ವಕ್ಫ್ (ತಿದ್ದುಪಡಿ) ಕಾಯ್ದೆಯಿಂದ ಕೇಂದ್ರೀಯ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ಔಕಾಫ್ ಮಂಡಳಿಗಳಲ್ಲಿ ಮುಸ್ಲಿಮೇತರರು ಬಹುಮತ ಸಾಧಿಸಬಹುದು ಎಂಬ ಅರ್ಜಿದಾರರ ವಾದವನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ವಿರೋಧಿಸಿದೆ.
ವಕ್ಫ್ ಮಂಡಳಿಗಳ ಸಂಯೋಜನೆಯನ್ನು ಹಿಂದೂ, ಸಿಖ್ ಹಾಗೂ ಕ್ರೈಸ್ತ ಧಾರ್ಮಿಕ ದತ್ತಿ ಮಂಡಳಿಗಳ ಸಂಯೋಜನೆ ಜೊತೆ ಹೋಲಿಕೆ ಮಾಡುವ ಮೂಲಕ ಮುಸ್ಲಿಮರ ವಿರುದ್ಧ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದೆ.
ಸೈದ್ಧಾಂತಿಕವಾಗಿ ಮುಸ್ಲಿಮೇತರರು ಕೇಂದ್ರೀಯ ವಕ್ಫ್ ಕೌನ್ಸಿಲ್ ಮತ್ತು ಔಕಾಫ್ ಮಂಡಳಿಗಳಲ್ಲಿ ಬಹುಮತ ಸಾಧಿಸುತ್ತಾರೆ ಎಂಬ ವಕ್ಫ್ ತಿದ್ದುಪಡಿ ಕಾಯ್ದೆ ಪ್ರಶ್ನಿಸಿರುವ ಅರ್ಜಿದಾರರ ವಾದವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅಲ್ಲಗಳೆದ್ದಾರೆ.
ಈ ಸಂಬಂಧ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ ಜಂಟಿ ಸಂಸದೀಯ ಸಮಿತಿಗೆ ಭರವಸೆ ನೀಡಿದ ಪತ್ರದ ಪ್ರತಿ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್ ಪ್ರತಿಯನ್ನು ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಎ.ಜಿ ಮಸಿಹ್ ಅವರ ಪೀಠ ಮುಂದೆ ಪ್ರಸ್ತುತಪಡಿಸಿದ್ದಾರೆ.
ಹಿರಿಯ ವಕೀಲ ಕಪಿಲ್ ಸಿಬಲ್ ಮಂಗಳವಾರ ಸುಮಾರು 30 ನಿಮಿಷಗಳ ಕಾಲ ವಕ್ಫ್ ಕೌನ್ಸಿಲ್ ಮತ್ತು ಮಂಡಳಿಗಳು ತಮ್ಮ ಅಲ್ಪಸಂಖ್ಯಾತ ಸ್ಥಾನವನ್ನು ಕಳೆದುಕೊಳ್ಳುತ್ತಿವೆ ಎಂಬ ಮುಸ್ಲಿಮರಲ್ಲಿರುವ ಆತಂಕವನ್ನು ಎತ್ತಿ ತೋರಿಸಿದ್ದಾರೆ. ಸರ್ಕಾರವು ವಕ್ಫ್ ತಿದ್ದುಪಡಿ ಕಾಯ್ದೆ 2025 ರ ಮೂಲಕ ಕನಿಷ್ಠ ಸೈದ್ಧಾಂತಿಕವಾಗಿ ಈ ಎರಡು ಸಂಸ್ಥೆಗಳಲ್ಲಿ ಮುಸ್ಲಿಮೇತರರನ್ನು ಬಹುಮತವನ್ನಾಗಿ ಮಾಡಲು ಉದ್ದೇಶಿಸಿದೆ ಎಂದು ಹೇಳಿದ್ದಾರೆ.
ಸರ್ಕಾರ ಹಿಂದೂ, ಸಿಖ್ ಮತ್ತು ಕ್ರೈಸ್ತ ಧರ್ಮಗಳ ಧಾರ್ಮಿಕ ದತ್ತಿ ಮಂಡಳಿಗಳಲ್ಲಿ ಆ ಧರ್ಮಗಳಲ್ಲಿ ನಂಬಿಕೆ ಇಲ್ಲದವರನ್ನು ಸದಸ್ಯರಾಗಿ ಮಾಡಲು ಪ್ರಯತ್ನಿಸಿದರುವಾಗ, ಮುಸ್ಲಿಮರ ವಕ್ಫ್ ಮಂಡಳಿಗಳಿಗೆ ಮಾತ್ರ ಏಕೆ ಈ ನಿಯಮ? ಎಂದು ಸಿಬಲ್ ಪ್ರಶ್ನಿಸಿದ್ದಾರೆ.
ಸರ್ಕಾರದ ಈ ಕ್ರಮವನ್ನು ಧರ್ಮಾಧಾರಿತ ತಾರತಮ್ಯ ಎಂದು ಕರೆದ ಸಿಬಲ್, ಇದು ಸಂವಿಧಾನದ ವಿಧಿ 15 ರ ಅಡಿಯಲ್ಲಿ ಖಾತರಿಪಡಿಸಲಾದ ತಾರತಮ್ಯ ವಿರೋಧಿ, ಸಮಾನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ತುಷಾರ್ ಮೆಹ್ತಾ, “ಹಿಂದೂ ಧಾರ್ಮಿಕ ದತ್ತಿ ಮಂಡಳಿ ಸದಸ್ಯರು ದೇವಸ್ಥಾನಗಳಿಗೆ ಹೋಗುತ್ತಾರೆ ಮತ್ತು ಪೂಜಾಕ್ರಮಗಳ ಮೇಲ್ವಿಚಾರಣೆ ನಡೆಸುತ್ತಾರೆ ಎಂದಿದ್ದಾರೆ.
ದತ್ತಿ ಆಯುಕ್ತರು ಹಿಂದೂಯೇತರರಾಗಿರಬಹುದು, ಅವರು ಅರ್ಚಕರನ್ನು (ಪೂಜಾರಿಗಳನ್ನು) ನೇಮಿಸಬಹುದು ಮತ್ತು ಆಚರಣೆಗಳನ್ನು ಮಾಡದಿದ್ದಕ್ಕಾಗಿ ಅಥವಾ ಅನೈತಿಕ ಚಟುವಟಿಕೆಗಳಿಗಾಗಿ ಅವರನ್ನು ತೆಗೆದುಹಾಕಬಹುದು. ಅರ್ಚಕರ ನೇಮಕಾತಿಯನ್ನು ಜಾತ್ಯತೀತ ಚಟುವಟಿಕೆ ಎಂದು ಕರೆಯುವ ಮೂಲಕ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಎಂದು ಮಹ್ತಾ ಹೇಳಿದ್ದಾರೆ.
ಹಿಂದೂ ವೈಯಕ್ತಿಕ ಕಾನೂನುಗಳನ್ನು 1956ರಲ್ಲಿ ಕ್ರೋಡೀಕರಿಸಲಾಗಿದೆ. ಆದರೆ, ಮುಸ್ಲಿಮರು ಶರಿಯಾ ಕಾನೂನಿನಿಂದ ನಿಯಂತ್ರಿಸಲ್ಪಡುವುದನ್ನು ಮುಂದುವರೆಸಿದ್ದಾರೆ. ಈ ತಾರತಮ್ಯವನ್ನು ಎತ್ತಿ ತೋರಿಸುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, 1996ರಲ್ಲಿ ಅಂತಹ ಹೋಲಿಕೆ ಸಾಧ್ಯವಿಲ್ಲ, ವೈಯಕ್ತಿಕ ಕಾನೂನು ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸುಧಾರಣೆಗಳು ಕ್ರಮೇಣ ನಡೆಯುವ ಪ್ರಕ್ರಿಯೆಯಾಗಿದೆ ಎಂದು ಹೇಳಿತ್ತು ಎಂದು ವಿವರಿಸಿದ್ದಾರೆ.
ವಕ್ಫ್ ಮಂಡಳಿಗಳನ್ನು ಹಿಂದೂ ಧಾರ್ಮಿಕ ದತ್ತಿ ಮಂಡಳಿಗಳು, ಧರ್ಮ ಮತ್ತು ಆಚರಣೆಗಳೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ವಕ್ಫ್ ಮಂಡಳಿಗಳು ವಕ್ಫ್ ಆಸ್ತಿಗಳ ನಿರ್ವಹಣೆಗೆ ಸಂಬಂಧಿಸಿದ್ದಾಗಿವೆ. ಅದು ಜಾತ್ಯತೀತ ಚಟುವಟಿಕೆಯಾಗಿದೆ. ಸರ್ಕಾರ ಶಾಸನದ ಮೂಲಕ ಅದನ್ನು ನಿಯಂತ್ರಿಸುವ ಅಧಿಕಾರವನ್ನು ಹೊಂದಿದೆ. ಯಾವುದೇ ಅರ್ಜಿದಾರರು ವಕ್ಫ್ ತಿದ್ದುಪಡಿ ಕಾಯ್ದೆ, 2025 ಅನ್ನು ಜಾರಿಗೆ ತರುವ ಸಂಸತ್ತಿನ ಶಾಸಕಾಂಗ ಸಾಮರ್ಥ್ಯವನ್ನು ಪ್ರಶ್ನಿಸಿಲ್ಲ ಎಂದು ತುಷಾರ್ ಮೆಹ್ತಾ ಹೇಳಿದ್ದಾರೆ.
ಪ್ರಾಚೀನ ಸ್ಮಾರಕಗಳನ್ನು ವಕ್ಫ್ ವ್ಯಾಪ್ತಿಯಿಂದ ಹೊರತರುವ ಕುರಿತು ಜೆಪಿಸಿ ಭಾರತೀಯ ಪುರಾತತ್ವ ಇಲಾಖೆಯೊಂದಿಗೆ ಸಮಾಲೋಚಿಸಿದೆ. ಸಂರಕ್ಷಿತ ಮತ್ತು ಪ್ರಾಚೀನ ಸ್ಮಾರಕಗಳಲ್ಲಿ ವರ್ಷಗಳಿಂದ ನಡೆಯುತ್ತಿರುವ ಧಾರ್ಮಿಕ ಚಟುವಟಿಕೆಗಳನ್ನು ನಿಲ್ಲಿಸಲಾಗಿಲ್ಲವಾದರೂ, ಈ ಸ್ಮಾರಕಗಳನ್ನು ವಕ್ಫ್‌ಗಳಾಗಿ ನಿರ್ವಹಿಸುವ ವಕ್ಫ್ ಮಂಡಳಿಗಳು ಅಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಏಕಪಕ್ಷೀಯವಾಗಿ ಅನುಮತಿಸಿವೆ. ಇದು ಸ್ಮಾರಕಗಳ ಸಂರಕ್ಷಣಾ ಕಾರ್ಯಗಳಿಗೆ ಅಡ್ಡಿಯಾಗಿದೆ ಎಂದು ಮೆಹ್ತಾ ವಾದಿಸಿದ್ದಾರೆ.
ಕೆಲವು ಸಂದರ್ಭಗಳಲ್ಲಿ, ವಕ್ಫ್ ಮಂಡಳಿಗಳು ಪ್ರಾಚೀನ ಸ್ಮಾರಕಗಳ ದುರಸ್ತಿ ಮತ್ತು ಪುನಃಸ್ಥಾಪನೆ ಕಾರ್ಯಗಳನ್ನು ಕೈಗೊಳ್ಳದಂತೆ ಎಎಸ್‌ಐ ನಿರ್ಬಂಧಿಸಿವೆ ಎಂದು ಮೆಹ್ತಾ ಹೇಳಿದ್ದಾರೆ.
ಛತ್ತೀಸ್‌ಗಢ ಎನ್‌ಕೌಂಟರ್: ಮಾವೋವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಬಸವರಾಜು ಹತ್ಯೆ


