ಸಿದ್ರಾಮುಲ್ಲಾಖಾನ್ ಎಂದು ಹೇಳುವ ಶಾಸಕ ಸಿಟಿ ರವಿಯನ್ನು ಸೋಲಿಸಲು ಕಾಂಗ್ರೆಸ್‌ಗೆ ಮತ ಹಾಕಿ ಎಂದು ಹೇಳುವ ಮೂಲಕ ಎಚ್ಡಿ ಕುಮಾರಸ್ವಾಮಿ ಆಪ್ತ, ಜೆಡಿಎಸ್ ಮುಖಂಡ ಎಸ್ ಎಲ್ ಭೋಜೇಗೌಡ ಅವರು ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿ ಪ್ರಚಾರ ಮಾಡಿದ್ದಾರೆ.
ಜೆಡಿಎಸ್ ಎಮ್‌ಎಲ್‌ಸಿ ಎಸ್.ಎಲ್ ಭೋಜೇಗೌಡ ಅವರು, ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ಸಮೀಪದ ಚಿಕ್ಕಗೌಜ ಗ್ರಾಮದ ದೇವರಕಟ್ಟೆಯ ಮುಂದೆ ಕೂತು ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ ತಮ್ಮಯ್ಯನಿಗೆ ಮತ ಹಾಕುವಂತೆ ಬಹಿರಂಗವಾಗಿ ಮನವಿ ಮಾಡಿದ್ದಾರೆ. ಪ್ರಚಾರ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಜೆಡಿಎಸ್ ಮುಖಂಡ ಭೋಜೇಗೌಡ ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿರುವ ವಿಡಿಯೋದಲ್ಲಿ, ”ಶಾಸಕ ಸಿ.ಟಿ. ರವಿ ಸೋಲಿಸಲು ಕಾಂಗ್ರೆಸ್‌ಗೆ ಮತ ಹಾಕಿ. ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾಖಾನ್ ಎನ್ನುತ್ತಾರೆ. ದೇವೇಗೌಡರನ್ನು ಮುಂದಿನ ಜನ್ಮದಲ್ಲಿ ಸಾಬರಾಗಿ ಹುಟ್ಟಿ ಎನ್ನುತ್ತಾರೆ. ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡುತ್ತಾ ಇಷ್ಟುದ್ದ ಬೆಳೆದವನನ್ನು ನೀವು ಸೋಲಿಸಬೇಕು” ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.
”ನೀವು ಹಾಲುಮತದ ಕುಟುಂಬದಲ್ಲಿ ಹುಟ್ಟಿದ್ದರೆ, ಸಿದ್ದರಾಮಯ್ಯನಿಗೆ ಅವಮಾನ ಮಾಡಿದವನಿಗೆ ಬುದ್ಧಿ ಕಲಿಸಿ. ಹಾಲು ಮತದ ಕುಟುಂಬದಲ್ಲಿ ನೀವೆಲ್ಲ ಹುಟ್ಟಿದ್ದರೆ ಸಿದ್ದರಾಮಯ್ಯನವರ ಗೌರವ ಉಳಿಸಿ. ಇಲ್ಲ ನೀವು ಆ ಕುಟುಂಬದಲ್ಲಿ ಹುಟ್ಟೇ ಇಲ್ಲ” ಎಂದು ಚಿಕ್ಕಗೌಜ ಗ್ರಾಮದ ಗ್ರಾಮಸ್ಥರ ಜೊತೆ ಭೋಜೇಗೌಡ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ತಿಮ್ಮ ಶೆಟ್ಟಿ ಕಣದಲ್ಲಿದ್ದರೂ ಕೂಡ ಭೊಜೇಗೌಡ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ ತಮ್ಮಯ್ಯನಿಗೆ ಮತ ಹಾಕುವಂತೆ ಬಹಿರಂಗ ಪ್ರಚಾರ ಮಾಡುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಎಸ್.ಎಲ್ ಭೋಜೇಗೌಡ ಅವರು ಎಚ್.ಡಿ ಕುಮಾರಸ್ವಾಮಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಿದ್ದರೂ ಜೆಡಿಎಸ್ ಅಭ್ಯರ್ಥಿ ಬಿಟ್ಟು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿರುವುದನ್ನು ನೋಡುತ್ತಿದ್ದರೆ, ಸಿ.ಟಿ.ರವಿ ಸೋಲಿಸಲು ಕಾಂಗ್ರೆಸ್- ಜೆಡಿಎಸ್ ಒಂದಾಗಿದ್ದಾರೆ ಎನ್ನುವ ಅನುಮಾನ ಹುಟ್ಟುಹಾಕಿದೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಿಕ್ಕಮಗಳೂರು: ಕೋಮು ಕಾರ್ಮೋಡದ ನಡುವೆ ಮೂಡಿದ “ರವಿ”ಗೆ ಗ್ರಹಣ?!


