“ನಾವು ಯಾರ ವಿರುದ್ಧವೂ ಇಲ್ಲ. ಒಳಮೀಸಲಾತಿ ವಿಚಾರದಲ್ಲಿ ಹೊಲೆಯ ಸಮುದಾಯ ತಕರಾರು ತೆಗೆಯುತ್ತಿದೆ ಎಂದು ಹೊರರಾಜ್ಯಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಒಳಮೀಸಲಾತಿಗೆ ನಮ್ಮ ಬೆಂಬಲವಿದ್ದು, ವರದಿ ಪರಿಷ್ಕರಣೆ ಮಾಡಿ ಜಾರಿ ಮಾಡಬೇಕು” ಎಂದು ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದಿಂದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಒಳಮೀಸಲಾತಿ ಏಕಸದಸ್ಯ ಆಯೋಗದ ವರದಿ ತಿರಸ್ಕಾರಕ್ಕೆ ಆಗ್ರಹಿಸಿ ಸೋಮವಾರ (ಆ.18) ನಡೆದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್‌ಸಿ, ಎಸ್‌ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಡಿ.ಚಂದ್ರಶೇಖರಯ್ಯ ಸಮಾವೇಶದ ಆಗ್ರಹಗಳನ್ನು ಹಂಚಿಕೊಂಡರು.
“ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ವರದಿಯಲ್ಲಿ ತಮ್ಮ ಜೀವಮಾನದ ಕನಸು ನನಸಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಹೊಲೆಯ ಸಮುದಾಯವನ್ನು ತುಳಿಯಬೇಕು ಎನ್ನುವ ಅವರ ಕನಸನ್ನು ನುಚ್ಚುನೂರು ಮಾಡುತ್ತಿದ್ದೇವೆ. ಏಕರೂಪಿ ಲಕ್ಷಣಗಳನ್ನು ಹೊಂದಿರುವ ಸಮುದಾಯಗಳನ್ನು ಒಂದುಗೂಡಿಸಬೇಕು. ಶೇ.7ಕ್ಕಿಂತ ಕಡಿಮೆ ಮೀಸಲಾತಿಯನ್ನು ಬಲಗೈ ಸಮುದಾಯ ಒಪ್ಪುವುದಿಲ್ಲ. ಯಾರಿಗೆ ಎಷ್ಟಾದರೂ ಕೊಡಿ, ನಮಗೆ 7 ಪರ್ಸೆಂಟ್ ಮೀಸಲಿಡಿ. ಬಲಗೈ ಸಮುದಾಯದ ಕಾಂಗ್ರೆಸ್ ನಾಯಕರು ಇದನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಪರಿಣಾಮಗಳನ್ನು ಎದುರಿಸಲಿದ್ದಾರೆ” ಎಂದರು.
ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, “ನಾವು ತಿಂಗಳುಗಟ್ಟಲೇ, ವರ್ಷಗಟ್ಟಲೇ ಹೋರಾಟ ಮಾಡುವುದಿಲ್ಲ. ಒಂದೇ ಬಾರಿಗೆ ಬೀದಿಗಿಳಿದು ಗೆಲ್ಲುತ್ತೇವೆ. ನಮ್ಮ ಹೋರಾಟದ ಫಲವನ್ನು ಎಲ್ಲರೂ ಉಂಡಿದ್ದಾರೆ. ನಮ್ಮ ಸಾಹಿತಿಗಳು, ಚಿಂತಕರು ನಮ್ಮನ್ನು ಹೀಯಾಳಿಸಿ ಮಾತನಾಡುತ್ತಿದ್ದಾರೆ. ನಮ್ಮ ಸಾಹಿತಿಗಳ ಮಾತು ಕೇಳಲು ಹಿಂಸೆಯಾಗುತ್ತಿದೆ” ಎಂದು ಹೇಳಿದರು.
ಒಕ್ಕೂಟದ ಮೈಸೂರು ವಿಭಾಗೀಯ ಸಂಚಾಲಕ ವೆಂಕಟರಮಣ ಸ್ವಾಮಿ ಮಾತನಾಡಿ, “ನಾಗಮೋಹನ್ ದಾಸ್ ಅವರ ಭಾವಚಿತ್ರ ಮೊದಲು ಸುಟ್ಟವನು ನಾನು. ನಾಳೆಯೂ ಪಟ ಸುಡಲು ಸಿದ್ಧವಾಗಿದ್ದೇನೆ. ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದರ ಮೇಲೆ ಸಿದ್ದರಾಮಯ್ಯನವರ ಭವಿಷ್ಯ ನಿರ್ಧಾರವಾಗುತ್ತದೆ” ಎಂದರು.
ಹಿರಿಯ ಹೋರಾಟಗಾರ ಎಂ. ವೆಂಕಟಸ್ವಾಮಿ ಮಾತನಾಡಿ, ‘ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಮೊದಲಿನಿಂದಲೂ ದಲಿತ ಚಳವಳಿಯ ಭಾಗವಾಗಿದ್ದವರು. ಅವರು ತಮ್ಮ ವರದಿಯಲ್ಲಿ ಸರ್ಕಾರ ಇದನ್ನು ತಿರಸ್ಕರಿಸಬಹುದು, ಪುರಸ್ಕರಿಸಬಹುದು ಅಥವಾ ಪರಿಷ್ಕರಿಸಬಹುದು ಎಂದು ಹೇಳಿದ್ದಾರೆ. ವರದಿ ಪರಿಷ್ಕಾರ ಮಾಡಲೇಬೇಕು” ಎಂದರು.
ಚಿತ್ರದುರ್ಗ ಛಲವಾದಿ ಮಹಾಸಂಸ್ಥಾನ ಮಠದ ಬಸವಲಿಂಗನಾಗಿ ಸ್ವಾಮೀಜಿ, ಬೆಂಗಳೂರು ಸಂತ ರವಿದಾಸ ಪೀಠದ ಬುದ್ಧಾನಂದ ಸ್ವಾಮೀಜಿ, ಪ್ರೊ. ಜ್ಞಾನಸ್ವರೂಪಾನಂದ ಸ್ವಾಮೀಜಿ ವೇದಿಕೆಯಲ್ಲಿ ಹಾಜರಿದ್ದರು.
Courtesy : eedina.com
ಧರ್ಮಸ್ಥಳದಲ್ಲಿ ಶವ ಶೋಧ ಮುಂದುವರಿಸಬೇಕೆ ಬೇಡವೇ ಎಂದು ಎಸ್‌ಐಟಿ ತೀರ್ಮಾನಿಸುತ್ತದೆ: ಗೃಹ ಸಚಿವ ಪರಮೇಶ್ವರ್


