ಸ್ನೇಹಿತರೇ, ಚಂದ್ರಶೇಖರ್ ಆಜಾದ್ ಅವರ ವೈದ್ಯಕೀಯ ವರದಿಯನ್ನು ಸಲ್ಲಿಸಿ 48 ಗಂಟೆಗಳು ಕಳೆದಿವೆ, ಆದರೆ ಅವರಿಗೆ ಚಿಕಿತ್ಸೆ ನೀಡುವ ಕುರಿತು ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಾವು ಬಹುಜನ ನಾಯಕರನ್ನು ಕಳೆದುಕೊಳ್ಳುವ ಹಾದಿಯಲ್ಲಿದ್ದೇವೆ, ಸರ್ಕಾರವು ತಕ್ಷಣವೇ ಅವರ ಚಿಕಿತ್ಸೆಗಾಗಿ ಏಮ್ಸ್ ಕಳುಹಿಸಬೇಕು ಮತ್ತು ಅವರ ವೈದ್ಯಕೀಯ ವರದಿ ನೀಡಬೇಕು ಎಂದು ಭೀಮ್ ಆರ್ಮಿಯ ಖುಷ್ ಕಳವಳ ವ್ಯಕ್ತಪಡಿಸಿದ್ದಾರೆ.
ಇನ್ನು ಚಂದ್ರಶೇಖರ್ ಅವರಿಗೆ ತುರ್ತಾಗಿ ಚಿಕಿತ್ಸೆ ನೀಡದಿದ್ದರೆ ಹೃದಯಘಾತ ಸಂಭವಿಸಬಹುದು ಎಂದು ಅವರ ಖಾಸಗಿ ವೈದ್ಯರು ಹೇಳಿದ್ದಾರೆ.
ಚಂದ್ರಶೇಖರ್ ಅಜಾದ್ ಫ್ಲೆಬೋಟಮಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಆಜಾದ್ ಅವರ ವೈಯಕ್ತಿಕ ವೈದ್ಯ ಹರ್ಜೀತ್ ಸಿಂಗ್ ಭಟ್ಟಿ ಹೇಳಿದ್ದಾರೆ. “ಕೆಲವು ರಕ್ತದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ರಕ್ತದಿಂದ ಹೆಚ್ಚುವರಿ ಕೆಂಪು ರಕ್ತ ಕಣಗಳನ್ನು ತೆಗೆದುಹಾಕುವ ವಿಧಾನ”ಕ್ಕೆ ಫ್ಲೆಬೋಟಮಿ ಎಂದು ಕರೆಯಲ್ಪಡುತ್ತಿದ್ದು ಈ ಸಂಬಂಧ ಅವರು ಕಳೆದ ಒಂದು ವರ್ಷದಿಂದ ಏಮ್ಸ್ ನ ಹೆಮಟಾಲಜಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿಎಎ ವಿರುದ್ಧ ಹಳೆ ದೆಹಲಿ ದರಿಯಾಗಂಜ್ ನಲ್ಲಿ ಕಳೆದ ಡಿಸೆಂಬರ್ 20 ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಸ್ತುತ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರಿಗೆ ಈಗ ಚಿಕಿತ್ಸೆ ನೀಡದಿದ್ದರೆ ಹೃದಯಾಘಾತವಾಗುವ ಸಾಧ್ಯತೆ ಇದೆ ಎಂದು ಅವರ ಖಾಸಗಿ ವೈದ್ಯರು ಕಳವಳವ್ಯಕ್ತಪಡಿಸಿದ್ದಾರೆ.
ಚಿಕಿತ್ಸೆಗಾಗಿ ಅವರನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ-ಏಮ್ಸ್ ಗೆ ದಾಖಲಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿ ವೈದ್ಯರು ಮನವಿ ಮಾಡಿದ್ದಾರೆ. ಈ ಸಂಬಂಧ ಡಾ.ಹರ್ಜಿತ್ ಸಿಂಗ್ ಸರಣಿ ಟ್ವೀಟ್ ಮಾಡಿದ್ದಾರೆ.
ಆದರೆ ಇದಕ್ಕೆ ಜೈಲಿನ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿಲ್ಲ. ’ಆಜಾದ್ ಅವರು ಸಂಪೂರ್ಣವಾಗಿ ಉತ್ತಮ ಸ್ಥಿತಿಯಲ್ಲಿದ್ದಾರೆ. ಜೈಲು ವೈದ್ಯರ ವಾಡಿಕೆಯ ವೈದ್ಯಕೀಯ ತಪಾಸಣೆಯ ಸಮಯದಲ್ಲಿ ಅಂತಹ ಯಾವುದೇ ವಿಷಯವು ಅವರ ಗಮನಕ್ಕೆ ಬಂದಿಲ್ಲ ಮತ್ತು ಅಗತ್ಯವಿದ್ದಲ್ಲಿ ಅವರಿಗೆ ವೈದ್ಯಕೀಯ ನೆರವು ನೀಡಲಾಗುವುದು’ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.


