ವಕ್ಫ್ (ತಿದ್ದುಪಡಿ) ಮಸೂದೆ ಪರಿಶೀಲಿಸಲು ರಚಿಸಿದ ಸಂಸತ್ತಿನ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಗುರುವಾರ (ಜನವರಿ 30, 2025) ರಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ತನ್ನ ವರದಿಯನ್ನು ಸಲ್ಲಿಸಿದೆ.
ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಇತರ ಸದಸ್ಯರೊಂದಿಗೆ ಸ್ಪೀಕರ್ ಬಿರ್ಲಾ ಅವರನ್ನು ಸಂಸತ್ ಭವನದ ಕಚೇರಿಯಲ್ಲಿ ಭೇಟಿಯಾಗಿ ವರದಿಯನ್ನು ಹಸ್ತಾಂತರಿಸಿದರು.
ಬುಧವಾರ (ಜನವರಿ 29, 2025) ಸಮಿತಿಯು ಆಡಳಿತಾರೂಢ ಬಿಜೆಪಿ ಸದಸ್ಯರು ಸೂಚಿಸಿದ ಬದಲಾವಣೆಗಳನ್ನು ಒಳಗೊಂಡಿರುವ ತನ್ನ ವರದಿಯನ್ನು ಬಹುಮತದ ಮತದಿಂದ ಅಂಗೀಕರಿಸಿತ್ತು. ವಿರೋಧ ಪಕ್ಷಗಳ ಸದಸ್ಯರು ಪ್ರಸ್ತಾಪಿಸಿದ ಎಲ್ಲಾ ಬದಲಾವಣೆಗಳನ್ನು ಸಮಿತಿ ತಿರಸ್ಕರಿಸಿದೆ.
ಜೆಪಿಸಿ ಮಸೂದೆ ಕುರಿತ ಕರಡು ವರದಿಯನ್ನು 15-11 ಬಹುಮತದಿಂದ ಅಂಗೀಕರಿಸಿದೆ. ವರದಿಗೆ ವಿರೋಧ ಪಕ್ಷದ ಸದಸ್ಯರು ಭಿನ್ನಾಭಿಪ್ರಾಯ ಟಿಪ್ಪಣಿಗಳನ್ನು ಸಲ್ಲಿಸಿದ್ದಾರೆ.
ಕಳೆದ ವರ್ಷದ (2024) ಆಗಸ್ಟ್‌ನಲ್ಲಿ ಲೋಕಸಭೆಯಲ್ಲಿ ಪರಿಚಯಿಸಲಾದ ಮಸೂದೆಯು, ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಆಧುನಿಕತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರುವ ಗುರಿಯನ್ನು ಹೊಂದಿದೆ ಎಂದು ಬಿಜೆಪಿ ಸದಸ್ಯರು ಸಮರ್ಥಿಸಿಕೊಂಡಿದ್ದಾರೆ.
ಆದರೆ, ಪ್ರತಿಪಕ್ಷಗಳು ಇದನ್ನು ಮುಸ್ಲಿಂ ಸಮುದಾಯದ ಸಾಂವಿಧಾನಿಕ ಹಕ್ಕುಗಳ ಮೇಲಿನ ದಾಳಿ ಮತ್ತು ವಕ್ಫ್ ಮಂಡಳಿಗಳ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಎಂದಿವೆ.
ಇಂಡಿಯಾ ಮೈತ್ರಿಕೂಟಕ್ಕೆ ಮುಖಭಂಗ; ಚಂಡೀಗಢ ಹೊಸ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿ ಆಯ್ಕೆ


