Homeಅಂಕಣಗಳುಸೈನಿಕರ ಬೆನ್ನಿಗೆ ಚೂರಿ ಹಾಕಿದ ದೇಶಭಕ್ತರು

ಸೈನಿಕರ ಬೆನ್ನಿಗೆ ಚೂರಿ ಹಾಕಿದ ದೇಶಭಕ್ತರು

- Advertisement -
- Advertisement -

ಪರಿಮಳ ವಾರಿಯರ್ |
ಇದು ದೇಶಭಕ್ತಿಯ ಪರಾಕಾಷ್ಠೆ ನೆತ್ತಿಗೇರಿರುವ ಕಾಲ. ನೀವು ದೇಶಭಕ್ತರೆಂದು ನಿರೂಪಿಸಬೇಕೆಂದರೆ ನಿಮಗೆ ಒಪ್ಪಿಗೆಯಿರಲಿ ಬಿಡಲಿ, ಆಳುವ ಪಕ್ಷಗಳಿಗೆ ಜೈ ಅನ್ನಬೇಕು. ಇಲ್ಲವೆಂದರೆ ನೀವು ದೇಶದ್ರೋಹಿಗಳು. ಈ ದೇಶಭಕ್ತಿಯ ಉನ್ಮಾದವನ್ನು ಜನರ ನಡುವೆ ಹರಡಲು ಆಳುವಪಕ್ಷಗಳು ಹಲವಾರು ಸ್ಟ್ರಾಟೆಜಿ ಮತ್ತು ಟೆಕ್ನಿಕ್‍ಗಳನ್ನು ಬಳಸುತ್ತವೆ. ಅದರಲ್ಲೊಂದು ದೇಶಕಾಯುವ ಸೈನಿಕರನ್ನು ದೇಶಭಕ್ತಿ ವಾದದ ಉತ್ತುಂಗ ಸಿಂಹಾಸನದಲ್ಲಿ ಕೂರಿಸಿ ಸಿಂಹಾಸನದ ಮರೆಯಲ್ಲಿ ಅವಿತು ಕುಳಿತು ಮಾಡಬಾರದ ಅನಾಚಾರವನ್ನೆಲ್ಲ ಕದ್ದುಮುಚ್ಚಿ ಮಾಡುವ ಚಾಳಿ ಕಾಂಗ್ರೆಸ್ ಕಾಲದಿಂದಲೂ ಇತ್ತು. ಅದು ಬ್ರಿಟಿಷರ ಚಾಕರಿಯಲ್ಲಿ ಪಳಗಿದ ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ವಿಪರೀತಕ್ಕೇರಿ ಈಗಲೂ ಇದೆ. ಸರ್ಕಾರವನ್ನು ಯಾರಾದರೂ ಟೀಕಿಸುತ್ತಾರಾ, ಸೈನಿಕರನ್ನು ಮುಂದೆ ತಂದು ನಿಲ್ಲಿಸಿ ‘ಭೋಲೋ ಭಾರತ್ ಮಾತಾ ಕೀ’ ಎಂದು ಕಿರುಚಾಡಲು ಶುರುವಿಡುತ್ತಾರೆ. ಸಂಘ ಪರಿವಾರದ ವೃತ್ತಿಪರ ಬಾಡಿಗೆ ಭಾಷಣಕಾರರಿಗೆ ಸೈನಿಕರಷ್ಟು ಸದರವಾಗಿ ಸಿಕ್ಕವರು ಮತ್ತೊಬ್ಬರಿಲ್ಲ. ಇವರು ಬಾಯಿಬಿಟ್ಟರೆ ಸೈನಿಕರ ವೀರಾವೇಷದ ಕಥೆಗಳು, ಯುದ್ಧದಲ್ಲಿ ಸೈನಿಕರು ಬಡಿದಾಡಿದ, ಶತ್ರುಸೈನಿಕರನ್ನು ಹೆಡೆಮುರಿ ಕಟ್ಟಿದ ವೀರಕಥನಗಳು ಪುಂಖಾನುಪುಂಖವಾಗಿ ಉದುರುತ್ತವೆ. ಜನರೆಲ್ಲರೂ ಗೌರವಿಸುವ, ಎಲ್ಲರೂ ಪ್ರೀತಿಸುವ ಸೈನಿಕರೆಂದರೆ ಸನಾತನಿ ಸಂಘಿಗಳಿಗೆ ತಮ್ಮ ಜೊಳ್ಳುವಾದಳನ್ನು ತೇಲಿಬಿಡಲು ಸಿಕ್ಕ ಸುಲಭವಾದ ಮುಖವಾಡ. ಈ ಮುಖವಾಡದ ಆಚೆಗೆ ಇವರ ಸೈನಿಕ ಪ್ರೇಮವೇನೆಂದು ಒರೆಗೆ ಹಚ್ಚಿ ನೋಡಿದರೆ ಸಂಘಿಗಳಂತ ಮರಾಮೋಸಗಾರರು ಇನ್ನೊಬ್ಬರಿಲ್ಲ ಎಂಬುದು ತಿಳಿಯುತ್ತದೆ. ದೇಶವಾಳುವ ಅಧಿಕಾರದಲ್ಲಿದ್ದುಕೊಂಡು ಈ ವಂಚಕರು ಸೈನಿಕರ ಬೆನ್ನಿಗೇ ಇರಿಯುತ್ತಿರುವ ನೂರಾರು ಪ್ರಸಂಗಗಳು ನಮ್ಮ ಕಣ್ಣಿಗೆ ರಾಚುತ್ತವೆ. ಅವುಗಳನ್ನು ಒಂದೊಂದಾಗಿ ಇಲ್ಲಿ ನೋಡೋಣ.
ಉತ್ತರಾಖಂಡದ ಕುಗ್ರಾಮವೊಂದರಿಂದ ಭಾರತೀಯ ಸೈನ್ಯ ಸೇರಿದ ‘ಹವಾಲ್ದಾರ್ ರಾಜನ್ ಮೆಹ್ರಾ’ ತಮ್ಮ ಯೋಧನ ಬದುಕಿನ ಹೋರಾಟಕ್ಕೆ ಸೈನ್ಯದಿಂದ ಮೆಡಲ್ ಪಡೆದ ಪರಾಕ್ರಮಿ. ಎರಡು ವರ್ಷಗಳ ಕೆಳಗೆ ನಡೆದ ಸರ್ಜಿಕಲ್ ಸ್ಟ್ರೈಕ್‍ನಲ್ಲಿ ಭಾಗವಹಿಸಿದ್ದ ಯೋಧರನ್ನು ದಶಕಗಳ ಹಿಂದೆಯೇ ತರಬೇತುಗೊಳಿಸಿದ್ದವರು ಈ ರಾಜನ್ ಮೆಹ್ರಾ. 1997ರಲ್ಲಿ ನಾಗಾಲ್ಯಾಂಡ್ ಬಂಡುಕೋರರ ನಿಗ್ರಹಕ್ಕೆಂದು ತೆರಳಿದಾಗ ಬಾಂಬ್ ದಾಳಿಗೆ ಸಿಕ್ಕು ತೀವ್ರವಾಗಿ ಗಾಯಗೊಳ್ಳುತ್ತಾರೆ. ದೈಹಿಕವಾಗಿ ನಡೆದಾಡಲೂ ಸಾಧ್ಯವಾಗದಷ್ಟು ದೇಹ ಜರ್ಝರಿತವಾಗುತ್ತದೆ. ಸಂಪೂರ್ಣವಾಗಿ ಅಂಗವಿಕಲರಾಗುತ್ತಾರೆ. ರಕ್ಷಣಾ ಇಲಾಖೆಯು ಗಾಯಗೊಂಡು ಅಂಗವಿಕಲರಾದ ಸೈನಿಕರನ್ನು ಮುಲಾಜಿಲ್ಲದೇ ಸೇವೆಯಿಂದ ನಿವೃತ್ತಗೊಳಿಸಿ ಮನೆಗೆ ಕಳಿಸುವಂತೆ ರಾಜನ್ ಮೆಹ್ರಾರನ್ನೂ ಮನೆಗೆ ಕಳಿಸಲಾಗುತ್ತದೆ. ಆದರೆ ಲೈನ್ ಆಫ್ ಡ್ಯೂಟಿ ಸಮಯದಲ್ಲಿ ಅಂಗವಿಕಲರಾಗಿ ನಿವೃತ್ತರಾದ ರಾಜನ್‍ಮೆಹ್ರಾರಿಗೆ ಕಾನೂನಾತ್ಮಕವಾಗಿ ಪ್ರತೀ ತಿಂಗಳು ಕೊಡಬೇಕಾದ ಪಿಂಚಣಿಯನ್ನು ತಡೆಹಿಡಿಯಲಾಗುತ್ತದೆ.
ಪಶ್ಚಿಮ ಬಂಗಾಲದ ‘ಮಧುಸೂದನ್ ಬಗ್ರಿ’ ಮತ್ತು ಪಂಜಾಬಿನ ‘ಲೀಲಾಸಿಂಗ್’ ಇಬ್ಬರು ಸೈನಿಕರದ್ದು ಮತ್ತೊಂದು ಕಥೆ. ವರ್ಷಪೂರ್ತಿ ಗಡಿ ಕಾಯ್ದು ವರ್ಷಕ್ಕೊಮ್ಮೆ ಸಿಗುವ ರಜೆಯಲ್ಲಿ ಹುಟ್ಟೂರಿಗೆ ತೆರಳಲು ಆರ್ಮಿಕ್ಯಾಂಪ್‍ನಿಂದ ಹೊರಟಾಗ ವಾಹನ ಅಪಘಾತವಾಗಿ ಇಬ್ಬರೂ ದೈಹಿಕವಾಗಿ ಅಂಗವಿಕಲರಾಗುತ್ತಾರೆ. ಇವರು ಯುದ್ಧದ ಸಮಯದಲ್ಲಿ, ಅಥವ ಶತ್ರುದೇಶದವರೊಡನೆ ಸಂಘರ್ಷದ ಸಮಯದಲ್ಲಿ ಅಂಗವಿಕಲರಾಗಿಲ್ಲ, ಆದ್ದರಿಂದ ಇವರಿಗೆ ಪಿಂಚಣಿ ಕೊಡುವುದಕ್ಕೆ ಆಗುವುದಿಲ್ಲ ಎಂದು ‘ಡಿಫೆನ್ಸ್ ಅಕೌಂಟ್ ಡಿಪಾರ್ಟ್‍ಮೆಂಟ್’ ಈ ಸೈನಿಕರ ಪಿಂಚಣಿಗೆ ಕಲ್ಲುಹಾಕುತ್ತದೆ. ಹುಟ್ಟೂರಿನಲ್ಲಿ ಉಳುಮೆಗೆ ಭೂಮಿಯಿಲ್ಲದೇ, ತಮ್ಮನ್ನೇ ನಂಬಿಕೊಂಡಿರುವ ಪೋಷಕರು ಮತ್ತು ಹೆಂಡತಿ ಮಕ್ಕಳನ್ನು ಸಾಕಲು ಅಂಗವಿಕಲತೆ ಅಡ್ಡಿಯಾಗಿ ಬದುಕುವುದು ಹೇಗೆಂದು ಗೊತ್ತಿಲ್ಲದೇ ಅಕ್ಷರಶಃ ನರಕಕೂಪದೊಳಗೆ ಈ ಇಬ್ಬರು ಸೈನಿಕರು ಬದುಕುತ್ತಿದ್ದಾರೆ.
ಇನ್ನುಳಿದಂತೆ ರಾಜಾಸ್ತಾನ ಪಾಕ್‍ಗಡಿಯಲ್ಲಿ ಗಡಿಕಾಯುವ ಸೈನಿಕರು ಬಿಸಿಲಿನ ಝಳ, ಹಾವುಗಳ ಕಡಿತ, ನಿರ್ಜಲೀಕರಣದಂತಹ ಸಮಸ್ಯೆಯಿಂದ ಸಾವಿಗೀಡಾದರೆ, ದೈಹಿಕವಾಗಿ ಅಂಗವಿಕಲರಾದರೆ ಅವರಿಗೆ ಯಾವ ಬಗೆಯ ಪಿಂಚಣಿಗಳನ್ನು, ಪರಿಹಾರಧನವನ್ನು ಒದಗಿಸಲು ರಕ್ಷಣಾ ಇಲಾಖೆ ನಿರಾಕರಿಸುತ್ತದೆ. ಇವುಗಳನ್ನು ‘ನಾನ್ ಕಾಂಬಾಟ್ ರಿಲೇಟೆಡ್ ಇಂಜ್ಯುರೀಸ್’ ಎಂದು ಪರಿಗಣಿಸಿ ಸಾರಾಸಗಟಾಗಿ ಅಂಗವಿಕಲ ಸೈನಿಕರನ್ನು ಕೆಲಸದಿಂದ ವಜಾಗೊಳಿಸಿ ಅವರಿಗೆ ಪಿಂಚಣಿ ಕೊಡುವುದಕ್ಕೂ ಕಲ್ಲು ಹಾಕಿ ದೇಶ ಕಾಯ್ದ ಸೈನಿಕರನ್ನು ಬೀದಿಗೆ ಹಾಕುತ್ತಿದ್ದಾರೆ. ಇದು ಕಾಂಗ್ರೆಸ್ ಆಡಳಿತದ ಕಾಲದಿಂದ ಹಿಡಿದು ಇವತ್ತಿನವರೆಗೂ ನಡೆಯುತ್ತಲೇ ಇದೆ. ಕೈಕಾಲು ಗಟ್ಟಿಯಿರುವವರೆಗೆ ಸೈನ್ಯದಲ್ಲಿ ಬಳಸಿಕೊಂಡು ಯುದ್ಧ ಮತ್ತು ಯುದ್ಧೇತರ ಸಂಘರ್ಷಗಳಲ್ಲಿ ಕೈಕಾಲು ಕಳೆದುಕೊಂಡು ಅಂಗವಿಕಲರಾಗುವ ಸೈನಿಕರನ್ನು ‘ಯೂಸ್ ಅಂಡ್ ಥ್ರೋ’ ಧೋರಣೆಯಲ್ಲಿ ಬಳಸಿ ಬಿಸಾಕುವ ಪ್ರವೃತ್ತಿಯ ಬಗೆಗಿನ ಪ್ರಸಂಗಗಳು ಹೆಚ್ಚಾನೆಚ್ಚು ಬೆಳಕಿಗೇ ಬರುತ್ತಿಲ್ಲ. ಮಾಧ್ಯಮಗಳೆಲ್ಲವೂ ಆಳುವಪಕ್ಷದ ಸಾಕುನಾಯಿಗಳಾಗಿ ಪರಿವರ್ತಿತವಾಗಿರುವ ಈ ದಿನಗಳಲ್ಲಿ ಆಳುವವರಿಗೆ ಮುಜುಗರ ತರುವ ಇಂಥ ವಿಷಯಗಳನ್ನು ಯಾವ ಮಾಧ್ಯಮಗಳು ತಾನೇ ಜನರಿಗೆ ತಲುಪಿಸುತ್ತವೆ ಹೇಳಿ.
ಇಂತಹ ವಿಷಮಯ ಪರಿಸ್ಥಿತಿಯಲ್ಲಿ ಹೀಗೆ ರಕ್ಷಣಾ ಇಲಾಖೆ ಮತ್ತು ಸರ್ಕಾರದಿಂದ ಮೋಸಕ್ಕೊಳಗಾದ ಅಂಗವಿಕಲ ಸೈನಿಕರು ಒಂದೊಂದು ಸಂಘಟನೆಗಳನ್ನು ಕಟ್ಟಿಕೊಂಡು ಜನರೊಡನೆ ನೇರವಾಗಿ ಮಾತನಾಡಲು ಶುರುವಿಟ್ಟಿದ್ದಾರೆ. ಆಗಿನಿಂದ ಸೈನಿಕರನ್ನು ಗುರಾಣಿಯನ್ನಾಗಿ ಬಳಸಿಕೊಳ್ಳುವ ಜನದ್ರೋಹಿ ಸರ್ಕಾರಗಳ ಒಂದೊಂದೇ ವಂಚಕತನಗಳು ಬಯಲಿಗೆ ಬೀಳುತ್ತಿವೆ. ಸೇನೆಯಲ್ಲಿ 33 ವರ್ಷ ಸೇವೆ ಸಲ್ಲಿಸಿ ನಂತರ ಕಾಶ್ಮೀರದ ಭಯೋತ್ಪಾದಕರ ನಿಗ್ರಹಕ್ಕೆಂದು ನಿಯೋಜನೆಗೊಂಡು ಬಾಂಬ್‍ದಾಳಿಯಲ್ಲಿ ದೇಹದ ಚಲನೆಯನ್ನೇ ಕಳೆದುಕೊಂಡು ಅಂಗವಿಕಲರಾಗಿರುವ ಮಾಜಿ ಸೈನಿಕರಾದ ‘ಹರ್ಬಲ್ ಸಿಂಗ್’ರನ್ನೂ ಅಂಗವಿಕಲ ಸೈನಿಕರ ಪಿಂಚಣಿ ಹಣ ಕೊಡದೇ ಸೇನೆಯಿಂದ ಹೊರದಬ್ಬಲಾಗಿದೆ. ಅವರೀಗ ‘ಸೈನಿಕ್ ಸಂಘರ್ಷ್ ಸಮಿತಿ’ ಎಂಬ ಸಂಘಟನೆಯೊಂದನ್ನು ಹುಟ್ಟುಹಾಕಿ ಅದರಡಿಯಲ್ಲಿ ತಮ್ಮ ತರಹವೇ ಸರ್ಕಾರ ಮತ್ತು ರಕ್ಷಣಾ ಇಲಾಖೆಯಿಂದ ಮೋಸಕ್ಕೊಳಗಾದ ಅಂಗವಿಕಲ ಸೈನಿಕರನ್ನು ಒಟ್ಟುಗೂಡಿಸಿ ಹೋರಾಟ ನಡೆಸುತ್ತಿದ್ದಾರೆ. ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ನಂತರ ಅಡ್ವೋಕೇಟ್ ಆಗಿ ಕೆಲಸ ಮಾಡುತ್ತಿರುವ ಪಂಜಾಬಿನ ‘ನವದೀಪ್ ಸಿಂಗ್’ ಈ ಬಗೆಯ ಅಂಗವಿಕಲ ಸೈನಿಕರ ಪಿಂಚಣಿ ನಿರಾಕರಣೆಯ ಕೇಸುಗಳನ್ನು ನಡೆಸುತ್ತ ಸೈನಿಕಪ್ರೇಮವನ್ನೇ ಮುಖವಾಡವಾಗಿ ಬಳಸುತ್ತಿರುವ ಬಿಜೆಪಿ ಸರ್ಕಾರದ ಎರಡುನಾಲಿಗೆಯ ವ್ಯಕ್ತಿತ್ವವನ್ನು ಬಯಲಿಗೆಳೆಯುತ್ತಿದ್ದಾರೆ. ವಾಜಪೇಯಿ ಸರ್ಕಾರ ನಡೆಸಿದ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಎರಡೂ ಕಾಲು ಕಳೆದುಕೊಂಡ ಮೇಜರ್ ‘ಡಿ.ಪಿ.ಸಿಂಗ್’ ತಮಗೆ ನ್ಯಾಯಯುತವಾಗಿ ಸಲ್ಲಬೇಕಾದ ಅಂಗವಿಕಲ ಪಿಂಚಣಿಯನ್ನು ರಕ್ಷಣಾ ಇಲಾಖೆಯ ಕೆಳಗಿನ ಆರ್ಮಿ ಆಡಿಟಿಂಗ್ ಡಿಪಾರ್ಟ್‍ಮೆಂಟಿನಿಂದ ಪಡೆಯಲು 7 ವರ್ಷ ಕೋರ್ಟ್ ಬಾಗಿಲು ಅಲೆದವರು. ಇವರು ಮೂವರೂ ಇದೀಗ ಸೈನ್ಯದಲ್ಲಿ ಸೇವೆ ಸಲ್ಲಿಸಿ ಸಂಘರ್ಷಗಳಲ್ಲಿ ಅಂಗವಿಕಲರಾದ ಸೈನಿಕರ ಕೇಸುಗಳನ್ನು ಸುಪ್ರೀಂಕೋರ್ಟಿನಲ್ಲಿ ನಡೆಸುತ್ತಿದ್ದಾರೆ. ಇವರ ಜೊತೆಗೆ ‘ಡಿಸೇಬಲ್ಸ್ ವಾರ್ ವೆಟರನ್ಸ್ ಆಫ್ ಇಂಡಿಯ’ ಎಂಬ ಸಂಸ್ಥೆಯೂ ಸರ್ಕಾರದೊಟ್ಟಿಗೆ ಅಂಗವಿಕಲ ಸೈನಿಕರ ಪಿಂಚಣಿ ಮತ್ತು ಪರಿಹಾರ ಕುರಿತಂತೆ ಹೋರಾಟ ನಡೆಸುತ್ತಿದೆ. ಇವರುಗಳು ಬಿಚ್ಚಿಡುವ ರಕ್ಷಣಾ ಇಲಾಖೆ ಮತ್ತು ಸೈನಿಕರ ಬಗೆಗಿನ ಸರ್ಕಾರದ ದುರಹಂಕಾರದ ಮಾಹಿತಿಗಳನ್ನು ಕೇಳಿದರೆ ರಕ್ತ ಕುದಿಯುವಂತಾಗುತ್ತದೆ.
ಸರ್ಕಾರ ನಡೆಸುವ ದುರುಳರ ದುರಹಂಕಾರದ ಎಮ್ಮೆಚರ್ಮ ಯಾವ ಮಟ್ಟಿಗೆ ದಪ್ಪಗಿದೆಯೆಂದರೆ ತಮಗೆಂದು ತಮ್ಮ ಶಾಸಕ-ಸಂಸದರಿಗೆಂದು ವರ್ಷಕ್ಕೊಮ್ಮೆ ಸಂಬಳ-ಭತ್ಯೆಗಳನ್ನು ಏರಿಸಿಕೊಳ್ಳುವ ಇವರು ಕೆಲಸದಿಂದ ವಜಾಗೊಂಡ ಅಂಗವಿಕಲ ಸೈನಿಕರಿಗೆ ಪರಿಹಾರ ಪಿಂಚಣಿ ಕೊಡಲು ಸಾಧ್ಯವಿಲ್ಲವೆಂದು ಹೇಳುವಷ್ಟು ಕ್ರೂರಿಗಳು. ಅಂಗವಿಕಲರಿಗೆ ಕೊಡಬೇಕಾದ ಸೌಲಭ್ಯ-ಪರಿಹಾರಗಳನ್ನು ವಿವರಿಸುವ ‘ಡಿಸೇಬಲಿಟಿ ಆಕ್ಟ್’ ಯುದ್ಧದಲ್ಲಿ ಗಾಯಗೊಂಡು ಅಂಗವಿಕಲರಾದ ಸೈನಿಕರಿಗೆ ಅಪ್ಲೈ ಮಾಡಲಾಗುವುದಿಲ್ಲವಂತೆ. ಹೀಗೆಂದು ಬಿಜೆಪಿ ಸರ್ಕಾರವೇ ಆರ್.ಟಿ.ಐನಡಿ ಕೇಳಲಾದ ಪ್ರಶ್ನೆಯೊಂದಕ್ಕೆ ಅಧಿಕೃತವಾಗಿ ಉತ್ತರಕೊಟ್ಟಿದೆ. ಸೈನ್ಯದ ಕಾನೂನುಗಳ ಪ್ರಕಾರ ಆರ್ಮಿ, ನೇವಿ, ಏರ್‍ಫೋರ್ಸ್ ಸೇವೆಯಲ್ಲಿರುವ ಸೈನಿಕರು ಗಾಯಗೊಂಡರೆ, ಅಂಗಗಳನ್ನು ಕಳೆದುಕೊಂಡರೆ ಅವರ ಇತ್ತೀಚಿನ ಸಂಬಳದ ಅರ್ಧದಷ್ಟು ಪಿಂಚಣಿ ಕೊಡಬೇಕು. ಆದರೆ ಈ ಪಿಂಚಣಿ ಕೇಳುತ್ತಿರುವ ಸೈನಿಕರಿಗೆ ಪಿಂಚಣಿ ಕೊಡುವ ಬದಲು ಸರ್ಕಾರ ಮತ್ತು ರಕ್ಷಣಾ ಇಲಾಖೆಯು ಅಂಗವಿಕಲ ಸೈನಿಕರ ವಿರುದ್ಧವೇ ಸುಪ್ರೀಂಕೋರ್ಟಿನಲ್ಲಿ ಕೇಸು ಹೂಡಿ ಸೈನಿಕರಿಗೆ ಪಿಂಚಣಿ ಕೊಡಲಾಗುವುದಿಲ್ಲವೆಂದು ಕೇಸು ನಡೆಸುತ್ತಿದೆ. ಯುದ್ಧಗಳು ಮತ್ತು ಸಂಘರ್ಷ ನಿಯಂತ್ರಣ ಸೇವೆಯಲ್ಲಿ ಗಾಯಗೊಂಡು ಅಂಗವಿಕಲರಾದ ಸೈನಿಕರು ಕೇಳುತ್ತಿರುವ ಪಿಂಚಣಿ ಕೊಡಲು ನಿರಾಕರಿಸುವ ಬಿಜೆಪಿ ಸರ್ಕಾರವು ಸೈನಿಕರ ವಿರುದ್ಧ ಹೂಡಿದ ಕೇಸುಗಳನ್ನು ನಡೆಸಲು ಇಲ್ಲಿಯವರೆಗೆ ಲಾಯರುಗಳ ಫೀಸ್ ಎಂದು 48 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಇಲ್ಲಿಯವರೆಗೆ ಒಟ್ಟು 794 ಸೈನಿಕರು ಪಿಂಚಣಿಗೆಂದು ಕೋರ್ಟ್ ಮೊರೆ ಹೋಗಿದ್ದರೆ, ಟ್ರಿಬ್ಯೂನಲ್ ಮತ್ತು ಕೆಳಹಂತದ ಕೋರ್ಟುಗಳಲ್ಲಿ ಸೈನಿಕರ ಪರವಾಗಿ ತೀರ್ಪು ಬಂದರೆ ಆ ತೀರ್ಪಿನ ವಿರುದ್ಧ ಭಾರತದ ರಕ್ಷಣಾ ಇಲಾಖೆಯು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿ ಪಿಂಚಣಿಕೊಡಲು ಸಾಧ್ಯವಿಲ್ಲವೆಂದು ತಿಳಿಸಿದೆ. ಯುದ್ಧ ನಡೆಯುವಾಗ ಮಾತ್ರ ಸೈನಿಕರು ಸತ್ತರೆ ಪರಿಹಾರ ಕೊಡುತ್ತೇವೆಯೇ ಹೊರತು, ಹೆಲಿಕಾಪ್ಟರ್ ಪ್ಯಾರಾ ಡ್ರಾಪಿಂಗ್, ಸೇವೆಯ ವೇಳೆಯಲ್ಲಿ ಹಿಮಪಾತ, ಬಿಸಿಲಝಳ, ಪ್ರಾಕೃತಿಕ ವಿಕೋಪಗಳಿಂದ ಸತ್ತ ಮತ್ತು ಅಂಗವಿಕಲರಾದ ಸೈನಿಕರಿಗೆ ಪರಿಹಾರ ಪಿಂಚಣಿ ಕೊಡುವುದಿಲ್ಲವೆಂದು ಯಾವ ನಾಚಿಕೆಯಿಲ್ಲದೆ ಸರ್ಕಾರ ಸುಪ್ರೀಂಕೋರ್ಟಿನಲ್ಲಿ ಸೈನಿಕರ ವಿರುದ್ಧ ತಿರುಗಿಬಿದ್ದಿದೆ. ಈ ಕೇಸುಗಳನ್ನು ನಡೆಸಲು ರಕ್ಷಣಾ ಬಜೆಟ್‍ನಲ್ಲಿ ಪ್ರತ್ಯೇಕ ಫಂಡನ್ನೇ ಮೀಸಲಿರಿಸಿ ತಮ್ಮದೇ ಸೈನಿಕರ ವಿರುದ್ಧ ಬಿಜೆಪಿ ಸರ್ಕಾರ ಯುದ್ಧ ಘೋಷಿಸಿದೆ.
ಸೈನಿಕರನ್ನು ಮುಂದಿಟ್ಟುಕೊಂಡು ಪೊಲಿಟಿಕಲ್ ಕ್ಯಾಂಪೇನ್ ನಡೆಸಿ ಓಟು ಗಳಿಸಲು ಯತ್ನಿಸುವ ಬಿಜೆಪಿಯ ದುರುಳರು ಒಳಗಿಂದೊಳಗೆ ಸೈನಿಕರ ವಿರೋಧಿಗಳು ಎಂಬುದಕ್ಕೆ ಹಲವು ಸಾಕ್ಷ್ಯಗಳಿವೆ. ಭಾರತೀಯ ಸೈನ್ಯದ ಲೆಫ್ಟಿನೆಂಟ್ ಜನರಲ್ ‘ಬಿಪಿನ್‍ಪುರಿ’ಯವರು ಹೇಳುವಂತೆ ಪ್ರತೀವರ್ಷ ಭಾರತೀಯ ಸೈನ್ಯದಲ್ಲಿ 200ಕ್ಕೂ ಹೆಚ್ಚು ಸೈನಿಕರು ಗಾಯಗೊಂಡು ಅಂಗವಿಕಲರಾಗುತ್ತಿದ್ದಾರೆ. ಮತ್ತಿವರು ಸರ್ಕಾರ ತಮಗೆ ಪಿಂಚಣಿ ಕೊಡುತ್ತಿಲ್ಲವೆಂದು ಮೇಲ್ಕಾಣಿಸಿದ ಸಂಘಟನೆಗಳ ಮೊರೆ ಹೋಗುತ್ತಿದ್ದಾರೆ. ಇಂಥಹ ಅಸಹಾಯಕ ಸೈನಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಈ ಸೈನಿಕರ ಅಹವಾಲುಗಳನ್ನು ಆಲಿಸಿ ನ್ಯಾಯಯುತವಾಗಿ ತಮ್ಮದೇ ಸೈನಿಕರ ಪರವಾಗಿ ನಿಲ್ಲಬೇಕಿದ್ದ ಸೈನ್ಯದ ಮುಖ್ಯಸ್ಥ ‘ಬಿಪಿನ್ ರಾವತ್’ ಪುಣೆಯಲ್ಲಿ ನಡೆದ ಸೈನಿಕರ ದಿನಾಚರಣೆಯ ಸಂದರ್ಭದಲ್ಲಿ ‘ಸೈನಿಕರು ಸುಳ್ಳು ಸರ್ಟಿಫಿಕೇಟ್ ಸಲ್ಲಿಸಿ ದುಡ್ಡು ಹೊಡೆಯಲು ನೋಡುತ್ತಿದ್ದಾರೆ, ಅವರಿಗೆ ಶಿಕ್ಷೆ ಕೊಡುತ್ತೇವೆಂದು’ ಸೈನಿಕರನ್ನೇ ಮೋಸಗಾರರಂತೆ ದೇಶದ ಮುಂದೆ ನಿಲ್ಲಿಸಿದ್ದಾರೆ. ಕಾಶ್ಮೀರದ ಕಲ್ಲುತೂರಾಟಗಾರರ ಬಗ್ಗೆ ಬೊಗಳೆ ಭಾಷಣ ಹೊಡೆಯುವ ಇದೇ ರಕ್ಷಣಾ ಮಂತ್ರಿಣಿ ನಿರ್ಮಲಾ ಸೀತಾರಾಮನ್ ಕಲ್ಲುತೂರಾಟಗಾರರ ಮೇಲೆ ಗುಂಡುಹಾರಿಸಿದ ಭಾರತೀಯ ಸೈನ್ಯದ 750 ಸೈನ್ಯಾಧಿಕಾರಿಗಳ ಮೇಲೆ ಪೊಲೀಸ್ ಎಫ್.ಐ.ಆರ್ ದಾಖಲಿಸಲು ಅಂದಿನ ಮುಖ್ಯಮಂತ್ರಿ ಮೆಹಬೂಬ ಮಫ್ತಿಗೆ ಆದೇಶಿಸಿದ ಉದಾಹರಣೆಯಿದೆ. ಪಾರ್ಲಿಮೆಂಟ್ ಪ್ರಶ್ನೋತ್ತರವೊಂದರಲ್ಲಿ ರಾಜೀವ್ ಚಂದ್ರಶೇಖರ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಕ್ಷಣಾ ಮಂತ್ರಿಣಿ ನಿರ್ಮಲಾ ಸೀತಾರಾಮನ್ ಸೈನಿಕರ ಮೇಲೆ ನಾವು ನಡೆಸುತ್ತಿರುವ ಕೇಸುಗಳನ್ನು ಹಿಂಪಡೆಯಲು ಸಾಧ್ಯವೇ ಇಲ್ಲವೆಂದುತ್ತರಿಸಿ ತಾವೆಂಥ ಸೈನಿಕವಿರೋಧಿಗಳೆಂದು ಜಗಜ್ಜಾಹೀರು ಮಾಡಿದ್ದಾರೆ.
ಇದೆಲ್ಲ ಮರಾಮೋಸ ವಂಚನೆಗಳ ನಡುವೆ ದೇಶ ಕಂಡ ಅತ್ಯುತ್ತಮ ಪ್ರಧಾನ ವಿದೂಷಕನೊಬ್ಬ ಪ್ರತೀವರ್ಷ ಸೈನಿಕರೊಡನೆ ಸಿಹಿಹಂಚಿದ ಫೋಟೋ ತೆಗೆಸಿಕೊಂಡು ಜೈ ಜವಾನ್ ಎಂದು ಮೂರು ಕಾಸಿನ ನಾಟಕವಾಡುತ್ತಾನೆ. 2018ನ್ನು ಅಂಗವಿಕಲ ಸೈನಿಕರ ವರ್ಷವೆಂದು ಬಿಜೆಪಿ ಸರ್ಕಾರ ಕೋಟಿ ಖರ್ಚು ಮಾಡಿ ಕೊಂಡಾಡುತ್ತದೆ. ಈತನ ಮಿದುಳುಸತ್ತ ಭಕ್ತರು ಬಂದೂಕು ಹಿಡಿದ ಸೈನಿಕರ ಫೋಟೋಗಳನ್ನು ಮುಂದಿಟ್ಟುಕೊಂಡು ದೇಶದ ಜನರಿಗೆ ದೇಶಭಕ್ತಿಯ ಪಾಠ ಹೇಳಿಕೊಡಲು ಬರುತ್ತಾರೆ. ಇವರಂಥಹ ಬಣ್ಣಬಣ್ಣದ ಅಂಡೆಪಿರ್ಕಿ ಗೋಸುಂಬೆಗಳನ್ನು ನೀವೆಲ್ಲಾದರೂ ನೋಡಿದ್ದೀರ? ಸಾಧ್ಯವೇ ಇಲ್ಲ ಬಿಡಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...