ವಿವಾದಿತ ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಸೋಮವಾರ ಉಲ್ಭಣಿಸಿದ ಹಿಂಸಾಚಾರದಲ್ಲಿ ಅಸ್ಸಾಂನ ಆರು ಪೊಲೀಸರು ಹತ್ಯೆಯಾಗಿದ್ದಾರೆ ಎಂದು ಸಿಎಂ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ. ಇನ್ನೊಂದೆಡೆ ಕೊಲಸಿಬ್ ಗಡಿಯನ್ನು ದಾಟಿದ ಅಸ್ಸಾಂ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿನ ವಾಹನಗಳನ್ನು ಧ್ವಂಸಗೊಳಿಸಿ ಗುಂಡು ಹಾರಿಸಿದರು ಮಿಜೋರಾಂ ಪೊಲೀಸರು ಆರೋಪಿಸಿದ್ದಾರೆ.
ಆರು ಪೊಲೀಸರ ಹತ್ಯೆಯೊಂದಿಗೆ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕಾಚಾರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ ಕೂಡ ಗುಂಡು ತಗುಲಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಗೃಹ ಸಚಿವ ಅಮಿತ್ ಶಾರವರು ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
“ಮಿಜೋರಾಂ ಪೊಲೀಸರು ಅಸ್ಸಾಂ ಪೊಲೀಸ್ ಸಿಬ್ಬಂದಿಯ ವಿರುದ್ಧ ಲೈಟ್ ಮೆಷಿನ್ ಗನ್ ಬಳಸಿದ್ದಾರೆ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯಗಳು ಸಿಕ್ಕಿವೆ. ಇದು ದುಃಖಕರ, ದುರದೃಷ್ಟಕರ. ಇದು ಅವರ ಉದ್ದೇಶ ಮತ್ತು ಪರಿಸ್ಥಿತಿಯನ್ನು ತಿಳಿಸುತ್ತದೆ” ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಟ್ವೀಟ್ ಮಾಡಿದ್ದಾರೆ.
ಮಿಜೋರಾಂ ರಾಜ್ಯವು ಲೈಲಾಪುರದಲ್ಲಿ ರಿಸರ್ವ್ ಫಾರೆಸ್ಟ್ ಪ್ರದೇಶವನ್ನು ನಾಶಪಡಿಸಿ ರಸ್ತೆ ನಿರ್ಮಿಸುತ್ತಿದೆ ಮತ್ತು ಸಶಸ್ತ್ರ ಶಿಬಿರವನ್ನು ಸ್ಥಾಪಿಸುತ್ತಿದೆ ಎಂದು ಅಸ್ಸಾಂ ಆರೋಪಿಸಿದೆ. ಅಲ್ಲಿನ ದುಷ್ಕರ್ಮಿಗಳು ತಮ್ಮ ಪೊಲೀಸ್ ಪಡೆಗಳ ಮೇಲೆ ಮತ್ತು ಮಿಜೋರಾಂ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಅಸ್ಸಾಂ ತಿಳಿಸಿದೆ.
ಅಸ್ಸಾಂ ಪೊಲೀಸರು ಕೊಲಸಿಬ್ ಗಡಿಯನ್ನು ದಾಟಿ ಪೊಲೀಸ್ ಪೋಸ್ಟ್ ಮೇಲೆ ದಾಳಿ ನಡೆಸಿದ ನಂತರ ಹಿಂಸಾಚಾರ ಭುಗಿಲೆದ್ದಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿಯಲ್ಲಿನ ವಾಹನಗಳ ಮೆಲೂ ಅಸ್ಸಾಂ ಪೊಲೀಸರು ಗುಂಡು ಹಾರಿಸಿದರು ಎಂದು ಮಿಜೋರಾಂ ಪೊಲೀಸರು ಆರೋಪಿಸಿದ್ದಾರೆ.
ಗಡಿ ವಿವಾದವೇನು?
ಮಿಜೋರಾಂನ ಮೂರು ಜಿಲ್ಲೆಗಳಾದ ಐಜಾಲ್, ಕೋಲಾಸಿಬ್ ಮತ್ತು ಮಾಮಿತ್ ಅಸ್ಸಾಂನ ಕ್ಯಾಚರ್, ಹೈಲಕಂಡಿ ಮತ್ತು ಕರಿಮಗಂಜ್ ಜಿಲ್ಲೆಗಳೊಂದಿಗೆ 164.6 ಕಿ.ಮೀ ಉದ್ದದ ರಾಜ್ಯ ಗಡಿಯನ್ನು ಹಂಚಿಕೊಂಡಿವೆ. ಈ ಪ್ರದೇಶವು ಹಲವು ವರ್ಷಗಳಿಂದ ಘರ್ಷಣೆಯಲ್ಲಿ ಮುಳುಗಿದೆ. ಸ್ಥಳೀಯರು ಮತ್ತು ಭದ್ರತಾ ಪಡೆಗಳು ಒಳನುಸುಳುವಿಕೆ ಬಗ್ಗೆ ಪದೇ ಪದೇ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ.
ಗಡಿ ಗುರುತಿಸುವಿಕೆಯನ್ನು ಎದುರಿಸಲು ಮಿಜೋರಾಂ ಸರ್ಕಾರ ಗಡಿ ಆಯೋಗವನ್ನು ರಚಿಸಿದೆ. ಅಸ್ಸಾಂ ರಾಜ್ಯವು ಮೇಘಾಲಯ ಮತ್ತು ಅರುಣಾಚಲ ಪ್ರದೇಶದೊಂದಿಗೆ ಗಡಿ ವಿವಾದಗಳನ್ನು ಹೊಂದಿದೆ.
ಇದನ್ನೂಓದಿ; ಜನಸ್ಪಂದಿ ಜನಸಂಖ್ಯಾ ನೀತಿ ವರ್ಸ್‌ಸ್ ದಮನಕಾರಿ ಜನಸಂಖ್ಯಾ ನೀತಿ


