ವಿದ್ಯಾರ್ಥಿ ನಾಯಕ ಹಾಗೂ ಸ್ವತಂತ್ರ ರಾಜಕಾರಣಿ ಷರೀಫ್ ಉಸ್ಮಾನ್ ಹಾದಿ ಅವರ ಸಾವಿನ ಬಳಿಕ ಬಾಂಗ್ಲಾ ದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ.
ಹಿಂಸಾತ್ಮಕ ಪ್ರತಿಭಟನೆಯ ಮೂರನೇ ದಿನವಾದ ಶನಿವಾರ, ಪ್ರತಿಭಟನಾಕಾರರು ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ನಾಯಕನ ಮನೆಗೆ ಹೊರಗಿನಿಂದ ಬೀಗ ಹಾಕಿ ಬೆಂಕಿ ಹಚ್ಚಿದ್ದು, ಅವರ ಏಳು ವರ್ಷದ ಮಗಳು ಸಜೀವ ದಹನಗೊಂಡಿದ್ದಾರೆ. ಇತರ ಇಬ್ಬರು ಹೆಣ್ಣುಮಕ್ಕಳು ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ.
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಬಿಎನ್‌ಪಿ ನಾಯಕ ಬಿಲಾಲ್ ಹುಸೈನ್ ಅವರ ಲಕ್ಷ್ಮಿಪುರದ ಮನೆಗೆ ಶನಿವಾರ ಮುಂಜಾನೆ ಬೆಂಕಿ ಹಚ್ಚಲಾಗಿದೆ.
ಹುಸೈನ್ ಭಬಾನಿಗಂಜ್ ಯೂನಿಯನ್ ಬಿಎನ್‌ಪಿಯ ಸಹಾಯಕ ಸಂಘಟನಾ ಕಾರ್ಯದರ್ಶಿ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಹುಸೈನ್ ಅವರ ಪುತ್ರಿ ಆಯಿಷಾ ಅಕ್ತರ್ ಸುಟ್ಟು ಕರಕಲಾಗಿದ್ದು, ಅವರ ಇನ್ನಿಬ್ಬರು ಪುತ್ರಿಯರಾದ ಸಲ್ಮಾ ಅಕ್ತರ್ (16) ಮತ್ತು ಸಮಿಯಾ ಅಕ್ತರ್ (14) ಗಂಭೀರ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಬಿಲಾಲ್ ಅವರು ಲಕ್ಷ್ಮಿಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಅವರ ಪುತ್ರಿಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಢಾಕಾಗೆ ಕಳುಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಷರೀಫ್ ಉಸ್ಮಾನ್ ಹಾದಿ ಸಿಂಗಾಪುರದಲ್ಲಿ ನಿಧನರಾದರು ಎಂಬ ಸುದ್ದಿ ಹೊರಬಿದ್ದ ನಂತರ, ಕಳೆದ ಗುರುವಾರ ರಾತ್ರಿ ರಾಜಧಾನಿ ಢಾಕಾ ಸೇರಿದಂತೆ ಬಾಂಗ್ಲಾದೇಶದ ಹಲವು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಎರಡು ಪ್ರಮುಖ ಮಾಧ್ಯಮ ಸಂಸ್ಥೆಗಳಾದ ಡೈಲಿ ಸ್ಟಾರ್ ಮತ್ತು ಪ್ರೋಥೋಮ್ ಅಲೋ ಕಟ್ಟಡಗಳಿಗೆ ಪ್ರತಿಭಟನಾ ನಿರತರು ಬೆಂಕಿ ಹಚ್ಚಿದ್ದಾರೆ. ಬಾಂಗ್ಲಾದೇಶದ ರಾಷ್ಟ್ರಪಿತ ಶೇಖ್ ಮುಜಿಬುರ್ ರೆಹಮಾನ್ ಅವರ ಮನೆ ‘ಧನ್ಮೊಂಡಿ 32’ ಮೇಲೆ ಮತ್ತೊಮ್ಮೆ ದಾಳಿ ನಡೆಸಿದ್ದಾರೆ.
ರಾಜ್‌ಶಾಹಿ ಮತ್ತು ಚಿತ್ತಗಾಂಗ್‌ನಲ್ಲಿ ಭಾರತೀಯ ರಾಯಭಾರ ಕಚೇರಿಗಳ ವಿರುದ್ಧ ಪ್ರತಿಭಟನಾ ಮೆರವಣಿಗೆಗಳು ನಡೆದಿವೆ.
‘ಹಾದಿ’ ‘ಭಾರತೀಯ ಆಧಿಪತ್ಯ’ ಎಂದು ಕರೆಯುತ್ತಿದ್ದದ್ದಕ್ಕೆ ವಿರುದ್ಧವಾಗಿ ತೀವ್ರವಾದ ನಿಲುವುಗಳಿಗೆ ಹೆಸರಾಗಿದ್ದರು. ಅವರನ್ನು ಗುಂಡಿಟ್ಟು ಕೊಂದವರು ದಾಳಿಯ ನಂತರ ಭಾರತಕ್ಕೆ ಆಗಮಿಸಿದ್ದಾರೆ ಆರೋಪಿಸಲಾಗಿದೆ. ಆದರೆ, ಈ ಆರೋಪಕ್ಕೆ ಇದುವರೆಗೆ ಅಧಿಕಾರಿಗಳು ಯಾವುದೇ ದೃಢವಾದ ಪುರಾವೆಗಳನ್ನು ನೀಡಿಲ್ಲ.
ಅಶಾಂತಿ ಹರಡುತ್ತಿದ್ದಂತೆ, ಕನಿಷ್ಠ ಒಂದು ಕೋಮು ಘಟನೆ ವರದಿಯಾಗಿದೆ. ಪೊಲೀಸರ ಪ್ರಕಾರ, ಮೈಮೆನ್‌ಸಿಂಗ್‌ನಲ್ಲಿ ದೇವದೂಷಣೆಯ ಆರೋಪದ ಮೇಲೆ ಗುಂಪೊಂದು ಹಿಂದೂ ವ್ಯಕ್ತಿಯನ್ನು ಥಳಿಸಿ ಕೊಂದಿದೆ.
ಡಿಸೆಂಬರ್ 12ರಂದು ಮಧ್ಯ ಢಾಕಾದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ ಹಾದಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ವಿದೇಶಕ್ಕೆ ವಿಮಾನದಲ್ಲಿ ಸಾಗಿಸಲಾಗಿತ್ತು. ಡಿಸೆಂಬರ್ 18ರಂದು ಹಾದಿ ಸಾವನ್ನಪ್ಪಿದರು. ಹಾದಿ ತೀವ್ರಗಾಮಿ ವೇದಿಕೆಯ ಇಂಕ್ವಿಲಾಬ್ ಮೊಂಚೊದ ಪ್ರಮುಖ ವ್ಯಕ್ತಿಯಾಗಿದ್ದರು.
ಹಾದಿ ಅವರ ನಿಧನವನ್ನು ಘೋಷಿಸಿದ ಬಾಂಗ್ಲಾದೇಶದ ಮಧ್ಯಂತರ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್, ಒಂದು ದಿನ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ್ದರು ಮತ್ತು ದೇಶಾದ್ಯಂತ ಧಾರ್ಮಿಕ ಸ್ಥಳಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ಆಯೋಜಿಸಲು ಆದೇಶಿಸಿದ್ದರು.
ಹಾದಿ ಅವರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ ಢಾಕಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿದೆ.


