ಒಳಮೀಸಲಾತಿ ಚರ್ಚೆಯ ಹಿನ್ನಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಮೂಲ) ಸಂಸ್ಥಾಪಕ ಸದಸ್ಯರಲ್ಲೊಬ್ಬರಾದ ಶ್ರೀಧರ್ ಕಲಿವೀರರವರ ಸಂದರ್ಶನ.
1. ಒಳಮೀಸಲಾತಿಯ ಬಗ್ಗೆ ನಿಮ್ಮ ನಿಲುವೇನು?
ಪರಿಶಿಷ್ಟರ ಒಳ ಮೀಸಲಾತಿಗಾಗಿ ಎ.ಜೆ ಸದಾಶಿವ ಆಯೋಗದ ಶಿಫಾರಸು ವರದಿ ಮತ್ತು 27 ಆಗಸ್ಟ್ 2020ರಂದು ಅರುಣ್‍ಮಿಶ್ರ ನೇತೃತ್ವದ 5 ನ್ಯಾಯಾಧೀಶರ ಸುಪ್ರಿಂಕೋರ್ಟ್ ಪೀಠ, ಮಂಡಲ್ ವರದಿ ತೀರ್ಪಿನ ಹಿನ್ನೆಲೆಯಲ್ಲಿ ಪರಿಶಿಷ್ಟರ ಒಳಮೀಸಲಾತಿ ಕಾಯ್ದೆ ಸಂವಿಧಾನ ಬದ್ಧವಾಗಿದ್ದು ಅದನ್ನು ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಅಭಿಪ್ರಾಯಪಟ್ಟಿರುವ ಹಿನ್ನಲೆಯಲ್ಲಿ ರಾಜ್ಯಸರ್ಕಾರವು ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಿ ಒಳಮೀಸಲಾತಿ ಕಾಯ್ದೆ ಜಾರಿಗಾಗಿ ಸರ್ಕಾರಿ ಆದೇಶ ಹೊರಡಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ವಿರೋಧ ಪಕ್ಷಗಳನ್ನು ಆಗ್ರಹಿಸುತ್ತೇನೆ.
2. ಒಳಮೀಸಲಾತಿ ಮತ್ತು ಮೀಸಲಾತಿ ಎರಡರ ತಾತ್ವಿಕತೆಯೂ ಭಿನ್ನವೇ ಅಥವಾ ಒಂದೆಯೇ?
ಒಳಮೀಸಲಾತಿ ಮತ್ತು ಮೀಸಲಾತಿ ಎರಡರ ತಾತ್ವಿಕತೆಯು ಅಂಬೇಡ್ಕರ್‌ರವರು ಸಂವಿಧಾನದಲ್ಲಿ ನೀಡಿದ ನಿರ್ದೇಶನಗಳಂತೆ ಒಂದೇ ಆಗಿವೆ. ಅಂಬೇಡ್ಕರರು ಲಂಡನ್‍ನಲ್ಲಿ ಜರುಗಿದ ಮೂರೂ ದುಂಡು ಮೇಜಿನ ಸಭೆಗಳಲ್ಲಿ ಭಾಗವಹಿಸಿ, ಭಾರತದ ಜಾತಿ ಪದ್ಧತಿ ಆಧಾರದಲ್ಲಿ ಜಾತಿಗಳಲ್ಲಿ ಮುಂದುವರೆದ ಮತ್ತು ಹಿಂದುಳಿಯಲ್ಪಟ್ಟ ಎಂದು ಎರಡು ವಿಧಗಳಿವೆ, ಆ ಜಾತಿಗಳ ಜನಸಂಖ್ಯೆಗಳನುಸಾರ ಅವಕಾಶಗಳೆಲ್ಲವು ಒಳಮೀಸಲಾತಿಯಂತೆ ಹಂಚಿಕೆಯಾದಾಗ ಸಾಮಾಜಿಕ ಸಮಾನತೆ ಮೂಡುತ್ತದೆ ಎಂದು ವಾದಿಸಿದ್ದರು. ಇಂದು ಚರ್ಚೆಯಾಗುತ್ತಿರುವ ಒಳಮೀಸಲಾತಿಯು ಅಂದು ಅಂಬೇಡ್ಕರರು ಭಾರತೀಯ ಜಾತಿಗಳ ಒಳಮೀಸಲಾತಿಯ ವಿಸೃತ ರೂಪವೇ ಆಗಿದೆ. ಒಳಗಣ್ಣು, ಅಂತಃಕರಣಮುಖೇನ ಗ್ರಹಿಸಿದಾಗ ಇದರ ತಾರ್ಕಿಕ ಸ್ವರೂಪವು ಅನುಭವಗಮ್ಯವಾಗುತ್ತದೆ.
3. ಮೀಸಲಾತಿಗೆ ಶೇ.50 ರ ಮಿತಿ ಹೇರಿಕೆ, ಶೇ.3 ರಷ್ಟಿರುವ ಸಮುದಾಯಗಳಿಗೆ ಶೇ. 10 ಮೀಸಲಾತಿ ಕಲ್ಪಿಸಿರುವುದರ ವಿರುದ್ಧ ಹೋರಾಟಗಳಾಗಲಿಲ್ಲವೇಕೆ?
ಶೇ. 50 ಮೀಸಲಾತಿ ಮಿತಿ ಹೇರಿಕೆ ವಿರೋಧಿಸಿ, ಜನಗಣತಿ ಆಧಾರದ ಮೇಲೆ ಮೀಸಲಾತಿ ಪ್ರಮಾಣವನ್ನು ಏರಿಸಬೇಕೆಂದು ದಲಿತ ಸಂಘರ್ಷ ಸಮಿತಿ ಹಲವು ರಾಜ್ಯಸರ್ಕಾರಗಳನ್ನು ಆಗ್ರಹಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂಘಟನೆಗಳ ಒತ್ತಾಯಕ್ಕೆ ಮಣಿದು ಹಿಂದಿನ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ್‍ದಾಸ್ ಆಯೋಗವನ್ನು ರಚಿಸಿತು. ಸದರಿ ಆಯೋಗಕ್ಕೆ ನಾನು ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಬಣಗಳ ಹಲವು ಮುಖಂಡರು ಮೀಸಲಾತಿ ಪ್ರಮಾಣವನ್ನು ಶೇ.50 ರಿಂದ ಇನ್ನೂ ಹೆಚ್ಚಿಸುವಂತೆ, 2011ರ ಜನಗಣತಿ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಈಗಿರುವ ಮೀಸಲಾತಿಯನ್ನು ಶೇ.18 ರಿಂದ (ಪ.ಜಾ – ಶೇ.15% + ಪ.ಪಂ -ಶೇ 3%) ಇನ್ನು ಹೆಚ್ಚಿಸಲು ಸಾಧ್ಯ ಮಾಡಬೇಕೆಂದು ಮನವಿಗಳನ್ನು ಸಲ್ಲಿಸಿದ್ದೇವೆ. ಸದರಿ ಆಯೋಗವು ಪರಿಶಿಷ್ಟರ ಒಳಮೀಸಲಾತಿ ಪ್ರಮಾಣವನ್ನು ಶೇ.24.1ಕ್ಕೆ ಏರಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ವರದಿ ಸಲ್ಲಿಸಿದೆ ಎನ್ನಲಾಗಿದೆ. ರಾಜ್ಯ ಸರ್ಕಾರವು ಮುಂದಿನ ಸದನದಲ್ಲಿ ಸದರಿ ಆಯೋಗದ ಶಿಫಾರಸನ್ನು ಮಂಡಿಸಿ, ಅಂಗೀಕರಿಸಿ ಮೀಸಲಾತಿ ಏರಿಕೆಗಾಗಿ ಸರ್ಕಾರಿ ಆದೇಶವನ್ನು ಹೊರಡಿಸುವಂತೆ ಆಗ್ರಹಿಸುತ್ತೇವೆ. ಒಟ್ಟು ಮೀಸಲಾತಿ ಪ್ರಮಾಣವು ಆಗ ಶೇ.50ಕ್ಕಿಂತ ಹೆಚ್ಚಿಗೆ ಆಗುವುದರಿಂದ, ಸದರಿ ಕರ್ನಾಟಕದ ಮೀಸಲಾತಿ ಏರಿಕೆ ಕಾಯ್ದೆಯನ್ನು ಕೇಂದ್ರಕ್ಕೆ ಸಲ್ಲಿಸಿ ಅಲ್ಲಿ ಸಂವಿಧಾನದ 9ನೇ ಶೆಡ್ಯೂಲ್‍ನಲ್ಲಿ ಅದನ್ನು ಅಡಕಗೊಳಿಸುವ ಸಂವಿಧಾನ್ಮಾಕ ಕ್ರಮಕ್ಕೆ ರಾಜ್ಯಸರ್ಕಾರ ಮುಂದಾಗಬೇಕೆಂದು ಆಗ್ರಹಿಸುತ್ತೇನೆ.
ಶೇ.3ರಷ್ಟಿರುವ ಬ್ರಾಹ್ಮಣ ಮತ್ತು ಇತರ ಬಲಿಷ್ಟ ಮೇಲ್ಜಾತಿಗಳಿಗೆ ಶೇ.10 ಮೀಸಲಾತಿ ನೀಡಿಲಾಗಿದೆ. ಸಾಮಾನ್ಯ ವಿಭಾಗ ಅಂದರೆ ಮೇಲುಜಾತಿ ಬ್ರಾಹ್ಮಣರು ಮತ್ತಿತರರಿಗೆ ಮೀಸಲಾಗಿದ್ದು ಮೀಸಲಾತಿ ಇರದಿದ್ದ ಶೇ.50ರ ಪೈಕಿಯ ಅವಕಾಶಗಳಲ್ಲಿಯೇ ಹೊರತು ಜಾತಿ ಆಧಾರಿತ ಮೀಸಲಾತಿಗಾಗಿ ನಿಗದಿಯಾಗಿರುವ ಶೇ.50ರ ಪಾಲಿನಲ್ಲಿ ಅಲ್ಲ. ಬ್ರಾಹ್ಮಣೇತರ ಶೂದ್ರಾತಿ ಶೂದ್ರ, ಧಾರ್ಮಿಕ ಅಲ್ಪಸಂಖ್ಯಾತರಿಗೆ ಶೇ.40 ಮೀಸಲಾತಿಯನ್ನು ಹೊಸದಾಗಿ ಹಂಚಿಕೆ ಮಾಡಿ ಮಂಜೂರು ಮಾಡುವಂತೆ ಒತ್ತಾಯಿಸಬೇಕಿದೆ. ಹೀಗಾಗಿ ಒಟ್ಟಾರೆ ಪರಿಶಿಷ್ಟರು, ಹಿಂದುಳಿದ ಜಾತಿಗಳು, ಧಾರ್ಮಿಕ ಅಲ್ಪಸಂಖ್ಯಾತ, ಆರ್ಥಿಕವಾಗಿ ದುರ್ಬಲಾವಾಗಿ ಇರುವವರೂ ಸೇರಿಸಿ ಒಟ್ಟು ಮೀಸಲಾತಿಯನ್ನು ಶೇ.50 ರಿಂದ ಶೇ.100ಕ್ಕೆ ಏರಿಕೆಮಾಡುವಂತೆ ಅಗ್ರಹಿಸಿ ಹೋರಾಟವನ್ನು ಹಮ್ಮಿಕೊಳ್ಳಬೇಕಾಗಿದೆ. ಆಗ ಶೇ.10 ಮೀಸಲಾತಿ ಪಡೆದ ಬಡ ಬ್ರಾಹ್ಮಣ ವರ್ಗಗಳು ತಮ್ಮ ಪಾಲಿನ ಮೀಸಲಾತಿಯನ್ನ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಕ್ಕಿಬಿದ್ದು ಶೇ.90 ಮೀಸಲಾತಿ ಕಾಯ್ದೆಯನ್ನು ವಿರೋಧಿಸುವುದಿಲ್ಲ. ಅವೈದಿಕರಿಗೆ ಅವರ ಜನಸಂಖ್ಯಾವಾರು ಪಾಲು ಖಾತ್ರಿಪಡಿಸುವ ಮಾನವೀಯ, ನೈತಿಕ ಹೊಣೆಗಾರಿಕೆಯು ಅಶೋಕ ಚಕ್ರವರ್ತಿಯ ವಾರಸುದಾರರಾದ ಇಂದಿನ ಶೋಷಿತ ಜಾತಿಗಳಿಗೆ ಇದೆ ಮತ್ತು ಅದನ್ನು ಪಾಲಿಸುತ್ತಾರೆ ಎಂದು ನಾನು ಬಲವಾಗಿ ನಂಬಿದ್ದೇನೆ.
4. ಸ್ಪೃಶ್ಯರನ್ನು ಪರಿಶಿಷ್ಠ ಜಾತಿ ಪಟ್ಟಿಯಿಂದ ಹೊರಗಿಡಬೇಕೆಂಬುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಸದಾಶಿವ ಆಯೋಗದ ವರದಿ ಶಿಫಾರಸು ಮತ್ತು ಸುಪ್ರಿಂಕೋರ್ಟಿನ ನ್ಯಾಯಮೂರ್ತಿ ಅರುಣ್‍ಮಿಶ್ರ ನೇತೃತ್ವದ ತೀರ್ಪಿನ ಅಭಿಪ್ರಾಯದಲ್ಲಿ ಅಥವಾ ಯಾವುದೇ ನ್ಯಾಯಾಲಯಗಳ ತೀರ್ಪುಗಳಲ್ಲಿ ಕೊರಮ ಜಾತಿಗಳನ್ನಾಗಲಿ ಅಥವಾ ಪ.ಜಾತಿ ಪಟ್ಟಿಯಲ್ಲಿರುವ ಇನ್ನಾವುದೇ ಜಾತಿಗಳನ್ನಾಗಲಿ ಆ ಪಟ್ಟಿಯಿಂದ ಕೈಬಿಡಬೇಕೆಂದು ಶಿಫಾರಸ್ಸು ಆಗಿಲ್ಲ.
ಸದಾಶಿವ ಆಯೋಗದ ಶಿಫಾರಸಿನಲ್ಲಿ ಒಳಮೀಸಲಾತಿ ಕಾಯ್ದೆ ರಾಜ್ಯಸರ್ಕಾರದ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಿಗೆ ಮಾತ್ರ ಅನ್ವಯಿಸಬೇಕೆಂದು ನಿರ್ದೇಶಿಸಲಾಗಿದೆ. ಸದರಿ ಆಯೋಗದ ವ್ಯಾಪ್ತಿಗೆ ರಾಜಕೀಯ ಕ್ಷೇತ್ರದ ಮೀಸಲಾತಿ ಸೇರ್ಪಡೆ ಆಗಿದ್ದಲ್ಲಿ, ಶೇ.3 ರಷ್ಟು ಒಳಮೀಸಲಾತಿಯನ್ನು ಪರಿಶಿಷ್ಟ ಜಾತಿಗಳು ರಾಜಕೀಯ ಕ್ಷೇತ್ರದಲ್ಲಿ ಪಡೆದು, ರಾಜಕಾರಣದಲ್ಲಿ ಅವರ ಶಕ್ತಿ ಸಕರಾತ್ಮಕ ದಿಕ್ಕಿನಲ್ಲಿ ಪ್ರವಸಿಸುತ್ತದೆ ಅಂದುಕೊಂಡಿದ್ದೇನೆ.
5. ಕೆಲವು ಬಲಗೈ ರಾಜಕಾರಣಿಗಳು ಒಳಮೀಸಲಾತಿ ವಿರುದ್ಧವಾಗಿ ದನಿ ಎತ್ತಿದ ಕಾರಣಕ್ಕೆ ಹೊಲೆಮಾದಿಗರ ನಡುವೆ ಭಿನ್ನತೆ ಉಂಟಾಯಿತು ಎನ್ನಲಾಗುತ್ತದೆ. ನಿಜಕ್ಕೂ ಆಯಾ ದಲಿತ ಜಾತಿಗಳನ್ನು ಪ್ರತಿನಿಧಿಸುವ ಪ್ರಾಮಾಣಿಕ ರಾಜಕಾರಣಿಗಳು ಇಂದಿಗೂ ಇದ್ದಾರೆಯೇ?
ಒಳಮೀಸಲಾತಿ ಕಾಯ್ದೆ ಬಗ್ಗೆ ಸಕಾರಾತ್ಮಕ ನಿಲುವು ತಳೆಯಲು ಹೊಲೆಯ ಅಥವ ಚಲವಾದಿ ಜಾತಿಯ ಅನೇಕ ರಾಜಕಾರಣಿಗಳೊಂದಿಗೆ ನಾನು ಮತ್ತು ಹಲವು ದಸಂಸ ಮುಖಂಡರು 20 ವರ್ಷಗಳಿಂದಲೂ ವಿನಂತಿಸಿಕೊಳ್ಳುತ್ತಿದ್ದೇವೆ. ಅಂದಿಗೆ ಹೋಲಿಸಿದರೆ ಆ ಜಾತಿಯ ರಾಜಕಾರಣಿಗಳ ಬಹುತೇಕ ಮಂದಿ ಒಳಮೀಸಲಾತಿ ಪರವಾಗಿ ಬದಲಾಗಿದ್ದಾರೆ. ಕೆಲವರು ಗೊಂದಲದಲ್ಲಿದ್ದಾರೆ. ಅವರಿಗೆ ಅಧ್ಯಯನ ಮತ್ತು ಒಗ್ಗಟ್ಟಿನ ಬಗ್ಗೆ ಅರಿವಿನ ಕೊರತೆ ಇರಬಹುದು.
6. ಒಳಮೀಸಲಾತಿ ದಲಿತರನ್ನು ಒಡೆದು ಆಳುತ್ತದೆ ಎಂದು ಆರಂಭದಲ್ಲಿ ಭಯ ಬೀಳಿಸಿದ್ದಿದೆ. ಆದರೆ ಈಗ ಒಳಮೀಸಲಾತಿ ಜಾರಿಯಾಗದಿದ್ದರೆ ದಲಿತರ ಒಗ್ಗಟ್ಟು ಸಂಪೂರ್ಣ ಮುರಿದು ಬೀಳುತ್ತದೆ ಎಂಬ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು?
ಪರಿಶಿಷ್ಟ ಒಳಮೀಸಲಾತಿ ಕಾಯ್ದೆ ಜಾರಿಯಿಂದ ಒಗ್ಗಟ್ಟು ಹೆಚ್ಚಾಗುತ್ತದೆ. ಅವರವರ ಜನಸಂಖ್ಯಾವಾರು ಪಾಲು ಆಯಾ ಪಲಾನುಭವಿ ಜಾತಿಗಳಿಗೆ ಖಾತ್ರಿ ಆದಾಗ ಮಾತ್ರ ಮುಂದೆ ನಡೆಸಲು ಉದ್ದೇಶಿಸಿರುವ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಹೋರಾಟ, ಖಾಸಗೀಕರಣ ವಿರೋಧಿಸಿ ಸರ್ಕಾರಿ ಕ್ಷೇತ್ರ ಇಲಾಖೆ, ಉದ್ದಿಮೆಗಳನ್ನು ಉಳಿಸಿಕೊಳ್ಳುವ ಹೋರಾಟ, ರೊಟೇಶನ್ ಕಾನೂನು ಆದಾರದಲ್ಲಿ ಜಿ.ಪಂ ಅಧ್ಯಕ್ಷಗಿರಿ ಸ್ಥಾನ, ಪ್ರಧಾನಿ ಮತ್ತು ಮುಖ್ಯಮಂತ್ರಿ ಪದವಿಗಳಿಗೆ ಪರಿಶಿಷ್ಟರಿಗೂ ಅವಕಾಶ ದೊರೆಯುವಂತೆ ಸಂವಿಧಾನ ತಿದ್ದುಪಡಿಗಾಗಿ ಹೋರಾಟ – ಇವೆಲ್ಲವುಗಳಲ್ಲಿ ಎಲ್ಲ ಪರಿಶಿಷ್ಟ ಜಾತಿಯ ಜನಗಳು ಕಾಯಾ ವಾಚಾ ಮನಸಾ ಪಾಲ್ಗೊಳ್ಳಲು ಸಾಧ್ಯ. ಈ ಹೋರಾಟಗಳು ಯಶಸ್ವಿಯಾದರೆ ಅಂಬೇಡ್ಕರರು ಬಯಸಿದಂತೆ ಸ್ವತಂತ್ರ ರಾಜಕೀಯ ಅಧಿಕಾರದಿಂದ ಭಾರತಕ್ಕೆ “ಸಮಾಜವಾದಿ ಪ್ರಭುತ್ವ” ಸಿದ್ಧಾಂತದ ಸ್ವೀಕಾರ ಸಾಧ್ಯವಾಗಿ ಗಳಿಕೆ ಮತ್ತು ಹಂಚಿಕೆಯಲ್ಲಿ ಸಮಾನತೆ ಸಾಧ್ಯವಾಗಿ ಮುಂದೆ ಸಾಗಿದಾಗ ಭಾರತದ ಏಕತೆ, ಸಮಗ್ರತೆ, ಸಾರ್ವಭೌಮತ್ವ ಬಲಗೊಳ್ಳುತ್ತದೆ.
7. ಸದಾಶಿವ ಆಯೋಗದ ವರದಿ ಜಾರಿ ಮಾಡುವುದರ ಕುರಿತು ನಿಮ್ಮ ಅನಿಸಿಕೆ ಏನು?
ಸದಾಶಿವ ವರದಿಯನ್ನು ಸದನದಲ್ಲಿ ಮಂಡಿಸಿ ಒಳಮೀಸಲಾತಿ ಕಾಯ್ದೆ ಜಾರಿಗೊಳಿಸುವಂತೆ ರಾಜ್ಯ-ಕೇಂದ್ರ ಸರ್ಕಾರಗಳನ್ನು ಆಗ್ರಹಿಸುತ್ತೇನೆ.
- ಶ್ರೀಧರ ಕಲಿವೀರ
(1975 ರಲ್ಲಿ ಸ್ಥಾಪನೆಯಾದ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಮೂಲ) ಸಂಸ್ಥಾಪಕ ಸದಸ್ಯರಲ್ಲೊಬ್ಬರು. ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಪದಾಧಿಕಾರಿಯಾಗಿ 47 ವರ್ಷಗಳಿಂದ ಜನಪರ ಹೋರಾಟಗಳನ್ನು ನಡೆಸಿಕೊಂಡು ಬಂದಿರುವ ಬರಹಗಾರ-ಚಿಂತಕ)
ಇದನ್ನೂ ಓದಿ: ಬಹುಸಂಖ್ಯಾತ ಜಾತಿಗಳನ್ನು ಅಸ್ಪೃಶ್ಯ ಜಾತಿಗಳೊಂದಿಗೆ ಸೇರಿಸಿರುವುದು ರಾಜಕೀಯ ಷಡ್ಯಂತ್ರ!


