ಹವಾಮಾನ ವೈಪರೀತ್ಯದ ನಡುವೆಯೂ ಭೂಕುಸಿತ ದುರಂತ ಸಂಭವಿಸಿದ ವಯನಾಡ್‌ನ ಮುಂಡಕ್ಕೈ ಮತ್ತು ಚೂರಲ್ಮಲಾದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಗಳು ಮುಂದುವರೆದಿದೆ.
ವರದಿಗಳ ಪ್ರಕಾರ, ರಕ್ಷಣಾ ಕಾರ್ಯಾಚರಣೆ ಕೊನೆಯ ಹಂತ ತಲುಪಿದೆ. ಆದರೆ, ಇನ್ನೂ 200ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಹಾಗಾಗಿ ಅವರ ಹುಡುಕಾಟದ ಬಗ್ಗೆ ಮುಂದಿನ ತೀರ್ಮಾನ ತೆಗೆದುಕೊಳ್ಳಬೇಕಿದೆ.
ಅನೇಕ ವರದಿಗಳ ಪ್ರಕಾರ, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 350 (358) ದಾಟಿದೆ. ನಾಪತ್ತೆಯಾದವರಲ್ಲಿ ಮೃತರ ದೇಹಗಳು ಮತ್ತು ಬದುಕುಳಿದವರ ಹುಡುಕಾಟಕ್ಕೆ ರಕ್ಷಣಾ ತಂಡಗಳು ಅತ್ಯಾಧುನಿಕ ಉಪಕರಣಗಳು ಮತ್ತು ಶ್ವಾನಗಳನ್ನು ಬಳಸಿಕೊಂಡಿದೆ.
ಇದುವರೆಗೆ ಪತ್ತೆಯಾದ ಮೃತದೇಹಗಳ ಪೈಕಿ 341ರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಮತ್ತು 146 ಮೃತದೇಹಗಳ ಗುರುತು ಪತ್ತೆ ಹಚ್ಚಲಾಗಿದೆ.
ಜಿಪಿಎಸ್, ಡ್ರೋನ್ ಮತ್ತು ಮೊಬೈಲ್ ನೆಟ್‌ವರ್ಕ್ ಲೊಕೇಶನ್ ಮೂಲಕ ದುರಂತ ನಡೆಯುವ ಮುನ್ನ ಕೊನೆಯ ಬಾರಿ ಜನರು ಎಲ್ಲಿದ್ದರು ಎಂದು ಪತ್ತೆ ಹಚ್ಚಲಾಗುತ್ತಿದೆ. ಭಾರತೀಯ ಸೇನೆ ನಿರ್ಮಿಸಿದ 190 ಮೀಟರ್ ಉದ್ದದ ಬೈಲಿ ಸೇತುವೆ ಯಂತ್ರಗಳ ಸಾಗಣೆ ಸೇರಿದಂತೆ ಇತರ ರೀತಿಯಲ್ಲಿ ರಕ್ಷಣಾ ಕಾರ್ಯಕ್ಕೆ ದೊಡ್ಡ ಸಹಕಾರಿಯಾಗಿದೆ.
100 ಮನೆಗಳ ನಿರ್ಮಾಣ : ಸಿಎಂ ಸಿದ್ದರಾಮಯ್ಯ ಭರವಸೆ
ಭೂಕುಸಿತ ದುರಂತದಿಂದ ಸಂತ್ರಸ್ತರಾಗಿರುವ ಜನರಿಗೆ ಪುನರ್ವಸತಿ ಕಲ್ಪಿಸಲು ಕರ್ನಾಟಕ 100 ಮನೆಗಳನ್ನು ನಿರ್ಮಿಸಿ ಕೊಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ನಿನ್ನೆಯಷ್ಟೆ ರಾಹುಲ್ ಗಾಂಧಿ ಕೂಡ ಕಾಂಗ್ರೆಸ್ ಕುಟುಂಬದಿಂದ 100 ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ : ವಯನಾಡ್ ಭೂಕುಸಿತ | ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಲು ಕೇಂದ್ರ ನಕಾರ : ವರದಿ


