ಕೇಂದ್ರ ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಬುಧವಾರ (ಏ.2) ಲೋಕಸಭೆಯಲ್ಲಿ ಅಂಗೀಕಾರಗೊಂಡ ವಕ್ಫ್ ತಿದ್ದುಪಡಿ ಮಸೂದೆಯನ್ನು ಗುರುವಾರ (ಏ.3) ರಾಜ್ಯಸಭೆಯಲ್ಲಿ ಮಂಡಿಸಿದರು.
ಮಸೂದೆ ಕುರಿತ ಚರ್ಚೆಯ ವೇಳೆ ಮೊದಲು ಮಾತನಾಡಿದ ಕಾಂಗ್ರೆಸ್ ಸದಸ್ಯ ಸೈಯ್ಯದ್ ನಾಸಿರ್ ಹುಸೇನ್, ಮಸೂದೆಯನ್ನು ಮುಸ್ಲಿಂ ವಿರೋಧಿ ಎಂದು ಕರೆದರು ಮತ್ತು ಬಿಜೆಪಿ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸಲು ಇದನ್ನು ಬಳಸುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ದೇಶವನ್ನು ದಾರಿ ತಪ್ಪಿಸುತ್ತಿದೆ. ವಕ್ಫ್ ಮಸೂದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯಲ್ಲಿ (ಜೆಪಿಸಿ) ವಿರೋಧ ಪಕ್ಷಗಳ ಸದಸ್ಯರ ಯಾವುದೇ ಶಿಫಾರಸುಗಳನ್ನು ಅಂಗೀಕರಿಸಿಲ್ಲ. ಸಂಸತ್ತಿನ ಮೂಲಕ ಮಸೂದೆ ಒಪ್ಪಿಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ ಎಂದರು.
#WATCH | Speaking in Rajya Sabha on the Waqf Bill, Congress MP Syed Naseer Hussain says, "…You do communal polarisation, and then you accuse us of doing polarisation…This bill is based on total falsity, and a misinformation campaign has been built in the last 6 months. BJP's… pic.twitter.com/KLO4WlTs6f
— ANI (@ANI) April 3, 2025
ವಕ್ಫ್ ಮಸೂದೆಯ ಮೂಲಕ ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರಂತೆ ಪರಿಗಣಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು. ಸರ್ಕಾರವು ವಕ್ಫ್ ಸಂಸ್ಥೆಗಳ ಮೇಲೆ ಕಣ್ಣಿಡಲು ಅಥವಾ ಅವುಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸಲು ಉದ್ದೇಶಿಸಿದೆಯೇ? ಎಂದು ಪ್ರಶ್ನಿಸಿದರು.
ವಕ್ಫ್ ಆಸ್ತಿ ಎಂದು ಹೇಳಿಕೊಂಡರೆ ಅದಕ್ಕೆ ದಾಖಲೆ ಒದಗಿಸಬೇಕು ಎಂಬ ಮಸೂದೆಯ ನಿಯಮವನ್ನು ಟೀಕಿಸಿದ ನಾಸಿರ್ ಹುಸೇನ್, “ದೇವಾಲಯಗಳು ಮತ್ತು ಗುರುದ್ವಾರಗಳಂತೆ ಮುಸ್ಲಿಮರ ಪ್ರಾಚೀನ ಧಾರ್ಮಿಕ ಸ್ಥಳಗಳು ‘ಬಳಕೆದಾರರಿಂದ ವಕ್ಫ್’ ಆಗಿ (Wakf By User)ಅಸ್ತಿತ್ವದಲ್ಲಿವೆ. ಅಂತಹ ಐತಿಹಾಸಿಕ ಸ್ಥಳಗಳಿಂದ ಸರ್ಕಾರ ದಾಖಲೆ ಭಯಸುತ್ತಿರುವುದು ಏಕೆ? ಎಂದು ಕೇಳಿದರು.
ಮಸೂದೆಯನ್ನು ಸಮರ್ಥಿಸಿಕೊಳ್ಳಲು ಬಿಜೆಪಿ ಕಳೆದ ಆರು ತಿಂಗಳಿನಿಂದ ತಪ್ಪು ಮಾಹಿತಿಯ ಅಭಿಯಾನ ನಡೆಸುತ್ತಿದೆ. ಆಡಳಿತ ಪಕ್ಷವು ಮೊದಲು ಕೋಮು ಧ್ರುವೀಕರಣದಲ್ಲಿ ತೊಡಗುತ್ತದೆ, ನಂತರ ವಿರೋಧ ಪಕ್ಷವು ಆ ರೀತಿ ಮಾಡುತ್ತಿದೆ ಎಂದು ಆರೋಪಿಸುತ್ತದೆ ಎಂದು ನಾಸಿರ್ ಹುಸೇನ್ ಹೇಳಿದರು.
ಸರ್ಕಾರ ಚುನಾವಣಾ ಲಾಭಕ್ಕಾಗಿ ವಿವಾದಗಳನ್ನು ಸೃಷ್ಟಿಸಲು ಮತ್ತು ಗಲಭೆಗಳನ್ನು ಪ್ರಚೋದಿಸಲು ನೆಪಗಳನ್ನು ಹುಡುಕುತ್ತಿದೆ. ಮುಸ್ಲಿಂ ಸಮುದಾಯ ತನ್ನದೇ ಸಂಸ್ಥೆಗಳನ್ನು ನಡೆಸುತ್ತಿರುವ ಬಗ್ಗೆ ಸರ್ಕಾರಕ್ಕೆ ನಂಬಿಕೆ ಇಲ್ಲವೇ? ವಕ್ಫ್ ತಿದ್ದುಪಡಿ ಮಸೂದೆಯು ಅನ್ಯಾಯದ ಕ್ರಮವಾಗಿದೆ. ಇದು ನಿರ್ದಿಷ್ಟವಾಗಿ ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡಿದೆ ಎಂದರು.


