‘ಪೆಗಾಸಸ್’ ತಂತ್ರಾಂಶವನ್ನು ಬಳಸಿಕೊಂಡು ಭಾರತದ ವಿರೋಧ ಪಕ್ಷಗಳ ನಾಯಕರು, ಪತ್ರಕರ್ತರು, ಸಚಿವರ ಫೋನ್‌ಗಳನ್ನು ಟ್ಯಾಪ್ ಮಾಡಲಾಗುತ್ತಿದೆ ಎಂದು ಪ್ಯಾರಿಸ್ ಮೂಲದ ಪಾರ್ಬಿಡನ್ ಸ್ಟೋರಿಸ್ ತನಿಖಾ ವರದಿ ಬಹಿರಂಗ ಪಡಿಸಿದೆ. ಈ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಒಕ್ಕೂಟ ಸರ್ಕಾರದ ವಿರುದ್ದ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
‘ಪೆಗಾಸಸ್’ ಇಸ್ರೇಲಿ ಕಂಪನಿ ಎನ್‌ಎಸ್‌ಒ ಗ್ರೂಪ್‌ನ ಗೂಢಚರ್ಯೆ ತಂತ್ರಾಂಶವಾಗಿದೆ. ಈ ತಂತ್ರಾಂಶವನ್ನು ಪರವಾನಗಿ ಪಡೆದಿರುವ ಅಧಿಕೃತ ಸರಕಾರಿ ಏಜೆನ್ಸಿಗಳಿಗೆ ಅಥವಾ ಗುಪ್ತಚರ ಸಂಸ್ಥೆಗಳಿಗೆ ಮಾತ್ರವೇ ಮಾರುತ್ತೇವೆ ಎಂದು ಎನ್‌ಎಸ್‌ಒ ಹೇಳಿತ್ತು.
ಇದನ್ನೂ ಓದಿ: ಇಸ್ರೇಲ್ ಮೂಲದ ಕಂಪೆನಿಯಿಂದ ಭಾರತದ 300 ಗಣ್ಯರ ಫೋನ್‌ಗಳು ಹ್ಯಾಕ್!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೂರು ದಿನದ ಹಿಂದೆಯೆ, “ಈ ದಿನಗಳಲ್ಲಿ ನೀವು ಏನನ್ನು ಓದುತ್ತಿರುವಿರೋ ಅದರ ಬಗ್ಗೆ ನನಗೆ ಆಶ್ಚರ್ಯವಾಗುತ್ತಿದೆ” ಎಂದು ಟ್ವೀಟ್ ಮಾಡಿದ್ದರು. ಇಂದು ಈ ಟ್ವೀಟ್ ಅನ್ನು ಮತ್ತೆ ರೀಟ್ವೀಟ್ ಮಾಡಿರುವ ಅವರು, “ಅವರು ಏನು ಓದುತ್ತಿದ್ದಾರೆಂದು ನಮಗೆ ಗೊತ್ತಿದೆ. ನಿಮ್ಮ ಪೋನಿನ ಎಲ್ಲವೂ” ಎಂದು ಆಶ್ಚರ್ಯಪಟ್ಟಿದ್ದಾರೆ. ಜೊತೆಗೆ ಪೆಗಾಸಸ್ ಹ್ಯಾಶ್‌ಟ್ಯಾಗ್ ಅನ್ನು ಕೂಡಾ ಅವರು ಬಳಸಿಕೊಂಡಿದ್ದಾರೆ.
We know what he’s been reading- everything on your phone!#Pegasus https://t.co/d6spyji5NA
— Rahul Gandhi (@RahulGandhi) July 19, 2021
ಆದರೆ ಒಕ್ಕೂಟ ಸರ್ಕಾವು, ತನಿಖಾ ವರದಿಯನ್ನು ನಿರಾಕರಿಸಿದ್ದು, ನಿರ್ದಿಷ್ಟ ಜನರ ಮೇಲೆ ಸರ್ಕಾರ ಕಣ್ಗಾವಲು ಇಟ್ಟಿದೆ ಎಂಬುವುದಕ್ಕೆ ಯಾವುದೇ ದೃಡವಾದ ಆಧಾರವಿಲ್ಲ ಎಂದು ಹೇಳಿದೆ.
ವಿಶ್ವದಾದ್ಯಂತ 50,000 ಫೋನ್‌ಗಳನ್ನು ಟ್ಯಾಪ್ ಮಾಡಲಾಗಿದೆ ಎನ್ನಲಾಗಿದ್ದು, ತನಿಖಾ ವರದಿಯನ್ನು ಪ್ಯಾರಿಸ್ ಮೂಲದ ಲಾಭರಹಿತ ಮಾಧ್ಯಮ ಸಂಸ್ಥೆ ‘ಫಾರ್ಬಿಡೆನ್ ಸ್ಟೋರಿಸ್’, ಅಮ್ನೆಸ್ಟಿ ಇಂಟರ್‌ನ್ಯಾಷನಲ್, ಭಾರತದ ಆನ್‌ಲೈನ್ ಸುದ್ದಿ ಸಂಸ್ಥೆ ದಿ ವೈರ್, ಲೆ ಮಾಂಡೆ, ದಿ ಗಾರ್ಡಿಯನ್, ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ಒಟ್ಟು 16 ಮೆಕ್ಸಿಕನ್, ಅರಬ್ ಮತ್ತು ಯುರೋಪಿನ ಸುದ್ದಿ ಸಂಸ್ಥೆಗಳು ಜಂಟಿಯಾಗಿ ನಡೆಸಿದೆ. ಈ ಸಂಸ್ಥೆಗಳು ಕೈಗೊಂಡಿರುವ ಈ ತನಿಖೆಗೆ ‘ಪೆಗಾಸಸ್ ಪ್ರಾಜೆಕ್ಟ್’ ಎಂದು ಕರೆಯಲಾಗಿದೆ.
ತನಿಖಾ ವರದಿಯಲ್ಲಿ, ನರೇಂದ್ರ ಮೋದಿ ಸರ್ಕಾರದ ಇಬ್ಬರು ಸಚಿವರು, ಮೂವರು ವಿರೋಧ ಪಕ್ಷದ ನಾಯಕರು, ಒಬ್ಬ ನ್ಯಾಯಾಂಗದ ವ್ಯಕ್ತಿ, 40 ಪತ್ರಕರ್ತರು, ವಿಜ್ಞಾನಿಗಳು ಹಾಗೂ ಮಾನವ ಹಕ್ಕುಗಳ ಹೋರಾಟಗಾರರು ಸೇರಿದಂತೆ ಹಲವು ಉದ್ಯಮಿಗಳ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಬಿಎಸ್‌ವೈ ವಿರುದ್ಧ ಕತ್ತಿ ಮಸೆಯುತ್ತಿದ್ದ ಮೀರ್ ಸಾದಿಕ್ ಯಾರೆಂಬುದು ಗೊತ್ತಾಯಿತು..: ಕಾಂಗ್ರೆಸ್
2019 ರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ನರೇಂದ್ರ ಮೋದಿ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂತ್ರಿಗಳು ಸೇರಿದಂತೆ 2018 ಮತ್ತು 2019 ರ ನಡುವೆ ಹೆಚ್ಚಿನ ಜನರನ್ನು ಗುರಿಯಾಗಿಸಲಾಗಿತ್ತು ಎಂದು ದಿ ವೈರ್ ವರದಿ ಹೇಳಿದೆ.
ಇಷ್ಟೇ ಅಲ್ಲದೆ, ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳಾದ 12 ಹೋರಾಟಗಾರರ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದ್ದು ಅವರ ಮೇಲೆ ಕಣ್ಗಾವಲು ಇಡಲಾಗಿದೆ ಎಂಬ ತನಿಖಾ ವರದಿಯು ಹೇಳಿದೆ. ವರದಿಯು ‘ಜಾಗತಿಕ ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಉಲ್ಲೇಖಿಸಿದೆ.
ಫೋನ್ ಹ್ಯಾಕ್ ಮಾಡಲಾಗಿರುವ ಭಾರತೀಯ ಪತ್ರಕರ್ತರಲ್ಲಿ ಸುಶಾಂತ್ ಸಿಂಗ್, ಜೆ. ಗೋಪಿಕೃಷ್ಣನ್, ಶಿಶಿರ್ ಗುಪ್ತಾ, ರಿತಿಕಾ ಚೋಪ್ರಾ, ಪ್ರಶಾಂತ್ ಝಾ, ಪ್ರೇಮ್ ಶಂಕರ್ ಝಾ, ಸ್ವಾತಿ ಚತುರ್ವೇದಿ, ರಾಹುಲ್ ಸಿಂಗ್, ಮುಜಮ್ಮಿಲ್ ಜಲೀಲ್, ಇಫ್ತಿಕಾರ್ ಗೀಲಾನಿ, ಸಂದೀಪ್ ಉನ್ನಿತಾನ್, ದಿ ವೈರ್‌ನ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಮತ್ತು ಎಂ.ಕೆ.ವೇಣು ಮುಂತಾದವರು ಸೇರಿದ್ದಾರೆ.
ಪೆಗಾಸಸ್ ತಂತ್ರಾಂಗಳನ್ನು ಬಳಸಿಕೊಂಡು ಫೋನ್ ಸಂಖ್ಯೆಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಈ ಹಿಂದೆ ಕೂಡಾ ವರದಿಯಾಗಿತ್ತು.
ಇದನ್ನೂ ಓದಿ: ಬಿಜೆಪಿ ಸೇರುತ್ತಿರುವ ಕೊಳ್ಳೇಗಾಲ ಶಾಸಕ ಎನ್. ಮಹೇಶ್; ಆಪ್ತರ ಹೇಳಿಕೆ


