ವಕ್ಫ್ (ತಿದ್ದುಪಡಿ) ಮಸೂದೆ ಪರಿಶೀಲನೆಗೆ ರಚಿಸಿರುವ ಜಂಟಿ ಸದನ ಸಮಿತಿ ಕಾನೂನು ಹಾಗೂ ನಿಯಮಾವಳಿಗೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿರುವ ಪ್ರತಿ ಪಕ್ಷಗಳ ಸಂಸದರು, ಸೋಮವಾರ ನಡೆದ ಸಭೆಯಿಂದ ಹೊರ ನಡೆದರು.
ಸಂಸತ್‌ನಲ್ಲಿ ನಡೆದ ಸುದೀರ್ಘ ಸಭೆಯಲ್ಲಿ ಬಿಜೆಪಿ ಮತ್ತು ಪ್ರತಿಪಕ್ಷಗಳ ಸಂಸದರ ನಡುವೆ ಮಾತಿನ ಚಕಮಕಿ ನಡೆಯಿತು. ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ವಕ್ಫ್ ಸಮಿತಿಯ ಸಭೆಗೆ ಹಿಂದುತ್ವ ಮುಖಂಡರನ್ನು ಆಹ್ವಾನಿಸಿದ್ದಕ್ಕೆ ಸಮಿತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರ ಹೆಸರೆತ್ತಿದ ಮಾಣಿಪ್ಪಾಡಿ
ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಮುಖಂಡ ರೆಹಮಾನ್ ಖಾನ್ ಅವರು ವಕ್ಫ್‌ಗೆ ಸಂಬಂಧಿಸಿದ ಆಸ್ತಿಗಳ ಕಬಳಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಬಿಜೆಪಿಯ ಮಾಜಿ ಉಪಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಆರೋಪಿಸಿದರು.
ಉನ್ನತ ನಾಯಕರ ಮೇಲೆ ಆರೋಪ ಸಾಭೀತಾಗದೆ ಅವರ ಹೆಸರು ಉಲ್ಲೇಖಿಸಿದ್ದಕ್ಕೆ ಪ್ರತಿಪಕ್ಷ ಸಂಸದರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಸಮಿತಿಯ ಅಧ್ಯಕ್ಷ ಜಗದಾಂಬಿಕ ಪಾಲ್ ಅವರು ಪ್ರತಿಪಕ್ಷ ಸಂಸದರ ವಿರೋಧ ಲೆಕ್ಕಿಸದೆ ಅನ್ವರ್ ಮಾಣಿಪ್ಪಾಡಿ ಅವರಿಗೆ ಮಾತನಾಡಲು ಅವಕಾಶ ಕೊಟ್ಟರು.
ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಸಂಸದರಾದ ಗೌರವ್ ಗೊಗೋಯ್, ಇಮ್ರಾನ್ ಮಸೂದ್, ಡಿಎಂಕೆಯ ಎ.ರಾಜಾ, ಶಿವಸೇನೆ (ಯುಬಿಟಿ) ಯ ಅರವಿಂದ್ ಸಾವಂತ್, ಎಐಎಂಐಎಂನ ಅಸಾದುದ್ದೀನ್ ಓವೈಸಿ, ಸಮಾಜವಾದಿ ಪಕ್ಷದ ಮೊಹಿಬ್ಬುಲ್ಲಾ, ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್ ಅವರು ಸಭೆಯಿಂದ ಹೊರ ನಡೆದರು.
ವಕ್ಫ್ (ತಿದ್ದುಪಡಿ) ಮಸೂದೆ ಪರಿಶೀಲನೆ ನಡೆಸುತ್ತಿರುವ ಜಂಟಿ ಸದನ ಸಮಿತಿ ಕಾನೂನಿಗೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಶಿವಸೇನೆಯ ಅರವಿಂದ್ ಸಾವಂತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮುಂದಿನ ಕಾರ್ಯವಿಧಾನಗಳ ಕುರಿತು ಪ್ರತಿಪಕ್ಷಗಳ ಸಂಸದರು ಪ್ರತ್ಯೇಕ ಸಭೆ ನಡೆಸಿದ್ದಾರೆ. ಈ ಕುರಿತು ಲೋಕಸಭಾ ಸ್ವೀಕರ್‌ಗೆ ಇಂದು (ಮಂಗಳವಾರ) ಪತ್ರ ಬರೆಯುವ ಸಾಧ್ಯತೆ ಇದೆ.
ಹಿಂದುತ್ವ ನಾಯಕರ ಆಹ್ವಾನಕ್ಕೆ ವಿರೋಧ
ವಕ್ಫ್ ಮಸೂದೆಗೆ ಸಂಬಂಧಿಸಿದ ಸಮಿತಿಯ ಸಭೆಗೆ ಹಿಂದುತ್ವ ಸಂಘಟನೆಗಳ ನಾಯಕರನ್ನು ಆಹ್ವಾನಿಸಿದ್ದಕ್ಕೆ ಪ್ರತಿಪಕ್ಷಗಳ ಸಂಸದರು ವಿರೋಧ ವ್ಯಕ್ತಪಡಿಸಿದರು. ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ವಕ್ಫ್ ಕುರಿತು ಹಿಂದುತ್ವ ನಾಯಕರ ಅಭಿಪ್ರಾಯ ಕೇಳುವ ಔಚಿತ್ಯವನ್ನು ಪ್ರಶ್ನಿಸಿದರು.
ಮೂಲಭೂತ ಸಿದ್ದಾಂತ ಹೊಂದಿರುವ ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಂಸ್ಥೆಯು ‘ಹಿಂದೂ ರಾಷ್ಟ್ರ ನಿರ್ಮಾಣ’ದ ಗುರಿ ಹೊಂದಿವೆ. ಇಂತವರಿಗೆ ಆಹ್ವಾನ ನೀಡಿರುವುದು ಸರಿಯಲ್ಲ ಎಂದು ಸಮಿತಿ ಅಧ್ಯಕ್ಷ ಜಗದಾಂಬ ಪಾಲ್‌ಗೆ ಬರೆದ ಪತ್ರದಲ್ಲಿ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಹಿಂದುತ್ವ ಪರ ವಕೀಲರಾದ ವಿಷ್ಣು ಶಂಕರ್ ಜೈನ್, ಅಶ್ವಿನಿ ಉಪಾಧ್ಯಾಯ್, ಮಹಾರಾಷ್ಟ್ರದ ನಾಸಿಕ್‌ನ ಕಾಲಾರಾಮ್ ದೇಗುಲದ ಮಹಾಂತ ಸುಧೀರ್‌ಧಾಸ್ ಮಹಾರಾಜ್ ಅವರನ್ನು ಸಭೆಗೆ ಕರೆದಿದ್ದಕ್ಕೆ ಓವೈಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಜಂ-ಇಯತುಲ್-ಉಲೇಮಾ-ಎ-ಹಿಂದ್‌ನ ಮುಹಮ್ಮದ್ ಮದನಿ ಕೂಡ ಭಾಗವಹಿಸಿದ್ದರು. ತಿದ್ದುಪಡಿ ಮಸೂದೆಗೆ ಜಂ-ಇಯತುಲ್-ಉಲೇಮಾ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಇದನ್ನೂ ಓದಿ : ಬಂಗಾಳದ ಪ್ರತಿಭಟನಾನಿರತ ಕಿರಿಯ ವೈದ್ಯರ ಬೆಂಬಲಕ್ಕೆ ನಿಂತ ಐಎಂಎ; ರಾಷ್ಟ್ರವ್ಯಾಪಿ ಉಪವಾಸ ಸತ್ಯಾಗ್ರಹಕ್ಕೆ ನಿರ್ಧಾರ


