ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ನೆಪವಾಗಿಟ್ಟುಕೊಂಡು ಮುಸ್ಲಿಮರನ್ನು ಬಹಿಷ್ಕರಿಸಬೇಕು ಎಂದು ಬಲಪಂಥೀಯ ಗುಂಪುಗಳು ನೀಡಿದ್ದ ಕರೆಯನ್ನು ಭಾರತದಲ್ಲಿ ಅತಿ ಹೆಚ್ಚು ಜನರು ಭೇಟಿ ನೀಡುವ ಯಾತ್ರಾ ಸ್ಥಳಗಳಲ್ಲಿ ಒಂದಾದ ಉತ್ತರ ಪ್ರದೇಶದ ವೃಂದಾವನದ ಪ್ರಸಿದ್ಧ ಬಂಕೆ ಬಿಹಾರಿ ದೇವಾಲಯ ತಿರಸ್ಕರಿಸಿದೆ.
ಮಥುರಾ ಮತ್ತು ವೃಂದಾನವನದಲ್ಲಿ ಪ್ರತಿಭಟಿಸಿದ್ದ ಹಿಂದುತ್ವ ಗುಂಪು, ಮುಸ್ಲಿಮರೊಂದಿಗೆ ವ್ಯಾಪಾರ ನಡೆಸದಂತೆ ಹಿಂದೂಗಳನ್ನು ಒತ್ತಾಯಿಸಿತ್ತು. ಮುಸ್ಲಿಂ ವ್ಯಾಪಾರಸ್ಥರು ತಮ್ಮ ಅಂಗಡಿ-ಮುಂಗಟ್ಟುಗಳ ಮೇಲೆ ಮಾಲೀಕರ ಹೆಸರು ಬರೆಯುವಂತೆ ಬೆದರಿಗೆ ಹಾಕಿತ್ತು.
ಬಂಕೆ ಬಿಹಾರಿ ದೇವಾಲಯಕ್ಕೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳಿಂದ ಮುಸ್ಲಿಮರನ್ನು ಬೇರ್ಪಡಿಸುತ್ತೇವೆ. ಮುಸ್ಲಿಂ ವ್ಯಾಪಾರಿಗಳಿಗೆ ಅಂಗಡಿಗಳ ಮುಂದೆ ಮಾಲೀಕರ ಹೆಸರು ಹಾಕುವಂತೆ ಸೂಚಿಸಲಾಗಿದೆ. ಹಿಂದೂಗಳ ಅವರೊಂದಿಗೆ ವ್ಯಾಪಾರ ಮಾಡದಂತೆ ಮತ್ತು ತಮ್ಮ ವ್ಯವಹಾರಗಳಲ್ಲಿ ಅವರನ್ನು ನೇಮಿಸಿಕೊಳ್ಳದಂತೆ ಮನವಿ ಮಾಡಿದ್ದೇವೆ ಎಂದು ಕಾಶಿ ವಿದ್ವತ್ ಪರಿಷತ್ ಸಂಘಟನೆಯ ಸದಸ್ಯ ನಾಗೇಂದ್ರ ಮಹಾರಾಜ್ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಬಂಕೆ ಬಿಹಾರಿ ದೇವಾಲಯದ ಅರ್ಚಕ ಹಾಗೂ ಆಡಳಿತ ಮಂಡಳಿ ಸದಸ್ಯ, ಜ್ಞಾನೇಂದ್ರ ಕಿಶೋರ್ ಗೋಸ್ವಾಮಿ ಅವರು, “ಇದು ಸಾಧ್ಯವಿಲ್ಲ. ಮುಸ್ಲಿಮರು, ವಿಶೇಷವಾಗಿ ಮುಸ್ಲಿಂ ಕುಶಲಕರ್ಮಿಗಳು ಮತ್ತು ನೇಕಾರರು ದೇವಾಲಯಕ್ಕೆ ದೊಡ್ಡ ಮಟ್ಟದ ಕೊಡುಗೆಗಳನ್ನು ನೀಡಿದ್ದಾರೆ. ಅವರು ದಶಕಗಳಿಂದ ಬಂಕೆ ಬಿಹಾರಿಯ ಉಡುಪುಗಳನ್ನು ನೇಯ್ಗೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರಲ್ಲಿ ಹಲವರು ಬಂಕೆ ಬಿಹಾರಿಯ ದೇವರಲ್ಲಿ ಬಲವಾದ ನಂಬಿಕೆಯನ್ನು ಹೊಂದಿದ್ದಾರೆ ಮತ್ತು ದೇವಾಲಯಕ್ಕೂ ಭೇಟಿ ನೀಡುತ್ತಾರೆ” ಎಂದಿದ್ದಾರೆ. ಈ ಮೂಲಕ ಹಿಂದುತ್ವ ಸಂಘಟನೆಯ ಕೋಮು ದ್ರುವೀಕರಣವನ್ನು ವಿರೋಧಿಸಿದ್ದಾರೆ.
“ವೃಂದಾವನದಲ್ಲಿ ದೇವರಿಗೆ ಕೆಲವು ಕಿರೀಟಗಳು ಮತ್ತು ಬಳೆಗಳನ್ನು ಅವರೇ (ಮುಸ್ಲಿಮರು) ತಯಾರಿಸುತ್ತಾರೆ” ಎಂದು ಸುದ್ದಿ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡುವಾಗ ಗೋಸ್ವಾಮಿ ಹೇಳಿದ್ದಾರೆ. ಇದಕ್ಕೆ ಅಲ್ಲಿನ ಹೆಚ್ಚಿನ ಪುರೋಹಿತರು ಮತ್ತು ಸ್ಥಳೀಯರು ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಭಯೋತ್ಪಾದಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಈ ವಿಚಾರದಲ್ಲಿ ನಾವು ಸಂಪೂರ್ಣವಾಗಿ ಸರ್ಕಾರದ ಜೊತೆಗಿದ್ದೇವೆ. ಆದರೆ ವೃಂದಾವನದಲ್ಲಿ, ಹಿಂದೂಗಳು ಮತ್ತು ಮುಸ್ಲಿಮರು ಶಾಂತಿ ಮತ್ತು ಸೌಹಾರ್ದತೆಯಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಗೋಸ್ವಾಮಿ ತಿಳಿಸಿದ್ದಾರೆ.
ಹಿಂದುತ್ವ ಗುಂಪಿನವರು ನನ್ನ ವ್ಯಾಪಾರಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದಾರೆ. ಅಂಗಡಿ ಮುಂದೆ ನನ್ನ ಹೆಸರು ಹಾಕುವಂತೆ ಹೇಳಿದ್ದಾರೆ. ಅವರು ಹೇಳಿದಂತೆ ಕೇಳದಿದ್ದರೆ ಇಲ್ಲಿ ವ್ಯಾಪಾರ ನಡೆಸದಂತೆ ಬೆದರಿಕೆ ಹಾಕಿದ್ದಾರೆ. ಅರ್ಚಕರ ಹೇಳಿಕೆಯಿಂದ ನಮಗೆ ಆಶ್ವಾಸನೆ ಮೂಡಿದೆ. ನಾನು 20 ವರ್ಷಗಳಿಗೂ ಹೆಚ್ಚು ಸಮಯದಿಂದ ಇಲ್ಲಿ ಅಂಗಡಿ ನಡೆಸುತ್ತಿದ್ದೇನೆ. ನನ್ನ ತಂದೆ ಇಲ್ಲಿಯೇ ಟೈಲರ್ ಆಗಿ ಕೆಲಸ ಮಾಡುತ್ತಿದ್ದಾರೆ. ಗ್ರಾಹಕರು ಇಲ್ಲಿಂದ ವಸ್ತುಗಳನ್ನು ಖರೀದಿಸಿದಾಗಲೆಲ್ಲಾ, ನಾನು ಸಾಮಾನ್ಯವಾಗಿ ಅವರಿಗೆ ನನ್ನ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಮುದ್ರಿಸಿದ ಬಿಲ್ ರಶೀದಿಯನ್ನು ನೀಡುತ್ತೇನೆ. ನಮ್ಮಲ್ಲಿ ಮರೆಮಾಚಲು ಏನೂ ಇಲ್ಲ,” ಎಂದು ಬಂಕೆ ಬಿಹಾರಿ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ, ‘ಸ್ಟಾರ್ ಮುಕುತ್’ ಎಂಬ ಹೆಸರಿನಲ್ಲಿ ಅಂಗಡಿ ನಡೆಸುತ್ತಿರುವ ಜಾವೇದ್ ಅಲಿ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಅಲಿ ಅವರ ಅಂಗಡಿಯ ಪಕ್ಕದಲ್ಲೇ ಅಂಗಡಿ ಹೊಂದಿರುವ ನಿಖಿಲ್ ಅಗರ್ವಾಲ್ ಎಂಬವರು ಮಾತನಾಡಿ, ಹಲವು ವರ್ಷಗಳಿಂದ ನಮಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. ನಾವು ಪರಸ್ಪರ ಒಬ್ಬರಿಗೊಬ್ಬರು ಸಹಕಾರ ಮಾಡುತ್ತಾ ವ್ಯಾಪಾರ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ಪೊಲೀಸರು ಇನ್ನೂ ಔಪಚಾರಿಕ ದೂರು ಸ್ವೀಕರಿಸಿಲ್ಲ ಎಂದು ವರದಿಯಾಗಿದೆ.
ಆಕಸ್ಮಿಕವಾಗಿ ಮಹಿಳೆಯನ್ನು ಸ್ಪರ್ಶಿಸಿದ ಮುಸ್ಲಿಂ ಬಾಲಕನ ಮೇಲೆ ಅಮಾನವೀಯ ಹಲ್ಲೆ


