ಹಿರಿಯ ನ್ಯಾಯವಾದಿಗಳಾದ ಪ್ರಶಾಂತ್ ಭೂಷಣ್ ಟ್ವೀಟ್ ವಿಚಾರದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಪೂರ್ಣ ನ್ಯಾಯಪೀಠದ ತೀರ್ಪಿನ ಬಗ್ಗೆ ತೀವ್ರ ನಿರಾಶೆಗೊಂಡಿದ್ದೇವೆ ಎಂದು ಬೆಂಗಳೂರು ಅಡ್ವೊಕೇಟ್ಸ್ ಗ್ರೂಪ್ ಹೇಳಿದೆ.
ಈ ಕುರಿತು ಪ್ರತಿಕಾ ಹೇಳಿಕೆ ನೀಡಿರುವ ಗ್ರೂಪ್‌ನ ಸಂಚಾಲಕರು ಮತ್ತು ಹಿರಿಯ ವಕೀಲರಾದ ಎಸ್.ಬಾಲನ್‌ರವರು ಪ್ರಶಾಂತ್ ಭೂಷಣ್‌ರೊಂದಿಗೆ ಐಕ್ಯಮತ್ಯ ಘೋಷಿಸಲು ಆಗಸ್ಟ್ 18ರಂದು ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಒಟ್ಟುಗೂಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
12 ಜನವರಿ 2018 ರಂದು ನಡೆಸಿದ ಅಭೂತಪೂರ್ವ ಪತ್ರಿಕಾಗೋಷ್ಠಿಯಲ್ಲಿ, ಆಗಿನ ನಾಲ್ಕು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ನ್ಯಾಯಮೂರ್ತಿಗಳು ಅಂದಿನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳೊಂದಿಗಿನ ತಮ್ಮ ಭಿನ್ನಾಭಿಪ್ರಾಯದ ಬಗ್ಗೆ, ರೋಸ್ಟರ್ ಅನ್ನು ನಿರ್ಧರಿಸುವ ವಿಧಾನ, ನ್ಯಾಯಾಂಗ ಪ್ರಕ್ರಿಯೆಯ ಸಮಗ್ರತೆ, ಸಾಂಸ್ಥಿಕ ಸಮಗ್ರತೆ ಇತ್ಯಾದಿಗಳನ್ನು ಪ್ರಶ್ನಿಸಿದರು. ನ್ಯಾಯಾಂಗದ ಪ್ರಮುಖ ತತ್ವಗಳು ಬಾಯಿಮಾತಿಗಷ್ಟೇ ಉಳಿದಿದ್ದು, ನೈತಿಕವಾಗಿ ರಾಜಿ ಮಾಡಿಕೊಂಡಿವೆ ಎಂದು ಅವರು ಬಹಿರಂಗವಾಗಿ ದೂರಿದ್ದರು. ಹೀಗಿರುವಾಗ ಮುಖ್ಯ ನ್ಯಾಯಮೂರ್ತಿಗಳ ಬಗೆಗಿನ ಟೀಕೆಯು ನ್ಯಾಯಾಂಗ ನಿಂದನೆಯಾಗಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಶಾಂತ್ ಭೂಷಣ್‌ರವರ ಟ್ವೀಟ್‌ಗಳು ಅಪರಾಧವಲ್ಲ. ಅವರು ಸಮಾಜದ ಅನೇಕ ದುರ್ಬಲ ವರ್ಗಗಳ ಪರವಾಗಿ ಕೆಲಸ ಮಾಡಿದ ಅಪರೂಪದ ನ್ಯಾಯವಾದಿ. ಈ ನಿರ್ಣಾಯಕ ಹಂತದಲ್ಲಿ, ನಾವು ಧ್ವನಿ ಇಲ್ಲದವರ ಧ್ವನಿಯಾದ ಪ್ರಶಾಂತ್ ಭೂಷಣ್ ಅವರೊಂದಿಗೆ ನಿಲ್ಲುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಶಾಂತ್ ಭೂಷಣ್‌ರವರೊಂದಿಗೆ ಐಕ್ಯಮತ್ಯ ಸಾರಲು ದಿನಾಂಕ 18.08.2020 ರಂದು, ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00 ರ ನಡುವೆ, ನಾವು ವಕೀಲರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರ ಗುಂಪು, ಮೌರ್ಯ ವೃತ್ತದಲ್ಲಿ ಒಟ್ಟುಗೂಡುತ್ತೇವೆ ಎಂದು ಎಸ್.ಬಾಲನ್‌ರವರು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಶಾಂತ್ ಭೂಷಣ್ ಪ್ರಕರಣ: ಪುನರ್ ಪರಶೀಲನಾ ಮನವಿ ಸಲ್ಲಿಸಲು ವಕೀಲರಿಗೆ ಕರೆ



ಬೆಂಗಳೂರಿನ ವಕೀಲರ ಈ ನಿರ್ದಾರ ಸ್ವಾಗತಾರ್ಹ.