Homeಅಂಕಣಗಳುರಣಹದ್ದು ಮತ್ತು ಪತ್ರಕರ್ತರು : ತಣ್ಣನೆ ಹೆಸರಿನ ಪುಣ್ಯಾತ್ಮ ಹಸೀ ಸುಳ್ಳನ್ನ ಸುಡು ಬಿಸಲಿನ್ಯಾಗ ಹೇಳಿದ್ದು...

ರಣಹದ್ದು ಮತ್ತು ಪತ್ರಕರ್ತರು : ತಣ್ಣನೆ ಹೆಸರಿನ ಪುಣ್ಯಾತ್ಮ ಹಸೀ ಸುಳ್ಳನ್ನ ಸುಡು ಬಿಸಲಿನ್ಯಾಗ ಹೇಳಿದ್ದು…

ಆಸ್ಥಾನ ಪಂಡಿತರು ತಮ್ಮ ಬ್ಯಾಳೆ ಬೇಯಿಸಿಕೊಳ್ಳಲಿಕ್ಕೆ ಆಳುವವರನ್ನ ಇಂದ್ರ - ಚಂದ್ರ ಅಂತ ಕರೀತಿರಬಹುದು. ಇದು ಗೊತ್ತಾಗದೇ ಹೋದರ ಸರಕಾರ ಜನರ ಮನಸ್ಸಿನಿಂದ ದೂರ ಹೋಗಬೇಕಾಗತದ. ಉನ್ನತ ಸ್ಥಾನದಲ್ಲಿ ಇರೋ ನಮ್ಮ ಪಂಥ ಪ್ರಧಾನ ಸೇವಕರು ಇಂಥವರಿಂದ ದೂರ ಇರಬೇಕು.

- Advertisement -
- Advertisement -

ಹಿರಿಯ ಲೇಖಕಿ ಗೀತಾ ನಾಗಭೂಷಣ ಅವರ ಹಸಿ ಮಾಂಸ ಮತ್ತು ಹದ್ದುಗಳು ಎನ್ನುವುದು ಕನ್ನಡದ ಜನಪ್ರಿಯ ಕಾದಂಬರಿಗಳಲ್ಲಿ ಒಂದು. ಜಮೀನುದಾರಿ ವ್ಯವಸ್ಥೆಯ ಶೋಷಣೆ, ಜಾತಿಯತೆ, ಹೆಣ್ಣಿನ ದುರವಸ್ಥೆ ಮುಂತಾದ ವಿಷಯಗಳ ಸುತ್ತ ಹೆಣೆದದ್ದು.

ಗುಲಬರ್ಗಾದ ಈ ಲೇಖಕರಿಗೆ ರಾಷ್ಟ್ರೀಯ ಮನ್ನಣೆ ತಂದು ಕೊಟ್ಟ ಈ ಕಾದಂಬರಿಯ ಹೆಸರು ಓದುಗರನ್ನು ಸೆಳೆಯುವಂಥದ್ದು. ಅದು ಈ ಕಾಲದಾಗ ಯಾಕ ನೆನಪು ಮಾಡಿಕೊಟ್ಟವರು ಯಾರಪಾ ಅಂದರ ನಮ್ಮ ತುಷಾರ ಮೆಹತಾ ಸಾಹೇಬರು.

ಅವರು ಯಾರಂತೀರಿ? ಅವರು ನಮ್ಮ ಕೇಂದ್ರ ಸರಕಾರದ ವಕೀಲರು. ಅವರು ಸುಪ್ರೀಂ ಕೋರ್ಟಿನಾಗ ಕೇಂದ್ರ ಸರಕಾರವು ಎಷ್ಟು ಚನ್ನಾಗಿ ವಲಸೆ ಕಾರ್ಮಿಕರ ಕಾಳಜಿ ಮಾಡಿದೆ ಅಂತ ಹೇಳೋ ಭರಾಟೆಯೊಳಗ ಪತ್ರಕರ್ತರು ರಣಹದ್ದುಗಳು ಅಂತ ಅಪ್ಪಣೆ ಕೊಡಿಸಿದರು.
ಅವರಿಗೆ ಸರಕಾರದ ಒಳ್ಳೆ ಕೆಲಸಗಳು ಕಾಣಲ್ಲ. ಅವರಿಗೆ ಬರೀ ಕೆಟ್ಟದ್ದೇ ಕಾಣುತ್ತದೆ. ಹದ್ದುಗಳಿಗೆ ಬರೀ ಹೆಣ ಕಾಣತದೆ, ಅಂತೆಲ್ಲಾ ಹೇಳಿ ಕೆವಿನ್ ಕಾರ್ಟರ್ ಅನ್ನೋ ಹೆಸರಿನ ದಕ್ಷಿಣ ಆಫ್ರಿಕದ ಛಾಯಾ ಚಿತ್ರ ವರದಿಗಾರರ ಬಗ್ಗೆ ಒಂದು ಖೊಟ್ಟಿ ಸುದ್ದಿ (ಫೇಕು ನ್ಯೂಸು) ಹೇಳಿದರು.

ಕಾರ್ಟರ್ ಅವರು ತೆಗೆದ ಒಂದು ಚಿತ್ರ ವಿಶ್ವಖ್ಯಾತಿ ಗಳಿಸಿತ್ತು. ಅದೇನಪಾ ಅಂದರ ಸುಡಾನ್ ದೇಶದಲ್ಲಿ ಕ್ಷಾಮ ಆದಾಗ ಒಂದು ಹಸಿದ ಹುಡುಗ (ಮೆಹತಾ ಸಾಬ್ ಅವರು ತಿಳಕೊಂಡಂಗ ಹುಡುಗಿ ಅಲ್ಲ) ಗಂಜಿ ಕೇಂದ್ರದ ಕಡೆ ತೆವಳಿಕೊಂಡು ಹೋಗುತ್ತಾ ಇರೋ ಚಿತ್ರ. ಅದರ ಹಿಂದೆ ಒಂದು ಹದ್ದು ಆ ಮಗುವನ್ನು ಹಿಂಬಾಲಿಸಿಕೊಂಡು ಬರೋ ಚಿತ್ರ ನೋಡಿದವರ ಕಣ್ಣಾಗ ನೀರು ತರಿಸಿತು. `ಆ ಹದ್ದು ಆ ಕೂಸು ಸಾಯೋದನ್ನ ಕಾಯ್ದುಕೊಂಡು ಕೂತಂಗ, ಅದು ಸತ್ತರ ತಾನು ತಿಂದು ಮೇಜವಾನಿ ಮಾಡಲಿಕ್ಕೆ ತಯಾರಿ ಮಾಡಿಕೋತದೇನೋ’ ಅಂತ ಜನರಿಗೆ ಅನ್ನಿಸಿತು.

ಪ್ರತಿ ಚಿತ್ರದ ಹಿಂದೆ ಐಟಿ ಸೆಲ್ಲಿನ ಕಾಣದ ಕೈಗಳು ಕೆಲಸಾ ಮಾಡೋಹಂಗ, ಇದರ ಹಿಂದನೂ ಕೆಲಸ ಮಾಡಿದವು. ಆ ಚಿತ್ರ ತೆಗೆದ ಛಾಯಾಗ್ರಾಹಕ ಆತ್ಮಹತ್ಯೆ ಮಾಡಿಕೊಂಡ ಅನ್ನೋದು ಎಲ್ಲಾರಿಗೂ ಗೊತ್ತಿತ್ತು. ಆದರ ಕಾರಣ ಗೊತ್ತಿರಲಿಲ್ಲ. ಈ ಐಟಿಕೋರರು ಅದಕ್ಕ ಒಂದು ಕತಿ ಕಟ್ಟಿ ಸುಳ್ಳ- ಸುಳ್ಳ ಕಾರಣ ಕೊಟ್ಟರು. ಆ ಫೋಟೋ ತೆಗದ ಕೆಲವೇ ಕ್ಷಣದೊಳಗ ಆ ಹುಡುಗಿ ಹಸಿವಿನಿಂದ ಸತ್ತು ಹೋತು, ಅದನ್ನ ತಗದ ದುಃಖ ತಾಳಲಾರದ ಫೋಟೋಗ್ರಾಫರ ಕೆಲವೇ ತಿಂಗಳಿಗೆ ಸತ್ತು ಹೋದ ಅಂತ.

ಇನ್ನೂ ಏನಪಾ ಅಂದರ ಒಬ್ಬ ಅಮೇರಿಕಾದ ವರದಿಗಾರ ಆ ಛಾಯಾಗ್ರಾಹಕನನ್ನ ಕೇಳಿದನಂತ – `ನೀ ಬರೇ ಫೋಟೋ ತೆಗೆದ್ಯೋ ಅಥವಾ ಆ ಮಗುವಿಗೆ ಏನಾದರೂ ಸಹಾಯ ಮಾಡಿದ್ಯೋ’ ಅಂತ. `ಇಲ್ಲಾ ನಾ ಬರೇ ಫೋಟೋ ತೆಗೆದೆ’ ಅಂತ ಇವಾ ಅಂದನಂತ. ಅದಕ್ಕ ಅವಾ- ಆ ಕಾಲ್ಪನಿಕ ವರದಿಗಾರ ಇವನಿಗೆ ಬೈದನಂತ. `ಹೌದಪಾ, ದೊಡ ಮನಿಷಾ, ನೀ ಯಾಕ ಸಹಾಯ ಮಾಡತೀದಿ? ನೀ ಬರೇ ನಿನ್ನ ಲಾಭ ಅಷ್ಟ ನೋಡಿಕೊಂಡಿ. ಯಾಕಂದರ ಅಲ್ಲೆ ಎರಡು ರಣಹದ್ದು ಇದ್ದವು. ಒಂದು ಆ ಮಗುವಿನ ಹಿಂದ ಹೊಂಟಿತ್ತು, ಇನ್ನೊಂದು ಕೈಯಾಗ ಕ್ಯಾಮೆರಾ ಹಿಡಕೊಂಡಿತ್ತು’.

ತುಷಾರ ಮೆಹತಾ ಅಂದರ ಚಳಿಗಾಲದ ನಾಯಕ ಅಂತ ಅರ್ಥ. ಇಂತಾ ತಣ್ಣನೆ ಹೃದಯದ ಪುಣ್ಯಾತ್ಮ ತುಷಾರ ಮೆಹತಾ ಅವರು ಈ ಹಸೀ ಸುಳ್ಳನ್ನ ಮೇ ತಿಂಗಳ ಸುಡು ಬಿಸಲಿನ್ಯಾಗ ಕೇಂದ್ರ ಸರಕಾರದ ಪರ ವಾದ ಮಾಡುವಾಗ ನ್ಯಾಯಮೂರ್ತಿಗಳ ಎದುರಿಗೆ ಹೇಳಿದರು. ಒಂದು ಚೂರೂ ಬಿಡದೇ. ಅವರಿಗೆ ಒಂದು ಸಲೆನೂ ಇದು ಸುಳ್ಳು ಇರಬಹುದು ಅಂತ ಸಂದೇಹ ಕಾಡಲಿಲ್ಲ. ಅವರಿಗೆ ಸಂದೇಹ ಬಂದಿರಲಿಕ್ಕಿಲ್ಲ ಅಥವಾ ಸುಳ್ಳು ಅಂತ ಗೊತ್ತಿದ್ದರೂ ಇಡೀ ದೇಶವನ್ನು ನಂಬಿಸಲಿಕ್ಕೆ ಹೇಳಿರಬಹುದು.

ಇದರಾಗ ಸುಳ್ಳು ಏನಪಾ ಅಂದರ, ಅದು ಹುಡುಗಿ ಅಲ್ಲ- ಹುಡುಗ. ಆ ಹುಡುಗ ಕೆಲವೇ ಕ್ಷಣದೊಳಗ ಹಸಿವಿನಿಂದ ಸಾಯಲಿಲ್ಲ. ಆ ಹುಡುಗ 12 ವರ್ಷಗಳ ನಂತರ ಮಲೇರಿಯಾದಿಂದ ಸತ್ತು ಹೋದ. ಇನ್ನ ಕಾರ್ಟರ್ ಆ ಫೋಟೋ ತೆಗೆಯೋವಾಗ ಬರೀ ದೂರದಿಂದ ಆ ಕೆಟ್ಟ ದೃಶ್ಯವನ್ನ ನೋಡಿ ಆನಂದ ಪಡಲಿಲ್ಲ. ಅದರಿಂದ ಅವನಿಗೆ ಸಂಕಟ ಆತು. ಆತ ಆ ಹದ್ದನ್ನು ಓಡಿಸಿ ಆ ಹುಡುಗನ ಜೀವ ಉಳಿಸಿದ. ಆ ನಂತರ ತನ್ನ ಕುಟುಂಬದ ಸಮಸ್ಯೆ, ಸಾಲ, ಮಾದಕ ಪದಾರ್ಥದ ಚಟ ಇತ್ಯಾದಿ ಕಾರಣಗಳಿಂದ ಹಾಗೂ ಸ್ವಲ್ಪ ಮಟ್ಟಿನ ದುಃಖದಿಂದ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡ.

ಆದರ ಸಮಸ್ಯೆ ಇದಲ್ಲ. ಸಮಸ್ಯೆ ಪತ್ರಕರ್ತರನ್ನ ರಣ ಹದ್ದುಗಳು ಅಂತ ನೋಡೊ ಮನಸ್ಥಿತಿಯದ್ದು. ಸರಕಾರ ಮಾಡಿದ್ದೇ ಸರಿ, ಆಳುವ ಪಕ್ಷ ಆಡಿದ್ದೇ ಆಟ ಅಂತ ಹೇಳಿ ಚಪ್ಪಾಳೆ ತಟ್ಟುವವರು ಮಾತ್ರ ವರದಿಗಾರರು, ಬೇರೆಯವರು ರಣಹದ್ದುಗಳು ಅಂತ ತೀರ್ಮಾನಕ್ಕೆ ಬರೋದು. ಪ್ರಜಾಪ್ರಭುತ್ವಕ್ಕ ಇದು ಬಹಳ ಅಪಾಯಕಾರಿ.

ಸರಕಾರ ನಡೆಸುವವರು ಮೈ ಎಲ್ಲಾ ಕಣ್ಣಾಗಿ- ಕಿವಿಯಾಗಿ ಇರಬೇಕು. ತಮ್ಮ ಸರಿ- ತಪ್ಪುಗಳನ್ನು ಎತ್ತಿ ತೋರಿಸುವವರನ್ನು ಗೌರವದಿಂದ ನೋಡಬೇಕು. ಅವರ ಮಾತು ಕೇಳಿಸಕೋಬೇಕು. ಇಲ್ಲದಿದ್ದರೆ ತಮ್ಮ ಆಸ್ಥಾನ ಪಂಡಿತರು ಹೇಳಿದ್ದನ್ನೇ ಕೇಳಿಸಿಕೊಂಡು ಚಕ್ಕಡಿಗೆ ಕಟ್ಟಿದ ಎತ್ತಿನ ಹಂಗ ಕಣ್ಣು ಕಟಿಗೊಂಡು ಮುಂದ ಹೋಗಬೇಕಾಗತದ.

ಆಸ್ಥಾನ ಪಂಡಿತರು ತಮ್ಮ ಬ್ಯಾಳೆ ಬೇಯಿಸಿಕೊಳ್ಳಲಿಕ್ಕೆ ಆಳುವವರನ್ನ ಇಂದ್ರ – ಚಂದ್ರ ಅಂತ ಕರೀತಿರಬಹುದು. ಇದು ಗೊತ್ತಾಗದೇ ಹೋದರ ಸರಕಾರ ಜನರ ಮನಸ್ಸಿನಿಂದ ದೂರ ಹೋಗಬೇಕಾಗತದ. ಉರ್ದು ಕವಿ ಹಬೀಬ್ ಜಾಲಿಬ್ ಅವರು ಇಂಥಾ ಆಸ್ಥಾನ ಪಂಡಿತರ ಬಗ್ಗೆ “ನಾನು ಅವರಿಗೆ ಹಿಂಗಂದೆ” (`ಮೈನೆ ಉಸ್ಸೆ ಎ ಕಹಾ’) ಅಂತ ಒಂದು ಹಾಡು ಬರದಾರ.
ಅದರಾಗ ಈ ಸಾಲು ಬರತಾವು-

ಮೆಹರಬಾನ್ ಸಾಹೇಬರೇ,
ನಿಮ್ಮ ಸರಕಾರ ಎಷ್ಟು ಒಳ್ಳೆಯದು
ಅಂದರ, ಜನ ನಿಮ್ಮ ಕಾಲದಾಗ
ತಮ್ಮ ಖರ್ಚಿನ್ಯಾಗ ಜೈಲು ಸೇರಾಕ ಹತ್ಯಾರು

ಉನ್ನತ ಸ್ಥಾನದಲ್ಲಿ ಇರೋ ನಮ್ಮ ಪಂಥ ಪ್ರಧಾನ ಸೇವಕರು ಇಂಥವರಿಂದ ದೂರ ಇರಬೇಕು. ತಮ್ಮ ಮುಖಕ್ಕೆ ಕನ್ನಡಿ ಹಿಡಿಯೋವಂಥವರನ್ನ ಇಟ್ಟು ಕೊಳ್ಳಬೇಕು, ತಮ್ಮ ಫೋಟೋ ತಗದು ಫೋಟೋ ಶಾಪು ಮಾಡೋರನ್ನಲ್ಲ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯನ್ನ ಇಡೀ ದೇಶದ ಮೇಲೆ ಹೇರಿದರು. ಇದರಿಂದ ಪೊಲಿಸರು ಹಾಗೂ ಇತರ ಸರಕಾರಿ ಅಧಿಕಾರಿಗಳು ಜನ ಸಾಮಾನ್ಯರ ಮ್ಯಾಲೆ ಘೋರ ದಬ್ಬಾಳಿಕೆ ನಡೆಸಿದರು. ಇಲ್ಲದವರು ಅತೀವ ಹಿಂಸೆ ಅನುಭವಿಸಿದರು. ಇದು ಆಧುನಿಕ ಭಾರತೀಯ ಇತಿಹಾಸದಲ್ಲಿನ ಅತ್ಯಂತ ಕಹಿ ಘಟನೆಗಳಲ್ಲಿ ಒಂದು. ಅದು ಸುಮಾರು 18 ತಿಂಗಳು ಎಗ್ಗಿಲ್ಲದೇ ಮುನ್ನಡೆಯಿತು. ಅದೆಲ್ಲಾ ಮುಗದು ಹೋಗಿ ಐದಾರು ವರ್ಷ ಆದ ಮ್ಯಾಲೆ ಅವರು ಖುಷವಂತಸಿಂಗ್ ಅವರಿಗೆ ಹೇಳಿದರಂತೆ- “ ತುರ್ತು ಪರಿಸ್ಥಿತಿಯ ಸಮಯದಲ್ಲಿ ನಮಗೆ ಫೀಡಬ್ಯಾಕು (ಮರುಮಾಹಿತಿ, ಟೀಕೆ ಟಿಪ್ಪಣಿ) ಸಿಗಲೇ ಇಲ್ಲ. ಸಿಕ್ಕಿದ್ದರೆ, ಜನರ ಕಷ್ಟ ನಮಗೆ ಅರ್ಥ ವಾಗುತ್ತಿತ್ತು. ಅದನ್ನು ಇನ್ನಷ್ಟು ಬೇಗ ಹಿಂತೆಗೆಯಬಹುದಾಗಿತ್ತು. ಜನ ಸುಮ್ಮನೇ ಇದ್ದದ್ದು ನೋಡಿ ನಾವು ಅವರು ಖುಷಿಯಾಗಿದ್ದಾರೆ ಅಂದುಕೊಂಡೆವು” ಅಂತ. ನಮ್ಮೂರ ಕಡೆ ಇದಕ್ಕ ‘ರೊಟ್ಟಿ ಸುಟ್ಟ ಮ್ಯಾಲೆ ಒಲಿ ಆರಿಸಿದ್ದರಂತ’ ಅಂತ ಅಂತಾರ. ಇಂದಿರಾಗಾಂಧಿ ಅವರು ತಮ್ಮನ್ನು ಟೀಕೆ ಮಾಡಿದ ಏಳು ಸಾವಿರಕ್ಕೂ ಹೆಚ್ಚು ಜನ ಪತ್ರಕರ್ತರನ್ನ ಜೈಲಿಗೆ ಹಾಕಿದ್ದರು. ಬಿಬಿಸಿ ಯಂಥಾ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳ ಮೇಲೆ ಒತ್ತಡ ಹೇರಿದ್ದರು. ಜನರ ದನಿಯಾದ ಮಾಧ್ಯಮವನ್ನು ಕಟ್ಟಿ ಹಾಕಿ ನಮಗೆ ಅವರ ದನಿ ಕೇಳಲಿಲ್ಲ ಅಂದರ ಹೆಂಗ?

ಈಗ ನಮ್ಮನ್ನು ಆಳುವವರಿಗೂ ಈ ಸುಬುದ್ಧಿ ಸಕಾಲದಲ್ಲಿ ಬರಲಿ, ಅಲ್ಲವೇ ಮನೋಲ್ಲಾಸಿನಿ?


ಇದನ್ನು ಓದಿ: ಸತತ ಮೂರನೇ ಬಾರಿಗೆ ಜಾಮಿಯಾ ಸಮನ್ವಯ ಸಮಿತಿ ಸದಸ್ಯೆ ಸಫೂರಾ ಜರ್ಗರ್‌ಗೆ ಜಾಮೀನು ನಿರಾಕರಣೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...