ಮೂರು ಹಳ್ಳಿಗಳನ್ನು ಕೈಬಿಡಬೇಕು ಮತ್ತು ಪ್ರಸ್ತುತ ಹೋಬಳಿಯಲ್ಲಿ ಮತ್ತೆ ಭೂಸ್ವಾಧೀನ ಮಾಡಬೇಡಿ ಎಂದು ರೈತರು ಪ್ರಮುಖವಾಗಿ ಎರಡು ವಿನಂತಿಗಳನ್ನು ಮಾಡಿಕೊಂಡಿದ್ದರು, ಈ ಬೇಡಿಕೆಗಳನ್ನು ನಾವು ಈಡೇರಿಸಿದ್ದು, ರೈತರು ಹೋರಾಟವನ್ನು ಕೈಬಿಡಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮಂಗಳವಾರ ಹೇಳಿದ್ದಾರೆ. ಭೂಸ್ವಾಧೀನಕ್ಕೆ ಒಳಗಾದ ರೈತರಿಗೆ ಜಿಲ್ಲಾಧಿಕಾರಿಗಳು ಪರಿಹಾರವನ್ನು ನೀಡಲಿದ್ದಾರೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ. ಎರಡು ಬೇಡಿಕೆ ಈಡೇರಿಸಿದ್ದೇವೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಪಾಟೀಲ್, ಸರ್ಕಾರ ಬಹಳ ಮುಂದೆ ಹೋಗಿ ಇಷ್ಟೆಲ್ಲ ಕೆಲಸ ಮಾಡಿದೆ. ದಯವಿಟ್ಟು ಹೋರಾಟವನ್ನು ಕೈಬಿಡಿ ಎಂದು ವಿನಂತಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
“ಇಂದಿನ ದಿನಗಳಲ್ಲಿ ಕೈಗಾರಿಕೆಗಳು ಕೂಡಾ ಬರಬೇಕು ಮತ್ತು ರೈತರಿಗೂ ಅನುಕೂಲ ಅಗಬೇಕಿದೆ. ಕೈಗಾರಿಕೆಗಳ ವಿಚಾರದಲ್ಲಿ ಉಳಿದ ರಾಜ್ಯಗಳು ಎಷ್ಟೊಂದು ಸ್ಪರ್ಧಾತ್ಮಕವಾಗಿ ನಡೆದುಕೊಳ್ಳುತ್ತಿವೆ ಎಂದು ಎಲ್ಲರಿಗೂ ತಿಳಿದಿದೆ. ತೀರಾ ಕಡಿಮೆ ಬೆಲೆಗೆ ಕೈಗಾರಿಕೆಗಳಿಗೆ ಭೂಮಿಯನ್ನು ನೀಡುತ್ತಿವೆ. ಕೈಗಾರಿಕೆಗಳು ತರಬೇಕಾಗುತ್ತದೆ ಹಾಗೂ ಹಾಗೆ ಆದರೆ ಮಾತ್ರ ಉದ್ಯೋಗ ಸೃಷ್ಟಿಯಾಗುತ್ತದೆ” ಎಂದು ಅವರು ಹೇಳಿದ್ದಾರೆ.
“ರೈತರು ಕೂಡಾ ಅತ್ಯಂತ ಮಹತ್ವದವರೇ ಆಗಿದ್ದಾರೆ. ನಾನು ಹಾಗೂ ಮುನಿಯಪ್ಪ ಕೂಡಾ ರೈತ ಕುಟುಂಬದಿಂದ ಬಂದಂತಹವರು. ಹೀಗಾಗಿ ನಿಮ್ಮ ಭಾವನೆಗಳನ್ನು ಅರ್ಥ ಮಾಡಿ ನಾವು ಮೂರು ಹಳ್ಳಿಗಳ 500 ಎಕರೆಗಳನ್ನು ಬಿಟ್ಟಿದ್ದೇವೆ. ಮುಂದಿನ ಕಾಲದಲ್ಲಿ ಚನ್ನರಾಯಪಟ್ಟಣದಲ್ಲಿ ಕೈಗಾರಿಕೆ ಸಲುವಾಗಿ ಭೂಸ್ವಾಧೀನ ಮಾಡಬೇಡಿ ಎಂದು ರೈತರ ಬೇಡಿಕೆ ಸಲ್ಲಿಸಿದ್ದು, ಅದನ್ನು ಒಪ್ಪಿಕೊಂಡಿದ್ದೇವೆ. ಜೊತೆಗೆ ಅಭಿವೃದ್ಧ ಭೂಮಿಯನ್ನು ಕೂಡಾ ನೀಡಲಿದ್ದೇವೆ.” ಎಂದು ಅವರು ಹೇಳಿದ್ದಾರೆ.
ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ಮೊಟ್ಟಮೊದಲಿನ ಹಂತದಲ್ಲಿ ಈ ಹೋಬಳಿಯಲ್ಲಿ ಜಾಸ್ತಿಯಾಗಿ ಭೂಸ್ವಾಧೀನ ಆಗಿದ್ದು, ಅದನ್ನು ಕೈಬಿಡಬೇಕು ಎಂದು ರೈತರ ಪರವಾಗಿ ಮುಖ್ಯಮಂತ್ರಿ ಮತ್ತು ಕೈಗಾರಿಕಾ ಸಚಿವರನ್ನು ಒತ್ತಾಯ ಮಾಡಿದ್ದೆ ಎಂದು ಹೇಳಿದ್ದಾರೆ.
“ನೀರಾವರಿ ಭೂಮಿಯನ್ನು ಕೈಬಿಡಲೇಬೇಕು ಎಂದು ಕೂಡಾ ಒತ್ತಾಯ ಮಾಡಿದ್ದೆ. ಅದರಲ್ಲಿ ಸ್ವಲ್ಪ ಮಟ್ಟಿಗೆ ಅಂದರೆ ಸುಮಾರು 500 ಎಕರೆ ನೀರಾವರಿ ಭೂಮಿಯನ್ನು ಬಿಟ್ಟಿದ್ದಾರೆ. ಜೊತೆಗೆ ಚನ್ನರಾಯಪಟ್ಟಣ ಹೋಬಳಿಯಲ್ಲಿ ಇನ್ನು ಮುಂದೆ ಭೂಸ್ವಾಧೀನ ಮಾಡಬಾರದು ಎಂದು ಒತ್ತಾಯ ಕೂಡಾ ಮಾಡಿದ್ದೆ. ಅದಕ್ಕೆ ಮುಖ್ಯಮಂತ್ರಿ ಮತ್ತು ಕೈಗಾರಿಕಾ ಸಚಿವರು ಒಪ್ಪಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.
“ಭೂಮಿಯನ್ನು ಸ್ವಾಧೀನ ಮಾಡಿಕೊಂಡಿದ್ದು ಬಿಜೆಪಿಯವರಾಗಿದ್ದಾರೆ. ಅವರು ರೈತರಿಗಾಗಿ ಏನೂ ಮಾಡಿಲ್ಲ. ನಮ್ಮ ಸರ್ಕಾರ ಬಂದ ನಂತರ ಮುಖ್ಯಮಂತ್ರಿ ಹೋರಾಟ ಸ್ಥಳಕ್ಕೆ ಹೋಗಿ ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಮಾತುಕೊಟ್ಟಿದ್ದರು. ಅದರಂತೆ ಅವರ ಎರಡು ಬೇಡಿಕೆಗಳನ್ನು ಈಡೇರಿಸಿದ್ದೇವೆ. ಇಂತಹ ಘಟನೆ ರಾಜ್ಯದಲ್ಲಿ ನಡೆದಿದ್ದು ಇದೆ ಮೊದಲ ಬಾರಿಯಾಗಿದೆ. ಇದನ್ನು ರೈತರು ಅರ್ಥ ಮಾಡಿಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.
“ನಾವು ಈ ಮಟ್ಟದಲ್ಲಿ ರೈತರ ಪರವಾಗಿ ಇದ್ದೇವೆ. ನಮಗೆ ಕೈಗಾರಿಕೆಗಳು ಕೂಡಾ ಬರಬೇಕಿದೆ. ಈ ಕೈಗಾರಿಕೆಗಳು ಬರುವಾಗ ನೇರವಾಗಿ ಜಮೀನು ಕಳೆದುಕೊಳ್ಳುವವರಿಗೆ ಅಭಿವೃದ್ಧಿ ಹೊಂದಿರುವ ಭೂಮಿಯನ್ನು ನೀಡಲಿದ್ದೇವೆ. ನಾವು ಈ ರೀತಿ ತೀರ್ಮಾನ ತೆಗೆದುಕೊಂಡಿದ್ದೇವೆ. ಇಷ್ಟಲ್ಲಾ ಕೆಲಸವನ್ನು ಮಾಡಿದ್ದೇವೆ ಎಂದು ಹೋರಾಟ ಸಮಿತಿಯ ಜೊತೆಗೆ ಹೇಳಿ, ಹೋರಾಟ ಕೈಬಿಡಬೇಕು ಎಂದು ಕೇಳಿಕೊಂಡಿದ್ದೇನೆ” ಎಂದು ಮುನಿಯಪ್ಪ ಅವರು ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪ್ಪಟ್ಟಣದ ರೈತರು ಕಳೆದ 1000 ದಿನಗಳಿಗಿಂತಲೂ ಹೆಚ್ಚು ಕಾಲದಿಂದ ತಮ್ಮ ಭೂಮಿಯನ್ನು ಉಳಿಸಲು ಹೋರಾಟವನ್ನು ನಡೆಸುತ್ತಲೆ ಬಂದಿದ್ದಾರೆ. ಭೂಸ್ವಾಧೀನ ವಿರೋಧಿ ಹೋರಾಟದ 1150ನೇ ದಿನವಾದ ಗುರುವಾರ ರೈತರನ್ನು ಬೆಂಬಲಿಸಿ ‘ಸಂಯುಕ್ತ ಹೋರಾಟ- ಕರ್ನಾಟಕ’ ಸಂಘಟನೆಗಳ ಒಕ್ಕೂಟವು ‘ದೇವನಹಳ್ಳಿ ಚಲೋ’ ಹೋರಾಟವನ್ನು ಆಯೋಜಿಸಿದೆ. ಎರಡು ಬೇಡಿಕೆ ಈಡೇರಿಸಿದ್ದೇವೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಚನ್ನರಾಯಪಟ್ಟಣ ರೈತ ಹೋರಾಟ ಬೆಂಬಲಿಸಿ ಸಾಹಿತಿ, ಚಿಂತಕರಿಂದ ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಪತ್ರ
ಚನ್ನರಾಯಪಟ್ಟಣ ರೈತ ಹೋರಾಟ ಬೆಂಬಲಿಸಿ ಸಾಹಿತಿ, ಚಿಂತಕರಿಂದ ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಪತ್ರ

