ಕನಿಷ್ಠ 300 ಜನರನ್ನು ಬಲಿ ತೆಗೆದುಕೊಂಡ ಇತ್ತೀಚಿನ ಭೀಕರ ಭೂಕುಸಿತ ಮತ್ತು ರಾಜ್ಯ ಮಟ್ಟದ ತಜ್ಞರ ಮೌಲ್ಯಮಾಪನ ಸಮಿತಿ (ಎಸ್‌ಇಎಸಿ)ಯ ಗಂಭೀರ ಎಚ್ಚರಿಕೆಯ ನಡುವೆಯೂ ಕೇರಳ ಸರ್ಕಾರ ವಯನಾಡ್ ಮತ್ತು ಕೋಯಿಕ್ಕೋಡ್ ನಡುವೆ ಅವಳಿ ಸುರಂಗ ಮಾರ್ಗ ನಿರ್ಮಾಣಕ್ಕೆ ಮುಂದಾಗಿದೆ. ಈ ಸುರಂಗ ಇತ್ತೀಚೆಗೆ ಭೂಕುಸಿತ ಸಂಭವಿಸಿದ ಪ್ರದೇಶದ ಸಮೀಪವೇ ಹಾದು ಹೋಗಲಿದೆ ಎನ್ನುವುದು ಆತಂಕದ ವಿಷಯ.
ವಯನಾಡಿನ ಮೆಪ್ಪಾಡಿಯಿಂದ ಕೋಝಿಕ್ಕೋಡ್‌ನ ಅನಕ್ಕಂಪೊಯಿಲ್‌ವರೆಗಿನ 8.7 ಕಿಲೋ ಮೀಟರ್ ಸುರಂಗ ಮಾರ್ಗ ಯೋಜನೆಗೆ ಸರ್ಕಾರ ಟೆಂಡರ್ ಕರೆದಿದ್ದು, ಭೋಪಾಲ್ ಮೂಲದ ದಿಲೀಪ್ ಬಿಲ್ಡ್‌ಕಾನ್ 1,341 ಕೋಟಿ ರೂಪಾಯಿಗೆ ಅತಿ ಕಡಿಮೆ ಬಿಡ್ ಸಲ್ಲಿಸಿದೆ ಎಂದು ತಿಳಿದು ಬಂದಿದೆ.
ಕೋಝಿಕ್ಕೋಡ್‌ನ ತಿರುವಂಬಾಡಿಯ ಸಿಪಿಎಂ ಶಾಸಕ ಲಿಂಟೊ ಜೋಸೆಫ್ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಸುರಂಗ ಮಾರ್ಗ ನಿರ್ಮಾಣವು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆದರೆ, ಯೋಜನೆಗೆ ಪರಿಸರ ಇಲಾಖೆಯ ಅನುಮತಿ ಇನ್ನಷ್ಟೇ ಸಿಗಬೇಕಿದೆ. ಅತೀ ದೊಡ್ಡ ಭೂಕುಸಿತ ಸಂಭವಿಸಿದ ಪ್ರದೇಶ ಸಮೀಪದಲ್ಲೇ ಇರುವುದರಿಂದ ಮತ್ತು ಸುರಂಗ ನಿರ್ಮಾಣವಾಗಲಿರುವ ಪ್ರದೇಶದಲ್ಲಿ ಆಗಾಗ ಭೂಕುಸಿತ ಸಂಭವಿಸುತ್ತಿರುವ ಹಿನ್ನೆಲೆ, ಯೋಜನೆಯ ಕುರಿತು ಎಸ್‌ಇಎಸಿ ತೀವ್ರ ಕಳವಳ ವ್ಯಕ್ತಪಡಿಸಿದೆ.
ಸುರಂಗ ಮಾರ್ಗ ನಿರ್ಮಾಣವಾಗಲಿರುವ ಪ್ರದೇಶದಲ್ಲಿ, ವಿಶೇಷವಾಗಿ ಮಳೆಗಾಲದಲ್ಲಿ ಭೂಕುಸಿತ ಸಂಭವಿಸುತ್ತಿದೆ. ಯೋಜನೆಯ ಜಾರಿಯಲ್ಲಿ ವೈಫಲ್ಯಗಳು ಎದುರಾಗಿಲಿದೆ ಎಂದು ಸ್ಥಿರತೆಯ ವಿಶ್ಲೇಷಣೆಯು ಹೇಳಿದೆ. ಪುತ್ತುಮಲ ಎಂಬ ಗ್ರಾಮವು ಪ್ರಸ್ತಾವಿತ ಸುರಂಗ ಮಾರ್ಗದಿಂದ ಸರಿಸುಮಾರು 0.85 ಕಿಮೀ ದೂರದಲ್ಲಿದೆ. ಅಲ್ಲಿ 2019 ರಲ್ಲಿ ಭಾರೀ ಭೂಕುಸಿತ ಸಂಭವಿಸಿತ್ತು ಎಂದು ಜೂನ್ 11 ರಂದು ನಡೆದ ಎಸ್‌ಇಎಸಿ ಸಭೆ ಹೇಳಿದೆ.
ಪ್ರಸ್ತಾವಿತ ಯೋಜನೆಯು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಬರುತ್ತದೆ ಎಂದಿರುವ ಎಸ್‌ಇಎಸಿ, ಪರಿಸರ ಅನುಮತಿಗಾಗಿ ಅರ್ಜಿಯನ್ನು ಪರಿಶೀಲಿಸಲು 28 ಹೆಚ್ಚುವರಿ ದಾಖಲೆಗಳನ್ನು ಕೋರಿದೆ.
ಜುಲೈ 30ರ ಭೂಕುಸಿತದ ನಂತರ, ತಾಮರಶ್ಶೇರಿ ಘಾಟ್ ರಸ್ತೆಯಲ್ಲಿನ ಟ್ರಾಫಿಕ್ ದಟ್ಟಣೆಗೆ ಪರಿಹಾರವಾಗಿ ಯೋಜಿಸಲಾದ ಉದ್ದೇಶಿತ ಸುರಂಗ ರಸ್ತೆಯ ಬಗ್ಗೆ ಪರಿಸರವಾದಿಗಳು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸುರಂಗ ರಸ್ತೆಗಳು ಎಲ್ಲಿಯೂ ಅನಾಹುತಗಳಿಗೆ ಕಾರಣವಾದ ಬಗ್ಗೆ ವರದಿಯಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ : ‘ರಾಜೀನಾಮೆ ಕೊಟ್ಟ ನಂತರ ವಿನೇಶಾ ಫೋಗಟ್‌ಗೆ ಭಾರತೀಯ ರೈಲ್ವೆಯಿಂದ ಶೋಕಾಸ್ ನೋಟಿಸ್’


