ಮೊದಲೆ ಹೇಳಿಬಿಡುವುದು ಒಳ್ಳೆಯದು. ನಮ್ಮದು ಫುಕುವೋಕಾ ಮಾದರಿಯ ಸಹಜ ಕೃಷಿ ಅಲ್ಲ. ಅವನದು ಅಷ್ಟೆ, ಅದನ್ನೂ ಪೂರ್ಣ ಸಹಜ ಕೃಷಿಯೆಂದು ಒಪ್ಪಲಾಗದು, ಮನುಷ್ಯರು ಈಗ ಸಿಕ್ಕಾಪಟ್ಟೆ ಮನುಷ್ಯರಾಗಿ ಅಸಹಜಗೊಂಡಿರುವುದು ನಿಜ ತಾನೆ. ಫುಕುವೋಕಾ ಎಲ್ಲರಂತೆ ಮಾರುಕಟ್ಟೆ, ಬೆಲೆ, ಒಂದಿಷ್ಟು ಸಲಕರಣೆಗಳು, ಒಂದಿಷ್ಟು ಗೊಬ್ಬರ, ಬೂದಿ, ಕಳೆ ನಿಯಂತ್ರಣ, ಕೊಯ್ಲು, ಒಕ್ಕಣೆ ಹೀಗೆ ಅವನೂ ಈ ಮನುಷ್ಯ ಜಗತ್ತಿನ ಕೂಸೇ.

ಆದರೆ ಅವನ ಕೃಷಿ ವಿಧಾನಗಳು ಸರಳ, ಪ್ರಕೃತಿಗೆ ಹತ್ತಿರ ಹತ್ತಿರ. ಅವನ ಬದುಕಿನ ವಿಧಾನಗಳು  ಅಷ್ಟೆ. ನಾವೆಲ್ಲ ಅವನ ಹಾದಿಯಲ್ಲಿರುವವರಷ್ಟೆ, ಅವನ ಹತ್ತಿರವೂ ಹೋಗಲಾಗಿಲ್ಲ. ಆದರೆ ಕ್ರಮಿಸಿರುವಷ್ಟು ದೂರ ನಮಗೆ ಒಳ್ಳೆಯದನ್ನು ತೋರಿಸಿದೆ.

ಮೊದ ಮೊದಲು ಕೆಲವರು ನಮ್ಮ ತೋಟ ನೋಡಿ ಈ ಬಗೆಯ ಕೃಷಿಯನ್ನು ನಿಮ್ಮಂತ ನಿಗಧಿತ ಸಂಬಳ ಬರುವವರು ಮಾತ್ರ ಮಾಡಲು ಸಾಧ್ಯ ಎನ್ನುತ್ತಿದ್ದರು. ನಿಜಕ್ಕೂ ಇಂಥ ಕಡಿಮೆ ಖರ್ಚಿನ, ಮರಾಧಾರಿತ, ಮಿಶ್ರ ಬೆಳೆಗಳ ಸಾಂದ್ರ ಬೇಸಾಯ ಪದ್ದತಿಯನ್ನು ಅನುಸರಿಸಬೇಕಾದವರು ನಿಜ ರೈತರು. ಐವತ್ತು ವರ್ಷಗಳ ಹಿಂದೆ ಈ ಬಗೆಯ ಬೇಸಾಯ ಮಾಡುತ್ತಿದ್ದವರು ಅವರೆ. ಬೆಲೆ, ಮಾರುಕಟ್ಟೆ, ನೀರಿನ ಕೊರತೆ, ರೋಗ ರುಜಿನಗಳು, ಪ್ರಾಣಿಗಳ ಕಾಟ, ಪ್ರಕೃತಿ ವಿಕೋಪ ಇವೇ ಮುಂತಾದ ನೂರಾರು ಸಂಕಷ್ಟಗಳಿಂದ ನರಳುತ್ತಿರುವ, ಮಾರುಕಟ್ಟೆ ಚೋರರ ಗರಗಸಕ್ಕೆ, ಸರ್ಕಾರಗಳ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ರೈತರು ಈ ಬಗೆಯ ಕೃಷಿ ಮಾಡಬೇಕಾಗಿರುವುದು.

PC : Expo 2015, (ಫುಕುವೋಕಾ)

ಇರುವಷ್ಟು ನೆಲವನ್ನು, ಲಭ್ಯವಿರುವ ನೀರನ್ನು, ನಮ್ಮ ಶ್ರಮವನ್ನು ಸಾರ್ಥಕವಾಗಿ ಬಳಸಿಕೊಂಡು ಕೃಷಿ ಮಾಡುವುದು ಇಂದಿನ ತುರ್ತು. ಅಣ್ಣ ತಮ್ಮಂದಿರು, ಅಕ್ಕ ತಂಗಿಯರ ನಡುವೆ ಭೂಮಿ ಹಂಚಿಕೆಯಾಗಿ ಹಿಡುವಳಿಗಳು ಚಿಕ್ಕದಾಗುತ್ತಿರುವ ಮತ್ತು ನೆಲವೆಲ್ಲ ಸೈಟಾಗುತ್ತಿರುವ ಕಾಲದಲ್ಲಿ ಇದು ಅನಿವಾರ್ಯ.

ಇದೆಲ್ಲಾ ಇರಲಿ ನಮ್ಮ ರೈತರು ದುಡಿದದ್ದೆಲ್ಲಾ ಅವರ ಬಡತನ್ನಕ್ಕೆ ಜಮಾ ಆಗುವುದಾದರೆ, ಎಷ್ಟು ಹೆಚ್ಚು ಉತ್ಪಾದನೆ ಮಾಡಿದರೂ ಅದರ ಉತ್ಪದನಾ ವೆಚ್ಚವೇ ಜಾಸ್ತಿಯಾಗುವುದಾದರೆ, ಹೆಚ್ಚು ಉತ್ಪಾದನೆ ಯಾಕೆ ಮಾಡಬೇಕು? ಇನ್ನೂ ಬಡವರಾಗಲೆಂದೇ, ಅಥವ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಲೆಂದೇ?

ಇಂಥ ಹೊತ್ತಲ್ಲಿ ರೈತರು ತಮ್ಮನ್ನು ರಕ್ಷಿಸಿಕೊಳ್ಳುವ ಹೊಸ ಕೃಷಿ ಮಂತ್ರಗಳನ್ನು ಕಲಿಯಲೇಬೇಕಿದೆ. ಆ ನಿಟ್ಟಿನಲ್ಲಿ ಯೋಚಿಸಿ ಕಾರ್ಯಕ್ಷೇತ್ರಕ್ಕೆ ಇಳಿದವರನ್ನಿಲ್ಲಿ ಸ್ಮರಿಸಲೇ ಬೇಕು, ಚೇರ್ಕಾಡಿ ರಾಮಚಂದ್ರ ರಾಯರು, ಭರಮಗೌಡರು, ಪುರಷೋತ್ತಮರಾಯರು, ಜಿ.ಎನ್‌.ಎಸ್‌ ರೆಡ್ಡಿ, ನಾರಾಯಣ ರೆಡ್ಡಿ, ಶಿವನಂಜಯ್ಯ ಬಾಳೆಕಾಯಿ, ಶಿವರಾಜ ಪಾಟೀಲ್‌, ಎ.ಪಿ ಚಂದ್ರಶೇಖರ್‌, ಕೈಲಾಸ ಮೂರ್ತಿ, ವಿಜಯ ಅಂಗಡಿ, ಬಸವರಾಜು, ಸದಾಶಿವಪ್ಪ, ಮಹಲಿಂಗಪ್ಪ ಈ ರೈತರಿಗೆ ಪೂರಕವಾಗಿ ನಿಂತು ಈ ಬಗೆಗೆ ಬರೆದ, ಕೃಷ್ಣ ಪ್ರಸಾದ್‌, ಶ್ರೀಪಡ್ರೆ, ಮಲ್ಲಿಕಾರ್ಜುನ ಹೊಸಪಾಳ್ಯ, ಆನಂದ ತೀರ್ಥ ಪ್ಯಾಟಿ, ಶಿವರಾಂ ಪೈಲೂರು, ಗಾಣಧಾಳು ಶ್ರೀಕಂಠ, ಅನಿತಾ, ಶಿವಾನಂದ ಕಳವೆ ಮುಂತಾದವರು, ಇವರಿಗೆ ಒತ್ತಾಸೆಯಾಗಿ ನಿಂತ ಸಿರಿಸಮೃದ್ಧಿ (ಬಳಗ) ಅಡಿಕೆ ಪತ್ರಿಕೆ, ಸುಜಾತ, ಲೀಸಾ ಇಂಡಿಯ, ಸಹಜ ಸಾಗುವಳಿ ಮುಂತಾದ ಪ್ರತ್ರಿಕೆಗಳು, ಸಂಘಟನೆಗಳು ಪರ್ಯಾಯ ಕೃಷಿ ವಿಧಾನಗಳ ಬಗೆಗೆ ಬಹುವಾಗಿ ತಲೆಕೆಡಿಸಿಕೊಂಡ ಪರಿಣಾಮ ಸಾವಿರಾರು ರೈತರ ಸ್ವಾವಲಂಬಿ ಬದುಕಿಗೆ ಕಾರಣವಾಗಿದೆ.

ಅದಕ್ಕೆ ಈ ಕಡಿಮೆ ಖರ್ಚಿನ, ಮಿಶ್ರ ಬೆಳೆಗಳ ಮರಾಧಾರಿತ, ಬಹುಮಹಡಿಯ ಕೃಷಿ ಪದ್ದತಿ ಹಬ್ಬಬೇಕು. ವೈಜ್ಞಾನಿಕೆ ಬೇಸಾಯದ ಹೆಸರಿನಲ್ಲಿ ಉಗ್ರ ಬೇಸಾಯ ಮಾಡಿ ಮಣ್ಣು ನೀರು ಜೀವಗಳನ್ನು ಕಳೆದುಕೊಳ್ಳುವುದಲ್ಲ.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-2: ಈ ಹಕ್ಕಿಗಳು ಎಲ್ಲಿರುತ್ತವೋ ಏನೋ?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಕೃಷ್ಣಮೂರ್ತಿ ಬಿಳಿಗೆರೆ
+ posts

LEAVE A REPLY

Please enter your comment!
Please enter your name here