ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿ ಅಥವಾ ಹೊಸ ಶಿಕ್ಷಣ ನೀತಿ (ಎನ್‌ಇಪಿ) 2020ರ ಅನುಷ್ಠಾನ ಸ್ಥಗಿತಗೊಳಿಸಿದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ 2023ರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹೈಕೋರ್ಟ್ ಮಂಗಳವಾರ (ಆಗಸ್ಟ್ 12) ವಜಾಗೊಳಿಸಿದೆ.
ಅರ್ಜಿದಾರರು ಯಾವುದೇ ಮೂಲಭೂತ/ಶಾಸನಬದ್ಧ ಹಕ್ಕುಗಳ ಉಲ್ಲಂಘನೆಯನ್ನು ಉಲ್ಲೇಖಿಸಿದ ಅಥವಾ ಸಾಬೀತಪಡಿಸದ ಹೊರತು, ನೀತಿ ವಿಷಯಗಳಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ ಹುದ್ದಾರ್ ಅವರ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
ಎನ್‌ಇಪಿ ಜಾರಿಗೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್ ವಕೀಲ ಗಿರೀಶ್ ಭಾರದ್ವಾಜ್ ಹಾಗೂ ಆರ್.ಆನಂದ ಮೂರ್ತಿ ಪಿಐಎಲ್ ಸಲ್ಲಿಸಿದ್ದರು.
“ನಾವು ಸರ್ಕಾರಕ್ಕೆ ನಿರ್ದಿಷ್ಟ ನೀತಿಯನ್ನು ಅನುಸರಿಸಲು ಅಥವಾ ಅನುಸರಿಸದಂತೆ ನಿರ್ದೇಶಿಸಲು ಹೇಗೆ ಸಾಧ್ಯ? ಯಾವ ಕಾನೂನಿನ ಅಡಿಯಲ್ಲಿ ನಾವು ಅವರನ್ನು (ರಾಜ್ಯ ಸರ್ಕಾರ) ನೀತಿಯನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು ಒತ್ತಾಯಿಸಬಹುದು?” ಎಂದು ನ್ಯಾಯಾಧೀಶರು ವಿಚಾರಣೆಯ ಸಮಯದಲ್ಲಿ ಮೌಖಿಕವಾಗಿ ಪ್ರಶ್ನಿಸಿದ್ದಾರೆ.
ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಅಕ್ಟೋಬರ್ 11, 2023ರಂದು ಎನ್‌ಇಪಿ ಅನುಷ್ಠಾನವನ್ನು ಹಿಂತೆಗೆದುಕೊಂಡಿತ್ತು ಮತ್ತು ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ತಜ್ಞರ ಸಮಿತಿಯನ್ನು ರಚಿಸಿತ್ತು.
ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಅರುಣಾ ಶ್ಯಾಮ್, “ಒಂದು ರಾಷ್ಟ್ರ, ಒಂದು ಶಿಕ್ಷಣ’ ಇರಬೇಕು ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿಯ ಹಿಂದಿನ ಉದ್ದೇಶವಾಗಿದೆ” ಎಂದು ಒತ್ತಿ ಹೇಳಿದ್ದರು.
“ಎನ್‌ಇಪಿಯಿಂದ ದೇಶದಾದ್ಯಂತ ಒಂದೇ ರೀತಿಯ ಶಿಕ್ಷಣ ವ್ಯವಸ್ಥೆ ಇರುತ್ತದೆ. ಪ್ರದೇಶವಾರು ಭಿನ್ನತೆ ಇರುವುದಿಲ್ಲ. ಈ ಹಿಂದೆ ಜಾರಿಗೆ ತಂದಿದ್ದ ಮತ್ತು ಈಗ ಜಾರಿಗೆ ತರಲು ಮುಂದಾಗಿರುವ ಶಿಕ್ಷಣ ನೀತಿಯಿಂದ ಸಮಸ್ಯೆಗಳಿವೆ” ಎಂದಿದ್ದರು.
“ಕೇಂದ್ರ ಸರ್ಕಾರವು ಎನ್ಇಪಿ ಜಾರಿಗೊಳಿಸಲು ಹೆಚ್ಚಿನ ಹಣವನ್ನು ಒದಗಿಸಿದೆ. ಈಗ ಅದನ್ನು ಸ್ಥಗಿತಗೊಳಿಸುವುದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತದೆ” ಎಂದು ಅರುಣ್ ಶ್ಯಾಮ್ ಹೇಳಿದ್ದರು.
Courtesy : livelaw.in
ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಆ.15ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್: ಒಳಮೀಸಲಾತಿ ಹೋರಾಟಗಾರರ ತೀರ್ಮಾನ


