“ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದೆ. ಆದರೆ, ನನ್ನ ಕುಟುಂಬವನ್ನು ನೆನೆದು ಸುಮ್ಮನಾದೆ” ಇದು ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮಂಗಳವಾರ (2025 ಡಿಸೆಂಬರ್ 24) ಸಂಜೆ ದೆಹಲಿಯ ಇಂಡಿಯಾ ಗೇಟ್ ಎದುರಿನ ಹುಲ್ಲುಹಾಸಿನ ಮೇಲೆ ಕುಳಿತು ಹೇಳಿದೆ ನೋವಿನ ಮಾತು.
ದೇಶವನ್ನೇ ಬೆಚ್ಚಿ ಬೀಳಿಸಿದ 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಅಪರಾಧಿ, ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ವಿಚಾರಣಾ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ಅಮಾನತಿನಲ್ಲಿಟ್ಟಿದೆ.
ನ್ಯಾಯಾಲಯದ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಇಂಡಿಯಾ ಗೇಟ್ ಬಳಿ ಪ್ರಕರಣದ ಸಂತ್ರಸ್ತೆ, ಆಕೆಯ ತಾಯಿ ಪ್ರತಿಭಟನೆ ನಡೆಸಿದರು. ಇವರಿಗೆ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಯೋಗಿತಾ ಭಯನಾ ಸಾಥ್ ನೀಡಿದರು.
“ನ್ಯಾಯಾಲಯದ ಆದೇಶದಿಂದ ನಾವು ಭಯದಲ್ಲಿ ಬದುಕುವಂತಾಗಿದೆ. ವ್ಯವಸ್ಥೆ ನಮಗೆ ದ್ರೋಹ ಬಗೆದಿದೆ” ಎಂದು ಪ್ರತಿಭಟನೆ ವೇಳೆ ಸಂತ್ರಸ್ತೆ ಹೇಳಿದ್ದಾರೆ.
ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಆಕೆ, “ಜಾಮೀನು ನೀಡಿದ ಸಮಯವು ರಾಜಕೀಯ ಪ್ರೇರಿತವಾಗಿದ್ದು. ಇದಕ್ಕೂ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಸಂಬಂಧವಿದೆ ಎಂದಿದ್ದಾರೆ.
“ನಮಗೆ ಅನ್ಯಾಯ ಮಾಡಲಾಗಿದೆ. ಚುನಾವಣೆ ಬರುತ್ತಿದೆ. ಕುಲದೀಪ್ ಸಿಂಗ್ ಸೆಂಗಾರ್ ಪತ್ನಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವಂತೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ” ಎಂದು ಹೇಳಿದ್ದಾರೆ. “ಇಂತಹ ಅತ್ಯಾಚಾರ ಆರೋಪಿ ಹೊರಬಂದರೆ, ನಾವು ಹೇಗೆ ಸುರಕ್ಷಿತವಾಗಿರಲು ಸಾಧ್ಯ ಎಂದು? ಪ್ರಶ್ನಿಸಿದ್ದಾರೆ.
“ದೆಹಲಿ ನ್ಯಾಯಾಲಯದಿಂದ ಶಿಕ್ಷೆ ಅಮಾನತಿನಲ್ಲಿಟ್ಟ ಆದೇಶ ಹೊರಬಿದ್ದ ಬಳಿಕ ನಮಗೆ ಭಯ ಶುರುವಾಗಿದೆ. ನ್ಯಾಯಾಲಯ ದಯವಿಟ್ಟು ಜಾಮೀನು ರದ್ದುಗೊಳಿಸಬೇಕು” ಎಂದು ಸಂತ್ರಸ್ತೆ ಮನವಿ ಮಾಡಿದ್ದಾರೆ.
ನೋವಿನ ನಡುವೆಯೂ ಆಕೆ, “ನನಗೆ ನ್ಯಾಯಾಂಗದ ಮೇಲೆ ಇನ್ನೂ ನಂಬಿಕೆ ಇದೆ” ಎಂದು ಹೇಳಿದ್ದು, ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ಮೂವರನ್ನೂ ಸ್ಥಳದಿಂದ ಕರೆದೊಯ್ದರು. ಪೊಲೀಸರು ಅವರನ್ನು ತಮ್ಮ ವಾಹನಕ್ಕೆ ಹತ್ತಿಸಿದ ಮತ್ತು ಪ್ರತಿಭಟನೆಗೆ ಅವಕಾಶ ನೀಡುವಂತೆ ಅವರು ಮನವಿ ಮಾಡಿದ ವಿಡಿಯೋಗಳನ್ನು ಮಾಧ್ಯಮಗಳು ತೋರಿಸಿವೆ.
ಹೋರಾಟಗಾರ್ತಿ ಯೋಗಿತಾ ಅವರು, ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ನೀಡಿದ ಕಾರಣವನ್ನು ಪ್ರಶ್ನಿಸಿದ್ದಾರೆ. ಕಾನೂನು ಹೋರಾಟದ ವೇಳೆ ಪೂರ್ತಿಯಾಗಿ ಸಂತ್ರಸ್ತೆ ಮತ್ತು ಆಕೆಯ ತಾಯಿ ಪ್ರತ್ಯೇಕವಾಗಿ (ಏಕಾಂಗಿಯಾಗಿ) ಇದ್ದರು ಎಂದಿದ್ದಾರೆ.
ಸಂತ್ರಸ್ತೆ ಮತ್ತು ಆಕೆಯ ತಾಯಿ ತುಂಬಾ ಕಷ್ಟಗಳನ್ನು ಎದುರಿಸಿ ಕಾನೂನು ಹೋರಾಟ ನಡೆಸುವ ಮೂಲಕ ಅಪರಾಧಿಗೆ ಶಿಕ್ಷೆಯಾಗುವಂತೆ ನೋಡಿಕೊಂಡರು. ಆದರೆ, ಈಗ ಏನಾಯಿತು? ಅಪರಾಧಿಗೆ ಜಾಮೀನು ಸಿಕ್ಕಿತು. ದೇಶದಲ್ಲಿ ಅತ್ಯಾಚಾರಿಗಳು ಜಾಮೀನು ಪಡೆಯುತ್ತಿದ್ದಾರೆ, ಅಮಾಯಕರು ಜೈಲಲ್ಲಿದ್ದಾರೆ. ಹೈಕೋರ್ಟ್ ಆದೇಶದ ಬಳಿಕ ಸಂತ್ರಸ್ತೆ ಮತ್ತು ಆಕೆಯ ತಾಯಿ ಭಯದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಸಂತ್ರಸ್ತೆಯ ಸಹೋದರಿ ಕೂಡ ಜಾಮೀನು ದೊರೆತಿರುವ ಕುರಿತು ಮಾತನಾಡಿದ್ದು, “ಅಪರಿಚಿತ ವ್ಯಕ್ತಿಗಳು ನಮ್ಮ ಮನೆಯ ಸುತ್ತಮುತ್ತ ಓಡಾಡುತ್ತಿದ್ದಾರೆ, ನಮಗೆ ಬೆದರಿಕೆ ಹಾಕುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಅವನು (ಸೆಂಗಾರ್) ಮೊದಲು ನನ್ನ ಚಿಕ್ಕಪ್ಪನನ್ನು ಕೊಂದ, ಬಳಿಕ ನನ್ನ ಅಪ್ಪನನ್ನು ಕೊಂದ. ನಂತರ ನನ್ನ ಸಹೋದರಿ ಮೇಲೆ ದೌರ್ಜನ್ಯ ನಡೆಯಿತು. ಎಲ್ಲಾ ಪ್ರಕರಣಗಳು ಆತನಿಗೆ ಸಂಬಂಧಿಸಿದೆ. ಆದರೆ, ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ನಾವು ಇನ್ನೂ ಭಯದಲ್ಲಿದ್ದೇವೆ. ಕೊನೆಪಕ್ಷ ನಾವು ಜೈಲಲ್ಲಿ ಇದ್ದರೆ ಜೀವಂತ ಇರಬಹುದು” ಎಂದು ಆತಂಕ, ನೋವು ತೋಡಿಕೊಂಡಿದ್ದಾರೆ.
ಕುಲದೀಪ್ ಸಿಂಗ್ ಸೆಂಗಾರ್‌ಗೆ ವಿಚಾರಣಾ ನ್ಯಾಯಾಲಯವು 2019ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರ ವಿರುದ್ದ ಸೆಂಗಾರ್ ದೆಹಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮೇಲ್ಮನವಿ ವಿಚಾರಣೆ ಮುಗಿಯುವವರೆಗೆ ಶಿಕ್ಷೆಯನ್ನು ಅಮಾನತಿನಲ್ಲಿಟ್ಟಿದೆ.
ನ್ಯಾಯಮೂರ್ತಿ ಸುಬ್ರಹ್ಮಣ್ಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ವಿಭಾಗೀಯ ಪೀಠವು 15 ಲಕ್ಷ ರೂಪಾಯಿಗಳ ಜಾಮೀನು ಬಾಂಡ್ ಸಲ್ಲಿಸಬೇಕೆಂಬ ಷರತ್ತಿನ ಮೇಲೆ ಜಾಮೀನು ಮಂಜೂರು ಮಾಡಿದೆ.
ಆದಾಗ್ಯೂ, ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣದಲ್ಲಿ ಸೆಂಗಾರ್‌ಗೆ ಜಾಮೀನು ಸಿಗದ ಕಾರಣ ಆತ ಸದ್ಯಕ್ಕೆ ಬಂಧನದಲ್ಲೇ ಇರುತ್ತಾರೆ. ಆ ಪ್ರಕರಣದಲ್ಲಿ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯೊಂದಿಗೆ ಅವರ ಮೇಲ್ಮನವಿ ಇನ್ನೂ ದೆಹಲಿ ಹೈಕೋರ್ಟ್‌ನಲ್ಲಿ ಬಾಕಿ ಇದೆ.


