ವಕ್ಫ್ ತಿದ್ದುಪಡಿ ಮಸೂದೆಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯ ವಿರೋಧ ಪಕ್ಷದ ಸದಸ್ಯರು ಸೋಮವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಸಮಿತಿಯ ಅಧಿಕಾರಾವಧಿಯನ್ನು ಸಮಂಜಸವಾಗಿ ವಿಸ್ತರಿಸುವಂತೆ ಒತ್ತಾಯಿಸಿದ್ದಾರೆ. ಪ್ರತಿಪಕ್ಷಗಳು ಸ್ಪೀಕರ್ ಅವರಿಗೆ ನೀಡಿರುವ ಮನವಿ ಪತ್ರದಲ್ಲಿ, ಸಮಿತಿಯ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ವಿರುದ್ಧ ದೂರು ದಾಖಲಿಸಿದ್ದು, ನಿರ್ಣಾಯಕ ವಿಷಯದ ಕಲಾಪವನ್ನು ಬುಡಮೇಲು ಮಾಡಿದ್ದಾರೆ ಎಂದು ಆರೋಪಿಸಿವೆ. ವಕ್ಫ್ ಮಸೂದೆಯ
“ಸಮಿತಿಯ ಅಧ್ಯಕ್ಷರು ಸರಿಯಾದ ಪ್ರಕ್ರಿಯೆಗಳನ್ನು ಅನುಸರಿಸುತ್ತಿಲ್ಲ ಎಂದು ನಾವು ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದೇವೆ. ಅವರು ಆತುರಪಡುತ್ತಿದ್ದು, ಕಲಾಪವನ್ನು ಬುಡಮೇಲು ಮಾಡುತ್ತಿದ್ದಾರೆ” ಎಂದು ಡಿಎಂಕೆ ಸದಸ್ಯ ಎ. ರಾಜಾ ಸ್ಪೀಕರ್ ಅವರನ್ನು ಭೇಟಿಯಾದ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ವಕ್ಫ್ ತಿದ್ದುಪಡಿ ಮಸೂದೆಯು ಅಸ್ತಿತ್ವದಲ್ಲಿರುವ ಕಾನೂನಿಗೆ ಹಲವಾರು ಪ್ರಮುಖ ಬದಲಾವಣೆಗಳನ್ನು ಒಳಗೊಂಡಿರುವ ವಿಸ್ತಾರವಾದ ಶಾಸನವಾಗಿದೆ ಎಂಬುದನ್ನು ಮೊದಲು ಗಮನಿಸಬೇಕು. ಈ ಬದಲಾವಣೆಗಳು ಭಾರತದ ಜನಮುದಾಯದ ದೊಡ್ಡ ವರ್ಗದ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ, ವರದಿಯನ್ನು ಅಂತಿಮಗೊಳಿಸಲು ಕೇವಲ ಮೂರು ತಿಂಗಳ ಸಮಯವು ಅಸಮರ್ಪಕವಾಗಿದ್ದು, ಮಾತ್ರವಲ್ಲದೆ ಅನುಚಿತ ಶಿಫಾರಸುಗಳಿಗೆ ಕಾರಣವಾಗಲಿದೆ” ಎಂದು ಪ್ರತಿಪಕ್ಷಗಳು ಪತ್ರದಲ್ಲಿ ತಿಳಿಸಿವೆ.
“ಆದ್ದರಿಂದ ಸೂಕ್ತ ಸಮಾಲೋಚನೆಗಾಗಿ, ಸಮಿತಿಯ ಅಧಿಕಾರಾವಧಿಯನ್ನು ಸಮಂಜಸವಾದ ಸಮಯದವರೆಗೆ ವಿಸ್ತರಿಸಬೇಕು” ಎಂದು ಪತ್ರವು ಸ್ಪೀಕರ್‌ಗೆ ಆಗ್ರಹಿಸಿದೆ. ವಕ್ಫ್ ಮಸೂದೆಯ
ಸ್ಪೀಕರ್ ಅವರನ್ನು ಭೇಟಿಯಾದವರಲ್ಲಿ ಡಿಎಂಕೆ ನಾಯಕರಾದ ರಾಜಾ ಮತ್ತು ಎಂ. ಅಬ್ದುಲ್ಲಾ, ಕಾಂಗ್ರೆಸ್ ಸದಸ್ಯರಾದ ಸೈಯದ್ ನಾಸೀರ್ ಹುಸೇನ್, ಮೊಹಮ್ಮದ್ ಜಾವೇದ್ ಮತ್ತು ಇಮ್ರಾನ್ ಮಸೂದ್, ತೃಣಮೂಲ ಸದಸ್ಯರಾದ ಕಲ್ಯಾಣ್ ಬ್ಯಾನರ್ಜಿ ಮತ್ತು ಎಂ. ನಾದಿಮುಲ್ ಹಕ್, ಎಎಪಿ ಸದಸ್ಯ ಸಂಜಯ್ ಸಿಂಗ್, ಎಸ್‌ಪಿ ಸದಸ್ಯ ಮೊಹಿಬ್ಬುಲ್ಲಾ ಮತ್ತು ಎಐಎಂಐಎಂ ಸದಸ್ಯ ಅಸಾದುದ್ದೀನ್ ಓವೈಸಿ ಅವರು ಇದ್ದರು.
“ಸಮಿತಿಯ ಅಧ್ಯಕ್ಷರು ಜಂಟಿ ಸಂಸದೀಯ ಸಮಿತಿಯ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸುತ್ತಿಲ್ಲ ಮತ್ತು ನವೆಂಬರ್ 29 ರಂದು ಸಂಸತ್ತಿನಲ್ಲಿ ವರದಿಯನ್ನು ಮಂಡಿಸಬೇಕು ಎಂದು ಸ್ವಯಂ ಪ್ರೇರಿತವಾಗಿ ಘೋಷಿಸಿದ್ದಾರೆ. ಪ್ರಸ್ತಾವಿತ ಮಸೂದೆಯ ಭಿನ್ನಮತದ ಟಿಪ್ಪಣಿಗಳು ಮತ್ತು ಪ್ರತಿ ಷರತ್ತಿನ ಮೇಲೆ ಮತ ಚಲಾಯಿಸುವುದು ಸೇರಿದಂತೆ ಹಲವು ಕಾರ್ಯವಿಧಾನಗಳಿವೆ. ಇವೆಲ್ಲವೂ ಆಗಬೇಕು” ಎಂದು ಎ. ರಾಜಾ ಹೇಳಿದ್ದಾರೆ.
ಸಂಸದೀಯ ಸಮಿತಿಯು 25 ಸಭೆಗಳನ್ನು ನಡೆಸಿದ್ದು, ಅದರಲ್ಲಿ ಹಲವಾರು ಅಪ್ರಸ್ತುತ ಸಂಸ್ಥೆಗಳ ಪುರಾವೆಗಳನ್ನು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ, ಆದರೆ ಬಿಹಾರ, ದೆಹಲಿ ಮತ್ತು ಉತ್ತರ ಪ್ರದೇಶದಂತಹ ವಿವಿಧ ರಾಜ್ಯ ಸರ್ಕಾರಗಳ ಪ್ರಸ್ತುತಿಗಳು ಬಾಕಿ ಉಳಿದಿವೆ ಎಂದು ಅವರು ತಿಳಿಸಿದ್ದಾರೆ.
ಸಂಸದೀಯ ಸಮಿತಿಯಿಂದ ವರದಿಯನ್ನು ನಿರೀಕ್ಷಿಸಿ ಪ್ರಸ್ತುತ ಪ್ರಾರಂಭವಾಗಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ತನ್ನ ಶಾಸಕಾಂಗ ಕಾರ್ಯಸೂಚಿಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಪಟ್ಟಿ ಮಾಡಿದೆ.
ವಕ್ಫ್ ಮಂಡಳಿಗಳ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ‘ವಕ್ಫ್ ಕಾಯಿದೆ-1995’ ಅನ್ನು ತಿದ್ದುಪಡಿ ಮಾಡಲು ಈ ಮಸೂದೆಯು ಪ್ರಯತ್ನಿಸುತ್ತಿದೆ. ಆದರೆ ಭಾರತದಾದ್ಯಂತ ಈ ಮಸೂದೆಗೆ ವಿರೋಧ ವ್ಯಕ್ತವಾಗಿದ್ದು, ಕೇಂದ್ರ ಸರ್ಕಾರವು ವಕ್ಭ್ ಆಸ್ತಿಗಳನ್ನು ಕಬಳಿಸಿ, ಮುಸ್ಲಿಮರಿಗೆ ಅನ್ಯಾಯ ಎಸಗಲು ಇದನ್ನು ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಈಗಾಗಲೆ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ| ಪೊಲೀಸ್ ಕಸ್ಟಡಿಯಲ್ಲಿ ಇಬ್ಬರು ಮಹಿಳೆಯರಿಗೆ ಚಿತ್ರಹಿಂಸೆ ಪ್ರಕರಣ; ಎಸ್‌ಐಟಿ ತನಿಖೆಗೆ ಸುಪ್ರೀಂಕೋರ್ಟ್ ಆದೇಶ


