ವಾಷಿಂಗ್ಟನ್ ಡಿಸಿ ಬಳಿಯ ರೊನಾಲ್ಡ್ ರೇಗನ್ ವಿಮಾನ ನಿಲ್ದಾಣದ ಬಳಿ ಬುಧವಾರ ರಾತ್ರಿ (ಸ್ಥಳೀಯ ಕಾಲಮಾನ) ಸಂಭವಿಸಿದ ಪ್ರಯಾಣಿಕ ವಿಮಾನ ಮತ್ತು ಸೇನಾ ಹೆಲಿಕಾಪ್ಟರ್ ನಡುವಿನ ಅಪಘಾತದಲ್ಲಿ 67 ಜನರು ಸಾವನ್ನಪ್ಪಿದ್ದಾರೆ.
ಪ್ರಯಾಣಿಕ ವಿಮಾನ ನಿಲ್ದಾಣಕ್ಕೆ ಸಮೀಪಿಸುತ್ತಿದ್ದಾಗ ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ವಿಮಾನ ಮತ್ತು ಹೆಲಿಕಾಪ್ಟರ್ ಎರಡೂ ಪೊಟೊಮ್ಯಾಕ್ ನದಿಗೆ ಬಿದ್ದಿವೆ.
ಅಪಘಾತದಲ್ಲಿ ವಿಮಾನದಲ್ಲಿದ್ದ 64 ಪ್ರಯಾಣಿಕರು ಮತ್ತು ಸೇನಾ ಹೆಲಿಕಾಪ್ಟರ್‌ನಲ್ಲಿದ್ದ 4 ಸಿಬ್ಬಂದಿ ಸೇರಿ ಎಲ್ಲಾ 67 ಜನರು ಸಾವನ್ನಪ್ಪಿದ್ದಾರೆ. ಅಪಘಾತ ಸ್ಥಳದಿಂದ 28 ಶವಗಳನ್ನು ಹೊರತೆಗೆಯಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಘಟನೆ 2009ರ ನಂತರ ಯುನೈಟೆಡ್ ಸ್ಟೇಟ್ಸ್‌ನಲ್ಲಿ (ಯುಎಸ್) ನಡೆದ ಮೊದಲ ಪ್ರಮುಖ ವಿಮಾನ ಅಪಘಾತವಾಗಿದೆ.
“ಅತ್ಯಂತ ಸಂಕೀರ್ಣ ಪರಿಸ್ಥಿತಿ ಇದ್ದರೂ ಅಪಘಾತ ನಡೆದ ತಕ್ಷಣವೇ ನಾವು ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದೆವು. ಇದುವರೆಗೆ 28 ಶವಗಳನ್ನು ನದಿಯಿಂದ ಹೊರ ತೆಗೆಯಲಾಗಿದೆ. ದೋಣಿಗಳು ಇನ್ನೂ ನೀರಿನ ಮೇಲೆಯೇ ಇದ್ದು, ಶವಗಳು ಮತ್ತು ವಿಮಾನದ ಅವಶೇಷಗಳಿಗಾಗಿ ಹುಡುಕಾಟ ಮುಂದುವರೆಸಲಾಗಿದೆ” ಎಂದು ವಾಷಿಂಗ್ಟನ್ ಅಗ್ನಿಶಾಮಕ ದಳದ ಮುಖ್ಯಸ್ಥ ಜಾನ್ ಡೊನ್ನೆಲ್ಲಿ ತಿಳಿಸಿದ್ದಾರೆ.
ಬ್ಲ್ಯಾಕ್ ಬಾಕ್ಸ್ ಪತ್ತೆ
ಅಧಿಕಾರಿಗಳು ವಿಮಾನ ಮತ್ತು ಹೆಲಿಕಾಪ್ಟರ್ ಪತನಗೊಂಡ ಪೊಟೊಮ್ಯಾಕ್ ನದಿಯಿಂದ AA5342 ವಿಮಾನದ ‘ಬ್ಲ್ಯಾಕ್ ಬಾಕ್ಸ್’ ರೆಕಾರ್ಡರ್‌ಗಳಲ್ಲಿ ಒಂದನ್ನು ವಶಪಡಿಸಿಕೊಂಡಿದ್ದಾರೆ. ವಿಮಾನದ ಡೇಟಾ ಮತ್ತು ಕಾಕ್‌ಪಿಟ್ ಧ್ವನಿ ರೆಕಾರ್ಡರ್‌ಗಳನ್ನು ಒಳಗೊಂಡಿರುವ ಈ ಸಾಧನವು ಅಪಘಾತಕ್ಕೂ ಮುನ್ನ ವಿಮಾನದಲ್ಲಿ ಏನಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಮುಖ ಸಾಕ್ಷಿಯಾಗಲಿದೆ.
ಅಸೋಸಿಯೇಟೆಡ್ ಪ್ರೆಸ್ ಪಡೆದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ವರದಿಯ ಪ್ರಕಾರ, ಡಿಕ್ಕಿ ಸಂಭವಿಸಿದಾಗ ಹೆಲಿಕಾಪ್ಟರ್ ಸಂಚಾರ, ವಿಮಾನಗಳ ಆಗಮನ ಮತ್ತು ನಿರ್ಗಮನವನ್ನು ಸಂಘಟಿಸುವ ಜವಾಬ್ದಾರಿಯನ್ನು ಒಬ್ಬರೇ ವಾಯು ಸಂಚಾರ ನಿಯಂತ್ರಕ (ಏರ್ ಟ್ರಾಫಿಕ್ ಕಂಟ್ರೋಲರ್) ಹೊತ್ತಿದ್ದರು.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪತ್ರಿಕಾಗೋಷ್ಠಿಯಲ್ಲಿ, ಈ ಅಪಘಾತವನ್ನು ತಪ್ಪಿಸಬಹುದಿತ್ತು ಎಂದು ತೋರುತ್ತದೆ ಎಂದು ಹೇಳಿದ್ದಾರೆ. ಯಾವುದೇ ಪುರಾವೆಗಳಿಲ್ಲದೆ, ಘಟನೆಗೆ ಈ ಹಿಂದಿನ ಬರಾಕ್ ಒಬಾಮಾ ಮತ್ತು ಜೋ ಬೈಡೆನ್ ಆಡಳಿತದ ಉಪಕ್ರಮಗಳು ಕಾರಣ ಎಂದು ದೂಷಿಸಿದ್ದಾರೆ.
ಪತನಗೊಂಡ ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಬೋಸ್ಟನ್‌ನ ಸ್ಕೇಟಿಂಗ್ ಕ್ಲಬ್‌ನ ಸದಸ್ಯರು ಸೇರಿದ್ದರು. ಅವರು ವಿಚಿಟಾದಲ್ಲಿ 2025ರ ಯುಎಸ್ ಫಿಗರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ಗಳ ನಂತರ ನಡೆದ ಶಿಬಿರದಿಂದ ಹಿಂತಿರುಗುತ್ತಿದ್ದರು. ವರ್ಜೀನಿಯಾದ ಫೇರ್‌ಫ್ಯಾಕ್ಸ್ ಕೌಂಟಿಯ ಶಾಲೆಗಳ ಮೂವರು ವಿದ್ಯಾರ್ಥಿಗಳು ಮತ್ತು ಆರು ಮಂದಿ ಪೋಷಕರು ಸಹ ವಿಮಾನದಲ್ಲಿದ್ದರು.
‘ಪ್ರಧಾನಿ ಮೋದಿಯಂತೆ ಕೇಜ್ರಿವಾಲ್ ಕುತಂತ್ರಿ..’; ಎಎಪಿ ಮುಖ್ಯಸ್ಥರ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ


