ಹೋಳಿ ಹಬ್ಬದಂದು ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯ ಪರಿಣಾಮವಾಗಿ ಸರ್ಕಾರ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದು, ಕಾನೂನು, ಸುವ್ಯವಸ್ಥೆ ಕಾಪಾಡಲು ಭದ್ರತಾ ಪಡೆಗಳ ಹೆಚ್ಚಿನ ತುಕಡಿಗಳನ್ನು ನಿಯೋಜಿಸಿದೆ. ಘಟನೆಗೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ (ಮಾ.14) ಸೈಂಥಿಯಾ ಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಎರಡೂ ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿ ಹೊಡೆದಾಡಿಕೊಂಡಿವೆ. ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಘರ್ಷಣೆಯಲ್ಲಿ ಕೆಲ ಸ್ಥಳೀಯರು ಗಾಯಗೊಂಡಿದ್ದಾರೆ. ಪೊಲೀಸರ ಲಘು ಲಾಠಿ ಪ್ರಹಾರದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ವರದಿಗಳು ಹೇಳಿವೆ.
ನಂತರ, ವದಂತಿ ಹರಡುವಿಕೆ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಬಂಗಾಳ ಗೃಹ ಇಲಾಖೆ ಸೈಂಥಿಯಾದ ಐದು ಗ್ರಾಮ ಪಂಚಾಯತ್ ಪ್ರದೇಶಗಳಲ್ಲಿ ಮಾರ್ಚ್ 17 ರವರೆಗೆ ಇಂಟರ್ನೆಟ್ ಮತ್ತು ವಾಯ್ಸ್-ಓವರ್-ಇಂಟರ್ನೆಟ್ ಸೌಲಭ್ಯಗಳನ್ನು ಸ್ಥಗಿತಗೊಳಿಸಿದೆ. ಧ್ವನಿ ಕರೆಗಳು ಮತ್ತು ಎಸ್‌ಎಂಎಸ್ ಕಾರ್ಯನಿರ್ವಹಿಸಲಿವೆ ಎಂದು ಸರ್ಕಾರದ ಆದೇಶ ಸ್ಪಷ್ಟಪಡಿಸಿದೆ. ಪತ್ರಿಕೆಗಳ ಮೇಲೆ ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ.
ಸೈಂಥಿಯಾ ಪುರಸಭೆ, ಹತೋರಾ, ಮಠಪಾಲ್ಸಾ, ಹರಿಸರ, ಫರಿಯಾಪುರ ಮತ್ತು ಫುಲೂರ್ ಸೇರಿದಂತೆ ಗಲಭೆ ನಡೆದಿರುವ ಪ್ರದೇಶಗಳಲ್ಲಿ ಬಿಎನ್‌ಎಸ್‌ಎಸ್ ಕಾಯ್ದೆಯ ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಯಾವುದೇ ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿಲ್ಲ. ಗಲಭೆಗೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ನಿನ್ನೆ ಸಂಜೆಯಿಂದ ಪರಿಸ್ಥಿತಿ ನಿಯಂತ್ರಣದಲ್ಲಿದೆ. ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಎರಡೂ ಕಡೆಯ ಕೆಲವು ಜನರು ಗಂಭೀರವಾಗಿಲ್ಲದ ಗಾಯಗಳಿಗೆ ಒಳಗಾಗಿದ್ದಾರೆ. ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪ್ರದೇಶದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ” ಎಂದು ಬಿರ್ಭುಮ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೇಂದ್ರ ಸಚಿವ ಹಾಗೂ ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್, ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಪರಿಸ್ಥಿತಿ ಹದೆಗೆಟ್ಟಿದೆ ಎಂದು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವನ್ನು ಟೀಕಿಸಿದ್ದಾರೆ. ಶುಕ್ರವಾರದ ಘಟನೆಗೆ ಸಂಬಂಧಿಸಿದಂತೆ ಹಿಂದೆ ಜಿಲ್ಲೆಯಲ್ಲಿ ಕಚ್ಚಾ ಬಾಂಬ್‌ಗಳು ಪತ್ತೆಯಾಗಿದ್ದನ್ನು ಉಲ್ಲೇಖಿಸಿ, ಸರ್ಕಾರ ಬಿರ್ಭೂಮ್ ಅನ್ನು “ಸ್ಫೋಟ ಕಾರ್ಖಾನೆ”ಯನ್ನಾಗಿ ಪರಿವರ್ತಿಸಿದೆ ಎಂದು ಮಜುಂದಾರ್ ಹೇಳಿದ್ದಾರೆ.
“ಇಂತಹ ಘಟನೆಗಳು ಮೊದಲು ಅಲ್ಲಿ ನಡೆದಿವೆ. ತೃಣಮೂಲ ನಾಯಕರನ್ನು ಬಿರ್ಭೂಮ್‌ನಲ್ಲಿ ಬಂಧಿಸಲಾಗಿದೆ ಮತ್ತು ಅವರ ಮೇಲೆ ಜೆಲಾಟಿನ್ ಕಡ್ಡಿಗಳೊಂದಿಗೆ ಸಿಕ್ಕಿಬಿದ್ದಿದ್ದಾರೆ. ಸ್ಫೋಟಕಗಳು ಸಹ ಕಂಡುಬಂದಿವೆ. ಸರ್ಕಾರ ಬಿರ್ಭೂಮ್ ಅನ್ನು ಸ್ಫೋಟಕ ಕಾರ್ಖಾನೆಯನ್ನಾಗಿ ಮಾಡಿದೆ” ಎಂದು ಮಜುಂದಾರ್ ಹೇಳಿರುವುದಾಗಿ ANI ವರದಿ ಮಾಡಿದೆ.
ಮಸೀದಿಗೆ ಸುತ್ತವರಿದಿದ್ದ ಟಾರ್ಪಾಲ್ ಮೇಲೆ ಹೋಳಿ ಬಣ್ಣ; ಜೈ ಶ್ರೀ ರಾಮ್ ಬರವಣಿಗೆ


