ಭಾರತ ಸಂವಿಧಾನದ 25-28 ವಿಧಿಯು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ದೇಶದ ಪ್ರಜೆಗಳಿಗೆ ಖಾತರಿಪಡಿಸುತ್ತದೆ. ಇದು ದೇಶದ ಎಲ್ಲ ನಾಗರಿಕರಿಗೂ ಆತ್ಮಸಾಕ್ಷಿಯ ಸ್ವಾತಂತ್ರ್ಯದ ಹಕ್ಕನ್ನು, ತಮ್ಮ ಧರ್ಮವನ್ನು ಮುಕ್ತವಾಗಿ ಆಚರಿಸುವ ಹಕ್ಕನ್ನು, ತಮ್ಮದೇ ಆದ ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಹಕ್ಕು ಸೇರಿದಂತೆ ಹಲವು ಹಕ್ಕುಗಳನ್ನು ನೀಡುತ್ತದೆ. ಇದರಲ್ಲಿ ’ವಕ್ಫ್’ ಕೂಡ ಸೇರಿದೆ.
ಸರಳವಾಗಿ ಹೇಳಬಹುದಾದರೆ ’ವಕ್ಪ್’ ಎಂಬುವುದು ಕೂಡಾ ಮುಸ್ಲಿಮರ ಒಂದು ಧಾರ್ಮಿಕ ಆಚರಣೆ.
’ವಕ್ಫ್’ ಎಂದರೆ, ಒಬ್ಬ ಮುಸ್ಲಿಂ ಅಥವಾ ಒಂದು ಮುಸ್ಲಿಂ ಗುಂಪು ತಮ್ಮ ಸ್ವಂತ ಆಸ್ತಿಯನ್ನು ಅಥವಾ ತಮಗೆ ಉಡುಗೊರೆಯಾಗಿ ಸಿಕ್ಕ ಆಸ್ತಿಯನ್ನು ಅಥವಾ ಪಿತ್ರಾರ್ಜಿತ ಆಸ್ತಿಯನ್ನು (ಅದು ಚರಾಸ್ತಿ ಅಥವಾ ಸ್ಥಿರಾಸ್ತಿಯಾದರೂ) ಮನಸಾರೆ ’ದೇವರ ಹೆಸರಿನಲ್ಲಿ ಅರ್ಪಿಸುವ’ ಒಂದು ಆಚರಣೆಯಾಗಿದೆ. ಈ ಆಚರಣೆಯು ಅರ್ಪಿಸುವ ವ್ಯಕ್ತಿ ಮತ್ತು ಆತ ನಂಬುವ ದೇವರ ನಡುವಿನ ಒಂದು ಒಪ್ಪಂದ. ಹಾಗಾಗಿಯೆ ಇದೊಂದು ಸರಳ ಧಾರ್ಮಿಕ ಆಚರಣೆ. ಭಾರತ ಸಂವಿಧಾನ ಹೇಳುವ ’ಆತ್ಮಸಾಕ್ಷಿಯ ಸ್ವಾತಂತ್ರ್ಯ’ದ ಅಡಿಯಲ್ಲಿ ಬರುವ ಆಚರಣೆಯ ಹಕ್ಕು.
ಉದಾಹರಣೆಗೆ ಒಂದು ಮುಸ್ಲಿಂ ಗುಂಪು ದುಡ್ಡು ಸಂಗ್ರಹಿಸಿ ಅದರಲ್ಲಿ ಒಂದಿಷ್ಟು ಜಾಗ ಖರೀದಿಸಿ ಮಸೀದಿ ಕಟ್ಟಿ ಅದನ್ನು ದೇವರಿಗೆ ಅರ್ಪಿಸುತ್ತಾರೆ. ಅಂದಿನಿಂದ ಆ ಮಸೀದಿ ಯಾವುದೇ ವ್ಯಕ್ತಿಯ ಆಸ್ತಿಯಾಗಿ ಇರುವುದಿಲ್ಲ, ಬದಲಾಗಿ ಅದು ಮುಸ್ಲಿಮರ ಸಾಮುದಾಯಿಕ ಸೊತ್ತಾಗಿರುತ್ತದೆ. ಇನ್ನೂ ಮುಂದುವರಿದು ಹೇಳುವುದಾದರೆ ತಮ್ಮ ಆಸ್ತಿಯನ್ನು ದೇವರಿಗಾಗಿ ಅರ್ಪಿಸಿದ್ದೇನೆ ಎಂದು ಸಂಕಲ್ಪಿಸುವುದಾಗಿದೆ ’ವಕ್ಫ್’. ನಂತರ ಅದನ್ನು ಸಮುದಾಯದ ಸೇವೆಗೆ, ಸಬಲೀಕರಣದ ಬಳಕೆಗೆ ಮೀಸಲು ಇಡಬೇಕಾಗುತ್ತದೆ.
ಇಸ್ಲಾಮಿಕ್ ನಿಯಮಗಳ ಪ್ರಕಾರ, ಒಮ್ಮೆ ಯಾರಾದರೂ ತಮ್ಮ ಆಸ್ತಿಯನ್ನು ’ವಕ್ಫ್’ ಅಂದರೆ ’ದೇವರಿಗಾಗಿ ಅರ್ಪಿಸಿದರೆ’ ಅದರ ಮಾಲೀಕ ಅವರಾಗಿರುವುದಿಲ್ಲ, ಬದಲಾಗಿ ’ದೇವರು’ ಅದರ ಮಾಲೀಕನಾಗುತ್ತಾನೆ. ಹಾಗಾಗಿ ಒಮ್ಮೆ ತಮ್ಮ ಆಸ್ತಿಯನ್ನು ’ವಕ್ಫ್’ ಎಂದು ಸಂಕಲ್ಪಿಸಿದರೆ, ಅದರ ಮೇಲೆ ಅವರಿಗೆ ಯಾವುದೇ ರೀತಿಯ ಹಕ್ಕು ಇರುವುದಿಲ್ಲ. ಸ್ವತಃ ಆಸ್ತಿಯನ್ನು ’ವಕ್ಫ್’ ಮಾಡಿದ ವ್ಯಕ್ತಿಯೇ ಈ ಸಂಕಲ್ಪವನ್ನು ವಾಪಸ್ಸು ಪಡೆಯುವಂತೆ ಇಲ್ಲ. ಅಷ್ಟೇ ಅಲ್ಲದೆ, ಈ ಆಸ್ತಿಗಳನ್ನು ಆತ ಯಾರಿಗೂ ಮಾರಾಟ ಮಾಡುವಂತೆ, ಉಡುಗೊರೆ ನೀಡುವಂತೆ ಹಾಗೂ ಯಾವುದಕ್ಕೋ ಬದಲಿಯಾಗಿ ನೀಡುವಂತೆಯು ಇಲ್ಲ ಎಂದು ಇಸ್ಲಾಮಿಕ್ ನಿಯಮಗಳು ಹೇಳುತ್ತದೆ.
ಇದನ್ನು ಸುಪ್ರೀಂಕೋರ್ಟ್ ಕೂಡಾ ಮಾನ್ಯ ಮಾಡಿದ್ದು, ’ಒಮ್ಮೆ ವಕ್ಫ್ ಆದರೆ, ಅದು ಎಂದೆಂದಿಗೂ ವಕ್ಫ್’ ಎಂಬ ಆದೇಶವನ್ನು 1999ರ ಸೈಯದ್ ಅಲಿ ಮತ್ತು ಆಂಧ್ರ ವಕ್ಫ್ ಪ್ರಕರಣದಲ್ಲಿ ತೀರ್ಪು ನೀಡಿತ್ತು.
ವಕ್ಫ್ ಬೋರ್ಡ್
ಜನರು ವಕ್ಫ್ ಎಂದು ಸಂಕಲ್ಪಿಸುವ ಎಲ್ಲಾ ಆಸ್ತಿಗಳನ್ನು ಸಮುದಾಯದ ಒಳಿತಿನ ಉದ್ದೇಶಕ್ಕಾಗಿ ಬಳಕೆಯಾಗುತ್ತಿದೆಯೇ ಎಂಬುದನ್ನು ಮೇಲ್ವಿಚಾರಣೆ ಮಾಡಲು ಸರ್ಕಾರ ರಚಿಸಿರುವ ಒಂದು ಮಂಡಳಿಯಾಗಿದೆ ’ವಕ್ಫ್ ಬೋರ್ಡ್’. ಅಂದರೆ ವ್ಯಕ್ತಿಯೊಬ್ಬ ತನ್ನ ಮುಂದಿನ ಆಸ್ತಿ ಯಾರಿಗೆ ಸೇರಬೇಕು ಎಂದು ಉಯಿಲು ಬರೆದಿದ್ದರೆ, ಅದನ್ನು ಅವರ ಇಚ್ಛೆಯಂತೆ ಅವರ ಹತ್ತಿರದವರು ನಡೆಸಿಕೊಡಬೇಕಾಗುತ್ತದೆ. ಇಲ್ಲವೆಂದರೆ ಇಲ್ಲಿನ ಪ್ರಭುತ್ವ ಅದನ್ನು ಅವರ ಇಚ್ಛೆಯಂತೆ ನಡೆಸಿಕೊಡುವಂತೆ ಒಂದು ವ್ಯವಸ್ಥೆ ಮಾಡಿ ಅದರ ಮೇಲ್ವಿಚಾರಣೆ ಮಾಡುವುದಿಲ್ಲವೇ? ಹಾಗೆ ವಕ್ಫ್ ಬೋರ್ಡ್ ಕೂಡಾ ಸರ್ಕಾರವೇ ರಚಿಸಿರುವ ಮೇಲ್ವಿಚಾರಣೆ ಮಂಡಳಿ.
ವಕ್ಫ್ ಎಂದು ಸಂಕಲ್ಪಿಸಿದ, ಮಸೀದಿ, ಮದರಸ, ಜಮೀನು, ಈದ್ಗಾ, ಕಟ್ಟಡ, ಸ್ಮಶಾನ ಸೇರಿದಂತೆ ಎಲ್ಲಾ ಆಸ್ತಿಗಳನ್ನು ಮೇಲ್ವಿಚಾರಣೆ, ರಕ್ಷಣೆ ಮಾಡುವುದು ’ವಕ್ಫ್ ಬೋರ್ಡ್’ ಜವಾಬ್ದಾರಿಯಾಗಿದೆ. ಹಾಗಾಗಿಯೇ ವಕ್ಫ್ ಬೇರೆ, ವಕ್ಫ್ ಬೋರ್ಡ್ ಎಂಬುವುದು ಬೇರೆಬೇರೆ ಸಂಗತಿಗಳಾಗಿವೆ.

ವಕ್ಫ್ ಆಸ್ತಿಗಳನ್ನು ರಕ್ಷಿಸುವ ಉದ್ದೇಶದಿಂದ, ಎಲ್ಲಾ ರಾಜ್ಯಗಳು ವಕ್ಫ್ ಬೋರ್ಡ್ ರಚಿಸಬೇಕು ಎಂದು 1954ರಲ್ಲಿ ಕೇಂದ್ರ ಸರ್ಕಾರವು ’ವಕ್ಫ್ ಕಾಯ್ದೆ’ಯನ್ನು ಪರಿಚಯಿಸುತ್ತದೆ. ಅದರಂತೆ ದೇಶದ ಎಲ್ಲಾ ರಾಜ್ಯಗಳು ತಮ್ಮದೇ ಆದ ವಕ್ಫ್ ಬೋರ್ಡ್‌ಅನ್ನು ರಚಿಸುತ್ತದೆ. ಭಾರತದಲ್ಲಿ, ಸೆಂಟ್ರಲ್ ವಕ್ಫ್ ಕೌನ್ಸಿಲ್ (CWC)ಅನ್ನು 1964ರಲ್ಲಿ 1954ರ ವಕ್ಫ್ ಕಾಯಿದೆಯಡಿಯಲ್ಲಿ ರಾಜ್ಯ ಮಟ್ಟದ ವಕ್ಫ್ ಮಂಡಳಿಗಳಿಗೆ ಸಲಹೆ ನೀಡುವ ಉನ್ನತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಸ್ಥಾಪಿಸಲಾಯಿತು.
ದೇಶಾದ್ಯಂತ ವಕ್ಫ್ ಆಡಳಿತದ ನೀತಿ ನಿರೂಪಣೆ ಮತ್ತು ಮೇಲ್ವಿಚಾರಣೆಯನ್ನು ಸೆಂಟ್ರಲ್ ವಕ್ಫ್ ಕೌನ್ಸಿಲ್ ಮಾಡುತ್ತದೆ. ಕಾಯ್ದೆಯಂತೆ ವಕ್ಫ್ ಬೋರ್ಡ್ ಎಂಬುದು ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಆದರೆ, ಕಾಯ್ದೆಯನ್ನು ಉಲ್ಲಂಘಿಸದೆ ಇದಕ್ಕೆ ನಿಯಮಗಳನ್ನು ರೂಪಿಸುವುದು ಮಾತ್ರ ರಾಜ್ಯ ಸರ್ಕಾರವಾಗಿದೆ. ಈ ನಿಯಮಗಳ ಪ್ರಕಾರ ರಾಜ್ಯ ವಕ್ಫ್ ಬೋರ್ಡ್‌ಗಳು ನಡೆಯುತ್ತವೆ.
ವಕ್ಫ್ ಕಾಯ್ದೆಯ ಪ್ರಕಾರ, ಬೋರ್ಡ್‌ನಲ್ಲಿ ಒಬ್ಬ ಮುಸ್ಲಿಂ ಸಂಸದ, ಇಬ್ಬರು ಮುಸ್ಲಿಂ ಶಾಸಕರು ಅಥವಾ ಪರಿಷತ್ ಸದಸ್ಯರು, ಇಬ್ಬರು ಮುತವಲ್ಲಿಗಳು, ಒಬ್ಬ ಮುಸ್ಲಿಂ ಬಾರ್ ಕೌನ್ಸಿಲ್ ಸದಸ್ಯ ಇರಬೇಕು. ಈ ಎಲ್ಲಾ 6 ಸದಸ್ಯರು ಚುನಾಯಿತರಾಗಿ ಬೋರ್ಡ್‌ಗೆ ಆಯ್ಕೆಯಾಗಬೇಕಾಗಿದೆ. ಉಳಿದಂತೆ ನಾಲ್ಕು ಜನರನ್ನು ಆಯಾ ರಾಜ್ಯ ಸರ್ಕಾರಗಳು ಆಯ್ಕೆ ಮಾಡುತ್ತದೆ. ಈ ನಾಲ್ಕು ಜನರಲ್ಲಿ ಒಬ್ಬ ಸುನ್ನಿ ವಿದ್ವಾಂಸ, ಒಬ್ಬ ಶಿಯಾ ವಿದ್ವಾಂಸ, ಒಬ್ಬ ಮುಸ್ಲಿಂ ಸಾಮಾಜಿಕ ಹೋರಾಟಗಾರ ಹಾಗೂ ಒಬ್ಬ ಮುಸ್ಲಿಂ ಐಎಎಸ್ ಅಧಿಕಾರಿಗಳು ಇರುತ್ತಾರೆ. ಇವರನ್ನು ಸರ್ಕಾರವೇ ಆಯ್ಕೆ ಮಾಡುತ್ತದೆ.
ಇದರಲ್ಲಿ ಇಬ್ಬರು ಮಹಿಳೆಯರು ಇರಬೇಕು ಎಂದು ಕಾಯ್ದೆ ಹೇಳುತ್ತದೆ. ಕಳೆದ 10 ವರ್ಷಗಳಲ್ಲಿ ಕರ್ನಾಟಕ ವಕ್ಫ್ ಬೋರ್ಡ್‌ನಲ್ಲಿ ಕನಿಷ್ಠ ಇಬ್ಬರು ಮಹಿಳೆಯರು ಇದ್ದಾರೆ.
ವಕ್ಫ್ ಬೋರ್ಡ್ ಕಾರ್ಯಾಚರಣೆಗಳು
ವಕ್ಫ್ ಆಸ್ತಿಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಯನ್ನು ಸಾಮಾನ್ಯವಾಗಿ ವಕ್ಫ್ ಬೋರ್ಡ್‌ಗಳು ಮಾಡುತ್ತದೆ. ಈ ಮಂಡಳಿ ದಾನಿಗಳ ಇಚ್ಛೆಗೆ ಅನುಗುಣವಾಗಿ ಮತ್ತು ಇಸ್ಲಾಮಿಕ್ ಕಾನೂನಿಗೆ ಅನುಸಾರವಾಗಿ ಸ್ವತ್ತುಗಳನ್ನು ಬಳಸಿಕೊಳ್ಳುವುದನ್ನು ಖಾತ್ರಿಪಡಿಸುವ ಜವಾಬ್ದಾರಿಯನ್ನು ಹೊಂದಿದೆ. ವಕ್ಫ್ ಆಸ್ತಿಗಳನ್ನು ಯಾರಿಗೂ ಮಾರುವಂತಿಲ್ಲ ಎಂಬುವುದು ಕಾನೂನು. ಆದರೆ, 2014 ಲೀಸ್ ನಿಯಮಗಳ ಪ್ರಕಾರ, ಈ ಆಸ್ತಿಗಳನ್ನು ಲೀಸ್ ಅಥವಾ ಬಾಡಿಗೆಗೆ ಕೊಡಬಹುದಾಗಿದೆ.
ಈ ನಿಯಮಗಳ ಪ್ರಕಾರ, ಆಸ್ತಿಯ ಮಾರುಕಟ್ಟೆ ಮೌಲ್ಯದ ಬಾಡಿಗೆಯೊಂದಿಗೆ ವ್ಯವಹಾರಿಕ ಉದ್ದೇಶಗಳಿಗಾಗಿ 2%, ಆಸ್ಪತ್ರೆಗಳಿಗೆ 1.5%, ಶಿಕ್ಷಣ ಸಂಸ್ಥೆಗಳಿಗೆ 1% ಬಾಡಿಗೆಗೆ ನೀಡಬಹುದಾಗಿದೆ. ಆದಾಗ್ಯೂ, ಇದನ್ನು 11 ತಿಂಗಳಿಗೆ ಬಾಡಿಗೆಗೆ ಅಥವಾ ಲೀಸ್‌ಗೆ ನೀಡುವ ಅಧಿಕಾರ ಪ್ರಸ್ತುತ ವಕ್ಫ್ ಆಸ್ತಿಯನ್ನು ನೋಡಿಕೊಳ್ಳುತ್ತಿರುವ ಮುತವಲ್ಲಿಗಿದೆ. ವಕ್ಫ್ ಬೋರ್ಡ್‌ಗೆ 3 ವರ್ಷಗಳವರೆಗೆ ಬಾಡಿಗೆಗೆ ಅಥವಾ ಲೀಸ್‌ಗೆ ನೀಡುವ ಅಧಿಕಾರ ಇದ್ದು, ಸರ್ಕಾರಗಳಿಗೆ 30 ವರ್ಷಗಳ ಕಾಲ ಈ ಆಸ್ತಿಯನ್ನು ಬಾಡಿಗೆಗೆ ಅಥವಾ ಲೀಸ್‌ಗೆ ನೀಡುವ ಅಧಿಕಾರವಿದೆ.
ವಕ್ಫ್ ಆಸ್ತಿಯ ಅಗಾಧತೆ!
ಒಂದು ವಾದದಂತೆ, ಕರ್ನಾಟಕವೊಂದರಲ್ಲೆ 1 ಲಕ್ಷದ 20 ಸಾವಿರ ಎಕರೆ ಜಮೀನು ವಕ್ಫ್ ಆಸ್ತಿಯಿತ್ತು. ಆದರೆ ಈ ಬೃಹತ್ ಮೊತ್ತದ ಜಮೀನು ಕ್ರಮೇಣ ಒತ್ತುವರಿಯಾಗಿ, ಪ್ರಸ್ತುತ ಬೋರ್ಡ್ ಅಡಿಯಲ್ಲಿ ಕೇವಲ 22 ಸಾವಿರ ಎಕರೆ ಜಮೀನು ಮಾತ್ರವೇ ನೋಂದಣಿಯಾಗಿ ಗುರುತಿಸಲ್ಪಟ್ಟಿದೆ. ಈ ಬೃಹತ್ ಜಮೀನಿನ ಅತೀ ದೊಡ್ಡ ಒತ್ತುವರಿದಾರ ರಾಜ್ಯ ಸರ್ಕಾರವೆ ಆಗಿದೆ ಎಂದು ಹೇಳುತ್ತಾರೆ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷ ಶಾಫಿ ಸಅದಿ ನಂದಾವರ. ಬಹಳ ಮುಖ್ಯವಾಗಿ ರಾಜ್ಯದಲ್ಲಿ ವಕ್ಫ್ ಆಸ್ತಿ ಒತ್ತುವರಿಯಾಗಲು ಪ್ರಮುಖ ಕಾರಣ ಭೂಸುಧಾರಣೆ ಕಾಯ್ದೆ ಮತ್ತು ಇನಾಂ ರದ್ದತಿ ಕಾಯ್ದೆಗಳಾಗಿವೆ.
ಚಿಂತಕ ಶಿವಸುಂದರ್ ಅವರು ನ್ಯಾಯಪಥ ಪತ್ರಿಕೆಯೊಂದಿಗೆ ಮಾತನಾಡಿ, “ಭಾರತೀಯ ಸೇನೆ ಮತ್ತು ರೈಲು ಇಲಾಖೆ ಬಿಟ್ಟರೆ ವಕ್ಫ್ ಬೋರ್ಡ್‌ಗೆ ಅತ್ಯಂತ ಹೆಚ್ಚು ಜಮೀನು ಇದೆ ಎಂದು ವ್ಯಾಪಕವಾಗಿ ಪ್ರಚಾರ ಮಾಡಲಾಗುತ್ತಿದೆ. ವಕ್ಫ್‌ಗೆ ಈ ಮೊದಲು ಬೃಹತ್ ಮಟ್ಟದ ಜಮೀನು ಇದ್ದಿದ್ದು ನಿಜವಾದರೂ, ಪ್ರಸ್ತುತ ದೇಶದಾದ್ಯಂತ ವಕ್ಫ್ ಬೋರ್ಡ್ ಅಡಿಯಲ್ಲಿ ಇರುವ ಭೂಮಿ ಕೇವಲ 10 ಲಕ್ಷ ಎಕರೆ ಮಾತ್ರ. ಹಾಗೆ ನೋಡಿ ಈ ದೇಶದಲ್ಲಿ ಮಠ-ಮಂದಿರಗಳಿಗೆ ಅದಕ್ಕಿಂತಲೂ ಹೆಚ್ಚಿನ ಭೂಮಿ ಇದೆ” ಎಂದು ಹೇಳುತ್ತಾರೆ.
“ತಮಿಳುನಾಡಿನ ದೇವಸ್ಥಾನ ಮತ್ತು ಮಠಗಳ ಸುಪರ್ದಿಯಲ್ಲಿ ಸುಮಾರು 4.78 ಲಕ್ಷ ಎಕರೆ ಭೂಮಿಯಿದ್ದರೆ, ಆಂಧ್ರಪ್ರದೇಶದ ದೇವಸ್ಥಾನ ಮತ್ತು ಮಠಗಳ ಅಡಿಯಲ್ಲಿ 7 ಲಕ್ಷ ಎಕರೆಗಿಂತಲೂ ಹೆಚ್ಚು ಜಮೀನು ಇವೆ. ಇವೆರಡು ರಾಜ್ಯಗಳಲ್ಲೇ ಸುಮಾರು 11 ಲಕ್ಷ ಎಕರೆಗಿಂತಲೂ ಹೆಚ್ಚು ಭೂಮಿ ದೇವಸ್ಥಾನ ಮತ್ತು ಮಠಗಳಿಗೆ ಇವೆ. ಆದರೆ ವಕ್ಫ್‌ಗೆ ಇರುವುದು ಇಡೀ ದೇಶದಲ್ಲೇ ಕೇವಲ 10 ಲಕ್ಷ ಎಕರೆ ಮಾತ್ರ ಎಂದು ಶಿವಸುಂದರ್ ಅವರು ವಾದಿಸುತ್ತಾರೆ.
ನ್ಯಾಯಪಥ ಪತ್ರಿಕೆ ಜೊತೆಗೆ ಮಾತನಾಡಿದ ಶಾಫಿ ಸಅದಿ ನಂದಾವರ ಅವರು, “ಬಿಜಾಪುರದಲ್ಲಿ ಸುಮಾರು 15 ಸಾವಿರ ಎಕರೆ ವಕ್ಫ್ ಆಗಿದ್ದು ಜಮೀನು ಇತ್ತು. ಆದರೆ ಇನಾಂ ರದ್ದತಿ ಕಾಯ್ದೆಯ ಕಾರಣಕ್ಕೆ ಬಿಜಾಪುರದ ಈ ಜಮೀನು ವಕ್ಫ್‌ಯಿಂದ ಕೈತಪ್ಪಿ ಹೋಗಿದೆ. ಇತ್ತೀಚೆಗೆ ಬಿಜಾಪುರದಲ್ಲಿ ನಡೆದ ರೈತರ ಜಮೀನು ವಿವಾದಕ್ಕೂ ಇದುವೇ ಕಾರಣ” ಎಂದು ಹೇಳಿದರು. “ಇನಾಂ ರದ್ದತಿಯ ಕಾರಣಕ್ಕೆ ಬಾಬಾಬುಡನ್ ಗಿರಿ ದರ್ಗಾದ ಭೂಮಿ ಕೂಡಾ ವಕ್ಫ್ ಕೈತಪ್ಪಿ ಹೋಗಿದೆ” ಎಂದು ಚಿಂತಕ ಶಿವಸುಂದರ್ ಅವರು ಹೇಳುತ್ತಾರೆ.
ವಕ್ಫ್ ವಿರುದ್ಧ ಕೋರ್ಟ್‌ಗೆ ಹೋಗಲು ಆಗುವುದಿಲ್ಲ ಎಂಬ ಶುದ್ಧ ಸುಳ್ಳು
ವಕ್ಫ್ ವಿವಾದಗಳ ವಿರುದ್ಧ ನ್ಯಾಯಾಲಯಕ್ಕೆ ದೂರು ಸಲ್ಲಿಸಲು ಆಗುವುದಿಲ್ಲ ಎಂಬ ಸುಳ್ಳನ್ನು ಬಿಜೆಪಿ ಮತ್ತು ಬಿಜೆಪಿ ಪರ ಮಾಧ್ಯಮಗಳು ನಿರಂತರ ಹರಡುತ್ತಿವೆ. ಈ ಮೂಲಕ ವಕ್ಫ್ ಬೋರ್ಡ್‌ನಿಂದ ನೋಟಿಸ್ ಪಡೆದಿರುವ ರೈತರು, ಬಡ ಒತ್ತುವರಿದಾರರನ್ನ ಬೆದರಿಸುತ್ತಲೆ ಇದ್ದಾರೆ. “ವಕ್ಫ್ ವಿರುದ್ಧ ಕೋರ್ಟ್‌ಗೆ ಹೋಗಲು ಆಗುವುದಿಲ್ಲ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ, ಇದೊಂದು ಶುದ್ಧ ಸುಳ್ಳು. ಈ ಬಗ್ಗೆ ಅತೀ ಹೆಚ್ಚು ಸುಳ್ಳು ಹೇಳುವುದು ಸುವರ್ಣ ಟಿವಿ, ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಕೆಲವರು. ಅವರಿಗೆ ಸತ್ಯವನ್ನು ಹಲವಾರು ಬಾರಿ ಮನವರಿಕೆ ಮಾಡಿದರೂ ಅವರು ಮತ್ತೆಮತ್ತೆ ಸುಳ್ಳನ್ನೇ ಪ್ರಚಾರ ಮಾಡುತ್ತಿದ್ದಾರೆ” ಎನ್ನುತ್ತಾರೆ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷ ಶಾಫಿ.
“ವಕ್ಫ್ ವಿವಾದವಾದರೆ ಅದನ್ನು ಮೊದಲಿಗೆ ವಿಚಾರಣೆ ನಡೆಸುವುದು ವಕ್ಫ್ ಟ್ರಿಬ್ಯುನಲ್ ಎಂಬುವುದು ನಿಜವೇ ಆಗಿದೆ. ಆದರೆ ಈ ಆದೇಶಗಳ ವಿರುದ್ಧ ಹೈಕೋರ್ಟ್‌ಗೆ ಹೋಗಬಹುದು, ಸುಪ್ರೀಂಕೋರ್ಟ್‌ಗೆ ಕೂಡಾ ಹೋಗಬಹುದಾಗಿದೆ. ಅಷ್ಟೇಅಲ್ಲದೆ, ವಕ್ಫ್ ಟ್ರಿಬ್ಯುನಲ್ ರೀತಿಯಲ್ಲೇ ಈ ದೇಶದಲ್ಲಿ 19 ಟ್ರಿಬ್ಯುನಲ್‌ಗಳು ಇವೆ. ಅದು ಯಾವುದಕ್ಕೆ ಇಲ್ಲದ ವಿವಾದ ವಕ್ಫ್ ಟ್ರಿಬ್ಯುನಲ್‌ಗೆ ಮಾತ್ರ ಬರುತ್ತಿದೆ ಎಂದರೆ ಅದರ ಹಿಂದೆ ಕೋಮು ದುರುದ್ದೇಶ ಮಾತ್ರವೆ ಇದೆ. ಈ ವಕ್ಫ್ ಟ್ರಿಬ್ಯುನಲ್ ಹೈಕೋರ್ಟ್‌ನ ಅಡಿಯಲ್ಲಿ ಇರುತ್ತದೆ. ಇದರ ಮುಖ್ಯ ನ್ಯಾಯಮೂರ್ತಿ ಹೈಕೋರ್ಟ್‌ನ ನ್ಯಾಯಮೂರ್ತಿಯೇ ಆಗಿರುತ್ತಾರೆ ಮತ್ತು ಅವರನ್ನು ನೇಮಕ ಮಾಡುವುದು ಕೂಡಾ ಹೈಕೋರ್ಟ್ ಆಗಿರುತ್ತದೆ. ಇದರಲ್ಲಿ ವಕ್ಫ್ ಬೋರ್ಡ್ ಆಗಲಿ, ಸರ್ಕಾರವಾಗಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಶಾಫಿ ಅವರು ಹೇಳಿದರು.
ವಕ್ಫ್ ಟ್ರಿಬ್ಯುನಲ್‌ಗಳಲ್ಲಿ ಮೂವರು ನ್ಯಾಯಾಧೀಶರು ಇರಬೇಕು ಎಂದು ನಿಯಮಗಳು ಹೇಳುತ್ತವೆ. ಈ ಮೂವರಲ್ಲಿ ಒಬ್ಬ ನ್ಯಾಯಾಧೀಶ ಇಸ್ಲಾಮಿಕ್ ನಿಯಮಗಳು ತಿಳಿದಿರುವ ಮುಸ್ಲಿಂ ನ್ಯಾಯಾಧೀಶರು ಇರಬೇಕು ಎಂದು ನಿಯಮಗಳು ಹೇಳುತ್ತದೆ. ಆದರೆ ಪೂರ್ಣ ಪೀಠ ಇದುವರೆಗೆ ಸಾಧ್ಯವಾಗಿಲ್ಲ ಎಂದು ಶಾಫಿ ಅವರು ಹೇಳಿದರು.

ವಕ್ಫ್ ಟ್ರಿಬ್ಯುನಲ್ ಎಂದರೆ ವಕ್ಫ್ ಪರವಾಗಿರುವ ಕೋರ್ಟ್ ಎಂಬ ಭಾವನೆಯನ್ನು ಬಿತ್ತಲಾಗುತ್ತಿದೆ. ಆದರೆ ವಾಸ್ತವವಾಗಿ, ವಕ್ಫ್ ವ್ಯಾಜ್ಯಗಳನ್ನು ವಿಚಾರಣೆ ನಡೆಸುವ ಒಂದು ನ್ಯಾಯಾಧೀಕರಣ ಮಾತ್ರವಾಗಿದೆ ವಕ್ಫ್ ಟ್ರಿಬ್ಯುನಲ್. ಅಂಕಿಅಂಶಗಳ ಪ್ರಕಾರ, ಕಳೆದ 10 ವರ್ಷಗಳಲ್ಲಿ ವಕ್ಫ್ ಟ್ರಿಬ್ಯುನಲ್‌ಗಳು ನೀಡಿದ ಸುಮಾರು 75% ಆದೇಶಗಳು ವಕ್ಫ್ ಬೋರ್ಡ್ ವಿರುದ್ಧವೇ ಬಂದಿವೆ. ಅದರ ನಂತರ ವಕ್ಫ್ ಬೋರ್ಡ್ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿವೆ. ಹಾಗಾಗಿ ವಕ್ಫ್ ಟ್ರಿಬ್ಯುನಲ್ ವಿರುದ್ಧ ಹೈಕೋರ್ಟ್‌ಗೆ ಮತ್ತು ಸುಪ್ರಿಂಕೋರ್ಟ್‌ಗೆ ಕೂಡಾ ಮೇಲ್ಮನವಿ ಸಲ್ಲಿಸಬಹುದು ಎಂಬುವುದು ಇದರಲ್ಲಿ ಸಾಬೀತಾಗುತ್ತದೆ.
ಸರ್ಕಾರ ವಕ್ಫ್ ಬೋರ್ಡ್‌ಗೆ ಭೂಮಿ ಕೊಡುತ್ತದೆ ಎಂಬ ಮತ್ತೊಂದು ಸುಳ್ಳು!
ವಾಸ್ತವದಲ್ಲಿ ವಕ್ಫ್ ಬೋರ್ಡ್‌ಗೆ ಯಾವುದೇ ಭೂಮಿಯಿಲ್ಲ. ವಕ್ಫ್ ಮಾಡಿರುವ ಜಮೀನನ್ನು ಮೇಲ್ವಿಚಾರಣೆ ಮಾಡುವುದಷ್ಟೇ ಬೋರ್ಡ್‌ನ ಕೆಲಸ. ಸ್ವಾತಂತ್ರ್ಯಪೂರ್ವದಲ್ಲಿ ರಾಜ ಪ್ರಭುತ್ವಗಳು ವಕ್ಫ್‌ಗೆ ಎಂದು ಭೂಮಿಗಳನ್ನು ದತ್ತಿ ರೂಪದಲ್ಲಿ ಕೊಡುತ್ತಿದ್ದವು. ಆದರೆ ಸ್ವಾತಂತ್ರ್ಯಾನಂತರ ಸರ್ಕಾರ ವಕ್ಫ್‌ಗೆ ಎಂದೇ ಭೂಮಿ ಕೊಟ್ಟಿಲ್ಲ. ಆದರೆ ಮುಸ್ಲಿಮರ ಅಗತ್ಯಗಳಿಗಾಗಿ ಸ್ಮಶಾನ ಭೂಮಿಯನ್ನು ಸರ್ಕಾರಗಳು ಕೊಟ್ಟಿವೆ. ಅದನ್ನು ಮುಸ್ಲಿಮರು ವಕ್ಫ್ ಎಂದು ನೋಂದಣಿ ಮಾಡಿರುತ್ತಾರೆ. ಈ ರೀತಿಯಾಗಿ ಸ್ಮಶಾನಕ್ಕೆ ಎಂದು ಸರ್ಕಾರಗಳು ಮುಸ್ಲಿಮರಿಗೆ ಮಾತ್ರವಲ್ಲ, ಈ ದೇಶದ ಎಲ್ಲಾ ಸಮುದಾಯಗಳಿಗೂ ಭೂಮಿ ನೀಡುತ್ತವೆ.
“ಈ ರೀತಿ ಸ್ಮಶಾನಕ್ಕೆಂದು ಕೊಟ್ಟಿರುವ ಭೂಮಿಗಳು ವಕ್ಫ್ ಆಸ್ತಿಯ 5% ಕೂಡಾ ಇಲ್ಲ ಎಂದು ಶಾಫಿ ಸಅದಿ ಹೇಳುತ್ತಾರೆ. ಬದಲಾಗಿ, 1 ಲಕ್ಷದ 20 ಸಾವಿರ ಎಕರೆಯಷ್ಟು ಇದ್ದ ವಕ್ಫ್ ಜಮೀನಿನಲ್ಲಿ ಸುಮಾರು 50% ಒತ್ತುವರಿ ಮಾಡಿಕೊಂಡಿದ್ದು ಸರ್ಕಾರವೇ ಆಗಿದೆ. ಬೆಂಗಳೂರಿನಲ್ಲಿ ಇದ್ದ ಸುಮಾರು 3000 ಎಕರೆ ವಕ್ಫ್ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಸರ್ಕಾರವೇ ಬೇರೆ ಜನರಿಗೆ ನೀಡಿದೆ ಎಂದು ಅವರು ಹೇಳುತ್ತಾರೆ.
“ವಿಧಾನಸೌಧದ ಬಳಿಯಿರುವ ಯಖೀನ್ ಷಾ ದರ್ಗಾಕ್ಕೆ ಸೇರಿದ ಸುಮಾರು 258 ಎಕರೆ ಜಮೀನು ವಕ್ಫ್‌ಗೆ ಸೇರಿದ್ದು ಇತ್ತು. ಆದರೆ ಅದು ಈಗ ಇಲ್ಲ. ವಿಧಾನಸೌಧ, ವಿಕಾಸ ಸೌಧ, ಎಂಎಸ್ ಬಿಲ್ಡಿಂಗ್, ಚಾಲುಕ್ಯ ಹೋಟೆಲ್ ಜಾಗ ಎಲ್ಲವೂ ಈ ದರ್ಗಾದ 258 ಎಕರೆಗೆ ಸೇರಿದ ಭೂಮಿ” ಎಂದು ಅವರು ಹೇಳುತ್ತಾರೆ.
ಚಿಂತಕ ಶಿವಸುಂದರ್ ಅವರು ಹೇಳುವ ಪ್ರಕಾರ, ಈ ವಿಶ್ವದ ಅತ್ಯಂತ ದೊಡ್ಡ ಶ್ರೀಮಂತ, ಪ್ರಧಾನಿ ಮೋದಿಯ ಆಪ್ತ ಉದ್ಯಮಿ ಮುಖೇಶ್ ಅಂಬಾನಿ ಅವರ ಮಹಾರಾಷ್ಟ್ರದ ಮುಂಬೈನಲ್ಲಿ ಇರುವ ಆಂಟಿಲ್ಲಾ ಎಂಬ ಬೃಹತ್ ಬಂಗಲೆ ಕೂಡಾ ವಕ್ಫ್ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಮಾಡಿರುವುದಾಗಿದೆ.
ಕೇಂದ್ರದ ಬಿಜೆಪಿ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆಗಳ ವಿವಾದ
ಕೇಂದ್ರ ಸರ್ಕಾರ ಜಾರಿಗೆ ತರಬೇಕು ಎಂದು ಉದ್ದೇಶಿಸಿರುವ ಹೊಸ ತಿದ್ದುಪಡಿ ಮಸೂದೆಯಲ್ಲಿ ಬರುವ 3ಸಿ, 3ಆರ್, 14 ಮತ್ತು 40 ಸೆಕ್ಷನ್‌ಗಳು ಮುಸ್ಲಿಂ ವಿರೋಧಿ ಮತ್ತು ವಕ್ಫ್ ವಿರೋಧಿಯಾಗಿದೆ ಎಂಬ ಆರೋಪಗಳನ್ನು ಮಾಡಲಾಗುತ್ತಿದೆ.
ಕೇಂದ್ರದ 1954ರ ವಕ್ಫ್ ಕಾಯ್ದೆ ಪ್ರಕಾರ ಆಸ್ತಿಯನ್ನು ವಕ್ಫ್ ಮಾಡಿದ್ದರೆ ಅದನ್ನು ನೋಂದಣಿ ಮಾಡಬೇಕಿದೆ. ಆದಾಗ್ಯೂ, ನೋಂದಣಿ ಮಾಡದ ಆಸ್ತಿಗಳನ್ನು ’ವಕ್ಫ್ ಬೈ ಯೂಸರ್’ ಎಂದು ಗುರುತಿಸಲಾಗುತ್ತದೆ. ಉದಾಹರಣೆಗೆ ರಾಜ್ಯದಲ್ಲಿ ವಕ್ಫ್ ಅಡಿಯಲ್ಲಿ ನೋಂದಣಿ ಅಗಿರುವ ಮಸೀದಿಗಳು ಇರುವುದು 11 ಸಾವಿರ ಮಾತ್ರ. ಆದರೆ ಕರ್ನಾಟಕದಾದ್ಯಂತ ಮಸೀದಿಗಳು 30 ಸಾವಿರಕ್ಕಿಂತಲೂ ಹೆಚ್ಚಿವೆ. ನೋಂದಣಿ ಮಾಡದ ಮಸೀದಿಗಳು ಮತ್ತು ಇತರ ವಕ್ಫ್ ಆಸ್ತಿಗಳನ್ನು ’ವಕ್ಫ್ ಬೈ ಯೂಸರ್’ ಎಂದು ಗುರುತಿಸಲಾಗುತ್ತದೆ.
ತಾಜ್‌ಮಹಲ್, ಜಾಮಿಯ ಮಸೀದಿ, ಶ್ರೀರಂಗಪಟ್ಟಣದ ಟಿಪ್ಪು ಸಮಾಧಿ (ಗುಂಬಜ್) ಸೇರಿದಂತ ಸ್ಮಾರಕಗಳು ಪುರಾತತ್ವ ಇಲಾಖೆ ಅಡಿಯಲ್ಲಿ ಇದೆ. ಇವೆಲ್ಲವೂ ಸುಮಾರು ನೂರಾರು ವರ್ಷಗಳ ಹಿಂದೆ ವಕ್ಫ್ ಮಾಡಲಾದ ಆಸ್ತಿಗಳು. ಇವೆಲ್ಲವನ್ನೂ ವಕ್ಫ್ ಬೈ ಯೂಸರ್ ಆಸ್ತಿಗಳು ಎಂದು ಗುರುತಿಸಲಾಗುತ್ತದೆ. ಆದರೆ ತಿದ್ದುಪಡಿ ಮಸೂದೆಯು ಕಾಯ್ದೆಯಾದ ಕೇವಲ 6 ತಿಂಗಳ ಒಳಗೆ ದಾಖಲೆಗಳನ್ನು ಕೊಟ್ಟು ವಕ್ಫ್ ಆಸ್ತಿಯಾಗಿ ಈ ಎಲ್ಲಾ ಆಸ್ತಿಗಳನ್ನು ನೋಂದಣಿ ಮಾಡಬೇಕಾಗುತ್ತದೆ. ಇಲ್ಲವೆಂದರೆ ಅದು ಸರ್ಕಾರದ ವಶಕ್ಕೆ ಹೋಗುತ್ತದೆ ಎಂದು ಮಸೂದೆಯ ನಿಯಮಗಳು ಹೇಳುತ್ತವೆ.
ಅಷ್ಟೇ ಅಲ್ಲದೆ, ಮೋದಿ ಸರ್ಕಾರ ಹೊಸದಾಗಿ ಮಾಡಿರುವ ತಿದ್ದಪಡಿ ಮಸೂದೆಯಲ್ಲಿ ಈ ’ವಕ್ಫ್ ಬೈ ಯೂಸರ್’ ಎಂಬ ಸೆಕ್ಷನ್‌ಅನ್ನು ಕಿತ್ತುಹಾಕಲಾಗಿದೆ. ಜೊತೆಗೆ ಇಂತಹ ಹಳೆಯ ಆಸ್ತಿಗಳಿಗೆ ವಕ್ಫ್ ಆಸ್ತಿ ಎಂಬ ದಾಖಲೆ ನೀಡಬೇಕು ಎಂದು ಮಸೂದೆ ಹೇಳುತ್ತದೆ. ಈ ಮೂಲಕ ಹಳೆಯ ಸ್ಮಾರಕಗಳಂತ ಮಸೀದಿಗಳನ್ನು, ಇತರ ಧಾರ್ಮಿಕ ಕಟ್ಟಡಗಳು ಮತ್ತು ಆಸ್ತಿಗಳನ್ನು, ಬಹಳ ಮುಖ್ಯವಾಗಿ ಕಾಶಿ, ಮಥುರಾ ಹಾಗೂ ವಾರಣಾಸಿಯ ಮಸೀದಿಗಳನ್ನು ವಶಕ್ಕೆ ಪಡೆಯುವ ಬಿಜೆಪಿಯ ಯೋಜನೆಯಾಗಿದೆ ಇದು ಎಂಬುವುದು ಮಸೂದೆಯ ಟೀಕಾಕಾರರ ವಾದವಾಗಿದೆ. ಮಸೂದೆಯ ಈ ಸೆಕ್ಷನ್, ’ಆರಾಧನಾ ಸ್ಥಳಗಳ ಕಾಯ್ದೆ-1991’ರ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ.
ತಿದ್ದುಪಡಿ ಮಸೂದೆಯ 3ಆರ್ ಸೆಕ್ಷನ್, ಯಾವುದಾದರೂ ವಕ್ಫ್ ಆಸ್ತಿಯ ಬಗ್ಗೆ ವಕ್ಫ್ ಬೋರ್ಡ್ ಮತ್ತು ರಾಜ್ಯ ಸರ್ಕಾರದ ನಡುವೆ ತಕರಾರು ಇದ್ದರೆ ಆ ವ್ಯಾಜ್ಯವನ್ನು ಜಿಲ್ಲಾಧಿಕಾರಿಯ ಬಳಿಗೆ ತೆಗೆದುಕೊಂಡುಹೋಗಬೇಕು ಎಂದು ಹೇಳುತ್ತದೆ. ಇದರ ಬಗ್ಗೆ ಜಿಲ್ಲಾಧಿಕಾರಿ ವಿಚಾರಣೆ ನಡೆಸಬೇಕು ಎಂದು ಹೇಳುವ ಸೆಕ್ಷನ್, ಅದರ ತೀರ್ಮಾನ ಬರುವವರೆಗೆ ಅದು ಸರ್ಕಾರದ ಜಾಗವಾಗಿರಲಿದೆ ಎಂದು ಹೇಳುತ್ತದೆ. ಇದು ಅತ್ಯಂತ ಅಪಾಯಕಾರಿ ಸೆಕ್ಷನ್ ಆಗಿದೆ ಎಂದು ಶಾಫಿ ಸಅದಿ ಹೇಳುತ್ತಾರೆ.
“ಒಂದುವೇಳೆ ಇದೇರೀತಿ ಮಸೀದಿಯೊಂದರ ತಕರಾರು ಜಿಲ್ಲಾಧಿಕಾರಿ ಬಳಿಗೆ ತೆಗೆದುಕೊಂಡು ಹೋದರೆ, ಅದರ ತೀರ್ಮಾನ ಬರುವವರೆಗೆ ಅದು ಸರ್ಕಾರಿ ಜಾಗವಾಗಿ ಇರುತ್ತದೆ. ಇಂತಹ ಸರ್ಕಾರದ ಜಾಗದಲ್ಲಿ ಯಾರು ಬೇಕಾದರೂ ಕಾರ್ಯಕ್ರಮ ಮಾಡಲು ಅನುಮತಿ ನೀಡುವ ಅಪಾಯವಿರುತ್ತದೆ. ಉದಾಹರಣೆಗೆ ಇಂತಹ ತಕರಾರು ಇರುವ ಮಸೀದಿಯಲ್ಲಿ ಸರ್ಕಾರಿ ಜಾಗ ಎಂದು ಗಣೇಶ ಪ್ರತಿಷ್ಠಾಪನೆ ಮಾಡಿದರೆ ಅದು ಕೋಮುಗಲಭೆಗೆ ದಾರಿ ಮಾಡಿಕೊಡುವುದಿಲ್ಲವೇ” ಎಂದು ಅವರು ಕೇಳುತ್ತಾರೆ. ಇತ್ತೀಚೆಗೆ ನಡೆದ ಮಂಗಳೂರಿನ ಮಳಲಿ, ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದ ಸಮಸ್ಯೆಯಂತೆ ಇನ್ನೂ ಹಲವು ಸಮಸ್ಯೆಗಳು ಉದ್ಭವವಾಗುತ್ತವೆ. ಅಲ್ಲದೆ, ಸಾಮಾನ್ಯವಾಗಿ ಜಿಲ್ಲಾಧಿಕಾರಿ ಸರ್ಕಾರದ ಕೈಗೊಂಬೆಯಾಗಿ ಇರುವುದರಿಂದ ವಕ್ಫ್ ಆಸ್ತಿಗಳಿಗೆ ನಷ್ಟವೇ ಹೆಚ್ಚಾಗಿರುತ್ತದೆ ಎನ್ನುತ್ತಾರವರು.
ಪ್ರಸ್ತುತ ಜಾರಿಯಲ್ಲಿರುವ ವಕ್ಫ್ ಕಾಯ್ದೆಯ ಪ್ರಕಾರ, ತಕರಾರುಗಳು ಟ್ರಿಬ್ಯುನಲ್‌ಗೆ ಹೋಗಬೇಕು, ಅಲ್ಲಿಯೂ ಬಗೆಹರಿಯದಿದ್ದರೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗೆ ಹೋಗಬಹುದು. ಆದರೆ ತಿದ್ದುಪಡಿ ಮಸೂದೆಯ ಪ್ರಕಾರ ಜಿಲ್ಲಾಧಿಕಾರಿಯೇ ಕೊನೆಯ ಆಯ್ಕೆಯಾಗಿರುತ್ತದೆ. ಅದರ ನಂತರ ಮೇಲ್ಮನವಿಯ ಬಗ್ಗೆ ಈ ತಿದ್ದುಪಡಿ ಮಸೂದೆ ಮಾತನಾಡುವುದೇ ಇಲ್ಲ. ಜಿಲ್ಲಾಧಿಕಾರಿಯ ತೀರ್ಪಿನ ವಿರುದ್ಧ ಮೇಲ್ಮನವಿಯ ಬಗ್ಗೆ ತಿದ್ದುಪಡಿ ಮಸೂದೆಯು ಮೌನವಾಗಿದೆ. ಈ ಮಸೂದೆಯು ನ್ಯಾಯಾಲಯದ ಬಗ್ಗೆ ಹೇಳುವುದೇ ಇಲ್ಲ.
ಅದೇರೀತಿ ಯಾವುದಾದರೂ ಮಸೀದಿ ಅಥವಾ ಸ್ಮಶಾನವನ್ನು ವಕ್ಫ್ ಎಂದು ನೋಂದಣಿ ಮಾಡಲು ಈವರೆಗೆ ವಕ್ಫ್ ಕಾರ್ಯನಿರ್ವಹಣಾ ಅಧಿಕಾರಿ(ಸಿಇಒ)ಗೆ ಅಧಿಕಾರ ಇತ್ತು. ವಕ್ಫ್ ಮಾಡುವ ಆಸ್ತಿಯ ಕಂದಾಯ ದಾಖಲೆಗಳು ಸೇರಿದಂತೆ ಎಲ್ಲಾ ದಾಖಲೆಗಳು ಇದ್ದರೆ ಸಿಇಒ ಅದನ್ನು ನೋಂದಣಿ ಮಾಡಬಹುದಿತ್ತು. ಆದರೆ ತಿದ್ದಪಡಿ ಮಸೂದೆಯು ಸಿಇಒಗೆ ಇದ್ದ ಈ ಅಧಿಕಾರವನ್ನು ಕಿತ್ತು ಹಾಕಿದೆ. ಅವರ ಬದಲಿಗೆ ಜಿಲ್ಲಾಧಿಕಾರಿಗೆ ಈ ಅಧಿಕಾರವನ್ನು ನೀಡಲಾಗಿದೆ.
ಇಷ್ಟಲ್ಲದೆ, ಮುಸ್ಲಿಮರ ಧಾರ್ಮಿಕ ಆಚರಣೆಯ ಭಾಗವಾಗಿ ನೀಡಲಾಗಿರುವ ದತ್ತಿಗಳ ನಿರ್ವಹಣಾ ಬೋರ್ಡ್‌ನಲ್ಲಿ ಇಬ್ಬರು ಮುಸ್ಲಿಮೇತರರು ಇರಬೇಕು ಎಂಬ ನಿಯಮಗಳನ್ನು ತಿದ್ದುಪಡಿ ಮಸೂದೆಯಲ್ಲಿ ಕಡ್ಡಾಯ ಮಾಡಲಾಗಿದೆ. ಇದು ಅತ್ಯಂತ ಅನ್ಯಾಯ ಎಂದು ದೇಶದಾದ್ಯಂತ ತಕರಾರು ಎದ್ದಿದೆ. ದೇಶದ ಉಳಿದ ಯಾವುದೇ ಧರ್ಮಗಳ ದತ್ತಿ ಬೋರ್ಡ್‌ಗಳಿಗೆ ಇಲ್ಲದ ನಿಯಮ ಇದಾಗಿದೆ ಎಂಬುವುದು ಚಿಂತಕ ಶಿವಸುಂದರ್ ಅವರ ವಾದವಾಗಿದೆ.
ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಕೂಡಾ ಇದೇ ಪ್ರಶ್ನೆಗಳನ್ನು ಮುಂದಿಡುತ್ತಾರೆ. ತಿರುಮಲದ ತಿರುಪತಿ ದೇವಸ್ಥಾನಗಳ ಬೋರ್ಡ್ ಅಲ್ಲದೆ, ದೇವಸ್ಥಾನಗಳಲ್ಲಿ ಕೆಲಸ ಮಾಡುವವರು ಕೂಡಾ ಹಿಂದೂಗಳೇ ಆಗಿರಬೇಕು ಎಂದು ಅಲ್ಲಿನ ಸರ್ಕಾರ ನಿಯಮಗಳನ್ನು ತರುತ್ತಿದೆ. “ತಿರುಮಲ ತಿರುಪತಿ ದೇವಸ್ಥಾನದ ಅಧ್ಯಕ್ಷರು ತಿರುಮಲದಲ್ಲಿ ಹಿಂದೂಗಳು ಮಾತ್ರ ಕೆಲಸ ಮಾಡಬೇಕು ಎಂದು ಹೇಳುತ್ತಾರೆ. ಆದರೆ ವಕ್ಫ್ ಬೋರ್ಡ್ ಮತ್ತು ವಕ್ಫ್ ಕೌನ್ಸಿಲ್‌ಗಳಲ್ಲಿ ಮುಸ್ಲಿಮೇತರರು ಇರಬೇಕು ಎಂಬುದನ್ನು ಕಡ್ಡಾಯಗೊಳಿಸಲು ಮೋದಿ ಸರ್ಕಾರ ಬಯಸುತ್ತಿದೆ. ಹೆಚ್ಚಿನ ಹಿಂದೂ ದತ್ತಿ ನಿಯಮಗಳು ತಮ್ಮ ಸಂಸ್ಥೆಗಳಲ್ಲಿ ಹಿಂದೂಗಳು ಮಾತ್ರ ಸದಸ್ಯರಾಗಿರಬೇಕು ಎಂದು ಹೇಳುತ್ತವೆ. ಎಲ್ಲರನ್ನೂ ಒಂದೇರೀತಿ ನೋಡಬೇಕು ಅಲ್ಲವೆ?” ಎಂದು ಅವರು ಕೇಂದ್ರದ ಬಿಜೆಪಿ ಸರ್ಕಾರವನ್ನು ಕೇಳುತ್ತಾರೆ.

ಮುಸ್ಲಿಮರು, ದಲಿತರು, ರೈತರು, ಮಹಿಳೆಯರು ಸೇರಿದಂತೆ ಎಲ್ಲಾ ಹಿಂದುಳಿದ ವರ್ಗಗಳ ಬಗ್ಗೆ ಬಿಜೆಪಿ ತೋರುವ ಕಾಳಜಿಗಳೆಲ್ಲವೂ ನಾಟಕ ಅಷ್ಟೆ ಎಂಬುವುದು ಈವರೆಗೆ ಅದರ ಇತಿಹಾಸವನ್ನು ನೋಡಿದರೆ ತಿಳಿಯುತ್ತದೆ. ಅವರ ಯಾವುದೇ ಯೋಜನೆ, ನಿಯಮಗಳಿದ್ದರೂ ಅದರ ಎಲ್ಲಾ ಲಾಭವನ್ನು ಹಿಂದುತ್ವದ ಹೆಸರಿನಲ್ಲಿ ಕಾರ್ಪೊರೇಟ್‌ಗಳಿಗೆ ತಲುಪಿಸುವುದಾಗಿದೆ. ಪ್ರಸ್ತುತ ವಕ್ಫ್ ತಿದ್ದುಪಡಿ ಮಸೂದೆ ಕೂಡಾ ಶ್ರೀಮಂತ ಕಬಳಿಕೆದಾರರು ಮತ್ತು ಸರ್ಕಾರದ ಒತ್ತುವರಿಗಳಿಗೆ ಕಾನೂನು ಮಾನ್ಯತೆ ನೀಡುವುದಷ್ಟೆ ಆಗಿದೆ. ವಕ್ಫ್ ಸಂರಕ್ಷಣೆ ಮಾಡುವ ತಿದ್ದುಪಡಿ ಎಂದು ಬಿಜೆಪಿ ಹೇಳುತ್ತಿದ್ದರೂ, ವಾಸ್ತವದಲ್ಲಿ ಅದು ವಕ್ಫ್ ಆಸ್ತಿಗಳನ್ನು ಮತ್ತಷ್ಟು ಕಿತ್ತುಕೊಳ್ಳುವ ಕುತಂತ್ರ ಅಷ್ಟೆ ಅಲ್ಲದೆ ಬೇರೇನೂ ಅಲ್ಲ ಎಂಬುವುದು ಮುಖ್ಯ ಆರೋಪವಾಗಿದೆ.
ವಕ್ಫ್ ಆಸ್ತಿ ಯಾವುದು ಎಂದು ನ್ಯಾಯಾಲಯ ಈ ಹಿಂದೆ ವಿಚಾರಣೆ ನಡೆಸಿ ಹೇಳುತ್ತಿತ್ತು. ಆದರೆ ತಿದ್ದುಪಡಿ ಮಸೂದೆಯ ಮೂಲಕ ಆಸ್ತಿ ಯಾರಿಗೆ ಸೇರಿದ್ದು ಎಂದು ಜಿಲ್ಲಾಧಿಕಾರಿ ತೀರ್ಮಾನಿಸುತ್ತಾರೆ. ಈ ಮೂಲಕ ವಕ್ಫ್ ಆಸ್ತಿಯನ್ನು ಒತ್ತುವರಿ ಮಾಡಿರುವ ಶ್ರೀಮಂತರು ಮತ್ತು ಸರ್ಕಾರದ ಕ್ರಮವನ್ನು ಜಿಲ್ಲಾಧಿಕಾರಿ ಮೂಲಕ ಸಮರ್ಥಿಸಿಕೊಳ್ಳಲಾಗುತ್ತದೆ. ಈ ಹಿಂದೆ ಬಿಜೆಪಿ ಸ್ವತಃ ವಕ್ಫ್ ಭೂಮಿ ಒತ್ತುವರಿಯನ್ನು ತೆರವು ಮಾಡುವ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಿರುವುದಲ್ಲದೆ, ವಕ್ಫ್ ಒತ್ತುವರಿ ಬಗ್ಗೆ ಹಲವಾರು ಪತ್ರಿಕಾಗೋಷ್ಠಿ ನಡೆಸಿ ಅದರ ರಕ್ಷಣೆ ಬಗ್ಗೆ ಮಾತನಾಡುತ್ತಿತ್ತು. ಆದರೆ ಅದರಿಂದ ಲಾಭವಿಲ್ಲ ಎಂದು ಈಗ ವಕ್ಫ್ ವಿರುದ್ಧ ಮಾತನಾಡುತ್ತಿದೆ ಜೊತೆಗೆ ಅದನ್ನು ಲಪಟಾಯಿಸುವವರಿಗೆ ಲಾಭವಾಗುವಂತೆ ಕಾನೂನು ಮಾಡಲು ಮುಂದಾಗಿದೆ. ಎಲ್ಲವೂ ರಾಜಕೀಯ ಲಾಭಕ್ಕಷ್ಟೇ ಎಂಬುವುದನ್ನು ಜನರು ಅರ್ಥಮಾಡಿಕೊಳ್ಳಬೇಕಿದೆ.
ರೈತರಿಗೆ ನೋಟಿಸ್ ನೀಡಿದ ಸಂಗತಿ..
ರಾಜ್ಯದ ವಿಜಯಪುರ ಜಿಲ್ಲೆಯ ಹೊನವಾಡ ಗ್ರಾಮದಲ್ಲಿ ರೈತರು ಸಾಗುವಳಿ ಮಾಡಿಕೊಂಡು ಬಂದಿರುವ ಸುಮಾರು 1,500 ಎಕರೆ ಜಮೀನಿನ ಒಡೆತನಕ್ಕೆ ಸಂಬಂಧಿಸಿದಂತೆ ವಕ್ಫ್ ಬೋರ್ಡ್ ಇತ್ತೀಚೆಗೆ ಒತ್ತುವರಿ ತೆರವು ನೋಟಿಸ್ ಜಾರಿ ಮಾಡಿತ್ತು. ಆದರೆ ಇದು ವಿವಾದವಾಗಿ ಬಿಜೆಪಿ ಇದರಲ್ಲಿ ಕೋಮು ರಾಜಕೀಯ ಮಾಡಲು ಪ್ರಯತ್ನಿಸಿತ್ತು. ಆದಾಗ್ಯೂ, ಮಧ್ಯಪ್ರವೇಶಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು, ರೈತರಿಗೆ ಕಳುಹಿಸಿರುವ ನೋಟಿಸ್‌ಗಳನ್ನು ಸರ್ಕಾರ ಹಿಂಪಡೆಯುವುದಾಗಿ ಘೋಷಿಸಿದ್ದರು. ಈ ಭೂಮಿಯನ್ನು ವಕ್ಫ್ ಬೋರ್ಡ್‌ಗೆ ಮರುಹಂಚಿಕೆ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಅವರು ರೈತರಿಗೆ ಭರವಸೆ ನೀಡಿದ್ದರು. ಅದರ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಾ ಪ್ರತಿಕ್ರಿಯಿಸಿ, ವಕ್ಫ್ ವಿಚಾರದಲ್ಲಿ ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್ ಪಡೆಯಬೇಕು. ನೋಟಿಸ್ ನೀಡದೆ ಪಹಣಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡಿದ್ದರೆ ತಕ್ಷಣ ರದ್ದು ಮಾಡಬೇಕು ಮತ್ತು ಮುಂದಕ್ಕೆ ರೈತರಿಗೆ ಯಾವುದೇ ರೀತಿಯ ಸಣ್ಣ ತೊಂದರೆಯನ್ನೂ ನೀಡಬಾರದು ಎಂದು ಅವರು ಹೇಳಿದ್ದಾರೆ.
ಆದಾಗ್ಯೂ ವಕ್ಫ್ ನೋಟಿಸ್ ವಿಚಾರವನ್ನು ಬಿಜೆಪಿ ತನ್ನ ಕೋಮು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಈ ಹಿಂದೆ ವಕ್ಫ್ ಬೋರ್ಡ್ ನೀಡಿದ್ದ ನೋಟಿಸ್ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದ್ದು, ಕಾಂಗ್ರೆಸ್ ಸರ್ಕಾರ “ಲ್ಯಾಂಡ್ ಜಿಹಾದ್”ಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಜನರನ್ನು ದಾರಿ ತಪ್ಪಿಸುತ್ತಿದೆ. ಇಷ್ಟೇ ಅಲ್ಲದೆ, ಬಿಜೆಪಿ ಈ ವಿಚಾರವಾಗಿ ರಾಜ್ಯದಾದ್ಯಂತ ಪ್ರತಿಭಟನೆ ಕೂಡಾ ಮಾಡುತ್ತಿದೆ.
ಇದನ್ನೂ ಓದಿ: ರೈತನ ಆತ್ಮಹತ್ಯೆಗೆ ವಕ್ಫ್ ಕಥೆ ಕಟ್ಟಿದ ಮಾಧ್ಯಮಗಳು : ಸುಳ್ಳು ಸುದ್ದಿ ಹಂಚಿಕೊಂಡ ಸಂಸದ ತೇಜಸ್ವಿ ಸೂರ್ಯ


