ಸುಪ್ರೀಂ ಕೋರ್ಟ್ ಮುಂದೆ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಶುಕ್ರವಾರ ಸಮರ್ಥಿಸಿಕೊಂಡಿದ್ದು, ತಮ್ಮ ಸರ್ಕಾರ ಜಾರಿಗೆ ತಂದಿರುವ ಈ ಕಾಯ್ದೆಯು ಸಂವಿಧಾನದಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳ ಕಾನೂನು ಉಲ್ಲಂಘಿಸುವುದಿಲ್ಲ ಎಂದು ಹೇಳಿದೆ ಎಂದು ಲೈವ್ ಲಾ ವರದಿ ಮಾಡಿದೆ.
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಶೇರ್ಷಾ ಸಿ ಶೇಕ್ ಮೊಹಿದ್ದೀನ್ ಸಲ್ಲಿಸಿದ ಪ್ರಾಥಮಿಕ ಅಫಿಡವಿಟ್‌ನಲ್ಲಿ, ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳನ್ನು ಕೇಂದ್ರ ಸರ್ಕಾರವು ವಿರೋಧಿಸಿದೆ.
ತಿದ್ದುಪಡಿಗಳನ್ನು ವಕ್ಫ್ ಆಸ್ತಿ ನಿರ್ವಹಣೆಯ ಜಾತ್ಯತೀತ ಅಂಶಗಳನ್ನು ನಿಯಂತ್ರಿಸಲು ಮಾತ್ರ ತರಲಾಗಿದೆ ಮತ್ತು ಸಂವಿಧಾನದ 25 ಮತ್ತು 26 ನೇ ವಿಧಿಗಳ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯಗಳಿಗೆ ಇದು ಅಡ್ಡಿಯಾಗುವುದಿಲ್ಲ ಎಂದು ಅದು ವಾದಿಸಿದೆ. ಅಲ್ಲದೆ, ಈ ಕಾಯ್ದೆಯು ಸರ್ಕಾರದ ನಿಯಂತ್ರಕ ಅಧಿಕಾರಗಳ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದೆ.
ವಕ್ಫ್ ಎನ್ನುವುದು ಧಾರ್ಮಿಕ, ಶೈಕ್ಷಣಿಕ ಅಥವಾ ದತ್ತಿ ಉದ್ದೇಶಕ್ಕಾಗಿ ಮೀಸಲಾಗಿರುವ ಇಸ್ಲಾಮಿಕ್ ಕಾನೂನಿನಡಿಯಲ್ಲಿನ ಒಂದು ದತ್ತಿಯಾಗಿದೆ. ಪ್ರತಿಯೊಂದು ರಾಜ್ಯವು ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ, ಹಿಡಿದಿಟ್ಟುಕೊಳ್ಳುವ ಮತ್ತು ವರ್ಗಾಯಿಸುವ ಅಧಿಕಾರವನ್ನು ಹೊಂದಿರುವ ಕಾನೂನು ಘಟಕದ ನೇತೃತ್ವದಲ್ಲಿ ವಕ್ಫ್ ಮಂಡಳಿಯನ್ನು ಹೊಂದಿದೆ.
2024 ರ ವಕ್ಫ್ ತಿದ್ದುಪಡಿ ಮಸೂದೆಯು 1995 ರ ವಕ್ಫ್ ಕಾಯ್ದೆಯ 44 ಸೆಕ್ಷನ್‌ಗಳಿಗೆ ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ. ಇದರಲ್ಲಿ ಮುಸ್ಲಿಮೇತರರಿಗೆ ವಕ್ಫ್ ಮಂಡಳಿಗಳಲ್ಲಿ ಅವಕಾಶ ನೀಡುವುದು, ಆಸ್ತಿ ದೇಣಿಗೆಗಳನ್ನು ನಿರ್ಬಂಧಿಸುವುದು ಮತ್ತು ವಕ್ಫ್ ನ್ಯಾಯಮಂಡಳಿಗಳು ಕಾರ್ಯನಿರ್ವಹಿಸುವ ವಿಧಾನವನ್ನು ಬದಲಾಯಿಸುವುದು ಸೇರಿವೆ.
ಈ ಮಸೂದೆಯನ್ನು ಏಪ್ರಿಲ್ 4 ರಂದು ಸಂಸತ್ತು ಅಂಗೀಕರಿಸಿತು. ಇದು ಏಪ್ರಿಲ್ 5 ರಂದು ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆಯಿತು ಮತ್ತು ಏಪ್ರಿಲ್ 8 ರಂದು ಜಾರಿಗೆ ಬಂದಿತು. ಕಾಂಗ್ರೆಸ್ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ ಸೇರಿದಂತೆ ಇತರರು ಮಸೂದೆಯ ಸಾಂವಿಧಾನಿಕತೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಸುಪ್ರೀಂಕೋರ್ಟ್ ಮೇ 5 ರಂದು ಈ ಪ್ರಕರಣದ ವಿಚಾರಣೆ ನಡೆಸಲಿದೆ. ಏಪ್ರಿಲ್ 17 ರಂದು ಕೇಂದ್ರ ಸರ್ಕಾರವು ವಕ್ಫ್ ಆಸ್ತಿಗಳನ್ನು ಡಿನೋಟಿಫೈ ಮಾಡುವುದಿಲ್ಲ ಅಥವಾ ಆ ದಿನಾಂಕದವರೆಗೆ ಕೇಂದ್ರ ವಕ್ಫ್ ಕೌನ್ಸಿಲ್ ಅಥವಾ ರಾಜ್ಯ ವಕ್ಫ್ ಮಂಡಳಿಗಳಿಗೆ ಯಾವುದೇ ಹೊಸ ನೇಮಕಾತಿಗಳನ್ನು ಮಾಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿತ್ತು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಪಹಲ್ಗಾಮ್ ದಾಳಿ: ದೇಶ ರಕ್ಷಣೆಯ ಗುಪ್ತಚರ ಸಂಸ್ಥೆಯನ್ನು ವಿಪಕ್ಷ ನಾಯಕರ ವಿರುದ್ಧ ಕಳುಹಿಸುತ್ತಿದ್ದೀರಿ: ತೇಜಸ್ವಿ ಯಾದವ್
ಪಹಲ್ಗಾಮ್ ದಾಳಿ: ದೇಶ ರಕ್ಷಣೆಯ ಗುಪ್ತಚರ ಸಂಸ್ಥೆಯನ್ನು ವಿಪಕ್ಷ ನಾಯಕರ ವಿರುದ್ಧ ಕಳುಹಿಸುತ್ತಿದ್ದೀರಿ: ತೇಜಸ್ವಿ ಯಾದವ್

