ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಭೂಮಿ ಕೊಡುತ್ತೇವೆ ಎಂದು ಪತ್ರ ಕೊಟ್ಟವರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಶನಿವಾರ ತಿಳಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಮಿತಿ, “ಹದಿಮೂರು ಹಳ್ಳಿಗಳ 1,777 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಬಲವಂತದ ಭೂ ಸ್ವಾದೀನ ಪ್ರಕ್ರಿಯೆಯಿಂದ ಕೈಬಿಡಬೇಕು ಎಂಬ 1194 ದಿನಗಳ ಬೇಡಿಕೆಗೆ ಸಮಿತಿಯು ಬದ್ಧವಾಗಿದೆ. ಭೂಸ್ವಾದೀನ ವಿರೋಧಿ ಹೋರಾಟ ಸಮಿತಿಯೇ ಹೆಚ್ಚಿನ ಪರಿಹಾರದ ಹಣಕ್ಕೆ ಬೇಡಿಕೆ ಇಟ್ಟಿದೆ ಎಂಬ ಅಪಪ್ರಚಾರವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಸಮಿತಿಯು 13 ಹಳ್ಳಿಗಳ ಕೃಷಿ ಸಂಸ್ಕೃತಿ ಮತ್ತು ಅದನ್ನು ನಂಬಿಕೊಂಡಿರುವವರ ಜೀವನೋಪಾಯ ಉಳಿಸುವುದಕ್ಕೆ ಹೋರಾಡುತ್ತಿದೆಯೇ ವಿನಃ ಹೆಚ್ಚಿನ ಪರಿಹಾರದ ಹಣಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದೆ.
‘ಚನ್ನರಾಯಪಟ್ಟಣ ಹೋಬಳಿ ರೈತ ಹೋರಾಟ ಸಮಿತಿ’ ಹೆಸರಿನಲ್ಲಿ ಭೂಮಿ ನೀಡುತ್ತೇವೆ ಎಂದು ರೈತರ ವೇಷದಲ್ಲಿ ಇಂದು ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದ ಬಹುತೇಕರು ಕಾಂಗ್ರೆಸ್ ಪಕ್ಷದ ಮುಖಂಡರು, ಈ ಭಾಗದ ರಿಯಲ್ ಎಸ್ಟೇಟ್ ಮಧ್ಯವರ್ತಿಗಳು. ಇಂದು ಪಹಣಿ ಹಿಡಿದು ಬಂದಿದ್ದ ಬಹುತೇಕ ದಲಿತರ ಭೂಮಿಗಳನ್ನು ಮಾರಾಟಕ್ಕಾಗಿ ಅಗ್ರಿಮೆಂಟ್ ಮಾಡಿಸಿಕೊಂಡಿದ್ದು, ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ನಾವು ದಾಖಲೆಗಳನ್ನು ಬಿಡುಗಡೆ ಮಾಡಿರುತ್ತೇವೆ ಎಂದು ಸಮಿತಿ ಹೇಳಿದೆ.
ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯು ಯಾವುದೇ ಕಾರಣಕ್ಕೂ ಭೂಮಿ ತೆಗೆದುಕೊಳ್ಳಿ ಎಂದು ಸರ್ಕಾರಕ್ಕೆ ಮನವಿ ಮಾಡಿಲ್ಲ, ಮಾಡುವುದೂ ಇಲ್ಲ. ಜುಲೈ 15 ರಂದು ಮುಖ್ಯಮಂತ್ರಿಗಳು ಕರೆದಿರುವ ಸಭೆಯಲ್ಲಿ 1777 ಎಕರೆ ಭೂಸ್ವಾಧೀನ ಹಿಂಪಡೆಯುತ್ತಾರೆ ಎಂಬ ವಿಶ್ವಾಸವಿದೆ. ಇದೇ ನಮ್ಮ ಅಂತಿಮ ಹಾಗೂ ಕೊನೆಯ ನಿರ್ಧಾರ ಎಂದು ತಿಳಿಸಿದೆ.
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿ ರೈತ ಸಮಿತಿ ಎಂಬ ಹೆಸರಿನಲ್ಲಿ ನಿಯೋಗವೊಂದು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ಸೂಕ್ತ ಬೆಲೆ ಕೊಟ್ಟರೆ ನಾವು ಭೂಮಿ ಕೊಡುತ್ತೇವೆ ಎಂದಿದೆ. ಅದಕ್ಕೂ ಮುನ್ನ ಭೂಮಿ ಕೊಡುತ್ತೇವೆ ಎಂದು ಫ್ರೀಡಂ ಪಾರ್ಕ್‌ನಲ್ಲಿ ಒಂದಷ್ಟು ಜನರು ಪ್ರತಿಭಟನೆ ನಡೆಸಿದ್ದಾರೆ.
ದೇವನಹಳ್ಳಿ: ‘ಶೀಘ್ರ ಮಧ್ಯಪ್ರವೇಶ ಮಾಡಿ, ರೈತರ ಪರ ನಿಲ್ಲಿ’ – ಕಾಂಗ್ರೆಸ್ ಹೈಕಮಾಂಡ್‌ಗೆ 65 ಪ್ರಜ್ಞಾವಂತರಿಂದ ಪತ್ರ


