ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹಾಗೂ ಜೆಎಂಎಂ ಪಕ್ಷದ ಸ್ಥಾಪಕ ಶಿಬು ಸೊರೇನ್ ಅವರ ನಿಧನದ ಹಿನ್ನೆಲೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಂಗಳವಾರ (ಆ.5) ನಡೆಯಬೇಕಿದ್ದ ಪ್ರತಿಭಟನೆಯನ್ನು ಆ.8ಕ್ಕೆ ಮುಂದೂಡಲಾಗಿದೆ.
2024ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಬೆಂಗಳೂರಿನ ಮಹದೇವಪುರ ಮತ್ತು ರಾಜಾಜಿನಗರದಲ್ಲಿ ಮತಗಳ್ಳತನ ಆಗಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಇಂದು (ಸೋಮವಾರ) ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಭಟನೆ ಮುಂದೂಡಿರುವ ಬಗ್ಗೆ ಮಾಹಿತಿ ನೀಡಿದರು.
ಶಿಬ ಸೊರೇನ್ ಅವರ ಅಂತ್ಯ ಸಂಸ್ಕಾರದಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ. ಹಾಗಾಗಿ, ಅವರು ನಾಳೆ ಪ್ರತಿಭಟನೆಗೆ ಆಗಮಿಸಲು ಸಾಧ್ಯವಿಲ್ಲ. ಆದ್ದರಿಂದ ಮುಂದೂಡಿಕೆ ಮಾಡಲಾಗಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
ಶಿಬು ಸೊರೇನ್ ಅವರು ಸ್ಥಾಪಿಸಿದ, ಅವರ ಮಗ ಜಾರ್ಖಂಡ್‌ನ ಹಾಲಿ ಸಿಎಂ ಹೇಮಂತ್ ಸೊರೇನ್ ನೇತೃತ್ವದ ಜೆಎಂಎಂ ಪಕ್ಷ ನಮ್ಮ ಇಂಡಿಯಾ ಮೈತ್ರಿಕೂಟದ ಭಾಗವಾಗಿದೆ. ಹಾಗಾಗಿ, ಶಿಬು ಅವರ ಸಾವಿನ ಹಿನ್ನೆಲೆ ಪ್ರತಿಭಟನೆ ಮುಂದೂಡಿ ನಾವು ಇಡೀ ದೇಶಕ್ಕೆ ಒಂದು ಸಂದೇಶ ಕೊಟ್ಟಿದ್ದೇವೆ ಎಂದು ಸುರ್ಜೇವಾಲ ಮತ್ತು ಡಿ.ಕೆ ಶಿವಕುಮಾರ್ ಹೇಳಿದರು.
ಕೇಂದ್ರದ ಮಾಜಿ ಸಚಿವರು, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿಗಳಾದ ಶಿಬು ಸೊರೆನ್ ಅವರ ನಿಧನದ ಹಿನ್ನೆಲೆಯಲ್ಲಿ, ಅವರ ಗೌರವಾರ್ಥವಾಗಿ ಆಗಸ್ಟ್ 5 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ 'ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ' ಪ್ರತಿಭಟನೆಯನ್ನು ಮುಂದೂಡಲಾಗಿದೆ. pic.twitter.com/86R465m5ed
— Karnataka Congress (@INCKarnataka) August 4, 2025
ಆಗಸ್ಟ್ 8ರಂದು ವರಮಹಾಲಕ್ಷ್ಮಿ ಹಬ್ಬ ಇದೆ. ಆದರೆ, ನಾವು ಪಕ್ಷದ ಕಾರ್ಯಕ್ರಮ ನಡೆಸಬೇಕಾಗಿದೆ. ಎಲ್ಲಾ ಸಚಿವರು, ಕಾಂಗ್ರೆಸ್ ಶಾಸಕರು ಮತ್ತು ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಇದೇ ವೇಳೆ ಡಿ.ಕೆ ಶಿವಕುಮಾರ್ ಹೇಳಿದರು.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬೆಂಗಳೂರಿನ ಮಹದೇವಪುರ ಮತ್ತು ರಾಜಾಜಿನಗರದಲ್ಲಿ
ಮತಗಳ್ಳತನ ಆಗಿರುವ ಬಗ್ಗೆ ರಾಹುಲ್ ಗಾಂಧಿಯವರ ಬಳಿ ಸಾಕ್ಷಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 31ರಂದು ಹೇಳಿದ್ದರು.
ಇದಕ್ಕೂ ಮುನ್ನ, ಜುಲೈ 24ರಂದು ಸಂಸತ್ತಿನ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ರಾಹುಲ್ ಗಾಂಧಿ ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರದಲ್ಲಿ ‘ಭಾರೀ ಮತ ಕಳ್ಳತನ’ ನಡೆದಿದೆ ಎಂಬ ಗಂಭೀರ ಆರೋಪ ಮಾಡಿದ್ದರು. ಈ ಅಕ್ರಮದ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಚುನಾವಣಾ ಆಯೋಗ ಮತ್ತು ಸಾರ್ವಜನಿಕರ ಮುಂದೆ ಬಹಿರಂಗಪಡಿಸುವುದಾಗಿ ಹೇಳಿದ್ದರು.
ಧರ್ಮಸ್ಥಳ ಶವ ಶೋಧ: ಪಾಯಿಂಟ್ ನಂ 11ರ ಸಮೀಪ ಅಸ್ಥಿಪಂಜರದ ಅವಶೇಷಗಳು ಪತ್ತೆ


