ರಾಜಸ್ಥಾನ ವಿಧಾನಸಭೆ ಅಧಿವೇಶನದಲ್ಲಿ ನಡೆಯಲಿರುವ ವಿಶ್ವಾಸಮತ ಯಾಚನೆ ವೇಳೆ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುವಂತೆ ಬಿಎಸ್ಪಿ ಚಿಹ್ನೆಯ ಮೇಲೆ ರಾಜಸ್ಥಾನ ವಿಧಾನಸಭೆಗೆ ಆಯ್ಕೆಯಾದ 6 ಶಾಸಕರನ್ನು ನಾವು ಕೇಳಿದ್ದೇವೆ. ಅವರು ಹಾಗೆ ಮಾಡದಿದ್ದರೆ, ಅವರ ಪಕ್ಷದ ಸದಸ್ಯತ್ವವನ್ನು ರದ್ದುಗೊಳಿಸಲಾಗುತ್ತದೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ, ಚುನಾವಣಾ ಫಲಿತಾಂಶಗಳ ನಂತರ ಬಿಎಸ್ಪಿ ತನ್ನ ಎಲ್ಲ 6 ಶಾಸಕರಿಂದ ಕಾಂಗ್ರೆಸ್‌ಗೆ ಬೇಷರತ್ ಬೆಂಬಲ ನೀಡಿತ್ತು. ದುರದೃಷ್ಟವಶಾತ್ ಸಿಎಂ ಗೆಹ್ಲೋಟ್ ಅವರ ದುರುದ್ದೇಶದಿಂದ ಆ ಆರು ಶಾಸಕರನ್ನು ಅಸಂವಿಧಾನಿಕವಾಗಿ ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದರು. ಇದರಿಂದ ಬಿಎಸ್‌ಪಿಗೆ ನಷ್ಟವಾಗಿದೆ ಎಂದು ಅವರು ದೂರಿದ್ದಾರೆ.
We have asked the 6 MLAs, who are elected to Rajasthan Assembly on the symbol of BSP, to vote against Congress in any proceedings to be held during Rajasthan Assembly Session. If they don't do so, their party membership will be cancelled: BSP Chief Mayawati pic.twitter.com/3JVSssPVfg
— ANI UP (@ANINewsUP) July 28, 2020
ಈ ಕುರಿತು ಬಿಎಸ್ಪಿ ಮೊದಲೇ ನ್ಯಾಯಾಲಯಕ್ಕೆ ಹೋಗಬಹುದಿತ್ತು. ಆದರೆ ನಾವು ಕಾಂಗ್ರೆಸ್ ಪಕ್ಷ ಮತ್ತು ಸಿಎಂ ಅಶೋಕ್ ಗೆಹ್ಲೋಟ್ ಅವರಿಗೆ ಪಾಠ ಕಲಿಸಲು ಸಮಯಕ್ಕಾಗಿ ಕಾಯುತ್ತಿದ್ದೆವು. ಈಗ ನಾವು ನ್ಯಾಯಾಲಯಕ್ಕೆ ಹೋಗಲು ನಿರ್ಧರಿಸಿದ್ದೇವೆ. ನಾವು ಈ ವಿಷಯವನ್ನು ಮಾತ್ರ ಬಿಡುವುದಿಲ್ಲ. ನಾವು ಸುಪ್ರೀಂ ಕೋರ್ಟ್‌ಗೆ ಕೂಡ ಹೋಗುತ್ತೇವೆ ಎಂದು ಮಾಯಾವತಿ ತಿಳಿಸಿದ್ದಾರೆ.
ಶಾಸಕರಾದ ಆರ್. ಗುಧಾ, ಲಖನ್ ಸಿಂಗ್, ದೀಪ್ ಚಂದ್, ಜೆ.ಎಸ್. ಅವನಾ, ಸಂದೀಪ್ ಕುಮಾರ್ ಮತ್ತು ವಾಜಿಬ್ ಅಲಿ ಅವರಿಗೆ ಬಿಎಸ್ಪಿ ಪಕ್ಷ ಭಾನುವಾರವೇ ನೊಟೀಸ್ ನೀಡಿದ್ದು, ವಿಪ್ ಜಾರಿ ಮಾಡಿದೆ. ಬಿಎಸ್ಪಿ ರಾಷ್ಟ್ರೀಯ ಪಕ್ಷವಾಗಿದ್ದು ಪಕ್ಷದ ಶಾಸಕರು ವಿಪ್ ಉಲ್ಲಂಘಿಸಿದರೆ ಶಾಸಕರನ್ನು ಶಾಸಕ ಸ್ಥಾನದಿಂದಲೇ ಅನರ್ಹಗೊಳಿಸಲಾಗುವುದು ಎಂದು ಭಾನುವಾರ ತಿಳಿಸಿದ್ದರು.
ಆದರೆ ಆ ಶಾಸಕರು ಮಾಯಾವತಿಯವರ ಬೆದರಿಕೆಗೆ ಸೊಪ್ಪು ಹಾಕಿಲ್ಲ ಎಂದು ವರದಿಯಾಗಿದೆ. ರಾಜಸ್ಥಾನದಲ್ಲಿ ಬಿಎಸ್‌ಪಿಯಿಂದ ಆಯ್ಕೆಯಾಗಿದ್ದ ಆರು ಜನರು ಸಹ ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರಿರುವುದರಿಂದ ಇದು ಪಕ್ಷಾಂತರ ನಿಷೇಧ ಕಾಯ್ದೆಯ ಉಲ್ಲಂಘನೆಯಾಗುವುದಿಲ್ಲ. ಇದೀಗ ನಾವು ಕಾಂಗ್ರೆಸ್ ಶಾಸಕರು ಎಂದು ಅವರು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ದೂರು ನೀಡಿದ ಗೆಹ್ಲೋಟ್: ಅಧಿವೇಶನ ಕರೆದ ರಾಜ್ಯಪಾಲರು


