ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರಿಗೆ ಸೋಮವಾರ (ಆ.18) ಕರೆ ಮಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಪ್ರಮುಖ ವಿರೋಧ ಪಕ್ಷಗಳ ನಾಯಕರ ಮನವೊಲಿಸುವ ಜವಾಬ್ದಾರಿಯನ್ನು ಬಿಜೆಪಿ ರಾಜನಾಥ್ ಸಿಂಗ್ ಅವರಿಗೆ ವಹಿಸಿದೆ.
ರಾಧಾಕೃಷ್ಣನ್ ಅವರ ಸುದೀರ್ಘ ರಾಜಕೀಯ ಜೀವನ, ಸಂಸದೀಯ ಪಟುವಾಗಿ ಮತ್ತು ರಾಜ್ಯಪಾಲರಾಗಿ ಅವರ ಕೊಡುಗೆಗಳ ಬಗ್ಗೆ ರಾಜನಾಥ್ ಸಿಂಗ್ ಸ್ಟಾಲಿನ್ ಅವರಿಗೆ ವಿವರಿಸಿದ್ದಾರೆ ಎಂದು ಬಿಜೆಪಿ ಮೂಲಗಳನ್ನು ಉಲ್ಲೇಖಿಸಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಭಾನುವಾರ ನಡೆದ ಬಿಜೆಪಿ ಸಭೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸಿ.ಪಿ ರಾಧಾಕೃಷ್ಣನ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ವಿಷಯವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ತಿಳಿಸಿದ್ದಾರೆ. ಎನ್‌ಡಿಎ ಅಭ್ಯರ್ಥಿ ಆಯ್ಕೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಜೆ.ಪಿ ನಡ್ಡಾ ಅವರಿಗೆ ಬಿಟ್ಟಿತ್ತು.
67 ವರ್ಷದ ಸಿ.ಪಿ ರಾಧಾಕೃಷ್ಣನ್ ಅವರು ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ಹಿರಿಯ ನಾಯಕರಾಗಿದ್ದು, ತಮಿಳುನಾಡಿನ ಕೊಯಮತ್ತೂರಿನಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಪ್ರಸ್ತುತ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದಾರೆ.
ಆರ್‌ಎಸ್‌ಎಸ್ ಮತ್ತು ಬಿಜೆಪಿಯೊಂದಿಗಿನ ದೀರ್ಘಕಾಲದ ಒಡನಾಟಕ್ಕೆ ಹೆಸರುವಾಸಿಯಾದ ಅವರನ್ನು, ಬಲವಾದ ಸಂಘಟನಾ ಕೌಶಲ್ಯ ಹೊಂದಿರುವ ತಳಮಟ್ಟದ ನಾಯಕ ಎಂದು ಪರಿಗಣಿಸಲಾಗಿದೆ.
ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸಂಸತ್ತಿನಲ್ಲಿ ಗಮನಾರ್ಹ ಬಲವನ್ನು ಹೊಂದಿರುವ ಈ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ಅವರು ಸ್ಟಾಲಿನ್ ಅವರನ್ನು ಸಂಪರ್ಕಿಸಿದ್ದಾರೆ.
ಉಪರಾಷ್ಟ್ರಪತಿ ಚುನಾವಣೆ ಬಗ್ಗೆ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ ಇನ್ನೂ ಔಪಚಾರಿಕವಾಗಿ ತನ್ನ ನಿಲುವನ್ನು ತಿಳಿಸಿಲ್ಲ. ರಾಧಾಕೃಷ್ಣನ್ ಅವರು ಸ್ಪರ್ಧೆಯನ್ನು ಎದುರಿಸುತ್ತಾರೋ ಅಥವಾ ಅವಿರೋಧವಾಗಿ ಗೆಲ್ಲುತ್ತಾರೋ ಎಂಬುದನ್ನು ನಿರ್ಧರಿಸುವಲ್ಲಿ ಡಿಎಂಕೆ ಬೆಂಬಲ ನಿರ್ಣಾಯಕವಾಗಿದೆ ಎಂದು ವರದಿಗಳು ಹೇಳಿವೆ.
ಮುಂದಿನ ಉಪರಾಷ್ಟ್ರಪತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಬೇಕೆಂದು ನಾವು ಬಯಸುತ್ತೇವೆ. ನಾವು ವಿರೋಧ ಪಕ್ಷದ ನಾಯಕರನ್ನು ಸಂಪರ್ಕಿಸಿದ್ದೇವೆ ಎಂದು ರಾಧಾಕೃಷ್ಣನ್ ಅವರ ಹೆಸರನ್ನು ಘೋಷಿಸುತ್ತಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜೆ.ಪಿ ನಡ್ಡಾ ಹೇಳಿದ್ದಾರೆ.
ರಾಧಾಕೃಷ್ಣನ್ ಅವರ ಉಮೇದುವಾರಿಕೆಯು ದಕ್ಷಿಣ ಭಾರತದ ನಾಯಕರನ್ನು ಪ್ರಮುಖ ಸಾಂವಿಧಾನಿಕ ಹುದ್ದೆಗಳೊಂದಿಗೆ ಗೌರವಿಸುವ ಎನ್‌ಡಿಎ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.
ಸೆಪ್ಟೆಂಬರ್ 9 ರಂದು ಉಪರಾಷ್ಟ್ರತಿ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ರಾಜನಾಥ್ ಸಿಂಗ್ ಮತ್ತು ಇತರ ಹಿರಿಯ ಬಿಜೆಪಿ ನಾಯಕರು ವಿರೋಧ ಪಕ್ಷಗಳ ಮನವೊಲಿಸುವ ಕಸರತ್ತು ನಡೆಸುವ ಸಾಧ್ಯತೆ ಇದೆ.


