ಕೇಂದ್ರ ಬಿಜೆಪಿ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸಿದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸೋಮವಾರ ಅದನ್ನು ಅಂಗೀಕರಿಸಿದೆ. ಈ ಮೂಲಕ ಮುಂಬರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಚರ್ಚೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಲು ವೇದಿಕೆಯನ್ನು ನಿಗದಿಪಡಿಸಿದೆ. ವಕ್ಫ್ ತಿದ್ದುಪಡಿ ಪರಿಶೀಲನೆ
ಬಿಜೆಪಿ ಸಂಸದ ಜಗದಂಬಿಕಾ ಪಾಲ್ ನೇತೃತ್ವದ ಸಮಿತಿಯು ಆಡಳಿತಾರೂಢ ಎನ್‌ಡಿಎ ಸದಸ್ಯರು ಸೂಚಿಸಿದ 14 ತಿದ್ದುಪಡಿಗಳನ್ನು ಅಂಗೀಕರಿಸಿದರೆ, ವಿರೋಧ ಪಕ್ಷಗಳು ಪ್ರಸ್ತಾಪಿಸಿದ ಎಲ್ಲವನ್ನೂ 10:16 ಕ್ಕೆ ಧ್ವನಿ ಮತದ ಮೂಲಕ ತಿರಸ್ಕರಿಸಲಾಯಿತು. ಮಳೆಗಾಲದ ಅಧಿವೇಶನದಲ್ಲಿ ಮಂಡಿಸಲಾದ ಮಸೂದೆಯು 1995 ರ ವಕ್ಫ್ ಕಾಯ್ದೆಗೆ 44 ತಿದ್ದುಪಡಿಗಳನ್ನು ಪ್ರಸ್ತಾಪಿಸಿತ್ತು.
ನಿಯಮಗಳನ್ನು ಉಲ್ಲಂಘಿಸಿ ಕಲಾಪವನ್ನು ಬುಡಮೇಲು ಮಾಡಲಾಗಿದೆ ಎಂದು ಆರೋಪಿಸಿ ಸಮಿತಿಯ ಅಧ್ಯಕ್ಷರ ವಿರುದ್ಧ ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿದ್ದರೂ, ತಿದ್ದುಪಡಿಗಳನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ಮತಕ್ಕೆ ಹಾಕಲಾಗಿದೆ ಎಂದು ಜಗದಾಂಬಿಕ ಪಾಲ್ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಡಿಎಂಕೆ ಸಂಸದ ಎ. ರಾಜಾ ಮಾತನಾಡಿ, “ಅಧ್ಯಕ್ಷರು ಸ್ವತಃ ತಿದ್ದುಪಡಿಗಳನ್ನು ಮಂಡಿಸಿದವರ ಹೆಸರುಗಳನ್ನು (ನಾವು ನೀಡಿದ) ಕರೆದರು, ಅವರೇ ನಮ್ಮ ಪರವಾಗಿ ತಿದ್ದುಪಡಿಗಳನ್ನು ಮಂಡಿಸಿದರು, ಮತಗಳ ಎಣಿಕೆ ನಡೆಸಿದರು, ನಂತರ ನಮ್ಮ ತಿದ್ದುಪಡಿಗಳನ್ನು ತಿರಸ್ಕರಿಸುವುದಾಗಿ ಘೋಷಿಸಿದರು. ಒಂದು ವೇಳೆ ಇದು ಮಸೂದೆಯಾದರೆ ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ.” ಎಂದು ಹೇಳಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಗದಾಂಬಿಕ ಪಾಲ್, ಪ್ರಸ್ತಾವಿತ ಮಸೂದೆಯಲ್ಲಿ ಜಿಲ್ಲಾಧಿಕಾರಿಗೆ ಸಂಪೂರ್ಣ ಅಧಿಕಾರ ನೀಡುವ ಬದಲು, ಆಸ್ತಿಯು ವಕ್ಫ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಅಧಿಕಾರಿಯನ್ನು ನೇಮಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುವುದು ಈ ಬದಲಾವಣೆಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. 1995 ರ ವಕ್ಫ್ ಕಾಯ್ದೆಯಲ್ಲಿ, ಆ ಅಧಿಕಾರವನ್ನು ಸರ್ವೇ ಆಯುಕ್ತರು ಮತ್ತು ಹೆಚ್ಚುವರಿ ಆಯುಕ್ತರಿಗೆ ನೀಡಲಾಗಿತ್ತು.
ಕೇಂದ್ರ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಇಬ್ಬರು ಮುಸ್ಲಿಮೇತರ ಸದಸ್ಯರನ್ನು ಸೇರಿಸುವುದನ್ನು ಕಡ್ಡಾಯಗೊಳಿಸುವ ಮತ್ತೊಂದು ವಿವಾದಾತ್ಮಕ ನಿಬಂಧನೆಗೆ ಬದಲಾವಣೆಗಳನ್ನು ಸಮಿತಿಯು ಅನುಮೋದಿಸಿದೆ. ಇದು ಕಡ್ಡಾಯ ಎಂಬ ಪದವನ್ನು ಕೈಬಿಟ್ಟು, ವಿದ್ವಾಂಸರನ್ನು ಒಳಗೊಂಡಂತೆ ಮೂರು ಸದಸ್ಯರಿಗೆ ಹೆಚ್ಚಿಸುವ ಮೂಲಕ ವಕ್ಫ್ ಮಂಡಳಿಯ ಸಂಯೋಜನೆಯಲ್ಲಿ ಬದಲಾವಣೆಗಳನ್ನು ಪ್ರಸ್ತಾಪಿಸಿದೆ.
‘ಬಳಕೆದಾರರ ವಕ್ಫ್(ಬೈ ಯೂಸರ್)’ ನಿಬಂಧನೆಯ ಮೇಲೆ ಮತ್ತೊಂದು ಬದಲಾವಣೆ ಪ್ರಸ್ತಾಪಿಸಲಾಗಿತ್ತಾದರೂ, ಮಸೂದೆ ಅದನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. ‘ಬಳಕೆದಾರ ವಕ್ಫ್(ಬೈಯೂಸರ್)’ ಕಾನೂನು ಆಸ್ತಿಯನ್ನು ನೋಂದಾಯಿಸುವವರೆಗೆ ಹಿಂದಿನಿಂದ ಬಳಕೆಯಾದ ತಕ್ಷಣ ಅದು ವಕ್ಫ್ ಆಗುವುದಿಲ್ಲ ಎಂಬ ತಿದ್ದುಪಡಿಗಳನ್ನು ಸಮಿತಿಯು ಅನುಮೋದಿಸಿತು.
ಕಾಂಗ್ರೆಸ್ ಸಂಸದ, ಜೆಪಿಸಿ ಸದಸ್ಯ ಇಮ್ರಾನ್ ಮಸೂದ್ ಇದನ್ನು ವಿರೋಧಿಸಿದ್ದು, 90% ವಕ್ಫ್ ಆಸ್ತಿಗಳನ್ನು ಇನ್ನೂ ನೋಂದಾಯಿಸಲಾಗಿಲ್ಲ ಎಂದು ಹೇಳಿದ್ವದಾರೆ. ಸರ್ಕಾರವು ಹೊಸ ಮಸೂದೆಯನ್ನು ತರುವ ಮೂಲಕ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ವಕ್ಫ್ ತಿದ್ದುಪಡಿ ಪರಿಶೀಲನೆ
ಹೊಸದೇನಿದೆ?
ಪ್ರಸ್ತಾವಿತ ಮಸೂದೆಯಲ್ಲಿ ಜಿಲ್ಲಾಧಿಕಾರಿ ಬದಲಿಗೆ ಆಸ್ತಿಯು ವಕ್ಫ್ ಆಗಿದೆಯೇ ಎಂದು ರಾಜ್ಯ ಸರ್ಕಾರಕ್ಕೆ ನಿರ್ಧರಿಸಲು ಅಧಿಕಾರಿಯನ್ನು ನೇಮಿಸುವ ಹಕ್ಕು. ಕೇಂದ್ರ ವಕ್ಫ್ ಮಂಡಳಿ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಇಬ್ಬರು ಮುಸ್ಲಿಮೇತರರನ್ನು ಸೇರಿಸುವ ಕಡ್ಡಾಯ ಷರತ್ತನ್ನು ಕೈಬಿಡಲಾಗಿದೆ. ವಕ್ಫ್ ಮಂಡಳಿಯ ಸಂಯೋಜನೆಯಲ್ಲಿ ಬದಲಾವಣೆ ಪ್ರಸ್ತಾಪಿಸಲಾಗಿದ್ದು, ಅದರಲ್ಲಿ ವಿದ್ವಾಂಸರು ಸೇರಿದಂತೆ ಮೂರು ಸದಸ್ಯರ ಹೆಚ್ಚಳ.
ಸಂಸದೀಯ ಸಮಿತಿಯು ಮಂಗಳವಾರ ಸದಸ್ಯರ ನಡುವೆ ಅಂತಿಮ ಕರಡನ್ನು ಪ್ರಸಾರ ಮಾಡಲಿದೆ. ವರದಿಯನ್ನು ಅಂಗೀಕರಿಸಲು ಜನವರಿ 29 ರಂದು ಸಭೆ ಸೇರಲಿದೆ ಎಂದು ವರದಿಯಾಗಿದೆ. ಜನವರಿ 31 ರಂದು ಲೋಕಸಭಾ ಸ್ಪೀಕರ್‌ಗೆ ವರದಿಯನ್ನು ಸಲ್ಲಿಸಲಾಗುವುದು ಮತ್ತು ಫೆಬ್ರವರಿ 5 ರ ದೆಹಲಿ ಚುನಾವಣೆಗೆ ಮೊದಲು ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ವರದಿಯಾಗಿದೆ.
ಇದನ್ನೂಓದಿ: ಎಲ್ಲ ವಿದೇಶಿ ನೆರವನ್ನು ಸ್ಥಗಿತಗೊಳಿಸಿದ ಡೊನಾಲ್ಡ್ ಟ್ರಂಪ್ ಆಡಳಿತ; ಪರಿಶೀಲನೆಗೆ ಆದೇಶ
ಎಲ್ಲ ವಿದೇಶಿ ನೆರವನ್ನು ಸ್ಥಗಿತಗೊಳಿಸಿದ ಡೊನಾಲ್ಡ್ ಟ್ರಂಪ್ ಆಡಳಿತ; ಪರಿಶೀಲನೆಗೆ ಆದೇಶ


