ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ದೈಹಿಕ ಅಂತರ ಕಾಪಾಡುವುದು ಮತ್ತು ಮಾಸ್ಕ್‌ಗಳ ಬಳಕೆ ಅತ್ಯಗತ್ಯವಾಗಿವೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ. ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗ್ರವಾಲ್ ಅವರು ಈ ವಿಷಯದಲ್ಲಿನ ಅಧ್ಯಯನಗಳನ್ನು ಉಲ್ಲೇಖಿಸಿದ್ದಾರೆ.
ಒಬ್ಬ ಕೊರೊನಾ ಸೋಂಕಿತ ವ್ಯಕ್ತಿಯು ದೈಹಿಕ ಅಂತರ ಕ್ರಮಗಳನ್ನು ಅನುಸರಿಸದೆ ಓಡಾಡಿದರೆ 30 ದಿನಗಳಲ್ಲಿ 406 ಜನರಿಗೆ ಸೋಂಕು ತಗುಲಿಸಬಹುದು ಎಂದು ಅನೇಕ ವಿಶ್ವವಿದ್ಯಾಲಯಗಳು ಸಂಶೋಧನೆ ನಡೆಸಿವೆ ಎಂದು ಅವರು ತಿಳಿಸಿದ್ದಾರೆ.
“ಸೋಂಕಿತ ವ್ಯಕ್ತಿಯು ತನ್ನ ಓಡಾಟದಲ್ಲಿ 50% ದಷ್ಟು ದೈಹಿಕ ಅಂತರ ಕಾಪಾಡಿದರೆ 30 ದಿನಗಳಲ್ಲಿ 406 ರ ಬದಲು 15 ಜನರು ಸೋಂಕಿಗೆ ಒಳಗಾಗುತ್ತಾರೆ ಎಂದು ತಿಳಿದುಬಂದಿದೆ. ಅದೇ ಸೋಂಕಿತ ವ್ಯಕ್ತಿಯು ದೈಹಿಕ ಅಂತರವನ್ನು 75% ಕಾಪಾಡಿದರೆ 2.5 ಜನರಿಗೆ ಸೋಂಕು ತಗುಲಿಸುವ ಸಾಧ್ಯತೆ ಇದೆ” ಎಂದು ಅಗ್ರವಾಲ್ ಹೇಳಿದ್ದಾರೆ.
ಇದನ್ನೂ ಓದಿ: ಮೋದಿಯವರೆ ಬಾಯಿ ಬಡಾಯಿ ಬಿಟ್ಟಾಕಿ ಉಚಿತ ಲಸಿಕೆ ನೀಡಿ: ಸಿದ್ದರಾಮಯ್ಯ
ನಮ್ಮ ಗಮನವು ಒಂದು ಕಡೆ ಕ್ಲಿನಿಕಲ್ ನಿರ್ವಹಣೆಯತ್ತ, ಮತ್ತೊಂದೆಡೆ ಕೊರೊನಾವನ್ನು ನಿಯಂತ್ರಿಸುವತ್ತ ಇರಬೇಕು ಎಂದು ಅವರು ಹೇಳಿದ್ದಾರೆ. ಮಾಸ್ಕ್‌ಗಳ ಬಳಕೆಯನ್ನು ಅಗ್ರವಾಲ್ ಮತ್ತೆ ಒತ್ತಿ ಹೇಳಿದ್ದಾರೆ.
“ಸೋಂಕಿತ ವ್ಯಕ್ತಿಯಿಂದ ನಾವು ಆರು ಅಡಿಗಳಷ್ಟು ದೂರದಲ್ಲಿದ್ದರೂ ವೈರಸ್ ಹರಡುವ ಸಾಧ್ಯತೆ ಇದೆ ಎಂದು ಅಧ್ಯಯನವು ಹೇಳುತ್ತದೆ. ಇಂತಹ ಪ್ರಕರಣಗಳನ್ನು ಮನೆಯಲ್ಲೇ ಐಸೋಲೇಷನ್ ಹೊಂದಿದ್ದ ಕಡೆ ಕಾಣಬಹುದು. ಮಾಸ್ಕ್‌ಗಳನ್ನು ಸರಿಯಾಗಿ ಬಳಸದಿದ್ದರೆ ಸೋಂಕಿತ ವ್ಯಕ್ತಿಯಿಂದ ಸೋಂಕು ಹರಡುವ 90% ದಷ್ಟು ಸಾಧ್ಯತೆಯಿದೆ” ಎಂದು ಅವರು ತಿಳಿಸಿದ್ದಾರೆ.
ಒಂದು ವೇಳೆ ಸೋಂಕು ರಹಿತ ವ್ಯಕ್ತಿಯು ಮುಖವಾಡ ಧರಿಸಿ, ಸೋಂಕಿತ ವ್ಯಕ್ತಿಯು ಮಾಸ್ಕ್ ಧರಿಸದೆ ಇದ್ದರೆ, ಅವರಿಂದ ಸೋಂಕು ಹರಡುವ 30% ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
ಸೋಂಕಿತ ಮತ್ತು ಸೋಂಕಿತನಲ್ಲದ ವ್ಯಕ್ತಿಗಳು ಮಾಸ್ಕ್ ಧರಿಸಿದ್ದರೆ, ಕೊರೊನಾ ಪಾಸಿಟಿವ್ ಆಗುವ ಸಾಧ್ಯತೆಯು 1.5% ಆಗಿದೆ ಎಂದು ಅಗ್ರವಾಲ್ ಹೇಳಿದ್ದಾರೆ.
ಇದನ್ನೂ ಓದಿ: ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು: ಮದ್ರಾಸ್ ಹೈಕೋರ್ಟ್


