇಲೆ ದೌರ್ಜನ್ಯ ನಡೆಸಿದ್ದಾರೆ. ದಲಿತರ ಸಹಾಯಕ್ಕೆ ಬಂದವರಿಗೂ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಕುರಿತು ಸಿಎಂ ಆಗಲಿ, ಇತರ ಸ್ಥಳೀಯ ಮುಖಂಡರಾಗಲಿ ದನಿಯೆತ್ತಿಲ್ಲ. ಒಟ್ಟಾರೆಯಾಗಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಜೀವಹಾನಿಗಳು ಸಂಭವಿಸುವ ಸಾಧ್ಯತೆಯಿದ್ದು ಹಾವೇರಿ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ತನಿಖೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಬೇಕಿದೆ. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕಿದೆ.
ಇದನ್ನೂ ಓದಿ; ‘ಬಿಬಿಸಿಯಲ್ಲಿ ಜಾತಿ ತಾರತಮ್ಯ ಅನುಭವಿಸಿದೆ’; ನ್ಯೂಯಾರ್ಕ್ ಟೈಮ್ಸ್‌ನೊಂದಿಗೆ ನೋವು ಹಂಚಿಕೊಂಡ ದಲಿತ ಪತ್ರಕರ್ತೆ ಮೀನಾ