ಜನರ ಜೀವ ಮತ್ತು ಜೀವನೋಪಾಯ ಉಳಿಸಲು ಸರ್ಕಾರ ಕೈಗೊಳ್ಳಬೇಕಾದ ಪಂಚ ತುರ್ತು ಕ್ರಮಗಳ ಬಗ್ಗೆ ತಿಂಗಳಿನಿಂದ ಹೋರಾಟ ಮಾಡುತ್ತಿರುವ ಜನಾಗ್ರಹ ಆಂದೋಲನವು ನಾಳೆ [ಮೇ 24 ರಂದು] ರಾಜ್ಯವ್ಯಾಪಿ ಜನಾಗ್ರಹಕ್ಕೆ ಕರೆ ನೀಡಿದೆ. ಜನರ ಜೀವ ಉಳಿಸುವ ಕ್ರಮಗಳಿಗಾಗಿ ಹಾಗೂ ಸಂಕಷ್ಟದಲ್ಲಿರುವ ಜನರ ಜೀವನೋಪಾಯಕ್ಕೆ ಆಸರೆಯಾಗಬಲ್ಲ ಪ್ಯಾಕೇಜಿಗಾಗಿ ತಮ್ಮ ತಮ್ಮ ಮನೆ ಮುಂದೆಯೇ ತಟ್ಟೆ ಲೋಟ ಬಡಿದು, ಖಾಲಿ ಚೀಲ ಪ್ರದರ್ಶಿಸುವ ಮೂಲಕ ಸರ್ಕಾರದ ಕಣ್ತೆರೆಸಲು ಮುಂದಾಗಿದೆ.
ಎಲ್ಲೆಡೆಯೂ ಉಚಿತ ಚಿಕಿತ್ಸೆ ಸಿಗಬೇಕು, ಸರ್ವರಿಗೂ ವ್ಯಾಕ್ಸಿನ್ ದೊರಕಬೇಕು, ಬಡವರಿಗೆ ದಿನಸಿ ಮತ್ತು ನೆರವು ನೀಡಬೇಕು, ಕೋವಿಡ್‌ನಿಂದ ಸಾವಿಗೀಡಾದ, ಅನಾಥರಾದವರಿಗೆ ಪರಿಹಾರ ಕೊಡಬೇಕು ಮತ್ತು ರೈತರ ಬೀಜ, ಗೊಬ್ಬರದ ಮೇಲೆ ವಿಶೇಷ ಸಬ್ಸಿಡಿ ಘೋಷಿಸಬೇಕು ಎಂಬ ಪಂಚ ತುರ್ತು ಕ್ರಮಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ.

“ನಾವೂ ಬದುಕಬೇಕು” ಎಂಬ ಘೋಷವಾಕ್ಯವನ್ನು ಮುಂದಿಟ್ಟುಕೊಂಡು, ನಾಳೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಜನರು ಬೆಳಿಗ್ಗೆ 9ಕ್ಕೆ ಮನೆಯಿಂದ ಹೊರಬಂದು, ಕೋವಿಡ್ ನಿಯಮಗಳನ್ನು ಪಾಲಿಸುತ್ತಲೇ, ಖಾಲಿ ತಟ್ಟೆ – ಖಾಲಿ ಚೀಲಗಳನ್ನು ಪ್ರದರ್ಶಿಸುತ್ತಾ, ಘೋಷಣೆಗಳನ್ನು ಹಾಕುತ್ತಾ, ತಮ್ಮ ಹಕ್ಕೊತ್ತಾಯಗಳತ್ತ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಿದ್ದಾರೆ. ಈ ಬಾರಿ ನಮ್ಮ ನಮ್ಮ ಮನೆ ಬೀದಿಗಳಲ್ಲಿ ಪ್ರತಿಭಟನೆ ನಡೆಯಲಿದೆ. ಸರ್ಕಾರ ಕಿವಿಗೊಡದಿದ್ದಲ್ಲಿ ಲಾಕ್ ಡೌನ್ ಮುಗಿದ ಕೂಡಲೇ ಮುಖ್ಯಮಂತ್ರಿಗಳು, ಸಚಿವರು ಹಾಗೂ ಆಳುವ ಪಕ್ಷದ ಶಾಸಕರ ಮನೆಗಳೆದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಜನಾಗ್ರಹ ಆಂದೋಲನದ ಪರವಾಗಿ ಕೆ.ಎಲ್ ಅಶೋಕ್ ಮತ್ತು ಮಾವಳ್ಳಿ ಶಂಕರ್ ತಿಳಿಸಿದ್ದಾರೆ.
ಜನಾಗ್ರಹ ಒಂದು ಸಂಘಟನೆಯಾಗಲೀ ಅಥವ ವೇದಿಕೆಯಾಗಲೀ ಆಗಿರದೆ ಜನಸಾಮಾನ್ಯರ ಒಕ್ಕೊರಲ ಕೂಗಾಗಿದೆ. ನಾವೆಲ್ಲರೂ ಸೇರಿಯೇ ಇದನ್ನು ಗಟ್ಟಿಗೊಳಿಸಬೇಕಿದೆ. ಈಗಾಗಲೇ ಎಲ್ಲಾ ಜನಪರ ಸಂಘಟನೆಗಳು ಹಾಗೂ ಪ್ರತಿಪಕ್ಷಗಳು ಇದಕ್ಕೆ ದನಿ ಗೂಡಿಸಿವೆ. ಬದುಕು ದುಸ್ತರವಾಗಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ಒಕ್ಕೊರಲಿನಿಂದ “ನಾವೂ ಬದುಕಬೇಕು” ಎಂದು ಕೂಗಿ ಹೇಳಲೇಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಜನಾಗ್ರಹ ಆಂದೋಲನದ ಹೇಳಿಕೆಗೆ ಶಸಿಕಾಂತ್ ಸೆಂದಿಲ್, ಸಿದ್ದನಗೌಡ ಪಾಟೀಲ್, ಚಾಮರಸ ಮಾಲೀ ಮಾಟೀಲ್, ಹೆಚ್. ಆರ್. ಬಸವರಾಜಪ್ಪ, ಯೂಸೂಫ್ ಕನ್ನಿ, ಯಾಸೀನ್ ಮಲ್ಪೆ, ನೂರ್ ಶ್ರೀಧರ್, ಮಾವಳ್ಳಿ ಶಂಕರ್, ಸ್ವರ್ಣ ಭಟ್, ಕೆ.ಎಲ್. ಅಶೋಕ್ ಮೊದಲಾದವರು ಸಹಿ ಹಾಕಿದ್ದಾರೆ.
ಇದನ್ನೂ ಓದಿ: ಬಹುಜನ ಭಾರತ: ಅಧೋಲೋಕದ ಈ ಲೇಖಕ ಇದೀಗ ಬಂಗಾಳದ ಶಾಸಕ


