ಕೊರೊನ ವೈರಸ್ ಹರಡುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಲಾಕ್ ಡೌನ್ ಘೋಷಿಸಿದ ನಂತರ ಮಧ್ಯಪ್ರದೇಶದ ತಮ್ಮ ಮನೆಗೆ ತಲುಪಲು ದೆಹಲಿಯಿಂದ 200 ಕಿ.ಮೀ ನಡೆದು ಬಂದ 38 ವರ್ಷದ ವ್ಯಕ್ತಿ ದಾರಿಯಲ್ಲಿ ಸಾವನ್ನಪ್ಪಿದ್ದಾರೆ.
ದೆಹಲಿಯಲ್ಲಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ರಣವೀರ್ ಸಿಂಗ್, ಲಾಕ್‌ಡೌನ್‌ನಿಂದಾಗಿ ಉದ್ಯೋಗ, ವಸತಿ ಹಾಗೂ ಹಣವಿಲ್ಲದೆ ಸಾವಿರಾರು ವಲಸಿಗರ ಜೊತೆ ತಮ್ಮ ಹಳ್ಳಿಗೆ ಹೊರಟಿದ್ದರು. ಕೊರೊನ ವೈರಸ್ ಹರಡುವುದನ್ನು ತಡೆಯುವ ಉದ್ದೇಶದಿಂದ ರೈಲುಗಳು ಮತ್ತು ಅಂತರರಾಜ್ಯ ಬಸ್ಸುಗಳು ಸೇರಿದಂತೆ ಎಲ್ಲಾ ಸಾರಿಗೆ ಸೇವೆಗಳು ಸ್ಥಗಿತಗೊಂಡಿರುವುದರಿಂದ ಹೆಚ್ಚಿನ ಜನರು ಕಾಲ್ನಡಿಗೆಯಲ್ಲೆ ನೂರಾರು ಕಿಲೋಮೀಟರ್ ಪ್ರಯಾಣ ಮಾಡುತ್ತಿದ್ದಾರೆ.
ರಣವೀರ್ ಸಿಂಗ್ ದೆಹಲಿಯಿಂದ 326 ಕಿ.ಮೀ ದೂರದಲ್ಲಿರುವ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ತಮ್ಮ ಗ್ರಾಮಕ್ಕೆ ನಡೆಯಲು ಪ್ರಾರಂಭಿಸಿದ್ದರು.
ಉತ್ತರ ಪ್ರದೇಶದ ಆಗ್ರಾದ ಹೆದ್ದಾರಿಯಲ್ಲಿ ಕುಸಿದುಬಿದ್ದಾಗ, ಸ್ಥಳೀಯರು ಅವರನ್ನು ಉಪಚರಿಸಿದರಾದರು ರಣವೀರ್ ಸಿಂಗ್ ಹೃದಯಾಘಾತವಾಗಿ ತೀರಿಕೊಂಡರು. ಈ ಸಮಯದಲ್ಲಿ ಅವರು ತನ್ನ ಹಳ್ಳಿಯಿಂದ ಸುಮಾರು 80 ಕಿ.ಮೀ ದೂರದಲ್ಲಿದ್ದರು.
ಶನಿವಾರ ಸಂಜೆಯಿಮದ, ಉತ್ತರ ಪ್ರದೇಶದ ಗಡಿಯುದ್ದಕ್ಕೂ ಮನೆಗೆ ತೆರಳಲು ಹತಾಶವಾಗಿ ಪ್ರಯತ್ನಿಸುತ್ತಿರುವ ಸಾವಿರಾರು ವಲಸೆ ಕಾರ್ಮಿಕರು ದೆಹಲಿಯ ಬಸ್ ಟರ್ಮಿನಲ್‌ಗಳಲ್ಲಿ ತುಂಬಿ ತುಳುಕುತ್ತಿದ್ದರು.
ಉತ್ತರ ಪ್ರದೇಶ ಮತ್ತು ದೆಹಲಿ ಸರ್ಕಾರಗಳು ಶನಿವಾರ ಪ್ರತಿಕ್ರಿಯಿಸಿ ಜನರನ್ನು ಮನೆಗೆ ಕರೆದೊಯ್ಯಲು ಬಸ್ಸುಗಳನ್ನು ಸಜ್ಜುಗೊಳಿಸಿದೆ; ಯುಪಿ ಸರ್ಕಾರ 1,000 ಬಸ್ಸುಗಳನ್ನು ಆಯೋಜಿಸಿದೆ ಎಂದು ಹೇಳಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 200 ಬಸ್ಸುಗಳನ್ನು ಸೇವೆಗೆ ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.
ಜಾಗತಿಕವಾಗಿ ಕೊರೊನ ವೈರಸ್ ಸ್ಪೋಟಗೊಂಡ ಎರಡು ತಿಂಗಳ ನಂತರ ಭಾರತ ಸರಕಾರ ಹಠಾತ್ತನೆ, ಯೋಜನೆ ಇಲ್ಲದೆ ಲಾಕ್‌ಡೌನ್ ಘೋಷಿಸಿದ್ದಾರೆ ಇದರಿಂದಾಗಿ ಲಕ್ಷಾಂತರ ಜನರು ಸಿಕ್ಕಿಹಾಕಿಕೊಂಡಿದ್ದಾರಲ್ಲದೆ ಆಹಾರ ಮತ್ತು ಮೂಲಭೂತ ಅವಶ್ಯಕತೆಗಳ ಬಗ್ಗೆ ಆತಂಕವನ್ನು ಉಂಟುಮಾಡಿದೆ ಎಂದು ಕೇಂದ್ರ ಸರ್ಕಾರ ಟೀಕೆಗಳನ್ನು ಎದುರಿಸಿದೆ. ಆದರೆ ಕೇಂದ್ರ ಸರ್ಕಾರ ಈ ಟೀಕೆಗಳನ್ನು ನಿರಾಕರಿಸಿದೆ.


